AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ಉದಯಗಿರಿ ಗಲಭೆಗೆ ಅಸಲಿ ಕಾರಣವೇನು? ಏನೇನಾಯ್ತು? ಇಲ್ಲಿದೆ ಸಮಗ್ರ ಮಾಹಿತಿ

ಫೆಬ್ರವರಿ 10ರ ರಾತ್ರಿ ಮೈಸೂರಿನ ಉದಯಗಿರಿಯಲ್ಲಿ ಉದ್ವಿಗ್ನತೆಯಿಂದ ಕೂಡಿತ್ತು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಪೋಸ್ಟ್​ವೊಂದರಿಂದ ಉದಯಗಿರಿಯಲ್ಲಿ ಕಲ್ಲು ತೂರಾಟ ನಡೆದಿತ್ತು. ಹಾಗಿದ್ದರೆ ಪೋಸ್ಟ್​ನಲ್ಲಿ ಏನಿತ್ತು? ಪೊಸ್ಟ್​ ವೈರಲ್​ ಆಗುತ್ತಿದ್ದಂತೆ ಗಲಭೆ ಉಂಟಾಗಲು ಕಾರಣವಾದವರು ಯಾರು? ಪೊಲೀಸರ ಮೇಲೆ ಕಲ್ಲು ತೂರಲು ಕಾರಣವೇನು? ಎಂಬ ಪ್ರಶ್ನೆಗಳಿಗೆ ಇಲ್ಲಿದೆ ಸಮಗ್ರ ಮಾಹಿತಿ.

ಮೈಸೂರು ಉದಯಗಿರಿ ಗಲಭೆಗೆ ಅಸಲಿ ಕಾರಣವೇನು? ಏನೇನಾಯ್ತು? ಇಲ್ಲಿದೆ ಸಮಗ್ರ ಮಾಹಿತಿ
ಮೈಸೂರು ಉದಯಗಿರಿ ಗಲಭೆ
ರಾಮ್​, ಮೈಸೂರು
| Updated By: ವಿವೇಕ ಬಿರಾದಾರ|

Updated on:Feb 14, 2025 | 12:38 PM

Share

ಮೈಸೂರು, ಫೆಬ್ರವರಿ 14: ಡಿಜೆ ಹಳ್ಳಿ, ಹಳ್ಳೇ ಹುಬ್ಬಳ್ಳಿಯ ಘಟನೆ ಮಾಸವ ಮುನ್ನವೆ ಮೈಸೂರಿನ ಉದಯಗಿರಿಯಲ್ಲೂ (Mysore Udayagiri Clash) ಅಂತಹದ್ದೇ ಘಟನೆ ಫೆಬ್ರವರಿ 10ರ ರಾತ್ರಿ ನಡೆದಿತ್ತು. ದೆಹಲಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಯುವಕನೋರ್ವ ಸಂಸದ ರಾಹುಲ್ ಗಾಂಧಿ, ಮಾಜಿ ಸಿಎಂಗಳಾದ ಅಖಿಲೇಶ್ ಯಾದವ್ ಹಾಗೂ ಅರವಿಂದ ಕೇಜ್ರಿವಾಲ್ ಅವರ ಭಾವಚಿತ್ರವನ್ನು ವ್ಯಂಗ್ಯವಾಗಿ ಹಾಕಿದ್ದನು. ಯುವಕ ವ್ಯಂಗ್ಯವಾಗಿ ಪೋಸ್ಟ್‌ ಮಾತ್ರ ಹಾಕದೆ ಒಂದು ಧರ್ಮಕ್ಕೆ ಅವಮಾನ ಮಾಡುವ ರೀತಿ ವಾಕ್ಯಗಳನ್ನು ಬರೆದಿದ್ದನು.

ಈ ಪೋಸ್ಟ್​​ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತೋ ಉದಯಗಿರಿ ಪೊಲೀಸರು ಸ್ವಯಂಪ್ರೇರಿತ ಕೇಸ್‌ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದರು. ಆದರೆ, ಅಷ್ಟರಲ್ಲಾಗಲೇ ಆ ಪೋಸ್ಟ್ ಒಂದು ಸಮುದಾಯದ ಯುವಕರನ್ನು ರೊಚ್ಚಿಗೆಬ್ಬಿಸಿತ್ತು. ತಕ್ಷಣ ಅವರು ಉದಯಗಿರಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದರು. ಪೊಲೀಸರು, ಕೆಲ ಧಾರ್ಮಿಕ ಮುಖಂಡರು ಹಾಗೂ ರಾಜಕೀಯ ಮುಖಂಡರು ಅಲ್ಲಿದ್ದ ಯುವಕರಿಗೆ ಶಾಂತಿ ಕಾಪಾಡುವಂತೆ ಮನವರಿಕೆ ಮಾಡಲು ಪ್ರಯತ್ನಿಸಿದ್ದರು. ಆದರೆ ಅಲ್ಲಿದ್ದ ಗುಂಪು ಇದನ್ನು ಕೇಳಲು ಸಿದ್ಧರಿರಲಿಲ್ಲ.‌ ಏಕಾಏಕಿ ಘೋಷಣೆ ಕೂಗುತ್ತಾ ಪೊಲೀಸರು ಹಾಗೂ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದ್ದರು.

ಪೋಸ್ಟ್​​ನಲ್ಲಿ ಏನಿತ್ತು?

ದೆಹಲಿ ಸೋಲಿಗೆ ವ್ಯಂಗ್ಯ ಮಾಡುವ ಪೋಸ್ಟ್ ಅದಾಗಿತ್ತು. ಪೋಸ್ಟ್​ನಲ್ಲಿ ಎಐಸಿಸಿ ನಾಯಕ ಸಂಸದ ರಾಹುಲ್ ಗಾಂಧಿ, ಸಮಾಜವಾದಿ ಪಾರ್ಟಿಯ ನೇತಾರ ಮಾಜಿ ಸಿಎಂ ಅಖಿಲೇಶ್ ಯಾದವ್ ಹಾಗೂ ದೆಹಲಿ ಮಾಜಿ ಸಿಎಂ ಅರವಿಂದ ಕೇಜ್ರಿವಾಲ ಅವರು ಕೇವಲ ಒಳ ಉಡುಪಿನಲ್ಲಿ ಅರೆ ಬೆತ್ತಲೆಯಾಗಿ ನಿಂತ ಭಾವಚಿತ್ರದ ಪೋಸ್ಟ್ ಅದಾಗಿತ್ತು.

ಪೋಸ್ಟ್ ಮಾಡಿದ ಭಾವಚಿತ್ರದಲ್ಲಿ ಅಷ್ಟೇ ಇದ್ದಿದ್ದರೆ ಸಮಸ್ಯೆಯೇ ಅಗುತ್ತಿರಲ್ಲವೇನೋ ? ಆದರೆ, ಆ ಭಾವಚಿತ್ರದಲ್ಲಿ ವಿವಾದಕ್ಕೆ ಕಾರಣವಾಗಿದ್ದು ನಾಯಕರ ಬೆತ್ತಲೆ ದೇಹದ ಮೇಲೆ ಒಂದು ಧರ್ಮದವರು ಆರಾಧ್ಯ ದೈವ ಎಂದು ನಂಬಿರುವವರು ಹೇಳಿದ್ದ ದೈವ ವಾಣಿ ಎಂದು ನಂಬಿರುವ ಬರಹಗಳು‌. ಜೊತೆಗೆ, ಆ ನಾಯಕರ ದೇಹದ ವಿವಿಧ ಭಾಗದಲ್ಲಿ ಒಂದು ಧರ್ಮಕ್ಕೆ ಸೇರಿದ ಸಾಂಪ್ರದಾಯಿಕ ಮಹಿಳೆಯ ಚಿತ್ರ, ವ್ಯಕ್ತಿಯೊಬ್ಬ ಪ್ರಾರ್ಥನೆ ಮಾಡುತ್ತಿರುವ ಚಿತ್ರ ಹಾಗೂ ಅರವಿಂದ್ ಕೇಜ್ರಿವಾಲ್‌ ತಲೆಗೆ ಹಾಕಲಾಗಿದ್ದ ಒಂದು ಧರ್ಮವನ್ನು ಬಿಂಬಿಸುವ ಟೋಪಿ ಇವು ವಿವಾದಾದ ಕಿಡಿ ಹತ್ತಿಕೊಳ್ಳಲು ಕಾರಣವಾಯಿತು.

ಪೋಸ್ಟ್ ಹಾಕಿದ ನಂತರ

ಇನ್ನು, ಈ ಭಾವಚಿತ್ರವನ್ನು ಕಲ್ಯಾಣಗಿರಿಯ ಓರ್ವ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದನು. ಅಸಲಿಗೆ ಅದು ಆತ ಕ್ರಿಯೇಟ್ ಮಾಡಿದ್ದ ಭಾವಚಿತ್ರ ಅಲ್ಲ. ಆತನಿಗೂ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಿತ್ತು. ಅದನ್ನು ಆತ ತನ್ನ ವಾಟ್ಸ್‌ಆಫ್ ಹಾಗೂ ಇತರ ಖಾತೆಗಳಲ್ಲಿ ಪೋಸ್ಟ್ ಮಾಡಿದ್ದನು. ಆತನ ಪೋಸ್ಟ್ ಕ್ಷಣಾರ್ಧದಲ್ಲಿ ವೈರಲ್ ಆಗಿತ್ತು. ಇದನ್ನು ನೋಡಿದ ಒಂದು ಧರ್ಮದ ಜನರು ಆಕ್ರೋಶಭರಿತರಾಗಿದ್ದರು. ಈ ವಿಚಾರ ಪೊಲೀಸರಿಗೆ ತಲುಪಿತ್ತು. ತಕ್ಷಣ ಆತನನ್ನು ಪತ್ತೆ ಹಚ್ಚಿ ಠಾಣೆಗೆ ಕರೆತಂದು ವಿಚಾರಣೆ ಆರಂಭಿಸಲಾಯಿತು‌‌‌. ಸೂಕ್ಷ್ಮ ವಿಚಾರವಾಗಿದ್ದರಿಂದ ಆತನಿಂದ ಸಂಪೂರ್ಣ ಮಾಹಿತಿ ಪಡೆದುಕೊಳ್ಳಲು ಪೊಲೀಸರು ಮುಂದಾಗಿದ್ದರು. ಈ ವೇಳೆ ಎರಡು ಗುಂಪು ಪ್ರತ್ಯೇಕವಾಗಿ ಠಾಣೆಗೆ ಬಂತು.

ಎರಡು ಗುಂಪುಗಳಲ್ಲಿ ದೂರು ನೀಡುವ ಬಗ್ಗೆ ಗೊಂದಲವಿತ್ತು. ಗಮನಿಸಬೇಕಾದ ಅಂಶ ಅಂದರೆ ಕೊನೆಗೂ ಎರಡು ಗುಂಪುಗಳು ಬರೀ ಮಾತುಗಳನ್ನಾಡಿ ಹೋದರೇ ಹೊರತು, ಅಧಿಕೃತ ದೂರು ನೀಡಲಿಲ್ಲ. ಆದರೂ, ಪ್ರಕರಣದ ಗಂಭೀರತೆ ಅರಿತ ಪೊಲೀಸರು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದರು. ಅದು ಬಹುತೇಕ ಆ ಸಮುದಾಯದ ಹಿರಿಯರಿಗೆ ಸಮಾಧಾನ ತಂದಿತ್ತು.

ವದಂತಿಗಳು ಸೃಷ್ಠಿಸಿದ ಅವಾಂತರ

ಇಷ್ಟೆಲ್ಲ ಆದ ಮೇಲೂ ಈ ರಾದ್ದಾಂತ ಆಗಲು ಕಾರಣ ರೆಕ್ಕೆ ಪುಕ್ಕ ಪಡೆದುಕೊಂಡ ವದಂತಿಗಳು. ಹೌದು, ಘಟನೆಯ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿ ವ್ಯಾಖ್ಯಾನ ವಿಶ್ಲೇಷಣೆ ಮಾಡಿಬಿಟ್ಟರು. ಅದರಲ್ಲೂ ಮುಸ್ಲಿಂ ಮುಖಂಡನೊಬ್ಬ ಠಾಣೆಯ ಮುಂದೆ ನಿಂತು ತನ್ನ ಭಾವನಾತ್ಮಕ ಪ್ರಚೋದನೆಯ ಮಾತುಗಳಿಂದ ಧರ್ಮದ ಅಫೀಮನ್ನು ಯುವಕರ ಮೆದುಳಿಗೆ ಇಂಜೆಕ್ಟ್ ಮಾಡಿಬಿಟ್ಟನು. ಅದಾಗಲೇ ಧರ್ಮದ ವಿಚಾರವಾಗಿ ಭಾವನಾತ್ಮಕವಾಗಿ ನೊಂದಿದ್ದವರು ಹಿಂಸೆಯ ಹಾದಿ ಹಿಡಿದರು. ಕಲ್ಲು ಹಿಡಿದು ಪೊಲೀಸ್ ಠಾಣೆಯತ್ತ ತೂರಿದರು. ಮನಬಂದಂತೆ ವರ್ತಿಸಿದರು. ಪೊಲೀಸರ ಶತಪ್ರಯತ್ನ ವಿಫಲವಾಯಿತು. ಮಾತು ಮನವಿ ಕೆಲಸ ಮಾಡದಿದ್ದಾಗ ದಡಂ ದಶಗುಣಂ ದಾರಿ ಹಿಡಿದ ಪೊಲೀಸರು ಪರಿಸ್ಥಿತಿ ಹತೋಟಿಗೆ ತಂದರು. ಘಟನೆಯ ವಿಡಿಯೋಗಳು ಲಭ್ಯವಾಗಿದ್ದು ಒಂದೊಂದು ಘಟನೆಗಳು ಬೆಚ್ಚಿ ಬೀಳಿಸುತ್ತಿವೆ. ಪೊಲೀಸರು ಸ್ವಲ್ಪ ಎಚ್ಚರ ತಪ್ಪಿದ್ದರೂ ಅಲ್ಲಿ ಪೊಲೀಸರ ಹೆಣಗಳು ಬೀಳುತ್ತಿದ್ದವು. ಹಿಂದೂ ಮುಸ್ಲಿಂ ಗಲಾಟೆಗಳಾಗುತ್ತಿದ್ದವು‌. ಅದನ್ನು ತಡೆಯುವಲ್ಲಿ ಪೊಲೀಸರು ಯಶಸ್ವಿಯಾದರು.

ಪ್ರಾಣದ ಹಂಗು ತೊರೆದು ಹೋರಾಡಿದ ಪೊಲೀಸರು

ಘಟನೆಯಲ್ಲಿ 20 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗೆ, 10ಕ್ಕೂ ಹೆಚ್ಚು ಇನ್ಸಪೆಕ್ಟರ್, ಸಬ್ ಇನ್ಸಪೆಕ್ಟರ್, ಎಸಿಪಿ, ಡಿಸಿಪಿಗಳಿಗೆ ಕಲ್ಲಿನ ಏಟು ಬಿದ್ದಿದೆ. ತಲೆ, ಮುಖ, ಕೈ, ತೋಳು, ಬೆನ್ನು ಹೊಟ್ಟೆ, ತೊಡೆ, ಮಂಡಿ ಕಾಲು ದೇಹದ ಎಲ್ಲಾ ಭಾಗಗಳಿಗೂ ಪೆಟ್ಟಾಗಿದೆ. ಇಷ್ಟಾದರೂ ಒಬ್ಬ ಪೊಲೀಸ್ ತುಟಿಕ್ ಪಿಟಿಕ್ ಅನ್ನದೆ ತಮ್ಮ ಕೆಲಸ ಮಾಡಿದ್ದಾರೆ. ಗಲಭೆಕೋರರಿಗೆ ಪೊಲೀಸರೇ ಪ್ರಮುಖ ಟಾರ್ಗೆಟ್ ಅಗಿದ್ದರು. ಉದಯಗಿರಿ ಪೊಲೀಸ್ ಠಾಣೆಗೆ ಬೇರೆ ಠಾಣೆಗಳಿಂದ ಕರ್ತವ್ಯಕ್ಕೆ ಬರುತ್ತಿದ್ದವರನ್ನು ತಡೆಯುವುದು ಕಿಡಿಗೇಡಿಗಳ ಉದ್ದೇಶವಾಗಿತ್ತು. ಅದಕ್ಕಾಗಿ ಉದಯಗಿರಿ ಪೊಲೀಸ್ ಠಾಣೆಯ ಸಂಪರ್ಕ ರಸ್ತೆಯಲ್ಲಿ ಕಾದು ಕುಳಿತು ಬರುವ ಎಲ್ಲಾ ಪೊಲೀಸರು, ಪೊಲೀಸರ ವಾಹನದ ಮೇಲೆ ಅಟ್ಯಾಕ್ ಮಾಡಲಾಯ್ತು. ಅದರಲ್ಲೂ ಡಿಸಿಪಿ ಜಾನ್ಹವಿ ಅವರ ಕಾರಿನ ಮೇಲೆ ನಡೆದ ದಾಳಿ ಭಯಂಕರವಾಗಿತ್ತು. ಕಿಡಿಗೇಡಿಗಳ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿತ್ತು.‌

ಇದನ್ನೂ ಓದಿ: ಸ್ವಲ್ಪ ಯಾಮಾರಿದ್ರೆ ಪೊಲೀಸರ ಹೆಣಗಳು ಬೀಳುತ್ತಿದ್ದವು: ಎಫ್​ಐಆರ್​ನಲ್ಲಿ ಸ್ಫೋಟಕ ಅಂಶ ಉಲ್ಲೇಖ

ಉದಯಗಿರಿಯ ಘಟನೆ ರಾಜಕೀಯ ಪಕ್ಷಗಳ ಬ್ಲೇಮ್ ಗೇಮ್​​ಗೆ ವೇದಿಕೆಯಾಯಿತು. ಬಹುತೇಕ ನಾಯಕರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ತಿಳಿಗೊಳಿಸುವ ಬದಲು, ಆರೋಪ ಪ್ರತ್ಯಾರೋಪದಲ್ಲಿ ಮುಳುಗಿದರು. ಜೀವದ ಹಂಗು ತೊರೆದು ಹೋರಾಡಿದ ಪೊಲೀಸರಿಗೆ ಮಾನಸಿಕ ಸ್ಥೈರ್ಯ ತುಂಬುವ ಬದಲು, ಅವರ ಮನೋಸ್ಥೈರ್ಯ ಕುಗ್ಗಿಸುವ ಹೇಳಿಕೆಗಳನ್ನು ನೀಡಿದರು. ಸಾಮೂಹಿಕ ಹೊಣೆಗಾರಿಕೆ ಹೊರಬೇಕಾದವರು, ನಾನು ನೀನು ಅನ್ನೋ ಜಿದ್ದಿನಲ್ಲಿ ತೊಡಗಿಕೊಂಡರು‌. ಇದರಿಂದ ಖಂಡಿತಾ ಯಾರಿಗೆ ಲಾಭವಾಯಿತು ? ಯಾರಿಗೆ ನಷ್ಟವಾಯಿತು? ಅನ್ನೋದಕ್ಕಿಂತ ಮುಖ್ಯವಾಗಿ ಇಂತಹ ಹೇಳಿಕೆಗಳು ಉರಿಯುವ ಬೆಂಕಿಗೆ ತುಪ್ಪ ಸುರಿದಿದಂತಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:31 pm, Fri, 14 February 25