AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಂಗಲಿ ಗ್ರಾಮ ಪಂಚಾಯಿತಿಯನ್ನ ಮೇಲ್ದರ್ಜೆಗೇರಿಸುವಂತೆ ಗ್ರಾಮಸ್ಥರ ಬಿಗಿಪಟ್ಟು

ನಂಗಲಿ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವ ಬೇಡಿಕೆ ಜೋರಾಗಿದೆ. ರಾಷ್ಟ್ರೀಯ ಹೆದ್ದಾರಿ-75 ಹಾಗೂ ಆಂಧ್ರ ಗಡಿ ಸಮೀಪದಲ್ಲಿರುವ ನಂಗಲಿ, ಅಭಿವೃದ್ಧಿ ಹೊಂದಿದ್ದು, ಎಲ್ಲಾ ಮಾನದಂಡಗಳನ್ನು ಒಳಗೊಂಡಿದೆ. ಪಟ್ಟಣ ಪಂಚಾಯಿತಿಯಾಗುವುದರಿಂದ ವ್ಯಾಪಾರ, ವಾಣಿಜ್ಯ ಚಟುವಟಿಕೆಗಳು ಹೆಚ್ಚಾಗಲಿದೆ. ಹಾಗಾಗಿ ಈ ಬಗ್ಗೆ ಗ್ರಾಮಸ್ಥರು ಮತ್ತು ಶಾಸಕರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ನಂಗಲಿ ಗ್ರಾಮ ಪಂಚಾಯಿತಿಯನ್ನ ಮೇಲ್ದರ್ಜೆಗೇರಿಸುವಂತೆ ಗ್ರಾಮಸ್ಥರ ಬಿಗಿಪಟ್ಟು
ನಂಗಲಿ ಗ್ರಾಮ ಪಂಚಾಯತಿಯನ್ನ ಮೇಲ್ದರ್ಜೆಗೇರಿಸುವಂತೆ ಗ್ರಾಮಸ್ಥರ ಬಿಗಿಪಟ್ಟು
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಗಂಗಾಧರ​ ಬ. ಸಾಬೋಜಿ|

Updated on:Dec 22, 2024 | 7:01 PM

Share

ಕೋಲಾರ, ಡಿಸೆಂಬರ್​ 22: ನಂಗಲಿ (Nangali) ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಬೇಕೆಂಬ ಬೇಡಿಕೆ ಕೇಳಿಬಂದಿದೆ. ಜಿಲ್ಲೆಯ ಮುಳಬಾಗಿಲು ತಾಲ್ಲೂಕು ನಂಗಲಿ ಗ್ರಾಮ ಪಂಚಾಯಿತಿ ಕೋಲಾರ ಜಿಲ್ಲೆಯ ಹಾಗೂ ರಾಜ್ಯದ ಗಡಿ ಭಾಗದಲ್ಲಿರುವ ಗ್ರಾಮ ಪಂಚಾಯಿತಿ. ಇದೇ ನಂಗಲಿ ಗ್ರಾಮದ ಮೂಲಕ ರಾಷ್ಟ್ರೀಯ ಹೆದ್ದಾರಿ-75 ಸಹ ಹಾದು ಹೋಗಲಿದೆ. ಇದೆಲ್ಲದರ ಜೊತೆಗೆ ನಂಗಲಿ ಗ್ರಾಮ ಪಂಚಾಯಿತಿ ಸಾಕಷ್ಟು ಅಭಿವೃದ್ದಿ ಹೊಂದಿದ್ದು, ಗ್ರಾಮ ಪಂಚಾಯಿತಿಯಿಂದ, ಪಟ್ಟಣ ಪಂಚಾಯಿತಿಯನ್ನಾಗಿ ಮಾಡಲು ಬೇಕಾದ ಎಲ್ಲಾ ಮಾನದಂಡಗಳನ್ನು ಕೂಡ ಹೊಂದಿದೆ. ಹಾಗಾಗಿ ನಂಗಲಿ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ಡರ್ಜೆಗೇರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಈಗಾಗಲೇ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ದಾಖಲೆ ಸಮೇತ ಮನವಿ ಮಾಡಿದ್ದು, ಇತ್ತ ಮುಳಬಾಗಿಲು ಶಾಸಕ ಸಮೃದ್ದಿ ಮಂಜುನಾಥ್​ ಅವರು ಪೌರಾಡಳಿತ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

ಇನ್ನು ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ಡರ್ಜೆಗೇರಿಸಲು ಸಾಕಷ್ಟು ಮಾನದಂಡಗಳನ್ನು ಅನುಸರಿಸಲಾಗುತ್ತದೆ. ಆ ಪೈಕಿ ಆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹತ್ತುಸಾವಿಕ್ಕಿಂತ ಹೆಚ್ಚು ಹಾಗೂ ಇಪ್ಪತ್ತು ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಇರಬೇಕು. ಇನ್ನು ಪ್ರತಿ ಚದರ ಕಿ.ಮೀ ವ್ಯಾಪ್ತಿಯಲ್ಲಿ ಕನಿಷ್ಠ 400 ಜನಸಂಖ್ಯೆ ಹೊಂದಿರಬೇಕು. ಇನ್ನು ಆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶೇ 50ರಷ್ಟು ಕಡಿಮೆ ಇಲ್ಲದಂತೆ ಜನರು ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿರಬೇಕು. ಅದರ ಆಧಾರದಲ್ಲಿ ಜೀವನ ನಡೆಸುತ್ತಿರಬೇಕು, ಇಂಥ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ಡರ್ಜೆಗೇರಿಸಲು ಅವಕಾಶ ಇರುತ್ತದೆ.

ಇದನ್ನೂ ಓದಿ: ಸುಳ್ಳು ಜಾತಿ ಪ್ರಮಾಣ ಪತ್ರ ಕೇಸ್: ತನಿಖೆಗೆ ಕೋರ್ಟ್ ಅಸ್ತು, ಕಾಂಗ್ರೆಸ್ ಶಾಸಕಂಗೆ ಸಂಕಷ್ಟ

ಇನ್ನು ನಂಗಲಿ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿಯನ್ನಾಗಿ ಮಾಡಲು ಬೇಕಾದ ಎಲ್ಲಾ ಸವಲತ್ತುಗಳನ್ನು ಹೊಂದಿದೆ. ಮುಳಬಾಗಿಲು ತಾಲ್ಲೂಕು ಕೇಂದ್ರವನ್ನು ಹೊರತು ಪಡಿಸಿದರೆ, ಅಭಿವೃದ್ದಿ ಹೊಂದಿರುವ ಪ್ರದೇಶ ಇದಾಗಿದೆ. ನಂಗಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಸರ್ಜಿತವಾದ ಪ್ರಾಥಮಿಕ ಆರೋಗ್ಯ ಕೇಂದ್ರ, ಪೊಲೀಸ್​ ಠಾಣೆ, ರಾಷ್ಟ್ರೀಯ ಹೆದ್ದಾರಿ-75 ಇದೇ ಗ್ರಾಮದ ಮೂಲಕ ಹಾದು ಹೋಗಿದೆ.

ಸರ್ಕಾರಿ ಶಾಲೆ, ಹೈಸ್ಕೂಲ್​, ಕಾಲೇಜು ಇದೆ. ಅದಲ್ಲದಕ್ಕಿಂತ ಹೆಚ್ಚಾಗಿ ನಂಗಲಿ ಗ್ರಾಮ ಪಂಚಾಯಿತಿ ಆಂದ್ರದ ಗಡಿ ಹೊಂದಿಕೊಂಡಿರುವುದರಿಂದ ಗಡಿ ರಾಜ್ಯದೊಂದಿಗೆ ವ್ಯಾಪಾರ ವಹಿವಾಟು ಜೋರಾಗಿದೆ. ಜನರ ವ್ಯಾಪಾರ ವಹಿವಾಟಿಗೆ ರಾಷ್ಟ್ರೀಕೃತ ಬ್ಯಾಂಕ್​ಗಳು ಇಲ್ಲಿವೆ. ಜೊತೆಗೆ ವಾಣಿಜ್ಯ ವ್ಯವಹಾರಗಳು ದೊಡ್ಡ ದೊಡ್ಡ ಹೋಟೆಲ್​ಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇವೆ.

ಇದನ್ನೂ ಓದಿ: ಕೆಜಿಎಫ್​ನಲ್ಲಿ ಇಂಟಿಗ್ರೇಟೆಡ್ ಟೌನ್‌ಶಿಪ್​ ನಿರ್ಮಾಣಕ್ಕೆ ಪ್ಲ್ಯಾನ್: ವರದಿ ಸಲ್ಲಿಸಲು ಸಚಿವ ಸುರೇಶ್ ಸೂಚನೆ

ಹಾಗಾಗಿ ಈ ವಿಷಯವನ್ನು ಮುಳಬಾಗಿಲು ಶಾಸಕ ಸಮೃದ್ದಿ ಮಂಜುನಾಥ್​ ವಿಧಾನಸಭೆ ಅಧಿವೇಶನದಲ್ಲಿ 351ನೇ ನಿಯಮದಂತೆ ಈ ವಿಚಾರವನ್ನು ಪ್ರಸ್ತಾಪಿಸಿ ಪೌರಾಡಳಿತ ಸಚಿವರ ಗಮನಕ್ಕೂ ತಂದಿದ್ದಾರೆ. ಹಾಗಾಗಿ ರಾಜ್ಯದ ಗಡಿ ಗ್ರಾಮದ ಅಭಿವೃದ್ದಿಯ ದೃಷ್ಟಿಯಿಂದ ಸರ್ಕಾರ ಪಟ್ಟಣ ಪಂಚಾಯ್ತಿಯನ್ನಾಗಿ ಮಾಡಬೇಕೆಂದು ಗ್ರಾಮಸ್ಥರು ಹಾಗೂ ಜಿಲ್ಲೆಯ ಜನರ ಒತ್ತಾಸೆಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:57 pm, Sun, 22 December 24