ಓಲಾ, ಉಬರ್ ಜೊತೆ ಸಾರಿಗೆ ಇಲಾಖೆಯ ಮಹತ್ವ ಸಭೆ
ಓಲಾ, ಉಬರ್ ಕಂಪನಿಗಳು ಸಾರಿಗೆ ಇಲಾಖೆಯ ನೋಟಿಸ್ಗೆ ಪ್ರತಿಕ್ರಿಯೆ ನೀಡಿದ್ದು, ಮಾತುಕತೆಗೆ ಅವಕಾಶ ನೀಡುವಂತೆ ಕೋರಿದೆ. ಅದರಂತೆ ಇಂದು ಮಧ್ಯಾಹ್ನ ಸಭೆ ನಡೆಯಲಿದೆ.
ಬೆಂಗಳೂರು: ಓಲಾ, ಉಬರ್ ವಿರುದ್ಧ ಹೆಚ್ಚುವರಿ ಶುಲ್ಕ ವಸೂಲಿ ಆರೋಪ ಕೇಳಿಬಂದ ಹಿನ್ನೆಲೆ ಸಾರಿಗೆ ಇಲಾಖೆ ಆಯುಕ್ತರು ನೀಡಿದ ನೋಟೀಸ್ಗೆ ಓಲಾ, ಉಬರ್, ರ್ಯಾಪಿಡೋ ಕಂಪನಿಗಳು ಪ್ರತಿಕ್ರಿಯೆ ನೀಡಿವೆ. ನೋಟಿಸ್ ಜಾರಿಯಾಗಿ ಮೂರು ದಿನಗಳ ಕಳೆದರೂ ಯಾವುದೇ ಪ್ರತಿಕ್ರಿಯೆ ನೀಡದಿದ್ದಾಗ ಆರ್ಟಿಒ ಅಧಿಕಾರಿಗಳು ಫೀಲ್ಡ್ಗೆ ಇಳಿದು ಆಟೋಗಳನ್ನು ವಶಕ್ಕೆ ಪಡೆದರು. ಇದರಿಂದ ಎಚ್ಚೆತ್ತ ಖಾಸಗಿ ಸಾರಿಗೆ ಕಂಪನಿಗಳು ನೋಟಿಸ್ಗೆ ಉತ್ತರ ನೀಡಿದ್ದು, ಇದರಲ್ಲಿ ನಿಮ್ಮ ಜೊತೆ ಮಾತನಾಡಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿಕೊಂಡಿವೆ. ಅದರಂತೆ ಸಾರಿಗೆ ಇಲಾಖೆ ಆಯುಕ್ತ ಟಿಹೆಚ್ಎಂ ಕುಮಾರ್ ಅವರು ಮಾತುಕತೆಗೆ ಆಹ್ವಾನಿಸಿದ್ದು,ರಾಜ್ಯ ಸಾರಿಗೆ ಇಲಾಖೆ ಮುಖ್ಯ ಕಚೇರಿಯಲ್ಲಿ ನಡೆಯುವ ಸಭೆ ನಡೆಯಲಿದೆ.
ನಿಯಮ ಉಲ್ಲಂಘಿಸಿ ಪ್ರಯಾಣಿಕರಿಂದ ಹೆಚ್ಚುವರಿ ಶುಲ್ಕ ವಿಧಿಸುತ್ತಿರುವ ಗಂಭೀರ ಆರೋಪ ಹಿನ್ನೆಲೆ ಖಾಸಗಿ ಸಾರಿಗೆ ಕಂಪನಿಗಳಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಅದರಂತೆ ಕಂಪನಿಗಳು ಮಾಡಿದ ಮನವಿ ಮೇರೆಗೆ ಶಾಂತಿನಗರ ಸಾರಿಗೆ ಇಲಾಖೆ ಕಚೇರಿಯಲ್ಲಿ ಸಾರಿಗೆ ಇಲಾಖೆ ಆಯುಕ್ತ ಟಿಹೆಚ್ಎಂ ಕುಮಾರ್ ನೇತೃತ್ವದಲ್ಲಿ ಇಂದು ಮಧ್ಯಾಹ್ನ 2.30 ಗಂಟೆಗೆ ಓಲಾ, ಉಬರ್ ಕಂಪನಿಗಳೊಂದಿಗೆ ಸಭೆ ನಡೆಯಲಿದೆ. ಸಭೆ ಬಳಿಕ ಸಾರಿಗೆ ಇಲಾಖೆ ಓಲಾ ಉಬರ್ ಕಂಪನಿಗಳ ಆಟೋ ರಿಕ್ಷಾಗಳ ಭವಿಷ್ಯ ನಿರ್ಧಾರ ಮಾಡಲಿದೆ.
ಸಾರಿಗೆ ಇಲಾಖೆ vs ಖಾಸಗಿ ಕಂಪನಿ; ಆಟೋಚಾಲಕರಿಗೆ ದಂಡದ ಬರೆ
ಬೆಂಗಳೂರು ನಗರದಲ್ಲಿ ಪರ್ಮೀಟ್ ಪಡೆಯದೆ ಆಟೋರಿಕ್ಷಾಗಳನ್ನ ಓಡಿಸುತ್ತಿರೋ ಓಲಾ ಉಬರ್ ಕಂಪನಿಗಳ ವಿರುದ್ಧ ಸಾರಿಗೆ ಇಲಾಖೆ ಶಾಕ್ ಮೇಲೆ ಶಾಕ್ ನೀಡುತ್ತಿದೆ. ಆದರೆ ಸಾರಿಗೆ ಇಲಾಖೆ ಹಾಗೂ ಖಾಸಗಿ ಕಂಪನಿಗಳ ನಡುವಿನ ಜಿದ್ದಾಜಿದ್ದಿಯಲ್ಲಿ ಆಟೋ ಚಾಲಕರಿಗೆ ದಂಡದ ಬರೆ ಬೀಳುತ್ತಿದೆ. ನೋಟಿಸ್ಗೆ ಪ್ರತಿಕ್ರಿಯೆ ನೀಡಿದ ಹಿನ್ನೆಲೆ ಮಧ್ಯಾಹ್ನ 2 ಗಂಟೆಯಿಂದ ರಸ್ತೆಗಿಳಿಯುವ ಅಂತಹ ಆಟೋಗಳನ್ನು ತಡೆದ ಆರ್ಟಿಒ ಅಧಿಕಾರಿಗಳು ದಂಡ ವಿಧಿಸಿದ್ದಾರೆ. ಅಲ್ಲದೆ ಕೆಲವು ಆಟೋಗಳನ್ನು ವಶಕ್ಕೂ ಪಡೆದಿದ್ದಾರೆ.
ಎಚ್ಚರಿಕೆಗೆ ಕ್ಯಾರೇ ಎನ್ನದೆ ನಗರದಲ್ಲಿ ಸಂಚರಿಸುತ್ತಿದ್ದ ಓಲಾ ಉಬರ್ ಆಟೋ ಚಾಲಕರ ವಿರುದ್ದ ಸಮರ ಸಾರಿದ ಸಾರಿಗೆ ಇಲಾಖೆ, ನಿನ್ನೆಯಿಂದ ಆ್ಯಪ್ ಆಧಾರಿತ ಆಟೋ ಚಾಲಕರಿಗೆ ದಂಡ ಹಾಕುತ್ತಿದೆ. ಇಂದು ಕೂಡ ನಿಯಮ ಮೀರಿ ಸಂಚಾರ ಮಾಡುತ್ತಿರುವ ಆಟೋರಿಕ್ಷಾಗಳನ್ನು ಜಪ್ತಿ ಮಾಡಿ ದಂಡ ಹಾಕಲಿದ್ದಾರೆ.
ಕಂಪನಿಗಳ ವಿರುದ್ದ ಕೋರ್ಟ್ ಮೊರೆ ಹೋಗಲಿರುವ ಇಲಾಖೆ
ಓಲಾ ಉಬರ್ ಕಂಪನಿಗಳ ವಿರುದ್ದ ಕೋರ್ಟ್ ಮೊರೆ ಹೋಗಲು ಸಾರಿಗೆ ಇಲಾಖೆ ನಿರ್ಧಾರ ಕೂಡ ಮಾಡಿದೆ. ಸಾರಿಗೆ ಇಲಾಖೆ ನೀಡಿದ ನೋಟಿಸ್ಗೆ ಓಲಾ ಹಾಗು ಊಬರ್ ಹಾಗೂ ರ್ಯಾಪಿಡೋ ಕಂಪನಿಗಳು ಐದು ದಿನದ ಬಳಿಕ ಉತ್ತರ ನೀಡಿವೆ. ಈ ಹಿಂದೆಯೂ ಹಲವು ಬಾರಿ ಓಲಾ ಉಬರ್ ವಿರುದ್ದ ಹಲವು ದೂರುಗಳು ಸಾರಿಗೆ ಇಲಾಖೆಗೆ ಬಂದಿತ್ತು. ಈ ವೇಳೆ ಸಾರಿಗೆ ಇಲಾಖೆ ಕೋರ್ಟ್ ಮೊರೆ ಹೋಗಿತ್ತು. ಈ ವೇಳೆ ಯಾವುದೇ ಕ್ರಮ ಜರುಗಿಸಬಾರದೆಂದು ಕೋರ್ಟ್ನಿಂದ ಓಲಾ ಊಬರ್ ಸ್ಟೇ ತಂದಿದ್ದವು. 2016ರಲ್ಲಿ ಕೋರ್ಟ್ ಮಧ್ಯಂತರ ಆದೇಶ ನೀಡಿತ್ತು. ಇದೀಗ ಸೂಕ್ತ ಕಾನೂನು ಸಲಹೆ ಮೇರೆಗೆ ಮತ್ತೆ ಕೋರ್ಟ್ ಮೆಟ್ಟಿಲೇರಲು ಸಾರಿಗೆ ಇಲಾಖೆ ಮುಂದಾಗಿದೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:53 am, Tue, 11 October 22