ಚಾರಣಿಗರ ಸುರಕ್ಷತೆಗೆ ಸರ್ಕಾರದ ಮಾಸ್ಟರ್ ಪ್ಲಾನ್: ಕಡ್ಡಾಯವಾಗಲಿದೆ ಟ್ರ್ಯಾಕಿಂಗ್ ಆ್ಯಪ್, ವಿಮೆ ! ಸಚಿವ ಈಶ್ವರ ಖಂಡ್ರೆ ಸೂಚನೆ

ರಾಜ್ಯದಲ್ಲಿ ಚಾರಣಿಗರ ಸುರಕ್ಷತೆಗಾಗಿ ಟ್ರ್ಯಾಕಿಂಗ್ ಆ್ಯಪ್, ವಿಮೆ ಜಾರಿ ಸೇರಿದಂತೆ ಹೊಸ SOP ಜಾರಿಗೆ ಅರಣ್ಯ ಇಲಾಖೆ ನಿರ್ಧರಿಸಿದೆ. ತಡಿಯಂಡಮೋಳ್​​ನ ಶರಣ್ಯ ನಾಪತ್ತೆ, ಚಂದ್ರದ್ರೋಣ ಪರ್ವತ ಸಾಲಿನಲ್ಲಿ ಕೇರಳದ ಅಪ್ರಾಪ್ತೆ ನಾಪತ್ತೆಯಾದಂಥ ಪ್ರಕರಣಗಳನ್ನು ತಡೆಯಲು ಸಚಿವ ಈಶ್ವರ ಖಂಡ್ರೆ ಈ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಪ್ರಸ್ತಾವಿತ ಎಸ್​​ಒಪಿಯಲ್ಲಿ ಏನೇನಿದೆ ಎಂಬ ವಿವರ ಇಲ್ಲಿದೆ.

ಚಾರಣಿಗರ ಸುರಕ್ಷತೆಗೆ ಸರ್ಕಾರದ ಮಾಸ್ಟರ್ ಪ್ಲಾನ್: ಕಡ್ಡಾಯವಾಗಲಿದೆ ಟ್ರ್ಯಾಕಿಂಗ್ ಆ್ಯಪ್, ವಿಮೆ ! ಸಚಿವ ಈಶ್ವರ ಖಂಡ್ರೆ ಸೂಚನೆ
ಚಾರಣ (ಸಾಂದರ್ಭಿಕ ಚಿತ್ರ)
Image Credit source: tv9
Edited By:

Updated on: Apr 09, 2026 | 11:00 AM

ಬೆಂಗಳೂರು, ಏಪ್ರಿಲ್ 9: ಕರ್ನಾಟಕದ (Karnataka) ಗಿರಿಶ್ರೇಣಿಗಳಲ್ಲಿ ಚಾರಣಕ್ಕೆ (Trekking) ಹೋಗುವವರ ಸುರಕ್ಷತೆಯನ್ನು ಖಚಿತಪಡಿಸಲು ಅರಣ್ಯ ಇಲಾಖೆಯು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ. ಚಂದ್ರದ್ರೋಣ ಪರ್ವತ ಶ್ರೇಣಿ ಮತ್ತು ಕೊಡಗಿನ ತಡಿಯಂಡಮೋಳ್​​ನಲ್ಲಿ ಇತ್ತೀಚೆಗೆ ಚಾರಣಿಗರು ನಾಪತ್ತೆಯಾದ ಆತಂಕಕಾರಿ ಪ್ರಕರಣಗಳ ಹಿನ್ನೆಲೆಯಲ್ಲಿ, ಸಚಿವ ಈಶ್ವರ ಖಂಡ್ರೆ ಅವರು ದೇಶಕ್ಕೇ ಮಾದರಿಯಾಗುವಂತಹ ಪ್ರಮಾಣಿತ ಕಾರ್ಯವಿಧಾನ (SOP) ರೂಪಿಸಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಹೊಸ SOP ನಲ್ಲಿ ಏನೇನು ಇರಲಿದೆ?

ಹೊಸ ಪ್ರಮಾಣಿತ ಕಾರ್ಯವಿಧಾನದಲ್ಲಿ ಏನೇನು ಇರಬೇಕು ಎಂಬ ಬಗ್ಗೆಯೂ ಸಚಿವರು ಸೂಚನೆ ನೀಡಿದ್ದಾರೆ. ಆ ಕುರಿತ ವಿವರ ಇಲ್ಲಿದೆ;

ಟ್ರ್ಯಾಕಿಂಗ್ ಆ್ಯಪ್ ಅಳವಡಿಕೆ

ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಬಳಸುವ ‘ಎಂ-ಸ್ಟ್ರೈಪ್ಸ್’ ಮಾದರಿಯಲ್ಲೇ ಚಾರಣಿಗರಿಗಾಗಿ ವಿಶೇಷ ಆ್ಯಪ್ ಅಭಿವೃದ್ಧಿಪಡಿಸಲು ಸೂಚಿಸಲಾಗಿದೆ. ಚಾರಣದ ಅವಧಿಯಲ್ಲಿ ಈ ಆ್ಯಪ್ ಚಾರಣಿಗರ ಮೊಬೈಲ್‌ನಲ್ಲಿ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸಲಿದ್ದು, ಯಾರಾದರೂ ದಾರಿ ತಪ್ಪಿಸಿಕೊಂಡರೆ ಅವರನ್ನು ಪತ್ತೆಹಚ್ಚುವುದು ಸುಲಭವಾಗಲಿದೆ.

ಚಾರಣಿಗರಿಗೆ ಕಡ್ಡಾಯ ಗುಂಪು ವಿಮೆ

ಚಾರಣಿಗರ ಸುರಕ್ಷತೆಯ ದೃಷ್ಟಿಯಿಂದ ಅವರಿಗೆ ಕಡ್ಡಾಯವಾಗಿ ಗುಂಪು ವಿಮೆ (Group Insurance) ಮಾಡಿಸುವಂತೆ ಸಚಿವರು ನಿರ್ದೇಶನ ನೀಡಿದ್ದಾರೆ. ಇದರಿಂದ ಅನಿರೀಕ್ಷಿತ ಅಪಘಾತಗಳ ಸಂದರ್ಭದಲ್ಲಿ ಕುಟುಂಬಕ್ಕೆ ಆರ್ಥಿಕ ನೆರವು ಸಿಗಲಿದೆ.

ನೇಚರ್ ಗೈಡ್‌ಗಳಿಗೆ ಹೆಚ್ಚಿನ ಹೊಣೆ

ಚಾರಣಿಗರ ಜೊತೆ ಹೋಗುವ ಗೈಡ್‌ಗಳಿಗೆ ಇನ್ಮುಂದೆ ಹೆಚ್ಚಿನ ಹೊಣೆಗಾರಿಕೆ ಇರಲಿದೆ. ಪ್ರತಿ ಗೈಡ್​ಗೆ ‘ವೈರ್‌ಲೆಸ್ ಸೆಟ್’ ನೀಡುವಂತೆ ನಿರ್ದೇಶನ ನೀಡಲಾಗಿದೆ. ಇದರಿಂದ ನೆಟ್‌ವರ್ಕ್ ಇಲ್ಲದ ಕಾಡಿನ ಭಾಗದಲ್ಲೂ ಸಂಪರ್ಕ ಸಾಧ್ಯವಾಗುತ್ತದೆ.

ಹಳೆಯ ಘಟನೆಗಳಿಂದ ಪಾಠ

ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಸಾಲಿನಲ್ಲಿ ಕೇರಳದ ಅಪ್ರಾಪ್ತೆ ನಾಪತ್ತೆಯಾಗಿರುವುದು ಹಾಗೂ ಕೊಡಗಿನ ತಡಿಯಂಡಮೋಳ್​​ನಲ್ಲಿ ಶರಣ್ಯ ಎಂಬ ಯುವತಿ ನಾಪತ್ತೆಯಾಗಿ ಬಳಿಕ ಪತ್ತೆಯಾದ ಪ್ರಕರಣದ ಬೆನ್ನಲ್ಲೇ ಸರ್ಕಾರ ಎಚ್ಚೆತ್ತುಕೊಂಡು ಕ್ರಮಕ್ಕೆ ಮುಂದಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಈ ತಾಂತ್ರಿಕ ಮತ್ತು ಕಾನೂನುಬದ್ಧ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.

ಇದನ್ನೂ ಓದಿ: ಶರಣ್ಯ ಸಿಕ್ಕ ಬೆನ್ನಲ್ಲೇ ಮತ್ತೋರ್ವ ಬಾಲಕಿ ಕಾಣೆ: ಚಂದ್ರದ್ರೋಣ ಪರ್ವತ ಸರಣಿಯಲ್ಲಿ ಕೇರಳದ ಅಪ್ರಾಪ್ತೆ ನಾಪತ್ತೆ!

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us