Yakshagana: ಅಂಕಪರದೆ; ಅತಿಕಾಯನೆದುರು ಇರುವವನು ರಾಮನೋ ಲಕ್ಷ್ಮಣನೋ? ಕ್ಲೈಮ್ಯಾಕ್ಸ್​ಗಾಗಿ ತುಮಕೂರಿಗೆ ಬನ್ನಿ 

|

Updated on: Mar 23, 2022 | 5:00 PM

Ramayana : ರಾಮಾಯಣದ ಭಾಗವೊಂದನ್ನು ಸ್ವಾರಸ್ಯಕರ ಪ್ರಸಂಗವನ್ನಾಗಿ ಕಟ್ಟಿದವರು ಹಟ್ಟಿಯಂಗಡಿ ರಾಮಭಟ್ಟರು (1794-1854). ಅತಿಕಾಯ ಕಾಳಗ ಪ್ರಸಂಗವನ್ನು ಇನ್ನೂ ಮೂರ್ನಾಲ್ಕು ಕವಿಗಳು ಬರೆದಿದ್ದರೂ ಆಟ-ಕೂಟಗಳಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಪ್ರಸಂಗ ಇದೇ.

Yakshagana: ಅಂಕಪರದೆ; ಅತಿಕಾಯನೆದುರು ಇರುವವನು ರಾಮನೋ ಲಕ್ಷ್ಮಣನೋ? ಕ್ಲೈಮ್ಯಾಕ್ಸ್​ಗಾಗಿ ತುಮಕೂರಿಗೆ ಬನ್ನಿ 
ಫೋಟೋ : ಶ್ಯಾಂ ಕುಂಚಿನಡ್ಕ
Follow us on

ಯಕ್ಷಗಾನ | Yakshagaana : ತುಮಕೂರೆಂಬ ಬಯಲುಸೀಮೆಯಲ್ಲಿ ಯಕ್ಷಗಾನ ಬಯಲಾಟಗಳು ಅಪರೂಪ. ಕೊರೋನದ ಉಪಟಳ ಆರಂಭವಾದ ಮೇಲಂತೂ ಯಕ್ಷಗಾನ ಇಲ್ಲವೇ ಇಲ್ಲ ಎಂಬಷ್ಟು ಇಲ್ಲ. ಅಂತೂ ಒಂದು ಸುದೀರ್ಘ ವಿರಾಮದ ನಂತರ ತುಮಕೂರಿನ ಯಕ್ಷದೀವಿಗೆ ಸಂಸ್ಥೆಯು ಇಲ್ಲಿನ ದಕ್ಷಿಣ ಕನ್ನಡ ಮಿತ್ರವೃಂದದ ಆಶ್ರಯದಲ್ಲಿ ಇದೇ ಮಾರ್ಚ್ 25ರಂದು ಸಂಜೆ 5.30ಕ್ಕೆ ಶ್ರೀ ಶೃಂಗೇರಿ ಶಂಕರಮಠದ ಸಭಾಂಗಣದಲ್ಲಿ ‘ಅತಿಕಾಯ ಕಾಳಗ’ವನ್ನು ಪ್ರದರ್ಶಿಸುತ್ತಿದೆ. ಎಲ್ಲರಿಗೂ ತಿಳಿದಿರುವ ರಾಮಾಯಣದ ಭಾಗವೊಂದನ್ನು ಸ್ವಾರಸ್ಯಕರ ಪ್ರಸಂಗವನ್ನಾಗಿ ಕಟ್ಟಿದವರು ಹಟ್ಟಿಯಂಗಡಿ ರಾಮಭಟ್ಟರು (1794-1854). ಅತಿಕಾಯ ಕಾಳಗ ಪ್ರಸಂಗವನ್ನು ಇನ್ನೂ ಮೂರ್ನಾಲ್ಕು ಮಂದಿ ಕವಿಗಳು ಬರೆದಿದ್ದರೂ ಆಟ-ಕೂಟಗಳಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಪಡೆದಿರುವ ಪ್ರಸಂಗ ಇದೇ. ಪಳಗಿದ ಕಲಾವಿದರ ಹಿಮ್ಮೇಳ-ಮುಮ್ಮೇಳವನ್ನು ಆಸ್ವಾದಿಸಲು ತುಮಕೂರಿನ ಜನತೆ ತುದಿಗಾಲಿನಲ್ಲಿ ಕಾದಿದ್ದಾರೆ.
ಸಿಬಂತಿ ಪದ್ಮನಾಭ ಕೆ. ವಿ., ಲೇಖಕ

ರಾಮಾಯಣದ ಯುದ್ಧಕಾಂಡದಲ್ಲೇ ‘ಅತಿಕಾಯ ಕಾಳಗ’ವೆಂಬುದೊಂದು ರೋಚಕ ಭಾಗ. ಕಾಳಗಗಳೇ ಪ್ರಮುಖವಾಗಿರುವ ಯಕ್ಷಗಾನದಲ್ಲಂತೂ ಇದರ ಪ್ರದರ್ಶನ ಬಲು ಆಕರ್ಷಕ, ಕುತೂಹಲಕಾರಿ. ಧೂಮ್ರಾಕ್ಷ, ವಜ್ರದಂಷ್ಟ್ರ, ಅಕಂಪನ, ಪ್ರಹಸ್ತ, ಕುಂಭಕರ್ಣರೇ ಮೊದಲಾದ ರಾಕ್ಷಸವೀರರು ಮಡಿದ ಬಳಿಕ ರಣಾಂಗಣಕ್ಕೆ ಹೊರಡುವವನು ಅತಿಕಾಯ. ತನ್ನ ದೈತ್ಯದೇಹದ ಕಾರಣಕ್ಕೇ ‘ಅತಿಕಾಯ’ನಿಗೆ ಆ ಹೆಸರು ಬಂದಿರುವುದು. ಆತ ರಾವಣ-ಧಾನ್ಯಮಾಲಿನಿಯರ ಮಗ. ಧಾನ್ಯಮಾಲಿನಿ ರಾವಣನ ಎರಡನೇ ಪತ್ನಿ. ಪರಮ ಸಾತ್ವಿಕ ಸ್ತ್ರೀ. ಸೀತೆಯನ್ನು ರಾಮನಿಗೆ ಮರಳಿಸಿ ಆತನ ಕ್ಷಮೆ ಕೋರುವುದೇ ಲಂಕೆಯನ್ನು ಉಳಿಸುವ ಏಕೈಕ ದಾರಿಯೆಂದು ರಾವಣನನ್ನು ಪರಿಪರಿಯಾಗಿ ಬೇಡಿದ್ದಳು ಆಕೆ. ಅತಿಕಾಯನೂ ಅಮ್ಮನಂತೆಯೇ. ಅಂತರಂಗದಲ್ಲಿ ಹರಿಭಕ್ತ. ರಾಮನನ್ನು ತಾನೇ ಕೆಡಹುತ್ತೇನೆಂದು ಯುದ್ಧಕ್ಕೆ ಹೊರಟುನಿಂತ ತಂದೆಯನ್ನು ತಡೆದು, “ಏತಕೆ ಮರುಳಾಹೆ ತಾತ” ಎಂದು ಪ್ರಶ್ನೆ ಮಾಡಿ, “ಸೀತೆಯನು ರಘುವರನಿಗಿತ್ತನುಜಾತನಾದ ವಿಭೀಷಣ ಸಂಪ್ರೀತಿಯಲಿ ಕರೆದು ರಾಜ್ಯವನಾಳುವುದು ಸುಖದಿ” ಎಂದು ನೀತಿಯನ್ನು ಸಾರುತ್ತಾನೆ.

ದಶಕಂಠನು ಎಷ್ಟಕ್ಕೂ ಒಪ್ಪುವವನಲ್ಲ ಎಂದು ತೀರ್ಮಾನವಾದ ಮೇಲೆ ಅತಿಕಾಯನು ಪುತ್ರಧರ್ಮವೆಂದು ಬಗೆದು ತಾನೇ ಯುದ್ಧಕ್ಕೆ ಅಣಿಯಾಗುತ್ತಾನೆ. ಪರಮವೈಷ್ಣವನಾದ ಆತನಿಗೆ ಬೇಕಿದ್ದುದು ಪಾರಲೌಕಿಕ ವಿಜಯ. ಅಂದರೆ ರಾಮನ ಕೈಯಿಂದ ದೊರಕುವ ಮೋಕ್ಷ. ಅದು ತನಗೊಬ್ಬನಿಗೇ ಅಲ್ಲ, ತನ್ನಂತೆ ಸಾತ್ವಿಕರಾದ ಎಲ್ಲರಿಗೂ ಲಭಿಸಲಿ ಎಂಬುದು ಅವನ ಆಶಯ. ಅದಕ್ಕೇ “ಬನ್ನಿರೈ ಸಂಸಾರ ಶರಧಿಯನು ದಾಟುವರು, ಬನ್ನಿರೈ ಮೋಕ್ಷಕಾಂಕ್ಷಿಗಳು” ಎಂದು ಲಂಕೆಯ ವಾಸಿಗಳನ್ನೆಲ್ಲ ಆಹ್ವಾನಿಸುತ್ತಾನೆ.

ರಣರಂಗದಲ್ಲಿ ಅತಿಕಾಯನಿಗೆ ಇದಿರಾಗುವವನು ಲಕ್ಷ್ಮಣ. ಆತ ರಾಮನೋ ಲಕ್ಷ್ಮಣನೋ ಇವನಿಗೆ ತಿಳಿಯದು. ನೀನು ಯಾರು ಎಂದು ಪ್ರಶ್ನಿಸುವ ಅತಿಕಾಯನಿಗೆ ಲಕ್ಷ್ಮಣ ಕೊಡುವ ಉತ್ತರ- “ನಿನ್ನಯ ಮನಸಿನೊಳಗೇನೆಂದು ತೋರಿದುದನಿತು ಬಗೆಯಲುಬಹುದು” ಎಂಬುದು. ಯಾರಾದರೆ ನನಗೇನು, “ಸಮರಾಂಗಣದೊಳಾತ್ಮನಿವೇದಕರು ನಾವ್ ಚಿನುಮಯಂಗೆ” ಎಂದು ಖಾಡಾಖಾಡಿ ಹೋರಾಡುತ್ತಾನೆ ಅತಿಕಾಯ. ಒಂದು ಹಂತದಲ್ಲಿ “ನೀವು ಜಗದಧಿದೈವವೆಂಬುದ ನಾವು ಬಲ್ಲೆವು ನಮ್ಮ ಕುಲದ ಸ್ವಭಾವವನು ನಾವ್ ಬಿಡಲುಬಹುದೇ” ಎನ್ನುತ್ತಾ ತನ್ನ ಅಂತಿಮ ಪೂಜೆಯನ್ನು ಸ್ವೀಕರಿಸಬೇಕೆಂದು ನಿವೇದಿಸಿಕೊಳ್ಳುತ್ತಾನೆ.

ಇದನ್ನೂ ಓದಿ:Art and Entertainment : ಪುರುಷ ದೃಷ್ಟಿಕೋನದಿಂದಲೇ ಯಕ್ಷಗಾನದಲ್ಲಿ ಶೃಂಗಾರ ವ್ಯಕ್ತ

ಆದರೆ ಅದು ಹೂಹಣ್ಣು ಧೂಪದೀಪಗಳಿಂದ ಮಾಡುವ ಪೂಜೆಯಲ್ಲ. ‘ಸರಳಭಕ್ತಿ’ಯಿಂದ ಮಾಡುವ ಬಾಣಗಳ ಪೂಜೆ. ಅತಿಕಾಯನ ಇಂಗಿತವನ್ನು ಅರ್ಥಮಾಡಿಕೊಳ್ಳುವ ಲಕ್ಷ್ಮಣ ಅದನ್ನು ಒಪ್ಪುತ್ತಾನೆ. ಅತಿಕಾಯ ಒಂದಾದಮೇಲೊಂದು ಬಾಣವನ್ನು ಬಿಡುತ್ತಲೇ ಷೋಡಶೋಪಚಾರಪೂಜೆ ಮುಗಿಸುತ್ತಾನೆ. ಲಕ್ಷ್ಮಣ ಮೌನವಾಗಿ ಎಲ್ಲವನ್ನೂ ಧರಿಸುತ್ತಾನೆ. ಅರ್ಚನೆ ಮಾಡಿದ ಭಕ್ತನಿಗೆ ಪ್ರಸಾದ ಕೊಡಬೇಕಲ್ಲ? ಈಗ ಲಕ್ಷ್ಮಣನ ಸರದಿ. ಅದಕ್ಕೂ ಮುನ್ನ ಆತ ಅತಿಕಾಯನ ಶೌರ್ಯವನ್ನು ಮೆಚ್ಚಿ “ಅಸಮ ಭಕುತನೀನಹುದೈ| ರಣಕುಶಲಯುಕುತಿನಿನಗಹುದೈ| ಅಸುರಾರಿಯ ಪದದಾಣೆ ರಾಕ್ಷಸರೊಳು ನಿನಗೆಣೆಗಾಣೆ” ಎಂದು ಕೊಂಡಾಡುತ್ತಾನೆ. ‘ಅಸುರಾರಿಯ ಪದದಾಣೆ’ ಎಂಬಲ್ಲಿ ಅತಿಕಾಯನಿಗೆ ತನ್ನೆದುರು ಇರುವುದು ರಾಮನಲ್ಲ, ಲಕ್ಷ್ಮಣ ಎಂದು ತಿಳಿಯುವುದು ಪ್ರಸಂಗದ ಒಟ್ಟಾರೆ ಕ್ಲೈಮ್ಯಾಕ್ಸ್. ಅಂತೂ ಅಲ್ಲಿಗೆ ಅತಿಕಾಯನಿಗೆ ಮೋಕ್ಷವಾಗುತ್ತದೆ.

ಹಿಮ್ಮೇಳದಲ್ಲಿ ಭಾಗವತರಾಗಿ ಪುತ್ತಿಗೆ ರಘುರಾಮ ಹೊಳ್ಳ, ಮದ್ದಳೆವಾದಕರಾಗಿ ಪದ್ಮನಾಭ ಉಪಾಧ್ಯಾಯ, ಚೆಂಡೆವಾದಕರಾಗಿ ಪಿ. ಜಿ. ಜಗನ್ನಿವಾಸರಾವ್ ಭಾಗವಹಿಸುತ್ತಿದ್ದಾರೆ. ಮುಮ್ಮೇಳದಲ್ಲಿ ಉಜಿರೆ ಅಶೋಕ ಭಟ್ (ಶ್ರೀರಾಮ), ಪ್ರಸಾದ್ ಚೇರ್ಕಾಡಿ (ಲಕ್ಷ್ಮಣ), ಗೋಪಾಲಕೃಷ್ಣ ಭಟ್ (ರಾವಣ), ಆರತಿ ಪಟ್ರಮೆ (ಅತಿಕಾಯ), ಸಿಬಂತಿ ಪದ್ಮನಾಭ (ವಿಭೀಷಣ), ಶಶಾಂಕ ಅರ್ನಾಡಿ (ಸುಗ್ರೀವ), ಸಾತ್ವಿಕ ನಾರಾಯಣ ಭಟ್ ಹಾಗೂ ಸಂವೃತ ಶರ್ಮಾ (ವಾನರವೀರರು) ಅಭಿನಯಿಸಲಿದ್ದಾರೆ.

ಗಮನಿಸಿ : ‘ಅಂಕಪರದೆ’ಯ ಮೂಲಕ ಕಲಾಸಕ್ತರನ್ನು ನೀವು ತಲುಪಲು ಬಯಸಿದಲ್ಲಿ ಪ್ರದರ್ಶನಕ್ಕೆ ಒಂದು ವಾರವಿರುವಾಗ ನಮಗೆ ತಿಳಿಸಿ. ಹಾಗೆಯೇ ಕಲಾಸಕ್ತರು, ಕಲಾತಜ್ಞರು, ಪ್ರದರ್ಶನ ಕಲೆಗಳಿಗೆ ಸಂಬಂಧಿಸಿದ ಯಾವುದೇ ವಿಷಯ, ವಿಚಾರ, ಒಳನೋಟಗಳನ್ನು ಹಂಚಿಕೊಳ್ಳಲು ನಮ್ಮನ್ನು ಸಂಪರ್ಕಿಸಿ :tv9kannadadigital@gmail.com

ಇದನ್ನೂ ಓದಿ : Theatre: ಅಂಕಪರದೆ; ‘ವ್ಯೋಮ 360 ನಾಟಕೋತ್ಸವ’ದಲ್ಲಿ ರಂಗರಥದಿಂದ ‘ಆ್ಯಬ್​ಸಿಂತ್’ ನಾಟಕ

Published On - 4:40 pm, Wed, 23 March 22