ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ: ಶಂಕಿತ ಉಗ್ರನಿಗಾಗಿ ತುಮಕೂರಿನಲ್ಲಿ ತೀವ್ರ ಶೋಧ
Bengaluru Rameswaram Cafe blast: ಬೆಂಗಳೂರಿನ ರಾಮೇಶ್ವರಂ ಕೆಫೆಯ ಬಾಂಬ್ ಸ್ಪೋಟದ ಪ್ರಕರಣದ ತನಿಖೆಯನ್ನು ಎನ್ಐಎ ಹಾಗೂ ಪೊಲೀಸರು ಚುರುಕುಗೊಳಿಸಿದ್ದು, ಶಂಕಿತ ಬಾಂಬರ್ ಪತ್ತೆಗೆ ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ. ಇದೀಗ ಶಂಕಿತ ಉಗ್ರ ತುಮಕೂರಿನಲ್ಲಿ ಓಡಾಡಿರುವ ಶಂಕೆ ವ್ಯಕ್ತವಾಗಿದ್ದು, ತುಮಕೂರು ನಗರದಲ್ಲಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.

ತುಮಕೂರು, (ಮಾರ್ಚ್ 06): ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು, ತುಮಕೂರಿನಲ್ಲಿ ಶಂಕಿತ ಭಯೋತ್ಪಾದಕನಿಗಾಗಿ ಹುಡುಕಾಟ ನಡೆಸಿದ್ದಾರೆ. ಶಂಕಿತ ಬಾಂಬರ್ ಮಾರ್ಚ್1ರಂದು ತುಮಕೂರಿನಲ್ಲಿ ಓಡಾಡಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ತುಮಕೂರಿನ ಹಲವೆಡೆ ತೀವ್ರ ಹುಡುಕಾಟ ನಡೆಸಿದ್ದಾರೆ. ಸುಮಾರು 28 ವಾಹನಗಳಲ್ಲಿ ತುಮಕೂರಿಗೆ ಆಗಮಿಸಿರುವ ಪೊಲೀಸರು, ರೈಲ್ವೆ ನಿಲ್ದಾಣ, ಪಾಲಿಕೆ ಕಚೇರಿ, ಪೊಲೀಸ್ ಕಂಟ್ರೋಲ್ ರೂಂ ಸೇರಿ ನಗರದ ಹಲವೆಡೆಯಲ್ಲಿರುವ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಇನ್ನು ಬೆಂಗಳೂರು ಪೊಲೀಸರಿಗೆ ತುಮಕೂರು ಎಸ್‌ಪಿ ಕೆ.ವಿ.ಅಶೋಕ್, ಡಿವೈಎಸ್‌ಪಿ ಚಂದ್ರಶೇಖರ್ ಸೇರಿದಂತೆ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಸಾಥ್ ನೀಡಿದ್ದಾರೆ.
ಬಾಂಬ್ ಇಟ್ಟವನಿಗಾಗಿ ಸಿಸಿಬಿ ಮತ್ತು ಎನ್‌ಐಎ ಪೊಲೀಸರು ಮ್ಯಾಪಿಂಗ್ ಮಾಡಿದ್ದು, ಎಲ್ಲಿಂದ ಬಂದ, ಎಲ್ಲಿಗೆ ಹೋದ ಅನ್ನೋ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಆರೋಪಿಯ ಪೂರ್ತಿ ಮುಖದ ಫೋಟೋಗಾಗಿ ಸಿಸಿಕ್ಯಾಮರಾಗಳನ್ನ ಜಾಲಾಡ್ತಿದ್ದಾರೆ. ಈ ವೇಳೆ ಆರೋಪಿ ತುಮಕೂರಿನಲ್ಲಿ ಓಡಾಡಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಬೆಂಗಳೂರು ಪೊಲೀಸರು ತುಮಕೂರಿನಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.
ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ: ಬಾಂಬರ್ ಫೋಟೋ ಬಿಡುಗಡೆ, ಸುಳಿವು ನೀಡಿದವರಿಗೆ 10 ಲಕ್ಷ ರೂ. ಬಹುಮಾನ
ಮಾಹಿತಿ ನೀಡಿದವರಿಗೆ ಬಹುಮಾನ ಘೋಷಿಸಿದ ಎನ್ಐಎ
ರಾಮೇಶ್ವರಂ ಕೆಫೆಯ ಬಾಂಬ್ ಸ್ಪೋಟದ (Rameshwaram Cafe Blast) ಶಂಕಿತ ವ್ಯಕ್ತಿಯ ಮಾಸ್ಕ್ ಇಲ್ಲದ ಫೋಟೋವನ್ನು (Photo) ಎನ್ಐಎ ರಿಲೀಸ್ ಮಾಡಿದ್ದು, ಶಂಕಿತ ಬಾಂಬರ್ ಮಾಹಿತಿ ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಎನ್ಐಎ (NIA) ಘೋಷಿಸಿದೆ. ಅಲ್ಲದೇ ಮಾಹಿತಿದಾರರ ಗುರುತನ್ನು ಗೌಪ್ಯವಾಗಿ ಇರಿಸಲಾಗುವುದು ಎಂದು ಎನ್ಐಎ ಹೇಳಿದೆ. ಶಂಕಿತ ಉಗ್ರನ ಸುಳಿವು ಇದ್ರೆ 080-29510900, 8904241100 ಸಂಖ್ಯೆಗೆ ಕರೆ ಮಾಡುವಂತೆ ಎನ್ಐಎ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. Info.blr.nia@gov.in ಗೂ ಮೇಲ್ ಮಾಡಿ ಶಂಕಿತನ ಮಾಹಿತಿಯನ್ನು ಅಧಿಕಾರಿಗಳ ಜೊತೆ ಹಂಚಿಕೊಳ್ಳಬಹುದಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:03 am, Thu, 7 March 24




