AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್ ಸರ್ಕಾರದಲ್ಲಿ ಶೇ 40ಕ್ಕೂ ಹೆಚ್ಚು ಕಮಿಷನ್: ‘ಕೈ’ ನಾಯಕನಿಂದಲೇ ಗಂಭೀರ ಆರೋಪ

ಹಿಂದಿನ ಬಿಜೆಪಿ ಸರ್ಕಾರ ಗುತ್ತಿಗೆದಾರರಿಂದ ಶೇ 40ರಷ್ಟು ಕಮಿಷನ್ ತೆಗೆದುಕೊಳ್ಳುತ್ತಿತ್ತು ಎಂದು ಆರೋಪಿಸಿ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ವಿರುದ್ಧ ಇದೀಗ ಆ ಪಕ್ಷದ ನಾಯಕರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಅಚ್ಚರಿಯೆಂದರೆ, ಹಿಂದೆ ಸಿಎಂ ಸಿದ್ದರಾಮಯ್ಯರ ಕಟ್ಟಾ ಬೆಂಬಲಿಗರಾಗಿದ್ದ ನಾಯಕರೇ ಆರೋಪ ಮಾಡಿದ್ದಾರೆ. ಅವರು ಮಾಡಿರುವ ಆರೋಪದ ಬಗ್ಗೆ ಮಾಹಿತಿ ಇಲ್ಲಿದೆ.

ಕಾಂಗ್ರೆಸ್ ಸರ್ಕಾರದಲ್ಲಿ ಶೇ 40ಕ್ಕೂ ಹೆಚ್ಚು ಕಮಿಷನ್: ‘ಕೈ’ ನಾಯಕನಿಂದಲೇ ಗಂಭೀರ ಆರೋಪ
ಕಾಂಗ್ರೆಸ್ ಸರ್ಕಾರದಲ್ಲಿ ಶೇ 40ಕ್ಕೂ ಹೆಚ್ಚು ಕಮಿಷನ್: ‘ಕೈ’ ನಾಯಕನಿಂದಲೇ ಗಂಭೀರ ಆರೋಪ
Ganapathi Sharma
|

Updated on:Aug 31, 2024 | 11:42 AM

Share

ತುಮಕೂರು, ಆಗಸ್ಟ್ 31: ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಗುತ್ತಿಗೆದಾರರು ಶೇ 40ಕ್ಕೂ ಹೆಚ್ಚು ಕಮಿಷನ್‌ ನೀಡಿ ಬಿಲ್‌ ಪಡೆಯಬೇಕಾದ ಸ್ಥಿತಿ ಬಂದಿದೆ ಎಂದು ತುಮಕೂರು ಜಿಲ್ಲಾ ಸಿವಿಲ್‌ ಗುತ್ತಿಗೆದಾರರ ಸಂಘದ ಅಧ್ಯಕ್ಷ, ಹಿರಿಯ ಕಾಂಗ್ರೆಸ್‌ ಮುಖಂಡ ಎಡಿ ಬಲರಾಮಯ್ಯ ಆರೋಪಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಸ್ಥಳೀಯ ಗುತ್ತಿಗೆದಾರರು ನೀಡಿದ ದೂರಿನ ಮೇರೆಗೆ ಚಿಕ್ಕನಾಯಕನಹಳ್ಳಿಯಲ್ಲಿ ಇತ್ತೀಚೆಗೆ ಲೋಕಾಯುಕ್ತ ಪೊಲೀಸರು ಕೆಲವು ಎಂಜಿನಿಯರ್‌ಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿ ಬಂಧಿಸಿದ್ದಾರೆ. ಆರೋಪಿಗಳು ಜಲ ಜೀವನ್ ಮಿಷನ್ ಅಡಿಯಲ್ಲಿ ಮಾಡಿದ ಕಾಮಗಾರಿಗಳಿಗೆ ಬಿಲ್‌ಗಳನ್ನು ಕ್ಲಿಯರ್ ಮಾಡಲು ಭಾರಿ ಮೊತ್ತದ ಲಂಚ ಕೇಳಿದ್ದರು ಎಂದು ತಿಳಿಸಿದ್ದಾರೆ.

2013ರ ವಿಧಾನಸಭೆ ಚುನಾವಣೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗರಾಗಿದ್ದ ಬಲರಾಮಯ್ಯ, ಕಮಿಷನ್ ನೀಡದಿದ್ದರೆ ಗುತ್ತಿಗೆದಾರರ ಬಿಲ್‌ಗಳನ್ನು ಕ್ಲಿಯರ್ ಮಾಡದಂತೆ ಕಾಂಗ್ರೆಸ್ ಶಾಸಕರು ಮತ್ತು ಸಚಿವರು ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಕಮಿಷನ್ ಹಾವಳಿಗೆ ಕಡಿವಾಣ ಹಾಕಲು ಕ್ರಮಕೈಗೊಳ್ಳದಿದ್ದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸುವುದಾಗಿ ಬಲರಾಮಯ್ಯ ಹಾಗೂ ಸಂಘದ ಇತರ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿ ಸರ್ಕಾರದ ಆಡಳಿತದಲ್ಲಿ ಶೇ 40ರಷ್ಟು ಕಮಿಷನ್ ನೀಡಲಾಗುತ್ತಿತ್ತು. ಈಗ ಶೇ 40ಕ್ಕಿಂತ ಹೆಚ್ಚಿದೆ ಎಂದು ಬಲರಾಮಯ್ಯ ಆರೋಪಿಸಿದ್ದಾರೆ.

‘ಈಗ ಭ್ರಷ್ಟಾಚಾರ ಹೆಚ್ಚಾಗಿದೆ’

ವಿಧಾನಸಭೆ ಚುನಾವಣೆಗೂ ಮುನ್ನ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದಾಗಿ ಭರವಸೆ ನೀಡಿದ್ದರು. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆದರೂ ಪರಿಸ್ಥಿತಿ ಬದಲಾಗಿಲ್ಲ. ಕಡಿಮೆಯಾಗುವ ಬದಲು, ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಮುಡಾ ಹಗರಣ: ಪರ ಅಥವಾ ವಿರೋಧ ಆದೇಶ ಬಂದರೆ ಸಿದ್ದರಾಮಯ್ಯ ಮುಂದಿನ ಆಯ್ಕೆಗಳೇನು?

ಹಿಂದೆ, ಹಿರಿತನದ ಆಧಾರದ ಮೇಲೆ ಎಲ್ಒಸಿ ನೀಡಲಾಗಿತ್ತು. ಆದರೆ ಈಗ ಕಮಿಷನ್ ಕೊಡುವವರಿಗೆ ಮಾತ್ರ ಬಿಲ್ ಕ್ಲಿಯರ್ ಮಾಡುವಂತೆ ಸಚಿವರು, ಶಾಸಕರು ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಜಲ ಜೀವನ್ ಮಿಷನ್ (ಜೆಜೆಎಂ) ಅಡಿಯಲ್ಲಿನ ಕಾಮಗಾರಿಗಳ ಬಿಲ್‌ಗಳನ್ನು ಕ್ಲಿಯರ್ ಮಾಡಲು, ನಾವು ಎಂಜಿನಿಯರ್‌ಗಳ ಮೂಲಕ ಜಿಪಂ ಅಧಿಕಾರಿಗಳಿಗೆ ಲಂಚ ನೀಡಬೇಕಾಗಿದೆ ಎಂದು ಪದಾಧಿಕಾರಿಗಳು ಆರೋಪಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:34 am, Sat, 31 August 24