AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಡೇ ಕಾರ್ತಿಕ ಸೋಮವಾರ ವಿಶೇಷ: ತುಮಕೂರು ಸಿದ್ದಗಂಗಾ ಮಠದ ಶಿವಕುಮಾರಶ್ರೀ ಗದ್ದುಗೆಗೆ ಹೆಲಿಕಾಪ್ಟರ್​ ಮೂಲಕ ಪುಷ್ಪವೃಷ್ಟಿ

ಕಾರ್ತಿಕ ಮಾಸದ ಕೊನೆಯ ಸೋಮವಾರದ ಪ್ರಯುಕ್ತ ತುಮಕೂರು ಕ್ಯಾತ್ಸಂದ್ರ ಬಳಿಯಿರುವ ಸಿದ್ದಗಂಗಾ ಮಠದಲ್ಲಿ ಲಕ್ಷಪುಷ್ಪ ಬಿಲ್ವಾರ್ಚನೆ ನಡೆಯಿತು.

ಕಡೇ ಕಾರ್ತಿಕ ಸೋಮವಾರ ವಿಶೇಷ: ತುಮಕೂರು ಸಿದ್ದಗಂಗಾ ಮಠದ ಶಿವಕುಮಾರಶ್ರೀ ಗದ್ದುಗೆಗೆ ಹೆಲಿಕಾಪ್ಟರ್​ ಮೂಲಕ ಪುಷ್ಪವೃಷ್ಟಿ
ತುಮಕೂರು ಸಿದ್ದಗಂಗಾ ಮಠದಲ್ಲಿ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿಗೆ ಕಾಯುತ್ತಿರುವ ಮಕ್ಕಳು ಮತ್ತು ಭಕ್ತರು.
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Nov 29, 2021 | 6:33 PM

Share

ತುಮಕೂರು: ಕಾರ್ತಿಕ ಮಾಸದ ಕೊನೆಯ ಸೋಮವಾರದ ಪ್ರಯುಕ್ತ ತುಮಕೂರು ಕ್ಯಾತ್ಸಂದ್ರ ಬಳಿಯಿರುವ ಸಿದ್ದಗಂಗಾ ಮಠದಲ್ಲಿ ಲಕ್ಷಪುಷ್ಪ ಬಿಲ್ವಾರ್ಚನೆ ನಡೆಯಿತು. ಶಿವೈಕ್ಯ ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆಗೆ ಹೆಲಿಕಾಪ್ಟರ್​ ಮೂಲಕ ಪುಷ್ಪವೃಷ್ಟಿ ಕಾರ್ಯಕ್ರಮವನ್ನು ವೀರಶೈವ ಲಿಂಗಾಯತ ಮಹಾವೇದಿಕೆ ಆಯೋಜಿಸಿತ್ತು. ಗದ್ದುಗೆ ಬಳಿ ಸಿದ್ದಲಿಂಗಶ್ರೀ, ನಟ ಡಾರ್ಲಿಂಗ್ ಕೃಷ್ಣ ಮತ್ತು ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಠದಲ್ಲಿ ಬೆಳಿಗ್ಗೆ 8ಕ್ಕೆ ಧಾರ್ಮಿಕ ಸಮಾರಂಭ ನಡೆಯಿತು. ಮಧ್ಯಾಹ್ನ ಹೆಲಿಕಾಪ್ಟರ್ ಮೂಲಕ ಡಾ.ಶಿವಕುಮಾರ ಶ್ರೀಗಳ ಗದ್ದುಗೆಗೆ ಪುಷ್ಪಾರ್ಚನೆ ನಡೆಯಿತು.

ರಾಜ್ಯಾದ್ಯಂತ ಶಿವಾಲಯಗಳಲ್ಲಿ ಕಾರ್ತಿಕ ಸೋಮವಾರದ ಸಂಭ್ರಮ ಕಾರ್ತಿಕ ಮಾಸದ ಕೊನೆಯ ಸೋಮವಾರದ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಎಲ್ಲ ಶಿವಾಲಯಗಳಲ್ಲಿ ಜನಜಂಗುಳಿ ನೆರೆದಿತ್ತು. ಮುಂಜಾನೆಯಿಂದಲೇ ರುದ್ರಾಭಿಷೇಕ ಸೇರಿದಂತೆ ಹಲವು ಸೇವೆಗಳು ನಡೆದವು. ಸತತ ಮಳೆಯ ಹಿನ್ನೆಲೆಯಲ್ಲಿ ಹೂವಿನ ಬೆಲೆ ಗಗನಕ್ಕೇರಿದೆ. ಹೀಗಾಗಿ ಭಕ್ತರು ಮೊದಲು ಖರ್ಚುಮಾಡಿದಷ್ಟೇ ಹಣ ತೆತ್ತರೂ ಕೈಗೆ ಸಿಗುತ್ತಿದ್ದ ಹೂ ಪ್ರಮಾಣ ಮಾತ್ರ ಕಡಿಮೆಯಾಗಿತ್ತು. ಇದು ಈಶ್ವರನ ಪೂಜೆಗೆ ಶ್ರೇಷ್ಠವಾದ ದಿನವಾದ ಕಾರಣ ಬಿಲ್ವಪತ್ರೆ, ಸ್ಪಟಿಕ, ಕಣಗಿಲ ಹೂಗಳನ್ನು ಭಕ್ತರು ದೇಗುಲಕ್ಕೆ ಕೊಂಡೊಯ್ಯುತ್ತಿದ್ದುದು ಕಂಡುಬಂತು. ರುದ್ರಾಭಿಷೇಕ ನಡೆಯುವಾಗ ಭಕ್ತರು ಕಣ್ಮುಚ್ಚಿ ಪರಶಿವನನ್ನು ಧ್ಯಾನಿಸಿದರು. ಸೂರ್ಯ ಪಶ್ಚಿಮದತ್ತ ಜಾರುತ್ತಿದ್ದಂತೆ ಲಕ್ಷದೀಪೋತ್ಸವಕ್ಕೆ ಸಿದ್ಧತೆಗಳು ಚುರುಕಾದವು. ಬಹುತೇಕ ದೇಗುಲಗಳಲ್ಲಿ ಲಕ್ಷದೀಪೋತ್ಸವ ಸಡಗರ ಸಂಭ್ರಮದಿಂದ ನಡೆಯಿತು.

ಪ್ರತಿವರ್ಷದಂತೆ ಈ ವರ್ಷವೂ ಚಿಕ್ಕಬಳ್ಳಾಪುರ ತಾಲ್ಲೂಕು ನಂದಿ ಗ್ರಾಮದ ಭೋಗನಂದೀಶ್ವರ ದೇವಸ್ಥಾನದಲ್ಲಿ ಕಡೆ ಕಾರ್ತಿಕದ ಪ್ರಯುಕ್ತ ಜನ ಜಂಗುಳಿ ನೆರೆದಿತ್ತ. ಕೊರೊನಾ ಸೋಂಕಿನ ಆತಂಕವನ್ನು ಜನರು ಲೆಕ್ಕಕ್ಕೇ ಇಟ್ಟುಕೊಂಡಿರಲಿಲ್ಲ. ಇಂದು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಾರ್ಥಿಸಿದ್ರೆ ಕೊರಿಕೆಗಳು ಈಡೇರುತ್ತವೆ ಎನ್ನುವ ನಂಬಿಕೆ ಈ ಭಾಗದಲ್ಲಿ ಪ್ರಚಲಿತದಲ್ಲಿದೆ.

ವಿಶೇಷ ಪೂಜೆ ನೆರವೇರಿಸಿದ ಸಚಿವ ಸುಧಾಕರ್ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಪ್ರಾರ್ಥಿಸಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಭೋಗ ನಂದೀಶ್ವರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಿಜೆಪಿ ಅಭ್ಯರ್ಥಿ ಡಾ.ವೇಣುಗೋಪಾಲ, ಮಾಜಿ ಶಾಸಕ ಮಂಜುನಾಥಗೌಡ ಸೇರಿದಂತೆ ಹಲವು ಸ್ಥಳಿಯ ಮುಖಂಡರು ಭಾಗವಹಿಸಿದ್ದರು. ಪ್ರತಿ ಚುನಾವಣೆಗೂ ಮುನ್ನ ನಂದಿ ದೇಗುಲದಲ್ಲಿ ಸಚಿವರು ಪೂಜೆ ಸಲ್ಲಿಸುವುದು ವಾಡಿಕೆ. ಪೂಜೆಯ ನಂತರ ಮಾತನಾಡಿದ ಸುಧಾಕರ್, ‘ಪ್ರತಿ ಚುನಾವಣೆ ಸಂದರ್ಭದಲ್ಲಿ ಭೋಗನಂದೀಶ್ವರ ನನ್ನ ಮೇಲೆ ಕರುಣೆ ತೋರಿದ್ದಾನೆ. ಈ ಬಾರಿಯೂ ಡಾ.ವೇಣುಗೋಪಾಲ ಗೆಲುವಿಗೆ ಪ್ರಾರ್ಥನೆ ಸಲ್ಲಿಸಿದ್ದೇನೆ. ಕೋಲಾರ-ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳಲ್ಲಿ ಪೂರಕ ವಾತಾವರಣ ಇದೆ. ಬಿಜೆಪಿಯ ಸ್ಥಳಿಯ ಜನಪ್ರತಿನಿಧಿಗಳ ಸಂಖ್ಯೆ ಕಡಿಮೆ ಇದ್ದೂ ಇಲ್ಲಿ ಗೆಲುವು ನಮ್ಮದೇ. ಪಕ್ಷಾತೀತವಾಗಿ ಸ್ಥಳಿಯ ಜನಪ್ರತಿನಿಧಿಗಳು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುತ್ತಾರೆ ಅನ್ನೊ ನಂಬಿಕೆ ಇದೆ’ ಎಂದು ಹೇಳಿದರು.

ಇದನ್ನೂ ಓದಿ: ನಂದಿ ಮೇಲೆ ಸವಾರಿ ಹೊರಟಿರುವ ಶಿವನ ವಿಗ್ರಹದ ದೇವಸ್ಥಾನ ಇರೋದು ಕೇವಲ ಲಕ್ಷ್ಮೇಶ್ವರನಲ್ಲಿ ಮಾತ್ರ! ಇದನ್ನೂ ಓದಿ: Temple Tour: ಅಕ್ಷರಾಭ್ಯಾಸಕ್ಕೆ ಶೃಂಗೇರಿಯಷ್ಟೆ ಈ ದೇಗುಲ ಹೆಸರುವಾಸಿ