
ತುಮಕೂರು, ನವೆಂಬರ್ 28: ಜಿಲ್ಲೆಯ ಶಿರಾ ಪಟ್ಟಣದಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣಕ್ಕೆ ಕೊನೆಗೂ ಮಹತ್ವದ ತಿರುವು ಸಿಕ್ಕಿದೆ. ಮನೆಗಳ್ಳತನ ನಡೆದು ಸುಮಾರು ಒಂದು ವರ್ಷದ ಬಳಿಕ ಪ್ರಕರಣದ ಆರೋಪಿಯನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಕುಂದಾಪುರ ಮೂಲದ ಪ್ರಶಾಂತ್ ಮೊಗವೀರ (35) ಬಂಧಿತ ಆರೋಪಿ. ಊರೆಲ್ಲಾ ಹುಡುಕಾಡಿದ ಪೊಲೀಸರಿಗೆ ಕೊನೆಗೆ ಬೆಳಗಾವಿಯ ಕೇಂದ್ರ ಕಾರಾಗೃಹದಲ್ಲಿದಲ್ಲೇ ಕಳ್ಳ ಸಿಕ್ಕಿಬಿದಿದ್ದಾನೆ.
2025ರ ನವೆಂಬರ್ನಲ್ಲಿ ಶಿರಾ ಪಟ್ಟಣದಲ್ಲಿ ಮನೆಗಳ್ಳತನ ನಡೆದಿತ್ತು. ಈ ಕೃತ್ಯ ಪ್ರಶಾಂತ್ ಮೊಗವೀರ ಮಾಡಿರುವುದಾಗಿ ತನಿಖೆಯಿಂದ ಬೆಳಕಿಗೆ ಬಂದಿದೆ. ಜೈಲಿನಲ್ಲಿದ್ದಾಗ ಪರಿಚಯವಾಗಿದ್ದ ನಿತೀಶ್ ಡೂಪ್ಲೆ, ಭೀಮಾ ಹಾಗೂ ಮಲ್ಲಿಕಾರ್ಜುನ ಎಂಬ ಮೂವರೊಂದಿಗೆ ಪ್ರಶಾಂತ್ ಗೆಳೆತನ ಬೆಳೆಸಿಕೊಂಡಿದ್ದ. ಅವರು ಜೈಲಿನಿಂದ ಬಿಡುಗಡೆಯಾದ ನಂತರ ವೈದ್ಯಕೀಯ ಕಾರಣ ನೀಡಿ ಪೆರೋಲ್ ಮೇಲೆ ಹೊರಬಂದಿದ್ದ ಪ್ರಶಾಂತ್, ಅವರೊಂದಿಗೆ ಸೇರಿಕೊಂಡು ಕರ್ನಾಟಕ ಹಾಗೂ ಆಂಧ್ರಪ್ರದೇಶದ ವಿವಿಧೆಡೆ ಮನೆಗಳ್ಳತನ ಕೃತ್ಯ ಎಸಗಿದ್ದ.
ಬೆಳಗಾವಿಯ ಕೇಂದ್ರ ಕಾರಾಗೃಹದಲ್ಲಿದ್ದ ಪ್ರಶಾಂತ್, 2025ರ ಸೆಪ್ಟೆಂಬರ್ನಲ್ಲಿ 27 ದಿನಗಳ ಪೆರೋಲ್ ಪಡೆದಿದ್ದ. ಆದರೆ, ಅಕ್ಟೋಬರ್ 20ರಂದು ನಿಗದಿತ ಸಮಯಕ್ಕೆ ಜೈಲಿಗೆ ಮರಳದೆ ತಲೆಮರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಬೆಳಗಾವಿ ಪೊಲೀಸರು ಆತನನ್ನು ಪತ್ತೆಹಚ್ಚಿ ಡಿಸೆಂಬರ್ನಲ್ಲಿ ಬಂಧಿಸಿದ್ದರು.
ಇದನ್ನೂ ಓದಿ: ಬಾಡಿಗೆ ಮನೆ ಹುಡುಕುವ ನೆಪದಲ್ಲಿ ಮನೆಗಳ್ಳತನ: 4 ಜಿಲ್ಲೆಗಳಲ್ಲಿ ಕಳ್ಳರ ಕೈಚಳಕ; 45.95 ಲಕ್ಷದ ಚಿನ್ನಾಭರಣ ಜಪ್ತಿ
ಇದಾದ ಬಳಿಕ ಸುಮಾರು 11 ತಿಂಗಳ ನಂತರ ಖಚಿತ ಮಾಹಿತಿ ಆಧರಿಸಿ ಶಿರಾ ಪೊಲೀಸರು ತನಿಖೆ ಮುಂದುವರಿಸಿದ್ದರು. ಈ ವೇಳೆ ಶಿರಾದಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣದಲ್ಲಿ ಪ್ರಶಾಂತ್ ಭಾಗಿಯಾಗಿರುವುದು ಗೊತ್ತಾಗಿದೆ. ಬಳಿಕ ಬಾಡಿ ವಾರೆಂಟ್ ಮೂಲಕ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯದ ಮಾಹಿತಿ ಬಯಲಾಗಿದೆ. ಆರೋಪಿ ಕದ್ದಿದ್ದ 50 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸದ್ಯ ಶಿರಾ ನಗರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇನ್ನು ಆರೋಪಿ ಪ್ರಶಾಂತ್ ಹಿನ್ನೆಲೆ ಪೊಲೀಸರನ್ನೇ ಬೆಚ್ಚಿಬೀಳಿಸಿದೆ. ಕುಂದಾಪುರ ಮೂಲದ ಪ್ರಶಾಂತ್ ತನ್ನದೇ ಬೋಟ್ ಹೊಂದಿದ್ದು, ಮೀನುಗಾರಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಆದರೆ, 24ನೇ ವಯಸ್ಸಿನಲ್ಲಿ ಮಹಿಳೆಯ ಮೇಳೆ ಅತ್ಯಾಚಾರ, ಕೊಲೆ ಹಾಗೂ ದರೋಡೆ ಪ್ರಕರಣದಲ್ಲಿ ಆರೋಪಿಗಳಲ್ಲಿ ಒಬ್ಬನಾಗಿ ಬಂಧಿತನಾಗಿದ್ದ.
ಇದನ್ನೂ ಓದಿ: ಹಗಲು ಹಳೇ ಪಾತ್ರೆ ಮಾರಾಟ, ರಾತ್ರಿ ಮನೆಗಳ್ಳತನ: ಕೊನೆಗೂ ಸಿಕ್ಕಿಬಿದ್ದ ಖತರ್ನಾಕ್ ಮಂಕಿ ಕ್ಯಾಪ್ ಗ್ಯಾಂಗ್
2015ರಲ್ಲಿ ಕುಂದಾಪುರದಲ್ಲಿ ನಡೆದಿದ್ದ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 2018ರಲ್ಲಿ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಪ್ರಶಾಂತ್ಗೆ ಮರಣದಂಡನೆ ವಿಧಿಸಿತ್ತು. ಬಳಿಕ 2024ರ ಜನವರಿಯಲ್ಲಿ ಹೈಕೋರ್ಟ್ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸಿತ್ತು. ಅಲ್ಲದೆ, 60 ವರ್ಷ ವಯಸ್ಸಾಗುವವರೆಗೂ ಯಾವುದೇ ವಿನಾಯಿತಿ ಇಲ್ಲದೆ ಜೈಲು ಶಿಕ್ಷೆ ಅನುಭವಿಸುವಂತೆ ಆದೇಶಿಸಿತ್ತು.
ಬೆಳಗಾವಿ ಕೇಂದ್ರ ಕಾರಾಗೃಹದಲ್ಲಿದ್ದ ಪ್ರಶಾಂತ್ಗೆ ಅಲ್ಲಿನ ವೈದ್ಯೆಯೊಬ್ಬರ ಪರಿಚಯವಾಗಿದೆ. ಬಳಿಕ ಅದು ಪ್ರೀತಿಗೆ ತಿರುಗಿದೆ. ವೈದ್ಯಕೀಯ ಕಾರಣಗಳಿಗಾಗಿ ಪೆರೋಲ್ ಪಡೆದು ಹೊರಬಂದಿದ್ದ ಪ್ರಶಾಂತ್, ಈ ಅವಧಿಯಲ್ಲಿ ವೈದ್ಯೆಯನ್ನು ವಿವಾಹವಾಗಿದ್ದಾನೆ. ಇದೇ ವೇಳೆ ಗೆಳೆಯರೊಂದಿಗೆ ಸೇರಿ ಹಲವು ಕಡೆ ಮನೆಗಳ್ಳತನ ಕೃತ್ಯ ಎಸಗಿದ್ದಾನೆ. ಇದೀಗ ಶಿರಾ ಮನೆಗಳ್ಳತನ ಪ್ರಕರಣದಲ್ಲಿ ಆತನ ಪಾತ್ರ ಬಯಲಾಗಿದ್ದು, ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ ನಡೆಸಿದ್ದ ಇತರ ಕಳ್ಳತನ ಪ್ರಕರಣಗಳ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.