ಆ್ಯಪ್ನಲ್ಲಿ ರಿಕ್ವೆಸ್ಟ್ ಕಳಸಿ ಕಸದ ಸಮಸ್ಯೆಗೆ ಮುಕ್ತಿ ನೀಡಿ: ಏನಿದು “ಪಿಕ್ ಮೈ ಗಾರ್ಬೆಜ್”?
ರಾಜಧಾನಿ ಬೆಂಗಳೂರಿನಲ್ಲಿ ಕಸದ ಸಮಸ್ಯೆ ಅನ್ನೊದು ಹಳೇ ಕಥೆ. ಆದರೆ ಈಗ ಪಕ್ಕದ ಜಿಲ್ಲೆ ತುಮಕೂರಿನಲ್ಲೂ ಕಸದ ಸಮಸ್ಯೆ ಶುರುವಾಗಿದೆ. ನಗರದ ರಸ್ತೆಗಳಲ್ಲಿ ಕಸದ ರಾಶಿ ಬೀಳುತ್ತಿದೆ. ಇದರಿಂದ ಜನರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಈ ಸಂಬಂಧ ತುಮಕೂರು ಮಹಾನಗರ ಪಾಲಿಕೆ ಹೊಸ ಯೋಜನೆಯನ್ನು ರೂಪಿಸಿದೆ.

ತುಮಕೂರು, ಜುಲೈ 20: ತುಮಕೂರು (Tumakur) ನಗರವನ್ನು ಸ್ಮಾರ್ಟ್ ಸಿಟಿಯನ್ನಾಗಿಸಲು ಹಲವು ಯೋಜನೆಗಳು ಜಾರಿಯಾಗಿದ್ದು, ಅದರಂತೆ ಕಾರ್ಯಚಟುವಟಿಕೆಗಳು ನಡೆಯುತ್ತಿವೆ. ಆದರೆ, ಈ ನಡುವೆ ಕಸದ ಸಮಸ್ಯೆ ತುಮಕೂರು ನಗರದಲ್ಲಿ ಹೆಚ್ಚಾಗಿದೆ. ಮನೆ ಬಳಿ ಬರುವ ಪೌರಕಾರ್ಮಿಕರಿಗೆ ಕಸ ನೀಡದೆ, ಕೆಲವರು ಎಲ್ಲಂದರಲ್ಲಿ ಕಸ ಬಿಸಾಡುತ್ತಿದ್ದಾರೆ. ಇದರಿಂದ, ರಸ್ತೆಗಳ ಅಕ್ಕ-ಪಕ್ಕದಲ್ಲಿ ಕಸದ ರಾಶಿಗಳು ಕಾಣುತ್ತಿದ್ದು, ತುಮಕೂರು ನಗರದಲ್ಲಿ ಸ್ವಚ್ಛತೆ ಎಂಬುವುದು ಮಾಯವಾಗಿದೆ. ಕಸದ ರಾಶಿಗೆ ತಿಲಾಂಜಲಿ ಹಾಡಲು ತುಮಕೂರು ಮಹಾನಗರ ಪಾಲಿಕೆ ಹೊಸ ಚಿಂತನೆಯೊಂದನ್ನು ಅನುಷ್ಠಾನಕ್ಕೆ ತರಲು ಮುಂದಾಗಿದೆ. ಅದುವೇ “ಪಿಕ್ ಮೈ ಗಾರ್ಬೇಜ್” (Pick My Garbage) .
ಇಂತಹದೊಂದು ಹೊಸ ಚಿಂತನೆ ತುಮಕೂರು ಮಹಾನಗರ ಪಾಲಿಕೆ ಮಾಡಿದೆ. ಸ್ಮಾರ್ಟ್ ಸಿಟಿ ಆ್ಯಪ್ ಮುಖಾಂತರ ಜನರು ಪಿಕ್ ಮೈ ಗಾರ್ಬೆಜ್ ಎಂದು ರಿಕ್ವೆಸ್ಟ್ ಕಳುಹಿಸಿ, ನೀವು ತಿಳಿಸಿದ ಸಮಯಕ್ಕೆ (ಬೆಳಗ್ಗೆಯಿಂದ ಸಂಜೆವರೆಗೆ ಮಾತ್ರ) ಪೌರಕಾರ್ಮಿಕರು ನೀವಿರುವ ಸ್ಥಳಕ್ಕೆ ಬಂದು ಕಸ ಸ್ವೀಕರಿಸುತ್ತಾರೆ. ಪಾಲಿಕೆ ಅಧಿಕಾರಿಗಳು ಮೊದಲಿಗೆ ಪ್ರಾಯೋಗಿಕವಾಗಿ ಒಂದೇ ಏರಿಯಾಗೆ ಸೀಮಿತವಾಗಿ ಇದನ್ನು ಕಾರ್ಯರೂಪಕ್ಕೆ ತರಲಿದ್ದಾರೆ. 10 ಸಿಬ್ಬಂದಿಗಳನ್ನು ಇದಕ್ಕಾಗಿ ನಿಯೋಜನೆ ಮಾಡಲಿದ್ದಾರೆ. ಈ ಸಿಬ್ಬಂದಿಗಳು ಬೈಕ್ನಲ್ಲಿ ತೆರಳಿ ಹಸಿ ಹಾಗೂ ಒಣ ಕಸಗಳಾಗಿ ಬೇರ್ಪಡಿಸಿದ ಮಾದರಿಯಲ್ಲೇ ಸ್ವೀಕರಿಸುತ್ತಾರೆ. ಈ ಯೋಜನೆಯ ಪ್ರಾಯೋಗಿಕ ಕಾರ್ಯ ಮುಂದಿನ ವಾರ ನಡೆಯಲಿದೆ.
ನಿತ್ಯ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಸಹಜವಾಗಿ ಕಸ ಬಿಸಾಕಲು ಸಮಯ ಸಿಗುವುದಿಲ್ಲ. ಹೀಗಾಗಿಯೇ ಅವರಿಗೆಂದು ಈ ಪಿಕ್ ಮೈ ಗಾರ್ಬೆಂಜ್ ಯೋಜನೆಯನ್ನು ರೂಪಿಸಲಾಗಿದೆ. ಪ್ರಾಯೋಗಿಕವಾಗಿ ನಡೆಯುವ ಯೋಜನೆಯಲ್ಲಿ ಉಚಿತ ಸೇವೆ ಇರಲಿದ್ದು, ನಂತರದ ದಿನಗಳಲ್ಲಿ ದರ ನಿಗದಿ ಮಾಡಲಾಗುತ್ತದೆ ಎಂದು ತುಮಕೂರು ಮಹಾನಗರ ಪಾಲಿಕೆ ಆಯುಕ್ತರು ಅಶ್ವಿಜ ಬಿವಿ ತಿಳಿಸಿದ್ದಾರೆ.
ಇದನ್ನೂ ಓದಿ: ತುಮಕೂರಿನಲ್ಲಿ ನಿರ್ಮಾಣವಾಗಿರುವ ವಿಶ್ವದ ಅತಿ ಎತ್ತರದ ಅಕ್ವಾಡಕ್ಟ್ ಕಾಲುವೆಯ ವಿಶೇಷವೇನು? ಇಲ್ಲಿದೆ ವಿವರ
ಈ ಚಿಂತನೆ ದೇಶದಲ್ಲೇ ಮೊದಲ ಬಾರಿಗೆ ತುಮಕೂರಿನಲ್ಲಿ ಕಾರ್ಯರೂಪಕ್ಕೆ ಬರುತಿದ್ದು, ಮುಂದಿನ ವಾರ ಪ್ರಯೋಗಿಕವಾಗಿ ಒಂದು ಏರಿಯಾಗಿ ಸೀಮಿತವಾಗಿ ಆರಂಭವಾಗಲಿದೆ. ಇದರ ಸಾಧಕ ಹಾಗೂ ಸವಾಲುಗಳನ್ನು ಗಮನಿಸಿ ನಂತರ ಇಡೀ ತುಮಕೂರು ನಗರಕ್ಕೆ ಈ ಯೋಜನೆನ್ನು ವಿಸ್ತರಿಸುವ ಚಿಂತನೆ ಪಾಲಿಕೆಯದ್ದಾಗಿದೆ. ಮಹಾನಗರ ಪಾಲಿಕೆಯ ಈ ಯೋಜನೆಯಿಂದ ನಗರದಲ್ಲಿರುವ ಕಸದ ಸಮಸ್ಯೆಗೆ ಮುಕ್ತಿ ಸಿಗುತ್ತಾ? ಕಾದು ನೋಡಬೇಕು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:43 pm, Sun, 20 July 25