ಸೈಕಲ್‌ನಲ್ಲಿ ಶಾಲೆಗೆ ಹೋಗುವಾಗ ಬಿದ್ದು ಗಾಯ: ರಸ್ತೆ ದುಸ್ಥಿತಿ ಕಂಡು ಬೇಸತ್ತ ಬಾಲಕಿ; ಪಾಲಿಕೆಗೆ ಪತ್ರ

ತುಮಕೂರು ನಗರದ ಮಂಡಿಪೇಟೆ ರಸ್ತೆಯಲ್ಲಿನ ಗುಂಡಿಗಳ ಸಮಸ್ಯೆಯಿಂದ ಬೇಸತ್ತ ಎಂಟನೇ ತರಗತಿಯ ಪುಟ್ಟ ವಿದ್ಯಾರ್ಥಿನಿ ರಸ್ತೆ ದುರಸ್ತಿ ಮಾಡುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಪತ್ರ ಬರೆದು ಗಮನ ಸೆಳೆದಿದ್ದಾಳೆ. ಹಲವು ಬಾರಿ ಸೈಕಲ್‌ನಿಂದ ಬಿದ್ದು ಗಾಯಗೊಂಡಿರುವ ವಿದ್ಯಾರ್ಥಿನಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪಾಲಿಕೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾಳೆ.

ಸೈಕಲ್‌ನಲ್ಲಿ ಶಾಲೆಗೆ ಹೋಗುವಾಗ ಬಿದ್ದು ಗಾಯ: ರಸ್ತೆ ದುಸ್ಥಿತಿ ಕಂಡು ಬೇಸತ್ತ ಬಾಲಕಿ; ಪಾಲಿಕೆಗೆ ಪತ್ರ
ಪಾಲಿಕೆಗೆ ಪತ್ರ ಬರೆದ ವಿದ್ಯಾರ್ಥಿನಿ
Edited By:

Updated on: Nov 19, 2026 | 8:36 PM

ತುಮಕೂರು, ನವೆಂಬರ್​​ 19: ಸಾಮಾನ್ಯವಾಗಿ ರಸ್ತೆ ಗುಂಡಿಗಳಿಂದ ಜನಸಾಮಾನ್ಯರು ಬೇಸತ್ತು ಅಧಿಕಾರಿಗಳಿಗೆ ದೂರು ನೀಡುವುದನ್ನು ನೋಡಿದ್ದೇವೆ. ಆದರೆ ರಸ್ತೆ ಗುಂಡಿಗಳ ಸಮಸ್ಯೆ ಪರಿಹರಿಸುವಂತೆ 8ನೇ ತರಗತಿಯ ಪುಟ್ಟ ವಿದ್ಯಾರ್ಥಿನಿ ಪಾಲಿಕೆಗೆ ಪತ್ರ ಬರೆದಿದ್ದಾಳೆ. ಶಾಲೆಗೆ ಸೈಕಲ್‌ನಲ್ಲಿ ಹೋಗುವಾಗ ರಸ್ತೆ ಗುಂಡಿಗಳಿಂದ ಹಲವು ಬಾರಿ ಬಿದ್ದು ಗಾಯಗೊಂಡಿರುವ ಬಾಲಕಿ, ಅಧಿಕಾರಿಗಳ ಗಮನ ಸೆಳೆಯಲು ಪತ್ರವನ್ನೇ ಅಸ್ತ್ರ ಮಾಡಿಕೊಂಡಿದ್ದಾಳೆ. ತುಮಕೂರಿನ ಮಂಡಿಪೇಟೆ ರಸ್ತೆಯ ದುಸ್ಥಿತಿ ಕಂಡು ಬೇಸತ್ತ ಬಾಲಕಿ, ರಸ್ತೆ ಸರಿಪಡಿಸಿ, ಪಾರ್ಕಿಂಗ್ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾಳೆ.

ಸ್ಮಾರ್ಟ್ ಸಿಟಿ ರಸ್ತೆಯಲ್ಲೇ ಗುಂಡಿಗಳದ್ದೇ ದರ್ಬಾರು!

ತುಮಕೂರು ನಗರದ ಟೌನ್ ಹಾಲ್ ಬಳಿಯ ಎಂಪ್ರೆಸ್ ಸರ್ಕಾರಿ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಹೆಸರು ಡಿಂಪಲ್ ಧೃತಿ. ಪ್ರತಿದಿನ ಚಿಕ್ಕಪೇಟೆಯಿಂದ ಶಾಲೆಗೆ ಸೈಕಲ್‌ನಲ್ಲಿ ಬರ್ತಾಳೆ. ಆದರೆ ಶಾಲೆಗೆ ಹೋಗುವ ದಾರಿ ಮಾತ್ರ ಈಕೆಗೆ ನಿತ್ಯ ನರಕಯಾತನೆ. ರಸ್ತೆಯಲ್ಲಿ ಎಲ್ಲಿ ನೋಡಿದ್ರೂ ಹಳ್ಳ, ಹೊಂಡ ಗುಂಡಿಗಳದ್ದೇ ದರ್ಬಾರು. ಸೈಕಲ್‌ನಲ್ಲಿ ಹೋಗುವಾಗ ಹಲವು ಬಾರಿ ಬಿದ್ದು ಗಾಯಗೊಂಡಿದ್ದಾಳಂತೆ. ತನ್ನ ನೋವು ತನಗೆ ಗೊತ್ತು ಅಂತ ಸುಮ್ಮನಾಗದೆ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನೇರವಾಗಿ ಪಾಲಿಕೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾಳೆ.

Loading...

ಶಾಲಾ ಮಕ್ಕಳು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ

ತುಮಕೂರು ನಗರದ ಮಂಡಿಪೇಟೆ ರಸ್ತೆಯ ದುಸ್ಥಿತಿ ಹೇಳತೀರದಾಗಿದೆ. ಕವಿತಾ ಮೆಟಲ್ ಸ್ಟೋರ್‌ನಿಂದ ವೀರಭದ್ರಸ್ವಾಮಿ ದೇವಸ್ಥಾನದವರೆಗಿನ ರಸ್ತೆಯಲ್ಲಿ ಗುಂಡಿಗಳೇ ತುಂಬಿಕೊಂಡಿವೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಯಾದ ರಸ್ತೆಯಲ್ಲೇ ಮತ್ತೆ ಮತ್ತೆ ಗುಂಡಿ ತೋಡಿ ಹಾಳು ಮಾಡಲಾಗಿದೆ ಅನ್ನೋ ಆರೋಪ ಕೇಳಿಬಂದಿದೆ. ರಸ್ತೆ ದುರಸ್ತಿ ಮಾಡದ ಪರಿಣಾಮ ವಾಹನ ಸವಾರರು, ಪಾದಚಾರಿಗಳು ಪ್ರತಿನಿತ್ಯ ಸಂಕಷ್ಟ ಅನುಭವಿಸುವಂತಾಗಿದೆ. ಅದರಲ್ಲೂ ಶಾಲಾ ಮಕ್ಕಳು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ: ಮದುವೆ ಮನೆಯಲ್ಲಿ ಶಾಕ್ ಕೊಟ್ಟ ಪೊಲೀಸ್​​: ಆರತಕ್ಷತೆ ದಿನವೇ ಮದುವೆಗೆ ನಿರಾಕರಿಸಿ ಮಾತ್ರೆ ನುಂಗಿದ ವರ, ಕಾರಣವೇನು ಗೊತ್ತಾ?

ಒಂದೆಡೆ ರಸ್ತೆ ಗುಂಡಿಗಳ ಕಾಟವಾದರೆ, ಮತ್ತೊಂದೆಡೆ ಟ್ರಾಫಿಕ್ ಜಾಮ್ ಮತ್ತು ಪಾರ್ಕಿಂಗ್ ಸಮಸ್ಯೆ ಮಂಡಿಪೇಟೆ ಜನರ ತಲೆನೋವಾಗಿದೆ. ರಸ್ತೆಯುದ್ದಕ್ಕೂ ವಾಹನಗಳ ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗುತ್ತಿದೆ. ಸಂಚಾರಕ್ಕೆ ಜಾಗವೇ ಇಲ್ಲದ ಸ್ಥಿತಿ ನಿರ್ಮಾಣವಾಗಿದ್ದು, ಪಾದಚಾರಿಗಳು ರಸ್ತೆಯಲ್ಲೇ ಜೀವಭಯದಿಂದ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ದಿನನಿತ್ಯ ಇದೇ ಸಮಸ್ಯೆ ಎದುರಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ ಎನ್ನುವುದು ಸ್ಥಳೀಯರ ಆಕ್ರೋಶ. ರಸ್ತೆ ದುರಸ್ತಿ ಜೊತೆಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕೆಂಬುದು ಸಾರ್ವಜನಿಕರ ಒತ್ತಾಯ.

ಪುಟ್ಟ ವಿದ್ಯಾರ್ಥಿನಿಯ ಪತ್ರ ಅಧಿಕಾರಿಗಳಿಗೆ ಎಚ್ಚರಿಕೆ ಗಂಟೆಯಾಗುತ್ತಾ?

ದೊಡ್ಡವರು ದೂರು ಕೊಟ್ಟರೂ ಕೇಳದ ಅಧಿಕಾರಿಗಳಿಗೆ ಈಗ ಪುಟ್ಟ ವಿದ್ಯಾರ್ಥಿನಿಯ ಪತ್ರವಾದರೂ ಎಚ್ಚರಿಕೆ ಗಂಟೆಯಾಗುತ್ತಾ ಎನ್ನುವುದು ಪ್ರಶ್ನೆ ಎದುರಾಗಿದೆ. ಓದಬೇಕಾದ ವಯಸ್ಸಿನಲ್ಲಿ ಡಿಂಪಲ್ ಧೃತಿ ರಸ್ತೆ ಗುಂಡಿಗಳ ವಿರುದ್ಧ ಹೋರಾಟಕ್ಕೆ ಇಳಿದಿದ್ದು, ತನ್ನ ಸಮಸ್ಯೆ ಮಾತ್ರವಲ್ಲದೆ ನಿತ್ಯ ರಸ್ತೆಯಲ್ಲಿ ಓಡಾಡುವ ನೂರಾರು ಜನರ ಸಂಕಷ್ಟವನ್ನೂ ಪತ್ರದಲ್ಲಿ ಉಲ್ಲೇಖಿಸಿದ್ದಾಳೆ. ಇನ್ನಾದರೂ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡು ಮಂಡಿಪೇಟೆ ರಸ್ತೆಯ ಗುಂಡಿಗಳನ್ನು ಮುಚ್ಚಿ, ಪಾರ್ಕಿಂಗ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುತ್ತಾರಾ ಎನ್ನುವುದು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More
Loading...
Unable to load recommendations.
Follow Us