ತುಮಕೂರು: ಬಿಜೆಪಿಗೆ ಸೊಗಡು ಶಿವಣ್ಣ ಘರ್ವಾಪ್ಸಿ; ವಿ.ಸೋಮಣ್ಣ ಪರ ಸಿಟಿ ರವಿ-ಸೊಗಡು ಶಿವಣ್ಣ ಪ್ರಚಾರ
ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಅವರು ಭೇಟಿಯಾಗಿ ಮಾತುಕತೆ ನಡೆಸಿದ ಬೆನ್ನಲ್ಲೇ ಮಾಜಿ ಸಚಿವ ಸೊಗಡು ಶಿವಣ್ಣ ಅವರು ಬಿಜೆಪಿಗೆ ಮರು ಸೇರ್ಪಡೆಯಾಗಿದ್ದಾರೆ. ಅಲ್ಲದೆ, ಸೊಗಡು ಶಿವಣ್ಣ ಅವರ ನೇತೃತ್ವದಲ್ಲಿ ಆಯೋಜಿಸಿದ ಸಮಾನ ಮನಸ್ಕರ ಸಮಾರಂಭದಲ್ಲಿ ಸೋಮಣ್ಣ ಮತ್ತು ಸಿಟಿ ರವಿ ಭಾಗಿಯಾದರು.
ತುಮಕೂರು, ಮಾ.23: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ (V Somanna) ಅವರು ಭೇಟಿಯಾಗಿ ಮಾತುಕತೆ ನಡೆಸಿದ ಬೆನ್ನಲ್ಲೇ ಮಾಜಿ ಸಚಿವ ಸೊಗಡು ಶಿವಣ್ಣ (Sogadu Shivanna) ಅವರು ಬಿಜೆಪಿಗೆ ಮರು ಸೇರ್ಪಡೆಯಾಗಿದ್ದಾರೆ. ಅಲ್ಲದೆ, ಸೊಗಡು ಶಿವಣ್ಣ ಅವರ ನೇತೃತ್ವದಲ್ಲಿ ಆಯೋಜಿಸಿದ ಸಮಾನ ಮನಸ್ಕರ ಸಮಾರಂಭದಲ್ಲಿ ಸೋಮಣ್ಣ ಮತ್ತು ಸಿಟಿ ರವಿ (CT Ravi) ಭಾಗಿಯಾದರು.
ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ಗಾಗಿ ಜೆಸಿ ಮಾಧುಸ್ವಾಮಿ ಮತ್ತು ವಿ ಸೋಮಣ್ಣ ನಡುವೆ ಭಾರೀ ಪೈಪೋಟಿ ನಡೆದಿತ್ತು. ಕೊನೆಗೆ ಬಿಜೆಪಿ ಹೈಕಮಾಂಡ್ ಕ್ಷೇತ್ರದಲ್ಲಿ ಸೋಮಣ್ಣ ಅವರಿಗೆ ಮಣೆ ಹಾಕಿದೆ. ಟಿಕೆಟ್ ಕೈತಪ್ಪಿದ ಹಿನ್ನೆಲೆ ಸೋಮಣ್ಣ ಮತ್ತು ಯಡಿಯೂರಪ್ಪ ಮೇಲೆ ಮುನಿಸುಗೊಂಡಿದ್ದರು. ಬಂಡಾಯದ ಗಾಳಿಯೂ ಬೀಸುತಿತ್ತು. ಮಾಧುಸ್ವಾಮಿ ಕಾಂಗ್ರೆಸ್ ಸೇರ್ಪಡೆ ಬಗ್ಗೆಯೂ ಮಾತುಗಳು ಕೇಳಿಬಂದಿದ್ದವು.
ಹೀಗಾಗಿ ಮಾಧುಸ್ವಾಮಿ ಮನವೊಲಿಸಲು ಬಿಜೆಪಿ ನಾಯಕರು ಕಸರತ್ತು ನಡೆಸಿದ್ದರು. ಒಂದೆಡೆ, ಮಾಧುಸ್ವಾಮಿ ಬಣದಲ್ಲಿ ಗುರುತಿಸಿದ್ದ ಸೊಗಡು ಶಿವಣ್ಣ ಅವರ ನಿವಾಸಕ್ಕೆ ಸೋಮಣ್ಣ ಭೇಟಿ ನೀಡಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದ್ದರು. ಇನ್ನೊಂದೆಡೆ, ಯಡಿಯೂರಪ್ಪ ಅವರು ಮಾಧುಸ್ವಾಮಿ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ತುರುವೇಕೆರೆ ಹೊರವಲಯದಲ್ಲಿರುವ ಮಾಜಿ ಶಾಸಕ ಮಸಾಲ ಜಯರಾಂ ತೋಟದ ಮನೆಯಲ್ಲಿ ನಡೆದ ಸಂಧಾನ ಸಭೆಯಲ್ಲಿ ಮಾಧುಸ್ವಾಮಿ ಅವರನ್ನು ಬಿಎಸ್ವೈ ಸಮಾಧಾನಪಡಿಸುವಲ್ಲಿ ಯಶಸ್ವಿಯಾಗಿದ್ದರು.
ಇದನ್ನೂ ಓದಿ: ಕಾಂಗ್ರೆಸ್ ಸೇರಲು ಮುಂದಾಗಿದ್ದ ಮಾಧುಸ್ವಾಮಿ ಮನವೊಲಿಸಿದ ಬಿಎಸ್ವೈ, ಆದ್ರೂ ಸೋಮಣ್ಣಗೆ ಬೆಂಬಲವಿಲ್ಲ
ಈ ಎಲ್ಲಾ ಬೆಳವಣಿಗೆಗಳ ನಡುವೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗದ ಹಿನ್ನೆಲೆ ಬಿಜೆಪಿ ತೊರೆದು ಪಕ್ಷೇತರವಾಗಿ ಸ್ಪರ್ಧಿಸಿದ್ದ ಸೊಗಡು ಶಿವಣ್ಣ ಅವರು ಇಂದು ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಮತ್ತು ಮಾಜಿ ಸಚಿವ ಸಿಟಿ ರವಿ ಸಮ್ಮುಖದಲ್ಲಿ ಬಿಜೆಪಿಗೆ ಮರು ಸೇರ್ಪಡೆಯಾಗಿದ್ದಾರೆ. ತುಮಕೂರಿನ ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ನಡೆದ ರಾಷ್ಟ್ರ ಭಕ್ತ ಸಮಾನ ಮನಸ್ಕ ಕಾರ್ಯಕರ್ತರ ಮಿಲನ ಸಮಾರಂಭದಲ್ಲಿ ಘರ್ವಾಪ್ಸಿ ಆಗಿದ್ದಾರೆ.
ಸೋಮಣ್ಣರಿಗೆ ಬೆಂಬಲ ನೀಡಿ: ಸೊಗಡು ಶಿವಣ್ಣ
ಬಳಿಕ ಮಾತನಾಡಿದ ಸೊಗಡು ಶಿವಣ್ಣ, ದೇಶಕ್ಕಾಗಿ ಮೋದಿ ಬೇಕು ಅಂತಾ ಎಲ್ಲರೂ ಹೇಳುತ್ತಾರೆ. ಹೀಗಾಗಿ ಸೋಮಣ್ಣ ಗೆಲ್ಲಸಿಬೇಕು. ಹೀಗಾಗಿ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಜಿಲ್ಲೆಯಲ್ಲಿ ಎಲ್ಲಾ ಕಡೆಯಿಂದಲೂ ಕಾರ್ಯಕರ್ತರು ಬಂದಿದ್ದಾರೆ. ಎಲ್ಲರೂ ಸಮಾನತೆಯಿಂದ ಬಾಳಬೇಕು. ದೇವೇಗೌಡರು ನಾವು ಜೈಲಿನಲ್ಲಿ ಇದ್ದವರು. ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಅಂತಾ ಹೇಳಿದ್ದಾರೆ. ದೇವೇಗೌಡರು ಜಿಲ್ಲೆಗೆ ನೀರು ಕೊಟ್ಟರು. 10 ತಾಲೂಕಿಗೆ ನೀರು ಕೊಟ್ಟರು. ಮಾಧುಸ್ವಾಮಿ ಕೆರೆಗಳಿಗೆ ನೀರು ಹರಿಸಿದರು ಎಂದರು.
ಐಎನ್ಡಿ ಮೈತ್ರಿಕೂಟದಲ್ಲಿ ಆಂತರಿಕ ಸಂಘರ್ಷ: ಸಿಟಿ ರವಿ
ಸಮಾರಂಭದಲ್ಲಿ ಮಾತನಾಡಿದ ಸಿಟಿ ರವಿ, ಇಡೀ ದೇಶದಲ್ಲಿ ಮೋದಿ ಪರ ಅಲೆ ವ್ಯಕ್ತವಾಗುತ್ತಿದೆ. ತುಮಕೂರಿನಲ್ಲಿ ಕೂಡ ಇದೆ. ಇದರಿಂದಾಗಿ ಹತಾಶ ಸ್ಥಿತಿಯಲ್ಲಿ ಕಾಂಗ್ರೆಸ್ ಇದೆ. ಆಂತರಿಕ ಸಂಘರ್ಷ ಇಂಡಿಯಾ (INDIA) ಕೂಟದಲ್ಲಿ ಇದೆ ಎಂದರು. ಅಲ್ಲದೆ, ತಮಿಳುನಾಡಿನ ಡಿಎಂಕೆ ಒಂದು ಹೆಜ್ಜೆ ಮುಂದೆ ಇಟ್ಟು ಸಂವಿಧಾನ ಬದಲಾವಣೆ ಬಗ್ಗೆ ಹೇಳಿದೆ ಎಂದು ವಾಗ್ದಾಳಿ ನಡೆಸಿದರು.
ನೀತಿ ನಿಯತ್ತು ನೇತೃತ್ವ ಆಧರಿಸಿ ಮತ ಕೇಳುತ್ತಿದ್ದೇವೆ. ರಾಷ್ಟ್ರ ಮೊದಲು ಎಂಬುದು ನಮ್ಮ ನೀತಿ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನಮ್ಮ ನೀತಿಯಾಗಿದೆ. ಒಕ್ಕಲಿಗರು ಹಿಂದುಳಿದ ಬ್ರಾಹ್ಮಣರು ದಲಿತರು ಅಂತಾ ಮೋದಿ ಹೇಳಿರಲಿಲ್ಲ. ಬಡವರ ಪರ ಅಂತಾ ಮೋದಿ ಹೇಳಿದ್ದಾರೆ. ರೈತರಿಗೆ ಕಿಸಾನ್ ಸಮ್ಮಾನ್, ಮಹಿಳೆಯರಿಗಾಗಿ ಉಜ್ವಲ ಯೋಜನೆ, ಉಚಿತ ಗ್ಯಾಸ್ ಕಲೆಕ್ಸನ್, ಯುವಕರಿಗಾಗಿ ಸ್ಟಾರ್ಟಪ್ ಇತ್ಯಾದಿ ಯೋಜನೆಗಳನ್ನು ನೀಡಿದರು ಎಂದರು.
ಭಯೋತ್ಪಾದಕರಿಗೆ ಬಿರಿಯಾನಿ ಕೊಡುವುದು ಕಾಂಗ್ರೆಸ್ ನೀತಿ. ನಮ್ಮ ನೀತಿ ಏಕ್ ಮಾರ್ ದೋ ತುಕಡಾ ಎಂದು ಸಿಟಿ ರವಿ ಹೇಳಿದರು. ರಮೇಶ್ವರ ಕೆಪೆಯಲ್ಲಿ ಬ್ಲಾಸ್ಟ್ ಆಯ್ತು. ಮಂಗಳೂರಿನಲ್ಲಿ ಕುಕ್ಕರ್ ಬ್ಲಾಸ್ಟ್ ಆಯ್ತು. ರಾಮೇಶ್ವರ್ ಕೆಪೆಯಲ್ಲಿ ಬ್ಲಾಸ್ಟ್ ಬಗ್ಗೆ ಪರಮೇಶ್ವರ್ ಲಘುವಾಗಿ ಹೇಳಿಕೆ ನೀಡಿದರು. ಕಾಂಗ್ರೆಸ್ನವರಿಗೆ ಅವರ ಮನೆಯಲ್ಲಿ ಬ್ಲಾಸ್ಟ್ ಆದರೆ ಎಚ್ಚರ ಆಗಬಹುದು. ನೂರಾರು ಜನರು ಸ್ಫೋಟದಲ್ಲಿ ಸತ್ತರೆ ಅರ್ಥವಾಗಬಹುದು ಎಂದರು.
ಇದನ್ನೂ ಓದಿ: ಸೋಮಣ್ಣ ಮೇಲೆ ಮಾಧುಸ್ವಾಮಿ ಮುನಿಸು; ಯಡಿಯೂರಪ್ಪ ಹೇಳಿದ್ದಿಷ್ಟು
ಬೆಳಗಾವಿ ಉತ್ತರದಲ್ಲಿ ಆಸೀಫ್ ಸೇಠ್ ಗೆದ್ದಾಗ ಪಟಾಕಿ ಹೊಡೆದು ಸಂಭ್ರಮ ಮಾಡಿದ್ದರು. ಆ ಸಂಭ್ರಮಾಚರಣೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಕೂಗಲಾಗಿತ್ತು. ನಾಸಿರ್ ಹುಸೇನ್ ಗೆದ್ದಾಗ ವಿಧಾನಸೌದದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದರು. ಹೀಗೆ ಬಿಟ್ಟರೇ ತುಮಕೂರಿನಿಂದ ಬೀದರ್ ವರೆಗೂ ಕೂಗುತ್ತಾರೆ. ಭಾರತದಲ್ಲಿ ಹುಟ್ಟಿ ಅನ್ನ ತಿಂದು ಪಾಕಿಸ್ತಾನ ಪರ ಕೂಗುವವರು ಕಾಂಗ್ರೆಸ್ ಪಾಲಿಗೆ ವೋಟ್ ಬ್ಯಾಂಕ್. ಇಂತಹವರನ್ನು ಹೆಡೆಮುರಿ ಕಟ್ಟುವುದು ನಮ್ಮ ನೀತಿ ಎಂದರು.
ನಮ್ಮ ನಾಯಕತ್ವ ಜನಮಾನಸದಲ್ಲಿ ಉಳಿಯುವ ನಾಯಕತ್ವ. ಮೂರನೇ ಬಾರಿಗೆ ಪ್ರಧಾನಿ ಆಗುತ್ತಿರುವ ನಾಯಕತ್ವ. ಆಸ್ಟ್ರೇಲಿಯಾದವರು ಅಮೇರಿಕಾದವರು ನಮ್ಮ ನಾಯಕರನ್ನ ಹೊಗಳುತ್ತಿದ್ದಾರೆ. ಉಕ್ರೇನ್ ಯುದ್ದದಲ್ಲಿ ಒಬ್ಬ ಸಾವನ್ನಪ್ಪಿದ, ಇದಕ್ಕೆ ಮೋದಿ ಕಾರಣ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಅಲ್ಲದೆ, 23 ಸಾವಿರ ಮಂದಿ ಯುದ್ಧ ಸ್ಥಳದಿಂದ ವಾಪಸ್ ಸುರಕ್ಷಿತವಾಗಿ ಕರೆತರಲು ಕಾರಣ ಮೋದಿ ಎಂದರು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆದಾಗ ಸಂತೋಷಗೊಂಡೆವು. ಕಾಶ್ಮೀರದಲ್ಲಿ ಸೈನಿಕರಿಗೆ ಕಲ್ಲು ಹೋಡೆಯುತ್ತಿದ್ದರು. ಇಂದು ಅಲ್ಲಿನ ಪರಿಸ್ಥಿತಿ ಬದಲಾಗಿದೆ. ಹೀಗಾಗಿ ದೇಶದಲ್ಲಿ ನಮ್ಮ ನೀತಿ ನಿಯತ್ತನ್ನ ಗೆಲ್ಲಿಸಿ. ತುಮಕೂರಿನಲ್ಲಿ ಸೋಮಣ್ಣರನ್ನ ಗೆಲ್ಲಿಸಿ ಮೋದಿಯನ್ನ ಪ್ರಧಾನಿಯಾಗಿ ಮಾಡಿ. ಮೋದಿಯನ್ನು ಎಲ್ಲಾ ಅಭ್ಯರ್ಥಿಗಳ ಮುಖದಲ್ಲಿ ಕಾಣಬೇಕು ಎಂದರು.
ಸಿದ್ದರಾಮಯ್ಯನವರು ಬಹಳ ಧೀರ್ಘ ಕಾಲ ಆಡಳಿತ ಮಾಡಿದ್ದಾರೆ. ಇಂತಹ ಸಿದ್ದರಾಮಯ್ಯ ಬಿಜೆಪಿ ಮನೆ ಹಾಳಾಗ ಅಂತ ಹೇಳಿದ್ದಾರೆ. ಯಾರು ಹೀಗೆ ಬಯಸುತ್ತಾರೋ ಅವರು ದೇಶ ಹಾಳಾಗಲಿ ಅಂತಾ ಬಯಸುತ್ತಾರೆ. ಇಂತಹ ಹೇಳಿಕೆಗಳಿಂದಲೇ ಕಾಂಗ್ರೆಸ್ ಈ ಸ್ಥಿತಿಗೆ ಬಂದಿದೆ. ನಾವು ದೇಶ ಉದ್ಧರವಾಗಲಿ ಎಂದು ಬಯಸುತ್ತೇವೆ ಎಂದರು.
ರಾಜಕರಣದಲ್ಲಿ ನಾವು ಒಮ್ಮೆ ಕೆಳಗೆ ಬರಬಹುದು, ಒಮ್ಮೆ ಮೇಲು ಬರಬಹುದು. ಸೋಲಿಗಾಗಿ ಹೆದರಬಾರದು, ಸವಾಲಿಗೆ ಬಗ್ಗದೇ ಮುನ್ನುಗಬೇಕು. ದೇಶ ಮೊದಲು ಅಂತಾ ಧ್ಯೇಯ ಹಿಡಿದು ಸಾಗಬೇಕು ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ