ತುಮಕೂರಿನಲ್ಲಿ ಹೆಚ್ಚಿದ ಬೀದಿ ನಾಯಿಗಳ ನಿಯಂತ್ರಣಕ್ಕೆ ಪಾಲಿಕೆ ಹೊಸ ಪ್ಲಾನ್
ತುಮಕೂರು ನಗರದಲ್ಲಿ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಮಿತಿಮೀರುತ್ತಿದೆ. ಇತ್ತೀಚೆಗಷ್ಟೆ ಪುಟ್ಟ ಮಕ್ಕಳು ಸೇರಿದಂತೆ 10ಕ್ಕೂ ಹೆಚ್ಚು ಮಂದಿಗೆ ಬೀದಿ ನಾಯಿ ಕಚ್ಚಿ ಗಾಯಗೊಳಿಸಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಮಹಾನಗರ ಪಾಲಿಕೆ ಬೀದಿ ನಾಯಿಗಳ ನಿಯಂತ್ರಣಕ್ಕೆ ಮುಂದಾಗಿದೆ. ಹೊಸದೊಂದು ಐಡಿಯಾ ಮೂಲಕ ಬೀದಿ ನಾಯಿಗಳ ಹಾವಳಿಗೆ ಬ್ರೇಕ್ ಹಾಕಲು ಸಜ್ಜಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ.
ತುಮಕೂರು, ಜು.18: ನಗರದಲ್ಲಿ ಇತ್ತೀಚೆಗೆ ಬೀದಿ ನಾಯಿಗಳ(stray dogs) ಹಾವಳಿ ಮಿತಿಮೀರಿದೆ. ಎಲ್ಲೆಂದರಲ್ಲೆ ಬೀದಿ ನಾಯಿಗಳು ಮಕ್ಕಳು, ವೃದ್ದರು ಸೇರಿದಂತೆ ಅನೇಕರ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ. ಕಳೆದ ವಾರವಷ್ಟೇ ನಗರದ ಮಳೆಕೋಟೆಯಲ್ಲಿ ಚಾಕಲೇಟ್ ಹಿಡಿದು ನಿಂತಿದ್ದ ಮೂರು ವರ್ಷದ ಬಾಲಕನ ಮೇಲೆ ಬೀದಿ ನಾಯಿ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿತ್ತು. ಕಳೆದ ತಿಂಗಳಲ್ಲಿ ಬಾಲಕಿ ಸೇರಿ 7 ಕ್ಕೂ ಹೆಚ್ಚು ಜನರಿಗೆ ನಾಯಿ ಕಚ್ಚಿತ್ತು. ಘಟನೆ ಬೆನ್ನಲ್ಲೇ ನಾಗರಿಕರು, ಮಕ್ಕಳು ರಸ್ತೆಗಳಲ್ಲಿ ಓಡಾಡಲು ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಸಂತಾನಹರಣ ಶಸ್ತ್ರಚಿಕಿತ್ಸೆಗೆ ಮುಂದಾದ ಪಾಲಿಕೆ
ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾವಿರಾರು ನಾಯಿಗಳಿದ್ದು, ನಾಯಿ ದಾಳಿಗೆ ಒಳಗಾಗುತ್ತಿರುವ ಜನರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದೀಗ ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಮಹಾನಗರ ಪಾಲಿಕೆ ಮುಂದಾಗಿದೆ. ಈ ಮೂಲಕ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಲು ಪಾಲಿಕೆ ಆಯುಕ್ತೆ ಅಶ್ವಿಜಾ ಪ್ಲಾನ್ ಮಾಡಿದ್ದಾರೆ. ಕಳೆದ ವರ್ಷ ಒಂದು ಸಾವಿರ ನಾಯಿಗಳಿಗೆ ಅನಿಮಲ್ ಬರ್ತ್ ಕಂಟ್ರೋಲ್ ಶಸ್ತ್ರಚಿಕಿತ್ಸೆ ಮಾಡಿದ್ದು, ಈ ವರ್ಷ ಮೂರು ಸಾವಿರ ನಾಯಿಗಳಿಗೆ ಎಬಿಸಿ ಶಸ್ತ್ರಚಿಕಿತ್ಸೆ ಮಾಡಲು ಸಿದ್ದತೆ ನಡೆಸಲಾಗಿದೆ. ಇನ್ನೊಂದು ವಾರದಲ್ಲಿ ಎಬಿಸಿ ಶಸ್ತ್ರಚಿಕಿತ್ಸೆ ಪ್ರಕ್ರಿಯೆ ಆರಂಭವಾಗಲಿದೆ.
ಇದನ್ನೂ ಓದಿ:ವಿಡಿಯೋ: ಹತ್ತಕ್ಕೂ ಹೆಚ್ಚು ಬೀದಿ ನಾಯಿಗಳಿಂದ ದಾಳಿ, ಚಪ್ಪಲಿಯನ್ನು ಬೀಸುತ್ತಾ ತಪ್ಪಿಸಿಕೊಂಡ ಮಹಿಳೆ
ಇತ್ತೀಚೆಗೆ ಬೀದಿನಾಯಿಗಳ ದಾಳಿಗೆ ತುತ್ತಾದ ಗಾಯಾಳುಗಳಿಗೆ ಸರ್ಕಾರದಿಂದ ಪರಿಹಾರದ ಮೊತ್ತವನ್ನ ಪಾಲಿಕೆ ಆಯುಕ್ತರು ವಿತರಿಸಿದ್ದಾರೆ. ಈ ಜೊತೆಗೆ ನಾಯಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಮಳೆಕೋಟೆಯ ಮೂರು ವರ್ಷದ ಬಾಲಕನ ಚಿಕಿತ್ಸಾ ವೆಚ್ಚವನ್ನ ಪಾಲಿಕೆ ಭರಿಸಲಿದೆ. ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪಾಲಿಕೆಯ ಸಿಬ್ಬಂದಿಗಳಿಗೆ ನುರಿತ ತರಬೇತಿ ನೀಡಿ, ನಾಯಿಗಳನ್ನ ಹಿಡಿಯುವ ನೆಟ್, ವಿಶೇಷ ವಾಹನದ ವ್ಯವಸ್ಥೆ ಮಾಡಲು ಪಾಲಿಕೆ ಮುಂದಾಗಿದೆ.
ಇದು ನಾಯಿಗಳ ಬ್ರೀಡಿಂಗ್ ಸೀಜನ್ ಆಗಿರೋ ಹಿನ್ನೆಲೆ ನಾಯಿಗಳ ವರ್ತನೆಯಲ್ಲಿ ಬದಲಾವಣೆ ಇರೋದ್ರಿಂದ ಜನರು ಆದಷ್ಟು ಎಚ್ಚರಿಕೆಯಿಂದ ಇರುವಂತೆ ಪಾಲಿಕೆ ಆಯುಕ್ತರು ಜನರಲ್ಲಿ ಅರಿವು ಮೂಡಿಸುತ್ತಿದ್ದು, ಸದ್ಯ ತುಮಕೂರು ಜನರ ತಲೆಬಿಸಿಗೆ ಕಾರಣವಾಗಿರುವ ಬೀದಿ ನಾಯಿಗಳ ಹಾವಳಿಗೆ ಬ್ರೇಕ್ ಹಾಕಲು ಮುಂದಾಗಿರುವ ಪಾಲಿಕೆಯ ಕ್ರಮಕ್ಕೆ ಜನರು ನಿಟ್ಟುಸಿರುಬಿಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ