ಕೊಬ್ಬರಿಗೆ ಬಂಪರ್ ಬೆಲೆ: ರೈತರಿಗೆ ಸಿಗದ ಲಾಭ, ಭಾರೀ ನಿರೀಕ್ಷೆಯಲ್ಲಿದ್ದ ಅನ್ನದಾತ ನಿರಾಸೆ

ಕಲ್ಪತರು ನಾಡು ತುಮಕೂರಿನಲ್ಲಿ ಕೊಬ್ಬರಿ ಬೆಲೆ ಗಗನಕ್ಕೇರಿದ್ದು, ದಾಖಲೆ ಮೊತ್ತದತ್ತ ಸಾಗಿದೆ. ಆದರೆ ತೆಂಗು ಬೆಳೆಗೆ ತಗುಲಿರುವ ರೋಗಗಳಿಂದ ಇಳುವರಿ ಭಾರೀ ಪ್ರಮಾಣದಲ್ಲಿ ಕುಸಿದಿದೆ. ಇದರಿಂದ ರೈತರಿಗೆ ಆದಾಯಕ್ಕೆ ತಕ್ಕ ಲಾಭ ಸಿಗುತ್ತಿಲ್ಲ. ಸದ್ಯ ರೈತರು ಕೃಷಿ ಇಲಾಖೆ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೊಬ್ಬರಿಗೆ ಬಂಪರ್ ಬೆಲೆ: ರೈತರಿಗೆ ಸಿಗದ ಲಾಭ, ಭಾರೀ ನಿರೀಕ್ಷೆಯಲ್ಲಿದ್ದ ಅನ್ನದಾತ ನಿರಾಸೆ
ಕೊಬ್ಬರಿ
Image Credit source: tv9 kannada
Edited By:

Updated on: Feb 04, 2026 | 5:38 PM

ತುಮಕೂರು, ಫೆಬ್ರವರಿ 04: ಕಲ್ಪತರು ನಾಡು ಎಂದೇ ಹೆಸರಾದ ತುಮಕೂರಿನ (Tumakuru) ಕೊಬ್ಬರಿಗೆ (Coconut) ಇದೀಗ ಎಲ್ಲಿಲ್ಲದ ಬೆಂಬಲ ಬೆಲೆ ಸಿಕ್ಕಿದೆ. ಹಿಂದೆಂದು ಕಂಡರಿಯದ ದಾಖಲೆ ಮೊತ್ತ ದತ್ತ ಕೊಬ್ಬರಿ ಸಮೀಪಿಸಿದೆ. ಹೀಗಿದ್ದರೂ ರೈತರ ಮೊಗದಲ್ಲಿ ಮಂದಹಾಸ ಬದಲಿಗೆ ಬೇಸರ ಮನೆಮಾಡಿದೆ. ತೆಂಗು ಬೆಳೆಗೆ ತಲೆದೂರಿದ ನಾನಾ ಕಾಯಿಲೆಗಳು ಇಳುವರಿ ಕಡಿಮೆ ಮಾಡಿದೆ. ಇದರಿಂದ ಆದಾಯಕ್ಕೆ ತಕ್ಕ ಪ್ರತಿಫಲ‌‌ ಸಿಕ್ಕರೆ ಹೆಚ್ಚು ಎಂಬುವಂತಾಗಿದೆ ರೈತರ ಬದುಕು.

ರೈತರ ಕನಸಿಗೆ ತಣ್ಣೀರೆರಚಿದ ರೋಗ ಬಾಧೆ 

ಕಲ್ಪತರು ನಾಡಿನ ಹೆಮ್ಮೆಯ ತೆಂಗು ಬೆಳೆ ಇದೀಗ ರೈತರ ಕಣ್ಣೀರಿಗೆ ಕಾರಣವಾಗಿದೆ. ಕೊಬ್ಬರಿಗೆ ಮಾರುಕಟ್ಟೆಯಲ್ಲಿ ಭರ್ಜರಿ ಬೆಲೆ ಸಿಕ್ಕರೂ, ಅನ್ನದಾತನಿಗೆ ಲಾಭ ಮಾತ್ರ ದೂರದ ಬೆಟ್ಟವಾಗಿದೆ. ಕೊಬ್ಬರಿ ಮಾರಾಟ ಮಾಡಿ ಕೈ ತುಂಬಾ ಹಣ ಬರಬಹುದು ಅನ್ನೋ ಕನಸಿಗೆ, ರೋಗ ಬಾಧೆ ನೀರೆರಚಿದಂತಾಗಿದೆ.

ಇದನ್ನೂ ಓದಿ: ಬಿಸಿಯೂಟದಲ್ಲಿ ಹುಳುಗಳು ಪತ್ತೆ: ಟಿವಿ9 ವರದಿ ಇಂಪ್ಯಾಕ್ಟ್; ಶಾಲೆಗಳಿಗೆ ಬಂತು ಗುಣಮಟ್ಟದ ಬೇಳೆ

ತುಮಕೂರು ಜಿಲ್ಲೆಯಲ್ಲಿ ಒಟ್ಟು 1 ಲಕ್ಷ 76 ಸಾವಿರ ಹೆಕ್ಟರ್ ಪ್ರದೇಶದಲ್ಲಿ ತೆಂಗು ಬೆಳೆ ಬೆಳೆದಿದ್ದು, ಈ ಪೈಕಿ ಶೇಕಡ 70ರಷ್ಟು ತೆಂಗು ಬೆಳೆಗೆ ನುಸಿಪೀಡೆ ಹಾಗೂ ಬೀಳೆ ತಲೆ ಹುಳು ರೋಗ ತಗುಲಿದೆ. ಹಾಗಾಗಿ ಇಳುವರಿಯಲ್ಲಿ ಭಾರೀ ಪ್ರಮಾಣದ ಕುಸಿತ ಕಂಡಿದ್ದು, ಕಳೆದ ಒಂದು ವರ್ಷದಿಂದ ರೋಗ ಬಾಧೆಗೆ ರೋಸಿ ಹೋದ ರೈತರು ಕಂಗಾಲಾಗಿದ್ದಾರೆ.

Tengu

ಇದು ಕೇವಲ ತುಮಕೂರು ಜಿಲ್ಲೆಯ ಸಮಸ್ಯೆಯಲ್ಲ. ಚಿಕ್ಕಮಗಳೂರು, ಹಾಸನ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ತೆಂಗು ಬೆಳೆಗೆ ರೋಗ ವ್ಯಾಪಕವಾಗಿ ಹರಡಿದೆ. ಆದರೆ ರೋಗ ನಿಯಂತ್ರಣಕ್ಕೆ ಕೃಷಿ ಇಲಾಖೆ ಹಾಗೂ ಸರ್ಕಾರ ಸೂಕ್ತ ಕ್ರಮಕೈಗೊಳ್ಳದೇ ಇದ್ದುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ತುಮಕೂರು ವಾಹನ ಸವಾರರಿಗೆ ಸಿಹಿಸುದ್ದಿ: ನೆನೆಗುದಿಗೆ ಬಿದ್ದಿದ್ದ ಚತುಷ್ಪಥ ಕಾಮಗಾರಿ ಆರಂಭ

ರೋಗ ಬಾಧೆಯಿಂದ ಇಳುವರಿ ಕುಸಿತವಾದ ಪರಿಣಾಮ ಕೊಬ್ಬರಿ ಬೆಲೆ ಗಗನಕ್ಕೇರಿದೆ. ಕ್ವಿಂಟಾಲ್‌ಗೆ 30 ಸಾವಿರ ರೂಪಾಯಿ ತಲುಪಿದ ಕೊಬ್ಬರಿ, ದಾಖಲೆ ಮೊತ್ತ ದತ್ತ ದಾಪುಗಾಲು ಇಡುತ್ತಿದೆ. ಇನ್ನು ಕಳೆದ ಜೂನ್‌ನಲ್ಲಿ ಸಹ ಇದೇ ರೀತಿ ಬೆಲೆ ಏರಿಕೆ ಕಂಡಿದ್ದು, ಆ ಸಂದರ್ಭದಲ್ಲಿ 31 ಸಾವಿರ ತಲುಪಿ ಬಳಿಕ 25 ಸಾವಿರಕ್ಕೆ ಇಳಿದಿತ್ತು. ಈಗ ಮತ್ತೆ ಬೆಲೆ ಏರಿಕೆಯಾದರೂ, ಬೆಳೆಗೆ ರೋಗ ತಗುಲಿರುವುದರಿಂದ ರೈತರಿಗೆ ನೋವಾಗಿ ಪರಿಣಮಿಸಿದೆ. ಈ ಸಂಕಷ್ಟದ ಲಾಭ ಪಡೆಯಲು ಕೇರಳ ಹಾಗೂ ತಮಿಳುನಾಡಿನ ರೈತರು ತುದಿಗಾಲಲ್ಲಿ ನಿಂತಿದ್ದು, ತೆಂಗು ಬೆಳಗಾರರಿಗೆ ದಿಕ್ಕು ತೋಚದ ಸ್ಥಿತಿ ನಿರ್ಮಾಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us