
ತುಮಕೂರು, ಆ.28: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ ಗೇಟ್ ಬಳಿ ಎರಡು ಕಾರುಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂರು ವರ್ಷದ ಮಗು ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೆ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ. ವೋಕ್ಸ್‌ವ್ಯಾಗನ್ (Volkswagen) ಹಾಗೂ ಕಿಯಾ ಸೋನೆಟ್ (Kia Sonet) ಕಾರುಗಳ ನಡುವೆ ಈ ಭೀಕರ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ಚಿಕ್ಕನಾಯಕನಹಳ್ಳಿ ಕಡೆಯಿಂದ ಮೂವರು ಪ್ರಯಾಣಿಸುತ್ತಿದ್ದ ವೋಕ್ಸ್‌ವ್ಯಾಗನ್ ಕಾರು ಚಾಲಕ ಓವರ್ ಟೇಕ್ ಮಾಡಲು ಮುಂದಾಗಿದ್ದಾನೆ. ಈ ವೇಳೆ ತುರುವೇಕೆರೆ ಕಡೆಯಿಂದ ಬಂದ ಐವರು ಪ್ರಯಾಣಿಸುತ್ತಿದ್ದ ಕಿಯಾ ಸೋನೆಟ್ ಕಾರಿಗೆ ನೇರವಾಗಿ ಡಿಕ್ಕಿ ಹೊಡೆದಿದ್ದಾನೆ.
ಡಿಕ್ಕಿಯಾದ ರಭಸಕ್ಕೆ ವೋಕ್ಸ್‌ವ್ಯಾಗನ್ ಕಾರಿನಲ್ಲಿದ್ದ ಚಿಕ್ಕನಾಯಕನಹಳ್ಳಿ ಮೂಲದ ವಿವೇಕ್ ಹಾಗೂ ಪವನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಿಯಾ ಸೋನೆಟ್ ಕಾರಿನಲ್ಲಿದ್ದ ತುರುವೇಕೆರೆ ಮೂಲದ ಚಾಲಕ ದಾವೂದ್ ಹಾಗೂ ಮೂರು ವರ್ಷದ ಮುಗ್ಧ ಮಗು ಪ್ರಾಣ ಕಳೆದುಕೊಂಡಿದೆ. ಅಪಘಾತದಲ್ಲಿ ಗಾಯಗೊಂಡ ಉಳಿದ ನಾಲ್ವರ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ತಕ್ಷಣವೇ ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ: ‘ನಾಗೇಂದ್ರ ನಿರಪರಾಧಿ, ಬಿಜೆಪಿ ನಡೆಗೆ ಜನತೆ ನೊಂದಿದ್ದಾರೆ’: ಡಿ.ಕೆ. ಶಿವಕುಮಾರ್ ಸಮರ್ಥನೆ
ಘಟನಾ ಸ್ಥಳಕ್ಕೆ ಚಿಕ್ಕನಾಯಕನಹಳ್ಳಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ