Tumkur Accident: ತುಮಕೂರು ಹಿರೇಹಳ್ಳಿ ಬಳಿ ಭೀಕರ ಅಪಘಾತ, ಕಂಟೇನರ್ ಲಾರಿಗೆ ಬೈಕ್ ಡಿಕ್ಕಿಯಾಗಿ ಮೂವರು ಸಾವು
ತುಮಕೂರು ಗ್ರಾಮಾಂತರ ವ್ಯಾಪ್ತಿಯ ಹಿರೇಹಳ್ಳಿ ಬಳಿ ಶುಕ್ರವಾರ ಮುಂಜಾನೆ ಭೀಕರ ಅಪಘಾತ ಸಂಭವಿಸಿ ಮೂವರು ಸಾವಿಗೀಡಾಗಿದ್ದಾರೆ. ಕಂಟೇನರ್ ಲಾರಿಗೆ ಬೈಕೊಂದು ಡಿಕ್ಕಿಯಾಗಿ ಮೂವರು ಸವಾರರು ಮೃತಪಟ್ಟಿದ್ದಾರೆ. ಮೃತರ ಗುರುತು ಪತ್ತೆಯಾಗಿದ್ದು, ಸ್ಥಳಕ್ಕೆ ಕ್ಯಾತಸಂದ್ರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತುಮಕೂರು, ಜೂನ್ 6: ತುಮಕೂರು (Tumkur) ಗ್ರಾಮಾಂತರ ವ್ಯಾಪ್ತಿಯ ಹಿರೇಹಳ್ಳಿ ಸಮೀಪದ ನಂದಿಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಕಂಟೈನರ್ ಲಾರಿಗೆ ಬೈಕ್ ಡಿಕ್ಕಿಯಾಗಿ (Accident) ಮೂವರು ಮೃತಪಟ್ಟಿದ್ದಾರೆ. ಶುಕ್ರವಾರ ಬೆಳಗ್ಗೆ ಅಪಘಾತ ಸಂಭವಿಸಿದೆ. ಬಂಕ್ನಿಂದ ಪೆಟ್ರೋಲ್ ತುಂಬಿಸಿಕೊಂಡು ಹೆದ್ದಾರಿಗೆ ಬರುತ್ತಿದ್ದ ಕಂಟೈನರ್ ಲಾರಿಗೆ ಬೈಕ್ ಡಿಕ್ಕಿ ಹೊಡೆದಿದೆ. ಬೈಕ್ನಲ್ಲಿ ತ್ರಿಬಲ್ ರೈಡ್ ಹೋಗುತ್ತಿದ್ದ ಸವಾರರು ಮೃತಪಟ್ಟಿದ್ದಾರೆ. ಕ್ಯಾತಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಸ್ಥಳಕ್ಕೆ ಎಎಸ್ಪಿ ಗೋಪಾಲ್, ಡಿವೈಎಸ್ಪಿ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಪಘಾತದಲ್ಲಿ ಮೃತಪಟ್ಟವರನ್ನು ರಾಜೇಶ್ (25), ದನಂಜಯ್ (27), ಧನುಷ್ (23) ಎಂದು ಗುರುತಿಸಲಾಗಿದೆ. ಇವರು ದಾಬಸ್ ಪೇಟೆಯ ಖಾಸಗಿ ಕಂಪನಿಯಲ್ಲಿ ಸೆಕ್ಯೂರಿಟಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರು.ರಾತ್ರಿ ಪಾಳಿ ಮುಗಿಸಿ ತುಮಕೂರಿಗೆ ವಾಪಸಾಗುವಾಗ ಅಪಘಾತ ಸಂಭವಿಸಿದೆ. ಸದ್ಯ, ಮೃತದೇಹಗಳನ್ನು ಜಿಲ್ಲಾಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ.
ತುಮಕೂರು ಮೂಲದ ಯುವಕನ ಸಾವಿಗೆ ಆಕ್ರೋಶ
ಆರ್ಸಿಬಿ ವಿಜಯೋತ್ಸವ ಸಂಭ್ರಮದಲ್ಲಿ ಬೆಂಗಳೂರಿನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕುಣಿಗಲ್ನ ನಾಗಸಂದ್ರ ಮೂಲದ ದೇವರಾಜ್ ಎಂಬುವವರ ಪುತ್ರ ಮನೋಜ್ ಮೃತಪಟ್ಟಿದ್ದು, ತುಮಕೂರಿನಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಮನೋಜ್ ಮೂಲತಃ ತುಮಕೂರಿನ ಕುಣಿಗಲ್ ನಾಗಸಂದ್ರದ ವ್ಯಕ್ತಿ. ತಂದೆ ದೇವರಾಜ್ ಯಲಹಂಕದಲ್ಲಿ ಪಾನಿಪುರ ಅಂಗಡಿ ಇಟ್ಟು ಬದುಕು ಸಾಗಿಸುತಿದ್ದಾರೆ. 20 ವರ್ಷದ ಹಿಂದೆ ಮಗನ ಓದಿಗೆಂದೇ ಊರು ಬಿಟ್ಟ ದೇವರಾಜ್ ಕನಸಿಗೆ ಭವಿಷ್ಯವಾಗಿದ್ದ ಮನೋಜ್ ಓದಿನಲ್ಲಿ ಮುಂದಿದ್ದ. ಖಾಸಗಿ ಕಾಲೇಜಿನಲ್ಲಿ ಎರಡನೇ ವರ್ಷದ ಬಿಬಿಎಂ ಓದುತಿದ್ದ ಆತ ಹೆಚ್ಚಿನ ವಿದ್ಯಾಬ್ಯಾಸಕ್ಕೆ ವಿದೇಶಕ್ಕೆ ಹೊಗುವ ಆಸೆ ಹೊಂದಿದ್ದ. ಆದರೆ ಅತಿಯಾದ ಆರ್ಸಿಬಿ ಅಭಿಮಾನ, ವಿಜಯೋತ್ಸವದಲ್ಲಿ ಭಾಗಿಯಾಗಬೇಕೆಂಬ ಆಸೆ ಆತನ ಬಲಿ ಪಡೆದಿದೆ.
ಇದನ್ನೂ ಓದಿ: ಹೇಮಾವತಿ ಲಿಂಕ್ ಕೆನಾಲ್ ವಿರೋಧಿಸಿದ್ದ ಇಬ್ಬರು ಸ್ವಾಮೀಜಿ, ಮೂವರು ಶಾಸಕರು ಸೇರಿ 11 ಮಂದಿ ವಿರುದ್ಧ ಎಫ್ಐಆರ್
ಸರಿಯಾಗಿ ಕಾರ್ಯಕ್ರಮ ಆಯೋಜನೆ ಮಾಡಿದೇ, ಸರ್ಕಾರ್ ಹಾಗೂ ಆಯೋಜಕರ ಬೇಜವಾಬ್ದಾರಿಗೆ ನನ್ನ ಮಗ ಸಾವನಪ್ಪಿದ್ದಾನೆ. ಇದಕ್ಕೆ ಸರ್ಕಾರವೇ ನೇರ ಹೊಣೆ ಎಂದು ಮೃತನ ತಂದೆ ದೇವರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:26 am, Fri, 6 June 25







