ಖಾರದಪುಡಿ ಎರಚಿ ಚಿನ್ನದಂಗಡಿಗೆ ಕನ್ನ: ಸಿನಿಮಾ ಕಥೆ ಮೀರಿಸುವ ದರೋಡೆ ಸ್ಟೋರಿ

ತುಮಕೂರಿನಲ್ಲಿ ಹೊರರಾಜ್ಯದ ಗ್ಯಾಂಗ್​ವೊಂದು ಹಾಡಹಗಲೇ ಸಿನಿಮೀಯ ರೀತಿಯಲ್ಲಿ ದಾಳಿ ಮಾಡಿ ಜ್ಯುವೆಲರಿ ಶಾಪ್ ದರೋಡೆ ಮಾಡಿರುವಂತಹ ಘಟನೆ ನಡೆದಿದೆ. ಜ್ಯುವೆಲರಿ ಶಾಪ್​​ಗೆ ನುಗ್ಗಿ ಖಾರದ ಪುಡಿ ಎರಚಿ ಬರೋಬ್ಬರಿ 26 ಲಕ್ಷ ರೂ ಮೌಲ್ಯದ ಚಿನ್ನಾಭರಣ ದೋಚಿದ್ದ ಗ್ಯಾಂಗ್​​ ಅನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ.

ಖಾರದಪುಡಿ ಎರಚಿ ಚಿನ್ನದಂಗಡಿಗೆ ಕನ್ನ: ಸಿನಿಮಾ ಕಥೆ ಮೀರಿಸುವ ದರೋಡೆ ಸ್ಟೋರಿ
ದರೋಡೆಯಾದ ಜ್ಯುವೆಲರಿ ಶಾಪ್
Image Credit source: tv9 kannada
Edited By:

Updated on: Feb 23, 2026 | 5:08 PM

ತುಮಕೂರು, ಫೆಬ್ರವರಿ 23: ರಾಜ್ಯದಲ್ಲಿ ದರೋಡೆ (Robbery) ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಿವೆ. ಇದೀಗ ತುಮಕೂರಿನಲ್ಲೊಂದು (Tumakuru) ಜ್ಯುವೆಲರಿ ಶಾಪ್ ದರೋಡೆ ನಡೆದಿದೆ. ಆ ಮೂಲಕ ಗೃಹ ಸಚಿವರ ತವರು ಜಿಲ್ಲೆಯಲ್ಲಿ ಹೊರ ರಾಜ್ಯದ ದರೋಡೆಕೋರರು ಸದ್ದು ಮಾಡಿದ್ದಾರೆ. ಜ್ಯುವೆಲರಿ ಶಾಪ್​​ಗೆ ನುಗ್ಗಿ ಖಾರದ ಪುಡಿ ಎರಚಿ ಬರೋಬ್ಬರಿ 26 ಲಕ್ಷ ರೂ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವಂತಹ ಘಟನೆ ನಡೆದಿದೆ. ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣದೊಂದಿಗೆ ಕಾಡಿಗೆ ಪರಾರಿಯಾಗಿದ್ದ ಖತರ್ನಾಕ್​ ಗ್ಯಾಂಗ್​​​​ ಅನ್ನು ಕೆಲವೇ ಗಂಟೆಗಳಲ್ಲಿ ಶಿರಾ ಪೊಲೀಸರು ಬಂಧಿಸಿದ್ದಾರೆ. ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು? 

ಬಂಧಿತ ಅರವಿಂದ್, ದುಂಗರ್ ಸಿಂಗ್, ಮಹೇಂದ್ರ ಸಿಂಗ್ ಮತ್ತು ಮಧು ಸಿಂಗ್​ ಮೂಲತಃ ರಾಜಸ್ಥಾನ ಮೂಲದವರು. ಕಳೆದ ಮೂರ್ನಾಲ್ಕು ದಿನದಿಂದ ತುಮಕೂರಿನಲ್ಲಿ ಈ ಗ್ಯಾಂಗ್​ ಬಿಡುಬಿಟ್ಟಿತ್ತು. ಹೈವೇ ರಸ್ತೆಯಲ್ಲಿರುವ ಜ್ಯುವೆಲರಿ ಶಾಪ್​ಗಳೇ ಇವರ ಟಾರ್ಗೆಟ್. ಅದೇ ರೀತಿ ಶಿರಾ ತಾಲೂಕಿನ ಕಳ್ಳಂಬೆಳ್ಳದ ಬೆಂಚೆಗೇಟ್ ಬಳಿಯ ಜಗತಾಂಭ ಅಂಗಡಿ ದೋಚಲು ಹೊಂಚು ಹಾಕಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೊಂದು ದರೋಡೆ: ಅಧಿಕಾರಿಗಳ ಸೋಗಿನಲ್ಲಿ ಬಂದು ಲಕ್ಷಾಂತರ ರೂ ಹೊತ್ತೊಯ್ದರು

ಪ್ಲ್ಯಾನ್​ನಂತೆ ಬೊಲೆರೋ ಕಾರ್​ನಲ್ಲಿ ಬಂದ ಖದೀಮರು ಹಾಡಹಗಲೇ ಸಿನಿಮೀಯ ರೀತಿಯಲ್ಲಿ ಜ್ಯುವೆಲರಿ ಶಾಪ್​ಗೆ ನುಗ್ಗಿ ಖಾರದ ಪುಡಿ ಎರಚಿದ್ದಾರೆ. ಬಳಿಕ ಶಟರ್ ಕ್ಲೋಸ್ ಮಾಡಿ ಅಂಗಡಿಯಲ್ಲಿದ್ದ 100 ಗ್ರಾಂ ಚಿನ್ನ, ಒಂದುವರೆ ಕೆಜಿ ಬೆಳ್ಳಿ ಸೇರಿದಂತೆ 26 ಲಕ್ಷ ರೂ ಮೌಲ್ಯದ ಚಿನ್ನಾಭರಣ ದೋಚಿದ ಗ್ಯಾಂಗ್​ ಈ ವೇಳೆ ಅಂಗಡಿಯಲ್ಲಿದ್ದ ಮಾಲೀಕ ದಿನೇಶ್ ಹಾಗೂ ಅವರ ಅಜ್ಜಿ ಮೇಲೆ ಹಲ್ಲೆ ಮಾಡಿ ಪರಾರಿ ಆಗಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಮತ್ತೊಂದು ದರೋಡೆ: ಫ್ಲಿಪ್‌ಕಾರ್ಟ್​​ನ ಲಕ್ಷಾಂತರ ರೂ ಮೌಲ್ಯದ ವಸ್ತುಗಳ ಕಳ್ಳತನ

ದೂರು ಬಂದ ಕೂಡಲೇ ಅಲರ್ಟ್ ಆದ ಪೊಲೀಸರು, ಬೊಲೆರೋ ಕಾರು ಮಾಹಿತಿ ಆಧರಿಸಿ ಶಿರಾ ಡಿವೈಎಸ್ಪಿ ಶೇಖರ್ ನೇತೃತ್ವದಲ್ಲಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಮೊದಲಿಗೆ ಟೋಲ್ ಬಳಿ ಕಾರು ಪತ್ತೆಯಾಗಿದೆ. ಬಳಿಕ ಆರೋಪಿಗಳ ಕಾರು ಚೇಸ್ ಮಾಡಿದ ಪೊಲೀಸರು ಕೆಲವೇ ಗಂಟೆಗಳಲ್ಲಿ ಹುಯುಲು ದೊರೆ ಅರಣ್ಯ ಪ್ರದೇಶದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಜೊತೆಗೆ ಕದ್ದ ಸಂಪೂರ್ಣ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.