ಅಪ್ಪ ಡ್ರಗ್ಸ್ ಜಾಗೃತಿ ಹರಿಕಾರ, ಮಗ ಗಾಂಜಾ ದಂಧೆಯ ಕಿಂಗ್‌ಪಿನ್! ಕ್ಯೂಆರ್ ಕೋಡ್‌ನಿಂದ ಬಯಲಾಯ್ತು ಪೊಲೀಸ್ ಪುತ್ರನ ಕರಾಳ ಕಥೆ

ತುಮಕೂರಿನಲ್ಲಿ ಮಾದಕ ವಸ್ತು ತಡೆಗೆ ಪೊಲೀಸರು ಜಾರಿಗೆ ತಂದಿದ್ದ ಕ್ಯೂಆರ್ ಕೋಡ್‌ನ ರಹಸ್ಯ ಮಾಹಿತಿಯಿಂದ ಬೃಹತ್ ಗಾಂಜಾ ಜಾಲ ಬಯಲಾಗಿದೆ. ಪೊಲೀಸ್ ಸಿಬ್ಬಂದಿಯ ಪುತ್ರ ದಿಶಾಂತ್ ಸೇರಿದಂತೆ ಒಟ್ಟು 9 ಮಂದಿ ಆರೋಪಿಗಳನ್ನು ತಿಲಕ್ ಪಾರ್ಕ್ ಪೊಲೀಸರು ಬಂಧಿಸಿದ್ದು, ಫಾರ್ಚ್ಯೂನರ್ ಕಾರು ಹಾಗೂ ದುಬಾರಿ ಹೈಡ್ರೋ ಗಾಂಜಾವನ್ನು ಜಪ್ತಿ ಮಾಡಿದ್ದಾರೆ.

ಅಪ್ಪ ಡ್ರಗ್ಸ್ ಜಾಗೃತಿ ಹರಿಕಾರ, ಮಗ ಗಾಂಜಾ ದಂಧೆಯ ಕಿಂಗ್‌ಪಿನ್! ಕ್ಯೂಆರ್ ಕೋಡ್‌ನಿಂದ ಬಯಲಾಯ್ತು ಪೊಲೀಸ್ ಪುತ್ರನ ಕರಾಳ ಕಥೆ
ಅಪ್ಪ ಡ್ರಗ್ಸ್ ಜಾಗೃತಿ ಹರಿಕಾರ, ಮಗ ಗಾಂಜಾ ದಂಧೆಯ ಕಿಂಗ್‌ಪಿನ್!
Edited By:

Updated on: Jul 31, 2026 | 12:34 PM

ಮುಖ್ಯಾಂಶಗಳು

  • ತುಮಕೂರಿನಲ್ಲಿ ಪೊಲೀಸರ ಕ್ಯೂಆರ್ ಕೋಡ್ ಜಾಗೃತಿ ಯೋಜನೆಯಿಂದ ಬಯಲಾಯ್ತು ಗಾಂಜಾ ದಂಧೆ.
  • ಡ್ರಗ್ಸ್ ಮಾರಾಟದಲ್ಲಿ ನಿರತನಾಗಿದ್ದ ಪೊಲೀಸ್ ಸಿಬ್ಬಂದಿಯ ಪುತ್ರ ದಿಶಾಂತ್ ಬಂಧನವಾಗಿದೆ.
  • ಒಟ್ಟು 9 ಮಂದಿ ಆರೋಪಿಗಳ ಬಂಧನ, ಹೈಡ್ರೋ ಗಾಂಜಾ ಜಪ್ತಿಯಾಗಿದೆ.

ತುಮಕೂರು, ಜುಲೈ 31: ಒಂದು ಕಡೆ ತಂದೆ ಸಾರ್ವಜನಿಕರಲ್ಲಿ ಮಾದಕ ವಸ್ತುಗಳ ಬಳಕೆಯ ವಿರುದ್ಧ ಜಾಗೃತಿ ಮೂಡಿಸುತ್ತಿದ್ದರೆ, ಇನ್ನೊಂದೆಡೆ ಆತನ ಮಗನೇ ಗ್ಯಾಂಗ್ ಕಟ್ಟಿಕೊಂಡು ಹೈಡ್ರೋ ಗಾಂಜಾ ಮಾರಾಟ ಮಾಡುತ್ತಿದ್ದ ಆಘಾತಕಾರಿ ಘಟನೆ ತುಮಕೂರಿನಲ್ಲಿ ಬೆಳಕಿಗೆ ಬಂದಿದೆ. ಪೊಲೀಸರ ರಹಸ್ಯ ‘ಕ್ಯೂಆರ್ ಕೋಡ್’ (QR Code) ಯೋಜನೆಯಿಂದಾಗಿ ಪೊಲೀಸ್ ಸಿಬ್ಬಂದಿಯ ಪುತ್ರ ಸೇರಿ 9 ಮಂದಿ ಖೆಡ್ಡಾಕ್ಕೆ ಬಿದ್ದಿದ್ದಾರೆ.

ಕ್ಯೂಆರ್ ಕೋಡ್‌ ರಹಸ್ಯ

ತುಮಕೂರು ಉಪವಿಭಾಗದ ಡಿವೈಎಸ್‌ಪಿ ಚಂದ್ರಶೇಖರ್ ಅವರು ಮಾದಕ ದಂಧೆ ತಡೆಯಲು ಕ್ಯೂಆರ್ ಕೋಡ್ ಜಾಗೃತಿ ಅಭಿಯಾನ ಆರಂಭಿಸಿದ್ದರು. ಸಾರ್ವಜನಿಕರು ಗುಪ್ತವಾಗಿ ಮಾಹಿತಿ ನೀಡಲು ಮತ್ತು ಮಾಹಿತಿ ನೀಡಿದವರ ವಿವರ ಗೌಪ್ಯವಾಗಿಡಲು ಈ ವ್ಯವಸ್ಥೆ ಮಾಡಲಾಗಿತ್ತು. ಜುಲೈ 10ರಂದು ಈ ಕ್ಯೂಆರ್ ಕೋಡ್ ಮೂಲಕ ಬಂದ ಗೌಪ್ಯ ಸುಳಿವನ್ನು ಬೆನ್ನಟ್ಟಿದ ತಿಲಕ್ ಪಾರ್ಕ್ ಪೊಲೀಸರಿಗೆ ಅಚ್ಚರಿಯ ಸತ್ಯ ಕಾದಿತ್ತು.

ಬಿಸಿಎ ವಿದ್ಯಾರ್ಥಿಯ ಕರಾಳ ದಂಧೆ

ತುಮಕೂರು ಎಸ್ಪಿ ಕಚೇರಿಯ ಹಿಂದಿನ ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ವಾಸವಿದ್ದ ಪೊಲೀಸ್ ಸಿಬ್ಬಂದಿ ರಘುನಾಥ್ ಅವರ ಪುತ್ರ ದಿಶಾಂತ್ (21) ಎಂಬ ಬಿಸಿಎ ವಿದ್ಯಾರ್ಥಿಯೇ ಈ ಗ್ಯಾಂಗ್‌ನ ಮುಖ್ಯಸ್ಥ. ಬೆಂಗಳೂರಿನಿಂದ ವ್ಯವಸ್ಥಿತವಾಗಿ ಸಾಮಾನ್ಯ ಗಾಂಜಾ ಹಾಗೂ ದುಬಾರಿ ‘ಹೈಡ್ರೋ ಗಾಂಜಾ’ ತರಿಸಿಕೊಂಡು ತುಮಕೂರಿನಲ್ಲಿ ಮಾರಾಟ ಮಾಡುತ್ತಿದ್ದ.

ಕಾರ್ಯಾಚರಣೆ ನಡೆಸಿದ ಪೊಲೀಸರು ದಿಶಾಂತ್ ಸೇರಿದಂತೆ ಬೆಂಗಳೂರಿನ ಮಂಜುನಾಥ್ (35), ತುಮಕೂರಿನ ಸತೀಶ್ (37), ಪ್ರಮೋದ್ (28), ದರ್ಶನ್ (31) ಮತ್ತು ಅಮೋಘ್ (31) ಎಂಬ ಆರು ಮಂದಿಯನ್ನು ಮೊದಲ ಹಂತದಲ್ಲಿ ಬಂಧಿಸಿದರು. ಇವರಿಂದ ಫಾರ್ಚ್ಯೂನರ್ ಕಾರು ಹಾಗೂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ತನಿಖೆ ಮುಂದುವರಿಸಿದ ಪೊಲೀಸರು ಮತ್ತಷ್ಟು ಸುಳಿವು ಆಧರಿಸಿ ಮತ್ತೆ ಮೂವರನ್ನು ಸೆರೆಹಿಡಿದಿದ್ದು, ಈವರೆಗೆ ಒಟ್ಟು 9 ಮಂದಿ ಜೈಲುಪಾಲಾಗಿದ್ದಾರೆ. ತಿಲಕ್ ಪಾರ್ಕ್ ಪೊಲೀಸರು ಪ್ರಕರಣದ ತನಿಖೆ ಚುರುಕುಗೊಳಿಸಿದ್ದು, ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:40 am, Fri, 31 July 26

Loading...
Unable to load recommendations.
Follow Us