AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಪ್ಪಳ ಕುಡಾ 8.43 ಕೋಟಿ ಹಗರಣ: ಕಿಂಗ್‌ಪಿನ್ ಸಹೋದರನ ಬಂಧನ; ಆರೋಪಿ ಸಿಕ್ಕಿದ್ದೇ ರೋಚಕ!

Koppal News: ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 8.43 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ರವೀಂದ್ರ ಕುಮಾರ್ ಸಹೋದರ ಅನಿಲ್ ಕುಮಾರ್‌ನನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಅನಿಲ್ ಕುಮಾರ್ ಹೆಸರಿಗೆ ಒಂದು ಕೋಟಿಗೂ ಅಧಿಕ ಹಣ ವರ್ಗಾವಣೆ ಆಗಿರುವುದು ತನಿಖೆಯಲ್ಲಿ ಬಯಲಾಗಿದೆ.

ಕೊಪ್ಪಳ ಕುಡಾ 8.43 ಕೋಟಿ ಹಗರಣ: ಕಿಂಗ್‌ಪಿನ್ ಸಹೋದರನ ಬಂಧನ; ಆರೋಪಿ ಸಿಕ್ಕಿದ್ದೇ ರೋಚಕ!
ಬಂಧಿತ ಆರೋಪಿImage Credit source: tv9 kannada
ಶಿವಕುಮಾರ್ ಪತ್ತಾರ್
| Edited By: |

Updated on: Aug 24, 2026 | 9:22 PM

Share

ಕೊಪ್ಪಳ, ಆಗಸ್ಟ್​ 24: ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಬರೋಬ್ಬರಿ 8.43 ಕೋಟಿ ರೂ ಹಗರಣ ಪ್ರಕರಣದ (Koppal Urban Development Authority Scam) ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರು, ಪ್ರಮುಖ ಆರೋಪಿ ರವೀಂದ್ರ ಕುಮಾರ್‌ನ ಸಹೋದರ ಅನಿಲ್ ಕುಮಾರ್‌ನನ್ನು ಬೆಂಗಳೂರಿನಲ್ಲಿ ಅತ್ಯಂತ ರೋಚಕವಾಗಿ ಬಂಧಿಸಿದ್ದಾರೆ (arrest). ನಿವೇಶನ ಕೊಡಿಸುವುದಾಗಿ ನಂಬಿಸಿ ಪ್ರಾಧಿಕಾರದ ಅಧಿಕೃತ ಬ್ಯಾಂಕ್ ಖಾತೆಯಿಂದಲೇ ಸುಮಾರು 40ಕ್ಕೂ ಹೆಚ್ಚು ಬೇರೆ ಬೇರೆ ಖಾತೆಗಳಿಗೆ ಹಣ ವರ್ಗಾವಣೆ ಮಾಡಿ ವಂಚಿಸಲಾಗಿತ್ತು. ಈ ಪೈಕಿ ಅನಿಲ್ ಕುಮಾರ್ ಖಾತೆಗೆ ಐದಕ್ಕೂ ಹೆಚ್ಚು ಕಂತುಗಳಲ್ಲಿ 1 ಕೋಟಿಗೂ ಅಧಿಕ ಮೊತ್ತ ವರ್ಗಾವಣೆಯಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಮಗನಿಗೆ ಮಾಡಿದ ಒಂದೇ ಕರೆಯಿಂದ ಬಲೆಗೆ ಬಿದ್ದ ಆರೋಪಿ

ಹಗರಣ ಬಯಲಾಗುತ್ತಿದ್ದಂತೆಯೇ ಅನಿಲ್ ಕುಮಾರ್ ತನ್ನ ಫೋನ್ ಅನ್ನು ಮನೆಯಲ್ಲೇ ಬಿಟ್ಟು ಬೆಂಗಳೂರಿಗೆ ಪರಾರಿಯಾಗಿದ್ದ. ಪೊಲೀಸರ ಕಣ್ತಪ್ಪಿಸಲು ಬೆಂಗಳೂರಿನ ಪೇಯಿಂಗ್ ಗೆಸ್ಟ್ (ಪಿಜಿ) ವಸತಿಯಲ್ಲಿ ತಲೆಮರೆಸಿಕೊಂಡಿದ್ದ.

ಇದನ್ನೂ ಓದಿ: ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಹಗರಣ ಕೇಸ್: 20ಕ್ಕೂ ಹೆಚ್ಚು ಖಾತೆಗಳಿಗೆ ಹಣ ವರ್ಗಾವಣೆ, ಯಾರ್ಯಾರ ಖಾತೆಗೆ ಎಷ್ಟೆಷ್ಟು?

ಇನ್ನು ಬೆಂಗಳೂರಿನಲ್ಲೇ ವ್ಯಾಸಂಗ ಮಾಡುತ್ತಿರುವ ತನ್ನ ಪುತ್ರನಿಗೆ ಕರೆ ಮಾಡಲು ಯತ್ನಿಸಿದ್ದಾನೆ. ಈ ಕರೆಯ ಜಾಡು ಹಿಡಿದ ಕೊಪ್ಪಳ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆತನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮುಖ್ಯ ಆರೋಪಿ ರವೀಂದ್ರ ಕುಮಾರ್‌ಗೆ ತೀವ್ರ ಶೋಧ

ಇನ್ನು ಪ್ರಾಧಿಕಾರದಲ್ಲಿ ಹೊರಗುತ್ತಿಗೆ ನೌಕರನಾಗಿದ್ದುಕೊಂಡು ಇಡೀ ಹಗರಣದ ರೂವಾರಿಯಾಗಿರುವ ರವೀಂದ್ರ ಕುಮಾರ್ ಸದ್ಯ ತಲೆಮರೆಸಿಕೊಂಡಿದ್ದಾನೆ. ಆತ ಹೊರರಾಜ್ಯಕ್ಕೆ ಪಲಾಯನ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮ ಪ್ರಕರಣ: ಹೊರಗುತ್ತಿಗೆ ನೌಕರ ರವೀಂದ್ರ ಕುಮಾರ್‌ಗೆ ಪೊಲೀಸ್ ಬಲೆ

ಪ್ರಾಧಿಕಾರದ ಸಾರ್ವಜನಿಕ ಹಣವನ್ನು ಲೂಟಿ ಮಾಡಿದ ಜಾಲದ ಸಂಪೂರ್ಣ ಮಾಹಿತಿಯನ್ನು ಹೊರತರಲು ಬಂಧಿತ ಅನಿಲ್ ಕುಮಾರ್‌ನನ್ನು ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us