ಕೊಪ್ಪಳದ ಎರಡು ಪ್ರತ್ಯೇಕ ಘಟನೆ: ಮದುವೆಯಾಗುವುದಾಗಿ ನಂಬಿಸಿ ಸಾಫ್ಟ್‌ವೇರ್ ಉದ್ಯೋಗಿ ಕೈಕೊಟ್ಟರೆ, ಮತ್ತೊಂದೆಡೆ ಪ್ರೀತಿಸಿ ಮದುವೆಯಾದ ಜೋಡಿಗೆ ಜೀವ ಬೆದರಿಕೆ
ಕೊಪ್ಪಳದಲ್ಲಿ ಪ್ರೀತಿ ವಂಚನೆ ಮತ್ತು ಪ್ರೇಮ ವಿವಾಹಕ್ಕೆ ಬೆದರಿಕೆ ಒಡ್ಡಿರುವ ಎರಡು ಘಟನೆಗಳು ಬೆಳಕಿಗೆ ಬಂದಿವೆ. ಮದುವೆಯ ಭರವಸೆ ನೀಡಿ ಕೈಕೊಟ್ಟ ಪ್ರಿಯಕರನಿಂದ ಮೋಸ ಹೋದ ಯುವತಿ ನ್ಯಾಯಕ್ಕಾಗಿ ಅಲೆಯುತ್ತಿದ್ದರೆ, ಪ್ರೀತಿಸಿ ಮದುವೆಯಾದ ಜೋಡಿಗೆ ಕುಟುಂಬದಿಂದಲೇ ಜೀವ ಬೆದರಿಕೆ ಎದುರಾಗಿದೆ. ಪ್ರೀತಿಯ ಹೆಸರಿನಲ್ಲಿ ನಡೆಯುವ ಈ ಅನ್ಯಾಯಗಳು ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ.

ಕೊಪ್ಪಳ, ನ.5: ಪ್ರೀತಿ ಎನ್ನುವುದು ಜೀವನಕ್ಕೆ ಸುಂದರ ಭರವಸೆಯಾಗಬೇಕಿತ್ತು, ಆದರೆ ಅದೇ ಪ್ರೀತಿ ಕೆಲವರ ಬದುಕನ್ನು ಬೀದಿಗೆ ತಂದಿದೆ. ಪ್ರೀತಿಯ ಹೆಸರಿನಲ್ಲಿ ವಂಚನೆ ಹಾಗೂ ಪ್ರೇಮ ವಿವಾಹವಾದ ಕಾರಣಕ್ಕೆ ಕುಟುಂಬದವರಿಂದಲೇ ಬೆದರಿಕೆ ಎದುರಾಗಿರುವ ಎರಡು ಪ್ರತ್ಯೇಕ ಆಘಾತಕಾರಿ ಘಟನೆಗಳು ಕೊಪ್ಪಳ ಜಿಲ್ಲೆಯಲ್ಲಿ ವರದಿಯಾಗಿವೆ. ಒಂದು ಕಡೆ ಮದುವೆಯ ಭರವಸೆ ನೀಡಿ ವಂಚಿಸಿದ ಪ್ರಿಯಕರನಿಗಾಗಿ ಯುವತಿ ಬೀದಿ ಬೀದಿ ಅಲೆದಾಡುತ್ತಿದ್ದರೆ, ಮತ್ತೊಂದು ಕಡೆ ಹೆತ್ತವರ ವಿರೋಧದಿಂದಾಗಿ ನವಜೋಡಿಯೊಂದು ಜೀವಭಯದಿಂದ ಎಸ್‌ಪಿ ಕಚೇರಿ ಮೆಟ್ಟಿಲೇರಿದೆ.
ಮದುವೆ ಮಾತು ನೀಡಿ ಕೈಕೊಟ್ಟ ಸಾಫ್ಟ್‌ವೇರ್ ಉದ್ಯೋಗಿ;
ಮೊದಲನೆಯ ಘಟನೆಯಲ್ಲಿ ಪ್ರೀತಿಯ ಹೆಸರಿನಲ್ಲಿ ವಂಚನೆ ಎಸಗಿರುವ ಗಂಭೀರ ಆರೋಪ ಕೇಳಿಬಂದಿದೆ. ಬೀದರ್ ಮೂಲದ ಮಾಯಾ (ಹೆಸರು ಬದಲಾಯಿಸಲಾಗಿದೆ) ಹಾಗೂ ಗಂಗಾವತಿ ನಿವಾಸಿ, ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿರುವ ವಿರೇಶ್ ಎಂಬುವವರು ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮಾಯಾಗೆ ಮದುವೆಯಾಗುವುದಾಗಿ ನಂಬಿಸಿದ್ದಲ್ಲದೆ, ಆಕೆಯ ಹುಟ್ಟುಹಬ್ಬವನ್ನು ಆಚರಿಸಿ, ಮನೆಗೂ ಬಂದು ಹೋಗಿದ್ದ ವಿರೇಶ್, ಕೊನೆಯಲ್ಲಿ ಮದುವೆಗೆ ನಿರಾಕರಿಸಿದ್ದಾನೆ.
ಪ್ರಸ್ತುತ ಜಾತಿಯ ಕಾರಣ ನೀಡಿ ಮದುವೆಯಾಗಲು ನಿರಾಕರಿಸುತ್ತಿರುವ ವಿರೇಶ್, ಮಾಯಾ ಅವರ ಫೋನ್ ನಂಬರ್ ಬ್ಲಾಕ್ ಮಾಡಿದ್ದು, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ. ಪ್ರಿಯಕರನಿಗಾಗಿ ಬೀದರ್‌ನಿಂದ ನೇರವಾಗಿ ಗಂಗಾವತಿಗೆ ಬಂದಿರುವ ಮಾಯಾ, ವಿರೇಶ್ ಮನೆಗೆ ತೆರಳಿ ನ್ಯಾಯಕ್ಕಾಗಿ ಕಣ್ಣೀರಿಡುತ್ತಾ ಗಂಗಾವತಿಯ ಬೀದಿಗಳಲ್ಲಿ ಅಲೆದಾಡುತ್ತಿದ್ದಾರೆ. ಈ ಸಂಬಂಧ ಬೆಂಗಳೂರಿನ ಕೆ.ಆರ್. ಪುರಂ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿರುವುದಾಗಿ ಮಾಯಾ ತಿಳಿಸಿದ್ದಾರೆ.
ಇದನ್ನೂ ಓದಿ: ವಿಜಯಪುರದಲ್ಲಿ ಮತ್ತೆ ಗುಂಡಿನ ಸದ್ದು: ಹಳೆಯ ವೈಷಮ್ಯಕ್ಕೆ ಯಾಸೀನ್ ಠಕ್ಕೆ ಕೊಲೆ
ಪ್ರೀತಿಸಿ ಮದುವೆಯಾದ ತಪ್ಪಿಗೆ ಹೆತ್ತವರೇ ವಿಲನ್
ಇನ್ನೊಂದು ಕಡೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದಲ್ಲಿ ಪ್ರೇಮ ವಿವಾಹವಾದ ಜೋಡಿಗೆ ಸಂಕಷ್ಟ ಎದುರಾಗಿದೆ. ರೇಣುಕಾ ಹಾಗೂ ಶಿವಕುಮಾರ್ ಪರಸ್ಪರ ಪ್ರೀತಿಸಿ ಸುಮಾರು ಆರು ತಿಂಗಳ ಹಿಂದೆ ಮದುವೆಯಾಗಿದ್ದರು. ಇಬ್ಬರೂ ಒಂದೇ ಸಮುದಾಯದವರಾಗಿದ್ದರೂ ಸಹ ರೇಣುಕಾ ಮನೆಯವರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ರೇಣುಕಾ ಅವರ ತಂದೆ ಸರ್ಕಾರಿ ನೌಕರರಾಗಿದ್ದು, ನಿನ್ನೆ ಕೂಡ ಮನೆಗೆ ಬಂದು ಗಲಾಟೆ ನಡೆಸಿ, ತೀವ್ರ ಬೆದರಿಕೆ ಹಾಕಿದ್ದಾರೆ. ಇದರಿಂದ ಭೀತಿಗೊಂಡಿರುವ ನವಜೋಡಿ ಗ್ರಾಮವನ್ನೇ ತೊರೆದು, ತಮಗೆ ರಕ್ಷಣೆ ಹಾಗೂ ನ್ಯಾಯ ಕೋರಿ ಕೊಪ್ಪಳ ಜಿಲ್ಲ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಆಗಮಿಸಿದ್ದಾರೆ. ಪ್ರೀತಿ ಹಾಗೂ ಮದುವೆಯ ವಿಚಾರದಲ್ಲಿ ನಡೆದಿರುವ ಈ ಎರಡು ಘಟನೆಗಳು ಸದ್ಯ ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




