
ತುಮಕೂರು, ಆಗಸ್ಟ್ 26: ಅದೊಂದು ವಿದೇಶಿ ಸಂಘಟನೆ. ಇಂಗ್ಲೆಂಡಿನಲ್ಲಿ ಸೃಷ್ಟಿಯಾದ ಸಂಘಟನೆಯ ಮೂಲ ಪಾಕಿಸ್ತಾನ (Pakistan). ಆದರೇ ಈ ಸಂಘಟನೆ ವಿರುದ್ಧ ಇತ್ತೀಚಿಗೆ ಒಂದಷ್ಟು ಆರೋಪಗಳು ಕೇಳಿ ಬಂದಿದ್ದು, ಮುಸ್ಲಿಂ ಒಳಪಂಗಡಗಳಲ್ಲೇ ಪರವಿರೋಧ ಹೆಚ್ಚಾಗಿದೆ. ತುಮಕೂರಿನಲ್ಲಿ (Tumakuru) ಈ ಸಂಘಟನೆಯ ಬೆಂಬಲಿಸಿದ ಮಹಿಳೆ ಹಾಗೂ ಕುಟುಂಬದ ವಿರುದ್ಧ ಜಿಲ್ಲೆಯ ಮುಸ್ಲಿಂ ಬಾಂಧವರು ವಿರೋಧಿಸಿದ್ದು, ಆಕೆಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದೂರು ನೀಡಿದ್ದಾರೆ.
ನಿನ್ನೆ (ಸೋಮವಾರ) ತುಮಕೂರು ಎಸ್ಪಿ ಕಚೇರಿಯಲ್ಲಿ ನೂರಾರು ಮುಸ್ಲಿಂ ಬಾಂಧವರು ಒಂದೆಡೆ ಜಮಾಯಿಸಿದ್ದರು. ಎಲ್ಲರ ಬಳಿಯೂ ದೂರಿನ ಸರಮಾಲೆ ಇತ್ತು. ಆದರೆ ಆ ದೂರೆಲ್ಲವೂ ಒಂದೇ ಆಗಿತ್ತು. ತುಮಕೂರಿನ ಉಪ್ಪಾರಹಳ್ಳಿಯ ಅದೊಂದು ಮನೆಯಲ್ಲಿದ್ದ ಮಹಿಳೆಯ ವಿರುದ್ಧ ಗಂಭೀರ ಆರೋಪವಾಗಿತ್ತು.
ಪಾಕಿಸ್ತಾನ ಮೂಲದ ಗೌಹರ್ ಶಾಹಿ ಎಂಬಾತನ ಪ್ರಚಾರದಿಂದ ಪ್ರಭಾವಿತಗೊಂಡು ಹಲವು ವರ್ಷಗಳ ಹಿಂದೆ ಇಂಗ್ಲೆಡ್ನಲ್ಲಿ ಸೃಷ್ಟಿಯಾದ ಎಂಎಫ್ಐ (ಮೆಹದಿ ಫೌಂಡೇಷನ್ ಇಂಟರ್ ನ್ಯಾಷನಲ್) ಸಂಘಟನೆಯ ಸದಸ್ಯೆಯೋರ್ವಳು ತುಮಕೂರಿನಲ್ಲಿ ವಾಸವಿದ್ದು, ಜೊತೆಗೆ ಆಕೆ ದೇಶ ವಿರೋಧಿ ಚಟುವಟಿಕೆಗೆ ಸ್ಥಳೀಯ ಮುಸ್ಲಿಂಮರನ್ನು ಮತಾಂತರ ಮಾಡುತಿದ್ದಾಳೆಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ದೇಶದ್ರೋಹ ಚಟುವಟಿಕೆ ಆರೋಪ: ಮುಸ್ಲಿಂ ಮಹಿಳೆ ವಿರುದ್ಧ ಮುಸ್ಲಿಂ ಮುಖಂಡರಿಂದಲೇ ದೂರು
ಉಪ್ಪಾರಹಳ್ಳಿಯಲ್ಲಿ ವಾಸವಾಗಿರುವ ಇಶ್ರತ್ ಎಂಬ ಮಹಿಳೆ ವಿರುದ್ಧ ಅಲ್ಲಿನ ಸ್ಥಳೀಯ ಮುಸ್ಲಿಂ ಬಾಂಧವರಿಂದಲೇ ವಿರೋಧ ವ್ಯಕ್ತವಾಗಿದ್ದು, ಗಂಭೀರ ಆರೋಪಗಳು ಮಾಡುವ ಮುಖಾಂತರ ಆಕೆಗೂ ನಮ್ಮ ಇಸ್ಲಾಂಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ಇದಕ್ಕೆ ಕಾರಣ ಆಕೆ ಎಂಎಫ್ಐ ಸಂಘಟನೆಯ ಸದಸ್ಯೆ ಎಂದು.
ಈ ಸಂಘಟನೆಯು ದೇಶವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದು, ಜನರನ್ನು ತಮ್ಮತ್ತ ಸೆಳೆದು ಚಿತ್ರ ವಿಚಿತ್ರ ಟ್ರೈನಿಂಗ್ ಕೊಡುವ ಮುಖಾಂತರ ದೇಶದ್ರೋಹಿ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಾರಂತೆ. ಇನ್ನು ಇದರ ಬೇಸ್ ಪಾಕಿಸ್ತಾನದಲ್ಲಿದ್ದು, ಕಳೆದ ಕೆಲ ವರ್ಷಗಳಿಂದ ಈ ಸಂಘಟನೆಯಲ್ಲಿದ್ದ ಹಲವರನ್ನು ರಾಜ್ಯ ಹಾಗೂ ದೇಶದಲ್ಲಿ ಬಂಧನ ಮಾಡಲಾಗಿದೆಯಂತೆ.
ಈ ಸಂಘಟನೆ ದೀನ್ ದರಾಂ ಅಂಜುಂ ಎಂದು ಕರೆಯಲ್ಪಡುತಿದ್ದ ಆ ಸಂಘಟನೆ ಬ್ಯಾನ್ ಆದ ಬಳಿಕ ಎಂಎಫ್ಐ ಎಂದು ನಾಮಕರಣ ಮಾಡಿಕೊಂಡಿದ್ದಾರಂತೆ. ಈ ಸಂಘಟನೆ ಬಗ್ಗೆ ಈಗಾಗಲೇ ಪೊಲೀಸರು ತನಿಖೆ ನಡೆಸಿ ಹಲವರ ಬಂಧನ ಮಾಡಿದ್ದು, ಸದ್ಯ ಇದರ ಸದಸ್ಯರು ತುಮಕೂರಿಗೂ ಎಂಟ್ರಿ ಕೊಟ್ಟಿದ್ದಾರೆ. ಆದರೆ ಇವರಿಗೂ ತುಮಕೂರಿನ ಮುಸ್ಲಿಂಮರಿಗೂ ಯಾವುದೇ ಸಂಬಂಧಿವಿಲ್ಲ. ಇವರ ದಾರಿ ಇಸ್ಲಾಂ ತತ್ವಗಳಿಗೆ ವಿರೋಧವಾಗಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ತುಮಕೂರಿನ ಎಲ್ಲಾ ಮುಸ್ಲಿಂ ಬಾಂಧವರ ಸಂಘಗಳ ಒಕ್ಕೂಟವಾದ ಮರ್ಕಜಿ ಮಜ್ಲಿಸೆ ಮುಶಾವರತ್ ತಮಕೂರು ಎಸ್ಪಿಗೆ ದೂರು ನೀಡಿದ್ದಾರೆ.
ಇನ್ನು ತನ್ನ ವಿರುದ್ಧ ಕೇಳಿ ಬಂದ ಆರೋಪದ ಬಗ್ಗೆ ಮಾತನಾಡಿದ ಮಹಿಳೆ ಇಶ್ರತ್, ಅದು ಪಾಕಿಸ್ತಾನಿ ಸಂಘಟನೆಯಲ್ಲ. ಅದರ ಕೇಂದ್ರ ಕಚೇರಿ ಲಂಡನ್ನಲ್ಲಿದೆ. ಇವರು ಆರೋಪ ಮಾಡಿದ ಸಂಘಟನೆಗೂ ಇದಕ್ಕೂ ಸಂಬಂಧವಿಲ್ಲ. ನಾನು ಯೂಟ್ಯೂಬ್ನಲ್ಲಿ ನೋಡಿ ಫಾಲೋ ಮಾಡುವ ಮುಖಾಂತರ ಅವರ ಸಂದೇಶಗಳ ಅನುಸರಿಸುತಿದ್ದೇನೆ ಎಂದರು.
ಇದರ ನಡುವೆ ಕಳೆದ ವಾರ ಅವರ ಮಾತುಗಳಿಂದ ಪ್ರಭಾವಿತಳಾಗಿ ಒಂದು ವಿಡಿಯೋ ಮಾಡಿದ್ದೆ. ತನ್ನ ವಾಟ್ಸ್ ಆ್ಯಪ್ನಲ್ಲಿ ಹಂಚಿಕೊಂಡ ಆ ವಿಡಿಯೋವನ್ನು ಯಾರೋ ಶೇರ್ ಮಾಡಿದ್ದಾರೆ. ಅದು ಇಲ್ಲಿನವರಿಗೆ ಇಷ್ಟ ಆಗಿಲ್ಲ. ಬಳಿಕ ನಮ್ಮ ಮನೆ ಬಳಿ 25 ಜನ ಬಂದು ನಮ್ಮನ್ನು ಜಮಾತ್ನಿಂದ ತೆಗೆದು ಹಾಕಬೇಕು ಎಂದು ಬೆದರಿಕೆ ಹಾಕಿದರು. ಹೀಗಾಗಿ ನಾನು ಆತಂಕಗೊಂಡು ನನ್ನ ರಕ್ಷಣೆಗಾಗಿ ಜಯನಗರ ಠಾಣೆಗೆ ದೂರು ನೀಡಿದ್ದೇನೆ ಹೊರತಾಗಿ ಬೇರೆ ಉದ್ದೇಶವಿಲ್ಲ ಎಂದು ಹೇಳಿದ್ದಾರೆ.
ನಾನು ಇಸ್ಲಾಂ ನಿಯಮ ಮೀರಿಲ್ಲ. ಜೊತೆಗೆ ಯಾರನ್ನು ಧರ್ಮ ಪರಿವರ್ತನೆ ಮಾಡಿಲ್ಲ. ಎಂಎಫ್ಐನ ಜನ ಏನು ಮಾಡುತ್ತಾರೋ ನನಗೆ ಗೊತ್ತಿಲ್ಲ. ಆದರೆ ಅವರ ವಿಡಿಯೋಗಳು ಇಷ್ಟವಾಗಿ ನಾನು ಫಾಲೋ ಮಾಡುತಿದ್ದೇನೆ. ಪಾಕಿಸ್ತಾನಕ್ಕೂ ನನಗೂ ಯಾವುದೇ ಲಿಂಕ್ ಇಲ್ಲಾ ಎಂದಿದ್ದಾರೆ ಇಶ್ರತ್.
ಈ ವಿಚಾರವಾಗಿ ತುಮಕೂರು ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ವೆಂಕಟ್ ಪ್ರತಿಕ್ರಿಯಿಸಿದ್ದು, ಎಂಎಫ್ಐ ಸದಸ್ಯೆ ವಿರುದ್ಧ ಮುಸ್ಲಿಂ ಒಕ್ಕೂಟದಿಂದ ಮನವಿಯೊಂದು ಕೊಟ್ಟಿದ್ದಾರೆ, ಸಂಘಟನೆ ಬಗ್ಗೆ ಪರಿಶೀಲಿಸಲಾಗುವುದು. ಈಗಾಗಲೇ ಐಎಸ್‌ಡಿ, ಗುಪ್ತಚರ ಇಲಾಖೆಗೂ ಮಾಹಿತಿ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಹಾಗೂ ಕೇಂದ್ರ ಗೈಡ್‌ಲೈನ್ಸ್ ಪ್ರಕಾರ ಕಾನೂನಿನಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಆ ಮಹಿಳೆ ತುಮಕೂರಿನವರೇ, ಇಲ್ಲೇ ಹುಟ್ಟಿ ಬೆಳೆದಿದ್ದಾರೆಂಬ ಮಾಹಿತಿ ಇದೆ. ಮಹಿಳೆ ಸಹ ದೂರು ನೀಡಿದ್ದಾರೆ, ಎರಡು ಕೇಸ್‌ಗಳ ಬಗ್ಗೆ ಪರಿಶೀಲಿಸುತ್ತೇವೆ. ಎಂಎಫ್ಐ ಸಂಸ್ಥೆಯಿಂದ ವಿಡಿಯೋಗಳ ಮೂಲಕ ಸೂಫಿ ಪಂಥದ ತತ್ವ ಪ್ರಚಾರ ಮಾಡಿರುವ ಆರೋಪವಿದೆ. ಎಂಎಫ್ಐ ಸಂಸ್ಥೆಯ ಇನ್ಸ್ಟಾಗ್ರಾಮ್‌ನ್ನು ಮಹಿಳೆ ಫಾಲೋ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ತುಮಕೂರಿನ ಮುಸ್ಲಿಂ ಮಹಿಳೆ ವಿರುದ್ಧ ಸಮುದಾಯದವರಿಂದಲೇ ದೇಶದ್ರೋಹದ ದೂರು, ಮಹಿಳೆಯ ಸ್ಪಷ್ಟನೆ
ಒಂದು ಕಡೆ ತುಮಕೂರು ಜಿಲ್ಲಾ ಮುಸ್ಲಿಂ ಒಕ್ಕೂಟ ಮಹಿಳೆ ವಿರುದ್ಧ ದೂರು ನೀಡಿದ್ದರೆ, ಇತ್ತ ನಾನು ಯಾವುದೇ ನಿಯಮ ಉಲ್ಲಂಘಿಸಿಲ್ಲ ಆದರೂ ನನ್ನ ಮೇಲೆ ದ್ವೇಷ ಮಾಡುತ್ತಿರುವುದಕ್ಕೆ ಕಾರಣ ಗೊತ್ತಿಲ್ಲ ಎನ್ನುತಿದ್ದಾರೆ. ಆದರೆ ಆಕೆ ಎಂಎಫ್ಐ ಸದಸ್ಯೆ ಎಂದು ಸದ್ಯ ಎಸ್ಪಿಗೆ ದೂರು ನೀಡಲಾಗಿದ್ದು, ಈ ಪ್ರಕರಣ ಸತ್ಯ ಅಸತ್ಯಗಳೇನು ಅನ್ನೊದು ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.