ಆತ್ಮಹತ್ಯೆಗೂ ಮುನ್ನ ಕುಣಿಕೆ ಜತೆ ಸೆಲ್ಫೀ! ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ 20 ವರ್ಷದ ಅಶ್ವಿನಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಅಶ್ವಿನಿ ಮೊಬೈಲ್‌ನಲ್ಲಿ ಆತ್ಮಹತ್ಯೆಗೆ ಮುನ್ನ ಕುಣಿಕೆಯೊಂದಿಗೆ ಸೆಲ್ಫಿ ತೆಗೆದುಕೊಂಡಿರುವುದು ಪತ್ತೆಯಾಗಿದೆ. ಹೊಟ್ಟೆ ನೋವಿನಿಂದ ಬಳಲಿ ಅಶ್ವಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂದುಕೊಂಡಿದ್ದ ಪೋಷಕರಲ್ಲಿ ಈ ಸೆಲ್ಫಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಚಿಕ್ಕನಾಯಕನಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ತುಮಕೂರು, ಆಗಸ್ಟ್ 28: ತುಮಕೂರು (Tumakuru) ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಸಿದ್ದನಕಟ್ಟೆ ಗ್ರಾಮದ ಅಶ್ವಿನಿ (20) ಸಾವಿನ ಪ್ರಕರಣಕ್ಕೆ ತಿರುವು ಪಡೆದುಕೊಂಡಿದೆ. ಮೃತ ಅಶ್ವಿನಿ ಹೊಟ್ಟೆ ನೋವಿನಿಂದ ಬಳಲಿ ಆತ್ಮಹತ್ಯೆ ಮಾಡಿಕೊಂಡಿದ್ದಲ್ಲ, ಪ್ರಿಯಕರನ ಕಿರುಕುಳ ತಾಳಲಾರದೆ ಶೇಣಿಗೆ ಶರಣಾಗಿದ್ದಾರೆ ಎಂಬ ವಿಚಾರ ಗೊತ್ತಾಗಿದೆ. ಪೋಷಕರು ಅಶ್ವಿನಿ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬಂದು ಮೊಬೈಲ್ ಪರಿಶೀಲಿಸಿದ್ದಾರೆ. ಅದರಲ್ಲಿ ಅಶ್ವಿನಿ ಆತ್ಮಹತ್ಯೆಗೂ ಮುನ್ನ ಕುಣಿಕೆ ಜೊತೆ ಸೆಲ್ಫಿ ತೆಗೆದುಕೊಂಡಿದ್ದ ಫೋಟೋ ಕಂಡಿದೆ.
ಜೊತೆಗೆ, ವಾಟ್ಸಾಪ್ ಚಾಟ್ನಲ್ಲಿ ಅಶ್ವಿನಿ ತನ್ನ ಪ್ರಿಯಕರನೊಂದಿಗೆ ಚಾಟ್ ಮಾಡಿರುವುದು ಕಂಡಿದೆ. ಚಾಟ್ ಮತ್ತು ವಿಡಿಯೋ ಕಾಲ್ ಮುಖಾಂತರ ಅಶ್ವಿನಿಗೆ ಯುವಕ ಕಿರುಕುಳ ನೀಡಿದ್ದಾರೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ.
ಯುವತಿ ಅಶ್ವಿನಿ ತಮ್ಮದೇ ಊರಿನ ಓರ್ವ ಯುವಕನನ್ನು ಪ್ರೀತಿ ಮಾಡುತ್ತಿದ್ದರು. ಆದರೆ, ಯುವಕನಿಗೆ ಮತ್ತೋರ್ವ ಯುವತಿ ಜೊತೆ ಸಂಬಂಧ ಇದೆ ಶಂಕೆ ಅಶ್ವಿನಿಗೆ ವ್ಯಕ್ತವಾಗಿದೆ. ಈ ವಿಚಾರಕ್ಕೆ ಅಶ್ವಿನಿ, ಆಕೆ ಪ್ರಿಯಕರನ ನಡುವೆ ಗಲಾಟೆ ಆಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಇದನ್ನೂ ಓದಿ: ಅತ್ತೆ ಕಾಟಕ್ಕೆ ಬೇಸತ್ತು ತುಂಡು ತುಂಡಾಗಿ ಕತ್ತರಿಸಿದ್ದ ದಂತ ವೈದ್ಯ ಅಳಿಯ
ವಾಟ್ಸಾಪ್ ಮೆಸೇಜ್, ಆಡಿಯೋ ಆಧರಿಸಿ ಅಶ್ವಿನಿ ಪೋಷಕರು ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಜೀವ ಬೆದರಿಕೆ, ಲೈಂಗಿಕ ಕಿರುಕುಳ, ಮಾನಸಿಕ ಹಿಂಸೆ ಹಾಗೂ ದೈಹಿಕ ಹಿಂಸೆ ನೀಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಯುವಕ ವಿರುದ್ಧ ದೂರು ದಾಖಲಿಸಿದ್ದಾರೆ.
ತುಮಕೂರಿನ ಸರ್ಕಾರಿ ಪ್ಯಾರಾಮೆಡಿಕಲ್ ಕಾಲೇಜಿನಲಿ ವಿದ್ಯಾಬ್ಯಾಸ ಮುಗಿಸಿದ್ದ ಅಶ್ವಿನಿ ಆಗಸ್ಟ್ 21ರಂದು ತಮ್ಮದೇ ಮನೆಯಲ್ಲಿ ನೇಣಿಗೆ ಶರಣಾಗಿದ್ದರು. ಹೊಟ್ಟೆ ನೋವಿನಿಂದ ಬಳಲಿ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಷಕರು ಭಾವಿಸಿದ್ದರು. ಆದರೆ ಇದೀಗ, ಅಶ್ವಿನಿ ಮೊಬೈಲ್ ಪರಿಶೀಲಿಸಿದಾಗ ಈ ಸಂಗತಿ ಪೋಷಕರಿಗೆ ಗೊತ್ತಾಗಿದೆ. ಸದ್ಯ ಪ್ರಕರಣದ ತನಿಖೆಯನ್ನು ಚಿಕ್ಕನಾಯಕನಹಳ್ಳಿ ಠಾಣೆ ಪೊಲೀಸರು ನಡೆಸುತ್ತಿದ್ದಾರೆ.



