ತುಮಕೂರು: ಶಿಕ್ಷಣ ಸಚಿವ ಮಧು ಬಂಗಾರಪ್ಪ ಕಾರು ಅಪಘಾತ
Tumkur Car Accident: ಬೆಂಗಳೂರು ಕಡೆಗೆ ತೆರಳುತ್ತಿದ್ದ ಸಚಿವ ಮಧು ಬಂಗಾರಪ್ಪ ಕಾರಿಗೆ ಲಾರಿ ಡಿಕ್ಕಿಯಾಗಿದ್ದು, ಕಾರನ್ನು ಉಜ್ಜಿಕೊಂಡು ಹೋಗಿದೆ. ಅಪಘಾತದಲ್ಲಿ ಕಾರಿನ ಮುಂಭಾಗ ಜಖಂಗೊಂಡಿದೆ.
ತುಮಕೂರು, ಡಿಸೆಂಬರ್ 28: ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಅವರು ಪ್ರಯಾಣಿಸುತ್ತಿದ್ದ ಕಾರು ತುಮಕೂರಿನ ನಂದಿಹಳ್ಳಿ ಬಳಿ (Car Accident) ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಅಪಘಾತಕ್ಕೀಡಾಗಿದೆ. ಸಚಿವರು ಶಿವಮೊಗ್ಗದಿಂದ ಬೆಂಗಳೂರಿಗೆ ಬರುತ್ತಿದ್ದಾಗ ಬುಧವಾರ ತಡರಾತ್ರಿ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಸಚಿವರಿಗೆ ಏನೂ ಸಮಸ್ಯೆಯಾಗಿಲ್ಲ. ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಬೆಂಗಳೂರು ಕಡೆಗೆ ತೆರಳುತ್ತಿದ್ದ ಸಚಿವ ಮಧು ಬಂಗಾರಪ್ಪ ಕಾರಿಗೆ ಲಾರಿ ಡಿಕ್ಕಿಯಾಗಿದ್ದು, ಕಾರನ್ನು ಉಜ್ಜಿಕೊಂಡು ಹೋಗಿದೆ. ಅಪಘಾತದಲ್ಲಿ ಕಾರಿನ ಮುಂಭಾಗ ಜಖಂಗೊಂಡಿದೆ. ಕಾರಿನಲ್ಲಿದ್ದವರಿಗೆ ಯಾವುದೇ ಗಾಯಗಳಾಗಿಲ್ಲ. ಅಪಘಾತದ ಬಳಿಕ ಸಚಿವರು ಬೇರೆ ಕಾರಿನಲ್ಲಿ ಬೆಂಗಳೂರಿಗೆ ತೆರಳಿದ್ದಾರೆ.
ಇದನ್ನೂ ಓದಿ: ಪಿಎ ವಿರುದ್ಧವೇ ಸಚಿವರಿಗೆ ದೂರು ನೀಡಿದ ಮಹಿಳೆ; ಯಾಕೆ ಗೊತ್ತಾ?
ಕೆಲವು ಮೂಲಗಳ ಪ್ರಕಾರ, ಟ್ರಾಫಿಕ್ನಿಂದಾಗಿ ನಿಂತಿದ್ದ ಲಾರಿಗೆ ಸಚಿವರ ಕಾರೇ ಡಿಕ್ಕಿ ಹೊಡೆದೆ ಎನ್ನಲಾಗಿದೆ. ಗುಜರಾತ್ ನಿಂದ ಬೆಂಗಳೂರಿಗೆ ಟೈಲ್ಸ್ ಬಾಕ್ಸ್ ಗಳನ್ನ ತೆಗೆದುಕೊಂಡು ಹೋಗುತ್ತಿದ್ದ ಲಾರಿಗೆ ಅತಿ ವೇಗವಾಗಿ ಬಂದು ಲಾರಿಗೆ ಕಾರು ಡಿಕ್ಕಿ ಹೊಡೆದಿದೆ. ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಕಾರಿನಲ್ಲಿದ್ದ ಸಚಿವ ಮಧುಬಂಗಾರಪ್ಪ ಪ್ರಾಣಪಾಯದಿಂದ ಪಾರಾಗಿದ್ದಾರೆ. KA02GB1179 ನೊಂದಣಿಯ ಸರ್ಕಾರಿ ಕಾರು ಅಪಘಾತಕ್ಕೀಡಾಗಿದೆ. ಸದ್ಯ ಕಾರು ಹಾಗೂ ಲಾರಿ ಚಾಲಕನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನೂ ಆಗಿಲ್ಲ, ಆತಂಕ ಬೇಡ: ಮಧು ಬಂಗಾರಪ್ಪ
ಅಪಘಾತದ ಬಗ್ಗೆ ಸಚಿವರು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದು, ನಾನು, ನನ್ನ ಜೊತೆಗೆ ಇದ್ದವರು ಆರೋಗ್ಯವಾಗಿದ್ದೇವೆ. ಯಾರು ಆತಂಕ ಪಡಬೇಡಿ. ಟ್ರಕ್ ತಾಗಿದ್ದರಿಂದ ಸರ್ಕಾರಿ ವಾಹನಕ್ಕೆ ಸ್ವಲ್ಪ ಡ್ಯಾಮೇಜ್ ಆಗಿದೆ. ಕಾರಿನಲ್ಲಿದ್ದ ಯಾರಿಗೂ ಏನು ಆಗಿಲ್ಲ, ಆತಂಕ ಪಡಬೇಕಾಗಿಲ್ಲ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:15 am, Thu, 28 December 23