‘ತುಮಕೂರು: ಅಪ್ರಾಪ್ತ ಹುಡುಗಿ ಜೊತೆ ಪ್ರೀತಿ; ಆಕೆಯನ್ನ ನೋಡಲು ಹೋದ ಯುವಕ ನಾಪತ್ತೆ
ಆ ಯುವಕ ಗ್ರಾಮದಲ್ಲಿ ಆಟೋ ಓಡಿಸಿಕೊಂಡು ಜೀವನ ಮಾಡುತ್ತಿದ್ದ. ಈ ವೇಳೆ ಅಪ್ರಾಪ್ತ ಹುಡುಗಿ ಮೇಲೆ ಪ್ರೀತಿ ಆಗಿದೆ. ಆಕೆಯನ್ನ ನೋಡಲು ರಾತ್ರಿ ಅವರ ಮನೆಗೆ ಹೋದವನು ನಾಪತ್ತೆಯಾಗಿದ್ದಾನೆ. ಆತನನ್ನೆ ನಂಬಿ ಜೀವನ ಮಾಡ್ತಿದ್ದ ತಾಯಿ ಇದೀಗ ಕಣ್ಣಿರು ಹಾಕುತ್ತಿದ್ದಾಳೆ.
ತುಮಕೂರು: ಜಿಲ್ಲೆಯ ಮಧುಗಿರಿ ತಾಲೂಕಿನ ಕೋಡಗದಾಲ ಗ್ರಾಮದ ನಿವಾಸಿ ನವೀನ್, ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದು, ಗ್ರಾಮದಲ್ಲಿ ಆಟೋ ಓಡಿಸಿಕೊಂಡು ಜೀವನ ಮಾಡುತ್ತಿದ್ದ. ಆತನಿಗೆ ಅಪ್ರಾಪ್ತ ಬಾಲಕಿಯ ಪರಿಚಯವಾಗಿ, ಬಳಿಕ ಅದು ಪ್ರೀತಿಗೆ ತಿರುಗಿದೆ. ಹೀಗೆ ಫೆ.9 ರಂದು ನವೀನ್ ಪ್ರೀತಿಸಿದ ಹುಡುಗಿಯ ಮನೆಗೆ ಹೋಗಿದ್ದಾನೆ. ಬಳಿಕ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ ನವೀನ್ 15 ದಿನ ಕಳೆಯುತ್ತಾ ಬಂದರೂ ಪತ್ತೆಯಾಗಿಲ್ಲ ಎನ್ನಲಾಗಿದೆ. ನಾಪತ್ತೆಯಾದ ಮಗನನ್ನು ನೆನೆದು ತಾಯಿ ಕಣ್ಣಿರು ಹಾಕುತ್ತಿದ್ದಾಳೆ.
ಗ್ರಾಮದ ಚಿನ್ನರಂಗ ಎಂಬುವರ ಅಪ್ರಾಪ್ತ ಮಗಳ ಜೊತೆಗೆ ನವೀನ್ ಲವ್ನಲ್ಲಿ ಇದ್ದ ಎನ್ನಲಾಗಿದೆ. ಅವರು ಆಟೋ ಬಾಡಿಗೆಗೆ ನವೀನ್ನ್ನ ಕರೆದುಕೊಂಡು ಹೋಗುತ್ತಿದ್ದರಂತೆ. ಈ ವೇಳೆ ಪರಿಚಯವಾದ ಅಪ್ರಾಪ್ತ ಬಾಲಕಿ ನವೀನನ ಜೊತೆ ಪ್ರೀತಿ ಅಂತಾ ಸುತ್ತಾಡಿ ಸಿಕ್ಕ ಸಿಕ್ಕ ಕಡೆ ತಿರುಗಾಡಿದ್ದಾಳೆ. ಕಳೆದ ಫೆ.9 ರಂದು ರಾತ್ರಿ 10 ಗಂಟೆಯಿಂದ 12 ಗಂಟೆವರೆಗೂ ನಿರಂತರ ಪೋನ್ನಲ್ಲಿ ಮಾತನಾಡಿರುವ ನವೀನ್. 12 ಗಂಟೆ ಸುಮಾರಿಗೆ ಅಪ್ರಾಪ್ತ ಬಾಲಕಿಯ ಮನೆ ಬಳಿ ಹೋದನಂತೆ. ಅಷ್ಟೇ ಆಮೇಲೆ ಹುಡುಗನ ಸುಳಿವೇ ಇಲ್ಲ.
ಈ ಕುರಿತು ಹುಡುಗಿ ಮನೆಯವರು ಹೊಡೆದು ಕೊಲೆ ಮಾಡಿರಬಹುದು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಒಂದು ವೇಳೆ ಬದುಕಿದ್ದರೆ, ಈವರೆಗೆ ವಾಪಸ್ ಬರಬೇಕಿತ್ತು. ಆದರೆ ಇನ್ನೂ ಬಂದಿಲ್ಲದಿರುವುದರಿಂದ ಅನುಮಾನವಿದೆ ಅಂತಾ ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಇನ್ನು ಈ ಬಗ್ಗೆ ಕೊಡಿಗೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಇಂದು, ನಾಳೆ ಎಂದು ಸಬೂಬು ಹೇಳುತ್ತಾ ಕಾಲ ಕಳೆಯುತ್ತಿದ್ದಾರೆ ಎನ್ನಲಾಗಿದೆ.
ಸದ್ಯ ಮೇಲ್ನೋಟಕ್ಕೆ ಕೊಲೆ ಮಾಡಿ ಎಲ್ಲೋ ಬಿಸಾಡಿರಬಹುದು ಎನ್ನುವ ಆರೋಪ ಕೇಳಿಬಂದಿದ್ದು. ನವೀನ್ ಇದಕ್ಕಿದ್ದಂತೆ ನಾಪತ್ತೆಯಾದ ಕಾರಣ ಗ್ರಾಮದಲ್ಲಿ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಹುಡುಗಿ ಮನೆಯವರು ಹೊಡೆದಾಕಿರಬಹುದು ಅಂತಾ ಗುಸು ಗುಸು ಗ್ರಾಮದಲ್ಲಿ ಕೇಳಿಬರುತ್ತಿವೆ. ಇತ್ತ ಪೊಲೀಸರು ಮಾತ್ರ ತಲೆಕೆಡೆಸಿಕೊಳ್ಳದೇ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಪೊಲೀಸರು ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದರೇ ಮಾತ್ರ ಸತ್ಯ ಹೊರಬರಲಿದೆ.
ವರದಿ: ಮಹೇಶ್ ಟಿವಿ9 ತುಮಕೂರು
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:49 pm, Fri, 24 February 23