ಆಕ್ಸಿಡೆಂಟ್ ಎಂದು ಬಿಂಬಿಸಿದ್ದ ಪ್ರಕರಣಕ್ಕೆ ಟ್ವಿಸ್ಟ್; ಮದ್ಯ ಕುಡಿಸಿ ಸ್ನೇಹಿತನನ್ನೇ ಕೊಲೆಗೈದಿದ್ದ ಆರೋಪಿಗಳು ಅರೆಸ್ಟ್!
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಸುದೀಪ್, ನಾಗೇಶ್, ಶಿವಕುಮಾರ್ ಮತ್ತು ಛಲಪತಿ ಸ್ನೇಹಿತರು. ನಾಲ್ವರು ಒಟ್ಟಿಗೆ ಮೊಲದ ಬೇಟೆಗೆ ಹೊಗುತ್ತಿದ್ದರು.
ತುಮಕೂರು: ಅಪಘಾತವೆಂದು (Accident) ಬಿಂಬಿಸಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಮದ್ಯಪಾನ (Alcohol) ಕುಡಿಸಿ ತನ್ನ ಆಪ್ತ ಗೆಳೆಯನನ್ನೇ ಕೊಲೆ ಮಾಡಿದ್ದ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಸ್ನೇಹಿತರ ನಡುವೆ ಮೊಲದ ವಿಚಾರಕ್ಕೆ ಗಲಾಟೆ ನಡೆದಿತ್ತು. ಇದೇ ದ್ವೇಷಕ್ಕೆ ಆರೋಪಿ ಸ್ನೇಹಿತನ ಕೊಲೆಗೆ ಸಂಚು ರೂಪಿಸಿದ್ದ. ಅದರಂತೆ ಮೇ 25ರಂದು ಮದ್ಯಪಾನ ಕುಡಿಸಿ ಕೊಲೆ ಮಾಡಿದ್ದಾರೆ. ಆ ಬಳಿಕ ಮೃತದೇಹವನ್ನ ರಸ್ತೆ ಬಳಿ ಎಸೆದು, ಪಕ್ಕದಲ್ಲಿ ಬೈಕ್ ಬೀಳಿಸಿ ಆಕ್ಸಿಡೆಂಟ್ ಎಂದು ಬಿಂಬಿಸಿದ್ದರು. ಸದ್ಯ ಆರೋಪಿಗಳಾದ ಛಲಪತಿ, ನಾಗೇಶ್, ಶಿವಕುಮಾರ್ ಬಂಧನಕ್ಕೊಳಗಾಗಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಸುದೀಪ್, ನಾಗೇಶ್, ಶಿವಕುಮಾರ್ ಮತ್ತು ಛಲಪತಿ ಸ್ನೇಹಿತರು. ನಾಲ್ವರು ಒಟ್ಟಿಗೆ ಮೊಲದ ಬೇಟೆಗೆ ಹೊಗುತ್ತಿದ್ದರು. ಛಲಪತಿ ಹಾಗೂ ಸುದೀಪ್ ಕಳೆದ ಮೂರು ತಿಂಗಳ ಹಿಂದೆ ಮೊಲದ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದರು. ಗಲಾಟೆ ವೇಳೆ ಸುದೀಪ್, ಛಲಪತಿ ಮೇಲೆ ಹಲ್ಲೆ ಮಾಡಿದ್ದ. ಈ ದ್ವೇಷಕ್ಕೆ ಸುದೀಪ್ ಕೊಲೆಗೆ ಛಲಪತಿ ಸ್ಕೇಚ್ ಹಾಕಿದ್ದ.
ಇದನ್ನೂ ಓದಿ: Gym Ravi: 50 ದಿನ ಪೂರೈಸಿದ ‘ಪುರುಷೋತ್ತಮ’ ಸಿನಿಮಾ; ಹೀರೋ ಆಗಿ ಗೆಲುವು ಕಂಡ ಜಿಮ್ ರವಿ
ಕಳೆದ ತಿಂಗಳು 25 ರಂದು ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕೊಡಿಗೆನಹಳ್ಳಿಯ ಯಾಕ್ರನಹಳ್ಳಿ ಬಳಿ ನಾಲ್ವರು ಮೊಲದ ಬೇಟೆಗೆ ಬಂದಿದ್ದರು. ಶಿವಕುಮಾರ್ ಹಾಗೂ ನಾಗೇಶ್ ನಾಡ ಬಂದೂಕು ಹಿಡಿದು ಮೊಲ ಬೇಟೆಯಾಡಲು ಹೋಗಿದ್ದಾರೆ. ಆದರೆ ಸುದೀಪ್ ಹಾಗೂ ಛಲಪತಿ ಇಬ್ಬರು ಮದ್ಯ ಸೇವಿಸಿ, ಎಣ್ಣೆ ನಶೆಯಲ್ಲಿ ಗಲಾಟೆ ವಿಚಾರವನ್ನ ಎತ್ತಿಕೊಂಡಿದ್ದರು. ಈ ವೇಳೆ ಆರೋಪಿ ಛಲಪತಿ, ಸುದೀಪ್ ತಲೆಗೆ ಮೂರ್ನಾಲ್ಕು ಬಾರಿ ನಾಡ ಬಂದೂಕಿನಿಂದ ಹೊಡೆದು ಕೊಲೆ ಮಾಡಿದ್ದಾನೆ.
ಬಳಿಕ ಛಲಪತಿ, ನಾಗೇಶ್, ಶಿವಕುಮಾರ್ ಮೂವರು ಸೇರಿ ಸುದೀಪ್ ಮೃತದೇಹವನ್ನ ರಸ್ತೆ ಬಳಿ ಹಾಕಿದ್ದಾರೆ. ಪಕ್ಕದಲ್ಲಿ ಬೈಕ್ ಬೀಳಿಸಿ ಆಕ್ಸಿಡೆಂಟ್ ಎಂದು ಬಿಂಬಿಸಿದ್ದರು. ಬಳಿಕ ಮೂವರು ಒಂದೇ ಬೈಕ್ನಲ್ಲಿ ಎಸ್ಕೇಪ್ ಆಗಿದ್ದರು. ರಸ್ತೆಯಲ್ಲಿ ಮೃತದೇಹ ನೋಡಿದ ಸ್ಥಳೀಯರೊಬ್ಬರು ಕೊಡಿಗೆನಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪಿಎಂ ರಿಪೋರ್ಟ್ನಲ್ಲಿ ಕೊಲೆ ಪ್ರಕರಣ ಬಯಲಾಗಿದೆ.
ಇದನ್ನೂ ಓದಿ: Char Dham Yatra 2022: ಚಾರ್ಧಾಮ್ ಯಾತ್ರೆ ವೇಳೆ ಈ ಬಾರಿ 201 ಭಕ್ತರು ಸಾವು
ಮೃತದೇಹವನ್ನ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಪೋಸ್ಟ್ ಮಾಟಮ್ ನಡೆಸಿದ್ದಾರೆ. ಘಟನೆ ಕೊಡಿಗೆನಹಳ್ಳಿ ಸಂಬಂಧ ಪೊಲೀಸರು ಆಕ್ಸಿಡೆಂಟ್ ಎಂದು ಪ್ರಕರಣ ದಾಖಲಿಸಿಕೊಂಡು, ಮಧುಗಿರಿ ಸಿಪಿಐ ಸರ್ದಾರ್ ನೇತೃತ್ವದಲ್ಲಿ ತನಿಖೆ ಕೈಗೊಂಡಿದ್ದರು. ಈ ವೇಳೆ ಆರೋಪಿಗಳನ್ನ ಕರೆದು ವಿಚಾರಣೆ ನಡೆಸಿದಾಗ ಮೊಲದ ಬೇಟೆ ವೇಳೆ ರಸ್ತೆಯಲ್ಲಿ ಯಾವುದೋ ವಾಹನ ಡಿಕ್ಕಿ ಹೊಡೆದು ಸುದೀಪ್ ಸಾವನ್ನಪ್ಪಿದ್ದಾಗಿ ಹೇಳಿಕೆ ನೀಡಿದ್ದರು.
ಇದಾದ ಕೆಲ ದಿನಗಳ ಬಳಿಕ ಪಿಎಂ ರಿಪೋರ್ಟ್ ಪೊಲೀಸರ ಕೈಗೆ ಸಿಕ್ಕಿದೆ. ಇದು ಆಕ್ಸಿಡೆಂಟ್ ಅಲ್ಲ ಕೊಲೆ ಅನ್ನೋದು ಪಕ್ಕಾ ಆಗಿದೆ. ಈ ವೇಳೆ ಆರೋಪಿಗಳನ್ನ ಮತ್ತೆ ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.