
ತುಮಕೂರು, ಜುಲೈ 04: ರಾಜ್ಯಾದ್ಯಂತ ಎಸ್‌ಐಆರ್ ಪ್ರಕ್ರಿಯೆ ಚುರುಕು ಪಡೆದುಕೊಂಡಿದೆ. ಕೆಲವೆಡೆ ಎಸ್‌ಐಆರ್ ನಡೆಸುವ ಬಿಎಲ್ಒಗಳು ನಿಯಮಗಳನ್ನ ಗಾಳಿಗೆ ತೂರಿರುವುದು, ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಈ ಮಧ್ಯೆ SIR ಕಾರ್ಯಕ್ಕಾಗಿ ತೆರಳುತ್ತಿದ್ದ ಇಬ್ಬರು ಸಿಬ್ಬಂದಿ ಅಪಘಾತದಲ್ಲಿ (Accident) ಗಂಭೀರ ಗಾಯಗೊಂಡಿರುವಂತಹ ಘಟನೆ ತುಮಕೂರಿನಲ್ಲಿ ನಡೆದಿದೆ. ಡಿಸಿ ಒತ್ತಡ ಹಾಕಿದ್ದಕ್ಕೆ, ಬೇಗನೆ ತೆರಳುತ್ತಿದ್ದಾಗ ಹೀಗಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
SIR ಕರ್ತವ್ಯಕ್ಕೆ ತೆರಳುತ್ತಿದ್ದ ವಿಎಒ ಭುವನಾ ಅವರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ತುಮಕೂರು ತಾಲೂಕಿನ ಗೂಳೂರು ಗ್ರಾಮದ ಬಳಿ ಅಪಘಾತ ಸಂಭವಿಸಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಸದ್ಯ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಲ್ಮೆಟ್ ಧರಿಸಿದ್ದರೂ ತಲೆಗೆ ಗಂಭೀರ ಗಾಯವಾಗಿದ್ದು, ಭುವನಾ ಪ್ರಜ್ಞಾಶೂನ್ಯರಾಗಿದ್ದಾರೆ.
ಗಾಯಾಳು ಭುವನಾ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿ ಶುಭಕಲ್ಯಾಣ್, 2016ರಿಂದ ಭುವನಾ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ SIR ಕರ್ತವ್ಯಕ್ಕೆ ತೆರಳುತ್ತಿದ್ದಾಗ ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದಿದ್ದು, ಭುವನಾಗೆ ಅಪಘಾತದಲ್ಲಿ ಗಾಯವಾಗಿದೆ. ಘಟನೆಯಿಂದ ವೈಯಕ್ತಿಕ ಹಾಗೂ ಇಲಾಖೆ ಸಿಬ್ಬಂದಿಗೆ ನೋವಾಗಿದೆ ಎಂದರು.
ಇದನ್ನೂ ಓದಿ: ನೆಲಮಂಗಲದಲ್ಲಿ ಬಿಎಲ್‌ಒಗಳ ಕಳ್ಳಾಟ ಬಯಲು: ಮನೆ ಮನೆಗೆ ಹೋಗುವ ಬದಲು ಮಸೀದಿಯಲ್ಲೇ ಕುಳಿತು ಎಸ್‌ಐಆರ್ ಪತ್ರ ವಿತರಣೆ!
ಟಿ.ಬೇಗೂರಿನಿಂದ ಬಸ್ನಲ್ಲಿ ಬಂದಿದ್ದ ಭುವನಾ, ಬಸ್ ನಿಲ್ದಾಣದಿಂದ ದ್ವಿಚಕ್ರ ವಾಹನದಲ್ಲಿ ತೆರಳುವಾಗ ಅಪಘಾತವಾಗಿದೆ. ಭುವನಾ ಹೆಲ್ಮೆಟ್ ಧರಿಸಿದ್ದರೂ ತಲೆಗೆ ಗಂಭೀರ ಗಾಯವಾಗಿದ್ದು, ಪ್ರಜ್ಞಾಶೂನ್ಯರಾಗಿದ್ದಾರೆ, ಆದರೆ ಹಾರ್ಟ್ಬೀಟ್ ಇದೆ. ಭುವನಾ ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಅಪಘಾತದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಗೆ ಯಾರನ್ನು ಹೊಣೆ ಮಾಡಬೇಕೆಂದು ನನಗೆ ಗೊತ್ತಾಗುತ್ತಿಲ್ಲ. ಹುಟ್ಟು ಸಾವು ನಮ್ಮ ಕೈಯಲ್ಲಿಲ್ಲ, ಭುವನಾ ಅಪಘಾತ ಆಕಸ್ಮಿಕ ಘಟನೆ. ನಮಗೂ ಕುಟುಂಬವಿದೆ, ಭುವನಾ ಕುಟುಂಬ ಸದಸ್ಯರ ನೋವು ನಮಗೂ ತಿಳಿಯುತ್ತದೆ ಎಂದು ಡಿಸಿ ಶುಭಕಲ್ಯಾಣ್ ಹೇಳಿದ್ದಾರೆ.
ಇನ್ನು ಇದೇ ರೀತಿಯಾಗಿ SIR ಕರ್ತವ್ಯಕ್ಕೆ ತೆರಳುತ್ತಿದ್ದ ಮತ್ತೊಬ್ಬ ಸಿಬ್ಬಂದಿಗೂ ಅಪಘಾತವಾಗಿದ್ದು, ಗಾಯಗೊಂಡಿದ್ದಾರೆ. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹುಣಸೆಘಟ್ಟ ವೃತ್ತದ ಬಳಿ ಬೆಳಗ್ಗೆ 7.30ಕ್ಕೆ ದ್ವಿಚಕ್ರ ವಾಹನದಿಂದ ಬಿದ್ದು ವಿಎಇ ಸಹನಾ ಗಾಯಗೊಂಡಿದ್ದಾರೆ. ವಿಡಿಯೋ ಕಾಲ್ ಮೂಲಕ SIR ಪ್ರಕ್ರಿಯೆ ತೋರಿಸುವಂತೆ ತಹಶೀಲ್ದಾರ್ ಲೋಕೇಶ್ ಸೂಚನೆಯಂತೆ ಸ್ಥಳ ತೋರಿಸಲು ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಸದ್ಯ ಗಾಯಾಳು ಸಹನಾ ತಿಪಟೂರಿನ ವೈಭವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಈ ಘಟನೆ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದು, ತುಮಕೂರು ಡಿಸಿ ಕಚೇರಿ ಎದುರು ವಿಎಒಗಳು ಧರಣಿ ಮಾಡುತ್ತಿದ್ದಾರೆ. ಈ ವೇಳೆ ಮಾತನಾಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಮ್ಮಗಳ ವೈಯಕ್ತಿಕ ಪ್ರತಿಷ್ಠೆಗಾಗಿ ನೌಕರರನ್ನು ಬಲಿಪಶು ಮಾಡುತ್ತೀರಾ? ಜಿಲ್ಲಾಧಿಕಾರಿಗಳಿಗೆ ಕಾರು, ಬಂಗಲೆ ಎಲ್ಲೂ ಇದೆ, ಆದರೆ ನಮ್ಮ ಬಡ ನೌಕರರಿಗೆ ಏನ್ ಸವಲತ್ತು ಇದೆ ಎಂದು ನೇರವಾಗಿ ಪ್ರಶ್ನೆ ಮಾಡಿದ್ದಾರೆ. ಮುಖ್ಯ ಕಾರ್ಯದರ್ಶಿ ಜೊತೆ ಮಾತನಾಡಿ ರಾಜ್ಯಮಟ್ಟದಲ್ಲಿ ಹೋರಾಟ
ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.