
ತುಮಕೂರು: ತಾಂತ್ರಿಕ ಸಮಸ್ಯೆ ಹಿನ್ನೆಲೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ‘108 ಆಂಬುಲೆನ್ಸ್’ ಸೇವೆ ಸ್ಥಗಿತಗೊಂಡಿದೆ. ಸಕಾಲಕ್ಕೆ ಆಂಬುಲೆನ್ಸ್ ಸಿಗದೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಐಡಿಹಳ್ಳಿಯ ಜಯಮ್ಮ(65) ಮೃತಪಟ್ಟಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಜಯಮ್ಮರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹಲವು ಬಾರಿ ಆಂಬುಲೆನ್ಸ್ ಕರೆ ಮಾಡಲಾಗಿದೆ. ಆದ್ರೆ ಆಂಬುಲೆನ್ಸ್ ಬರದ ಕಾರಣ ಜಯಮ್ಮ ಮನೆಯಲ್ಲೇ ಪ್ರಾಣ ಬಿಟ್ಟಿದ್ದಾರೆ.
‘108 ಆಂಬುಲೆನ್ಸ್’ಗೆ ಕರೆ ಮಾಡಿ 1 ಗಂಟೆ ಕಳೆದರೂ ಆಂಬುಲೆನ್ಸ್ ಮನೆ ಬಳಿ ಬಂದಿಲ್ಲ. ಜಯಮ್ಮ ಕುಟುಂಬಸ್ಥರು ಮಧುಗಿರಿ ಟಿಹೆಚ್ಒಗೆ ಕರೆ ಮಾಡಿ ಕಳಲು ತೋಡಿಕೊಂಡಿದ್ದಾರೆ. ಟಿಹೆಚ್ಒಗೆ ಕರೆ ಮಾಡಿದ ನಂತರ ಐಡಿಹಳ್ಳಿಗೆ ಆಂಬುಲೆನ್ಸ್ ಬಂದಿದೆ. ಆದ್ರೆ 108 ಌಂಬುಲೆನ್ಸ್ ಬರುವಷ್ಟರಲ್ಲಿ ಜಯಮ್ಮ ಮೃತಪಟ್ಟಿದ್ದರು. ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಬಂದಿದ್ದರೆ ಪ್ರಾಣ ಉಳಿಯುತ್ತಿತ್ತು ಎಂದು ಜನಪ್ರತಿನಿಧಿಗಳು, ಜಿಲ್ಲಾಡಳಿತಕ್ಕೆ ಜಯಮ್ಮ ಕುಟುಂಬಸ್ಥರು ಹಿಡಿಶಾಪ ಹಾಕಿದ್ದಾರೆ. ಮಿಡಿಗೇಶಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ತುಮಕೂರು ಜಿಲ್ಲಾ ಶುಶ್ರೂಕ ಅಧಿಕಾರಿ ಡಾ.ಶ್ರೀದೇವಿ ಸ್ಪಷ್ಟನೆ
ನಮ್ಮಿಂದ ಯಾವುದೇ ರೀತಿ ವಿಳಂಬ ಆಗಿಲ್ಲ. ನಿನ್ನೆ ರಾತ್ರಿ 8ಗಂಟೆಯಿಂದ ಸಂಬಂಧಿಕರು 108ಗೆ ಕಾಲ್ ಮಾಡಿದ್ದಾರೆ. ಆದರೆ ಕಾಲ್ ಕನೆಕ್ಟ್ ಆಗಿರಲಿಲ್ಲ, ಬಳಿಕ 8 ಗಂಟೆ 7 ನಿಮಿಷಕ್ಕೆ ಟಿಹೆಚ್‌ಒ ರಮೇಶ್ ಬಾಬುಗೆ ಕರೆ ಮಾಡಿದ್ದಾರೆ. ತಕ್ಷಣ ಮಧುಗಿರಿಯಿಂದ ಐ.ಡಿ.ಹಳ್ಳಿಗೆ ಆಂಬುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ. ಮಧುಗಿರಿ ಪಟ್ಟಣದಿಂದ ಐ.ಡಿ.ಹಳ್ಳಿಗೆ 28 ಕಿ.ಮೀ. ದೂರ ಇದೆ. ಅಲ್ಲಿಗೆ ತಲುಪಲು 35 ನಿಮಿಷ ಬೇಕು, ಹೀಗಾಗಿ 8.56ಕ್ಕೆ ತಲುಪಿದೆ. ಅಷ್ಟರಲ್ಲಿ ವೃದ್ಧೆ ಜಯಮ್ಮ ಮೃತಪಟ್ಟಿದ್ದಾರೆ, ನಮ್ಮಿಂದ ವಿಳಂಬವಾಗಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಗ್ರಾಮದಲ್ಲಿ 24 ಗಂಟೆ ಆಸ್ಪತ್ರೆ ತೆರೆದಿರುತ್ತೆ, ಅಲ್ಲಿಗೆ ಹೋಗಬಹುದಿತ್ತು. ಆದರೆ ನಮ್ಮಿಂದ ಯಾವುದೇ ರೀತಿ ವಿಳಂಬವಾಗಿಲ್ಲ. ಸದ್ಯ ತುರುವೇಕೆರೆಯಿಂದ ಐ.ಡಿ.ಹಳ್ಳಿಗೆ ಬೇರೆ ಆಂಬುಲೆನ್ಸ್ ವಾಹನ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: 108 ಡೆಡ್: ಕರ್ನಾಟಕದಲ್ಲಿ 108 ಸೇವೆ ಹಠಾತ್ ಸ್ಥಗಿತ; ತಕ್ಷಣ ಗಮನ ಹರಿಸಲು ಆರೋಗ್ಯ ಸಚಿವರಿಗೆ ಸಿಎಂ ಬೊಮ್ಮಾಯಿ ಸೂಚನೆ
108 ಆಂಬುಲೆನ್ಸ್ ಸರ್ವೀಸ್ ಸಾಫ್ಟ್ವೇರ್ ಸಮಸ್ಯೆ, ಸರಿಯಾಗಲು ಇನ್ನೂ ಎರಡು ದಿನ ಬೇಕು: ಆರೋಗ್ಯ ಸಚಿವ ಸುಧಾಕರ
ಬೆಂಗಳೂರು: ಕರ್ನಾಟಕ ಹಲವು ಜಿಲ್ಲೆಗಳಲ್ಲಿ ‘108 ಆಂಬುಲೆನ್ಸ್’ ಸೇವೆ ಸ್ಥಗಿತಗೊಂಡಿದೆ. ತಾಂತ್ರಿಕ ಕಾರಣಗಳಿಂದಾಗಿ ಸೇವೆಯು ಸ್ಥಗಿತಗೊಂಡಿದೆ. ಕಂಟ್ರೋಲ್ ರೂಮ್ನ ಸಾಫ್ಟ್ವೇರ್ ಹಾಗೂ ಹಾರ್ಡ್ವೇರ್ ಸರಿಪಡಿಸಿದ ನಂತರ ಆಂಬುಲೆನ್ಸ್ ಸೇವೆ ಮರುಸ್ಥಾಪಿಸಲಾಗುವುದು ಎಂದು ಆರೋಗ್ಯ ಸಚಿವ ಡಾ ಕೆ.ಸುಧಾಕರ್ (Health Minister Dr K Sudhakar) ಹೇಳಿದರು. ಏಕಾಏಕಿ ಉದ್ಭವಿಸಿರುವ ಈ ಪರಿಸ್ಥಿತಿಗೆ ತಾಂತ್ರಿಕ ಸಮಸ್ಯೆಯೇ ಮುಖ್ಯ ಕಾರಣ. ಸಾಫ್ಟ್ವೇರ್ನ ಮದರ್ಬೋರ್ಡ್ ಹಾಳಾಗಿದ್ದು, ಅದರ ಬಿಡಿಭಾಗ ಎಲ್ಲಿಯೂ ಸಿಗುತ್ತಿಲ್ಲ ಎಂದು ಅವರು ವಿವರಿಸಿದರು.
ಈ ಸಾಫ್ಟ್ವೇರ್ ರೂಪುಗೊಂಡಿದ್ದು 2008ರಲ್ಲಿ. ಸರ್ವೀಸಸ್ನಲ್ಲಿ ಬಳಸಿದ ಬೋರ್ಡ್ ಸರಿಪಡಿಸಲು ಇನ್ನೂ ಎರಡುಮೂರು ದಿನ ಬೇಕಾಗಬಹುದು. ಅದನ್ನು ತರಿಸಲು ಕ್ರಮವಹಿಸಿದ್ದೇವೆ. ಸದ್ಯಕ್ಕೆ ಕಾಲ್ಸೆಂಟರ್ ಮೂಲಕ ಕರೆಗಳನ್ನು ಸ್ವೀಕರಿಸಲು ಕ್ರಮ ತೆಗೆದುಕೊಂಡಿದ್ದೇವೆ. ರೋಗಿಗಳ ಸಂಬಂಧಿಕರ ಫೋನ್ ಕರೆಗಳನ್ನು ಸ್ವೀಕರಿಸಲಾಗುತ್ತಿದೆ. ಸಪೋರ್ಟ್ಗಾಗಿ ಸದ್ಯ ಎಚ್ಪಿ ಕಂಪನಿಯ ಎಂಜಿನಿಯರ್ಗಳನ್ನು ಭೇಟಿ ಮಾಡಿ, ಈ ಬಗ್ಗೆ ಮಾಹಿತಿ ಪಡೆಯಲಾಗಿದೆ. ಅವರ ನೆರವು ಪಡೆಯಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:30 pm, Sun, 25 September 22