
ಬಳ್ಳಾರಿ, ಜುಲೈ 07: ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರವ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕದ ಜೀವನಾಡಿ ಆಗಿರುವ ಕೊಪ್ಪಳ (Koppal) ತಾಲೂಕಿನ ಮುನಿರಾಬಾದ ಬಳಿಯಿರುವ ತುಂಗಭದ್ರಾ ಜಲಾಶಯ (Tungabhadra Dam) ಭರ್ತಿ ಹಂತಕ್ಕೆ ಬಂದಿದೆ. 105 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ 80 ಟಿಎಂಸಿ ಮಾತ್ರ ನೀರು ಸಂಗ್ರಹಿಸಲಾಗಿದೆ. ಟಿ.ಬಿ ಬೋರ್ಡ್ ಬಾಕಿ 25 ಟಿಎಂಸಿ ನೀರನ್ನು ಏಕೆ ಸಂಗ್ರಹಿಸುತ್ತಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಉತ್ತರ ಇಲ್ಲಿದೆ.
2024 ರ ಆಗಸ್ಟ್ 10 ರಂದು ರಾತ್ರಿ ಡ್ಯಾಂನ 19 ನೇ ಕ್ರೆಸ್ಟ್ ಗೇಟ್ ಕೊಚ್ಚಿಕೊಂಡು ಹೋಗಿತ್ತು. ಹೀಗಾಗಿ, ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಹೋಗಿತ್ತು. ಕ್ರೆಸ್ಟ್ ಗೇಟ್ ಸಂಖ್ಯೆ 19ಕ್ಕೆ ಐದು ಸ್ಟಾಪ್‌ಲಾಗ್‌ಗಳನ್ನು ಯಶಸ್ವಿಯಾಗಿ ಅಳವಡಿಸಿದ್ದರು. ಕ್ರೆಸ್ಟ್ ಗೇಟ್ ದುರಸ್ಥಿ ನಂತರ ರಾಜ್ಯ ಸರ್ಕಾರ ಜಲಾಶಯದ ಎಲ್ಲ ಕ್ರೆಸ್ಟ್ ಗೇಟ್‌ಗಳನ್ನು ಬದಲಾಯಿಸುವುದಾಗಿ ಹೇಳಿತ್ತು. ತಾಂತ್ರಿಕ ತಜ್ಞರ ತಂಡ ಕೂಡ ಡ್ಯಾಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಡ್ಯಾಂ ಕಾರ್ಯದರ್ಶಿ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು 2024ರ ನವೆಂಬರ್ ಮೊದಲ ವಾರದಲ್ಲಿ ಡ್ಯಾಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
70 ವರ್ಷ ಹಳೆಯದಾದ 33 ಕ್ರೆಸ್ಟ್ ಗೇಟ್‌ಗಳು ಇನ್ನೂವರೆಗೂ ಹಾಗೆ ಇವೆ. ಯಾವುದೇ ಜಲಾಯಶದ ಕ್ರೆಸ್ಟ್ ಗೇಟ್ ಮತ್ತು ಚೈನ್ಲಿಂಕ್ ಅನ್ನು 50 ವರ್ಷಕ್ಕೊಮ್ಮೆ ಬದಲಾಯಿಸಬೇಕು ಎಂದು ತಜ್ಞರು ಹೇಳಿದ್ದರು. ಆದರೆ, ಇನ್ನೂವರೆಗೂ ಜಲಾಶಯದ 33 ಕ್ರೆಸ್ಟ್ ಗೇಟ್‌ಗಳನ್ನು ಬದಲಾಯಿಸಿಲ್ಲ. ಮತ್ತು ಕ್ರೆಸ್ಟ್ ಗೇಟ್ ನಂಬರ್ 19ಕ್ಕೆ ಮತ್ತೆ ಸಮಸ್ಯೆಯಾಗಬಾರದೆಂದು ಕೇವಲ ಜಲಾಶಯದಲ್ಲಿ 80 ಟಿಎಂಸಿ ನೀರು ಸಂಗ್ರಹಿಸಲು ನಿರ್ಧರಿಸಲಾಗಿದೆ. ಸದ್ಯ ಜಲಾಶಯದಲ್ಲಿ 77 ಟಿಎಂಸಿ ನೀರು ಸಂಗ್ರಹವಾಗಿದೆ. ಜಾಲಾಶಯದ 19 ಕ್ರೆಸ್ಟ್ ಗೇಟ್ಗಳ ಮೂಲಕ 62,000 ಕ್ಯೂಸೆಕ್ ನೀರು ನದಿಗೆ ಬಿಡಲಾಗುತ್ತಿದೆ.
ಇದನ್ನೂ ಓದಿ: ತುಂಗಭದ್ರಾ ಆಯ್ತು, ಅಪಾಯದಲ್ಲಿದೆ ರಾಜ್ಯದ ಮತ್ತೊಂದು ಪ್ರಮುಖ ಡ್ಯಾಂ
ರಾಜ್ಯ ಸರ್ಕಾರ ಇನ್ನಾದರೂ ತುಂಗಭದ್ರಾ ಜಲಾಶಯದ 33 ಕ್ರೆಸ್ಟ್ ಗೇಟ್‌ಗಳನ್ನು ಬದಲಾಯಿಸಿ, ಹೊಸ ಕ್ರೆಸ್ಟ್ ಗೇಟ್‌ಗಳನ್ನು ಅಳವಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Published On - 11:03 am, Mon, 7 July 25