ನಿರ್ಬಂಧ ಉಲ್ಲಂಘಿಸಿ ತುಂಗಭದ್ರಾ ಅಣೆಕಟ್ಟು ಆವರಣದಲ್ಲಿ ಅಧಿಕಾರಿಯ ಪುತ್ರನ ನಿಶ್ಚಿತಾರ್ಥ
ತುಂಗಭದ್ರಾ ಅಣೆಕಟ್ಟೆಯ ಕಾರ್ಯನಿರ್ವಾಹಕ ಎಂಜಿನಿಯರ್ ಗಿರೀಶ್ ಮೇಟಿ ಅವರು 'ಆಪರೇಷನ್ ಸಿಂಧೂರ್' ಸಂದರ್ಭದಲ್ಲಿ ಜಾರಿಯಲ್ಲಿದ್ದ ನಿರ್ಬಂಧಗಳನ್ನು ಉಲ್ಲಂಘಿಸಿ ಟಿಬಿ ಡ್ಯಾಂ ಆವರಣದಲ್ಲಿ ತಮ್ಮ ಮಗನ ನಿಶ್ಚಿತಾರ್ಥವನ್ನು ಆಯೋಜಿಸಿದ್ದರು. ನೂರಾರು ಅತಿಥಿಗಳು ಭಾಗವಹಿಸಿದ್ದ ಈ ಕಾರ್ಯಕ್ರಮವು ಅಧಿಕಾರ ದುರುಪಯೋಗಕ್ಕೆ ಸಾಕ್ಷಿಯಾಗಿದೆ. ಈ ಘಟನೆಯಿಂದಾಗಿ ಅವರ ವಿರುದ್ಧ ಶಿಕ್ಷಾರ್ಹ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುತ್ತಿದೆ.

ಕೊಪ್ಪಳ, ಮೇ 19: ಆಪರೇಷನ್ ಸಿಂಧೂರ್ (Operation Sindoor) ಕಾರ್ಯಾಚರಣೆ ನಡೆದ ಸಂದರ್ಭದಲ್ಲಿ ಜಾರಿಯಲ್ಲಿದ್ದ ನಿರ್ಬಂಧವನ್ನು ಉಲ್ಲಂಘಿಸಿ ಮತ್ತು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ತುಂಗಭದ್ರಾ ಅಣೆಕಟ್ಟಿನ (Tungabhadra Dam) ಕಾರ್ಯನಿರ್ವಾಹಕ ಎಂಜಿನಿಯರ್ ಒಬ್ಬರು ಮೇ 10 ರಂದು ಜಲಾಶಯದ ಆವರಣದಲ್ಲಿ ತಮ್ಮ ಮಗನ ನಿಶ್ಚಿತಾರ್ಥ ಸಮಾರಂಭವನ್ನು ಆಯೋಜಿಸಿದ್ದರು.
ಮೇ 8 ರಿಂದ ಅಣೆಕಟ್ಟುಗಳು ಮತ್ತು ದೇವಾಲಯಗಳು ಸೇರಿದಂತೆ ಅನೇಕ ಪ್ರವಾಸಿ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಆದರೆ, ಈ ನಿರ್ಬಂಧವನ್ನು ಉಲ್ಲಂಘಿಸಿ ಕಾರ್ಯನಿರ್ವಾಹಕ ಎಂಜಿನಿಯರ್ ಗಿರೀಶ್ ಮೇಟಿ ಅವರು ತಮ್ಮ ಮಗನ ನಿಶ್ಚಿತಾರ್ಥ ಸಮಾರಂಭ ಆಯೋಜಿಸಿದ್ದರು. ಈ ನಿಶ್ಚಿತಾರ್ಥ ಸಮಾರಂಭದಲ್ಲಿ ನೂರಾರು ಜನ ಅತಿಥಿಗಳು ಭಾಗವಹಿಸಿದ್ದರು.
ಇನ್ನು, ಅಣೆಕಟ್ಟಿನ ಹಿಂಭಾಗಕ್ಕೆ ಜನರು ಹೋಗುವುದನ್ನು ತಡೆಯಲು ಚೆಕ್‌ಪೋಸ್ಟ್ ನಿರ್ಮಿಸಲಾಗಿತ್ತು. ಆದರೂ ಕೂಡ ನೂರಾರು ಜನರು ಈ ಚೆಕ್‌ಪೋಸ್ಟ್ ಮೂಲಕವೇ ಹಾದುಹೋದರು ಎಂದು ತಿಳಿದುಬಂದಿದೆ. ನಿಯಮಗಳನ್ನು ಉಲ್ಲಂಘಿಸಿರುವುದರಿಂದ, ಗಿರೀಶ್ ಮೇಟಿ ಅವರ ವಿರುದ್ಧ ಶಿಕ್ಷಾರ್ಹ ಕ್ರಮ ಕೈಗೊಳ್ಳಬೇಕೆಂದು ಹಲವರು ಒತ್ತಾಯಿಸುತ್ತಿದ್ದಾರೆ.
“ಗಿರೀಶ್ ಮೇಟಿಯವರ ಮಗನ ನಿಶ್ಚಿತಾರ್ಥ ಸಮಾರಂಭಕ್ಕೆ ನೂರಾರು ಮಂದಿ ಅತಿಥಿಗಳು ಆಗಮಿಸಿದ್ದನ್ನು ಕಂಡಿದ್ದೇವೆ. ಇದು ಆ ಸಮಯದಲ್ಲಿ ಜಾರಿಯಲ್ಲಿದ್ದ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ” ಎಂದು ಸ್ಥಳೀಯರು ಹೇಳಿದ್ದಾರೆ.
ಈ ಬಗ್ಗೆ ಟಿಬಿ ಡ್ಯಾಮ್ ಅಧಿಕಾರಿಯೊಬ್ಬರು ಮಾತನಾಡಿ “ಅಣೆಕಟ್ಟು ಆವರಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ನಾವು ಅದರ ಬಗ್ಗೆ ವಿವರವಾಗಿ ಪರಿಶೀಲಿಸುತ್ತೇವೆ. ಯಾವುದೇ ಅಧಿಕಾರಿ ತಪ್ಪು ಮಾಡಿದ್ದರೆ, ಅವರು ಕಾನೂನು ಕ್ರಮ ಎದುರಿಸಬೇಕಾಗುತ್ತದೆ” ಎಂದು ಹೇಳಿದರು.
ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿರುವ ತುಂಗಭದ್ರಾ ಜಲಾಶಯ ನಾಲ್ಕು ಜಿಲ್ಲೆಗಳ ಜೀವನಾಡಿಯಾಗಿದೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣ ಕೆಲ ಜಿಲ್ಲೆಗಳ ಜನರು ಈ ಜಲಾಶಯದ ನೀರನ್ನೇ ನಂಬಿಕೊಂಡಿದ್ದಾರೆ. ಕಳೆದ ವರ್ಷ ಆಗಷ್ಟನಲ್ಲಿ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಕಟ್ ಆಗಿ ಜನರಲ್ಲಿ ಆತಂಕ ಮೂಡಿತ್ತು.
ಇದನ್ನೂ ಓದಿ: ತುಂಗಭದ್ರಾ ಡ್ಯಾಂನಲ್ಲಿ ಮತ್ತೊಂದು ಸಮಸ್ಯೆ: ಶೀಘ್ರ ಕ್ರಮಕ್ಕೆ ರೈತರ ಆಗ್ರಹ
ನಂತರ ಇಂಜಿನಿಯರ್ಗಳ ಶ್ರಮದಿಂದ ತಾತ್ಕಾಲಿಕ ಗೆಟ್ ಅಳವಡಿಕೆ ಮಾಡುವ ಮೂಲಕ ನೀರನ್ನು ತಡೆ ಹಿಡಿಯಲಾಗಿತ್ತು. ಆದರೆ, 50 ವರ್ಷಗಳಿಗೆ ಒಮ್ಮೆ ಈ ಗೇಟ್ಗಳನ್ನು ಬದಲಾವಣೆ ಮಾಡಬೇಕು. ಆದರೆ, ಟಿಬಿ ಬೋರ್ಡ್ ಕಳೆದ 70 ವರ್ಷಗಳಿಂದ 33 ಕ್ರಸ್ಟ್ ಗೇಟ್ಗಳನ್ನು ಬದಲಾವಣೆ ಮಾಡಿಲ್ಲ. ಹೀಗಾಗಿ, 2024ರ ಆಗಷ್ಟನಲ್ಲಿ ಕ್ರಸ್ಟ್ ಗೇಟ್ನ ಚೈನ್ ಲಿಂಕ್ ಕಟ್ ಆಗಿ ಅವಘಡ ಸಂಭವಿಸಿತ್ತು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:01 pm, Mon, 19 May 25