ನೀರಿನ ಬಗ್ಗೆ ತುಂಗಭದ್ರಾ ಜಲಾಶಯ ಅಚ್ಚುಕಟ್ಟು ಪ್ರದೇಶದ ರೈತ ಬಾಂಧವರಿಗೆ ಮಹತ್ವದ ಸೂಚನೆ
ತುಂಗಭದ್ರಾ ಜಲಾಶಯ ನಾಲ್ಕು ಜಿಲ್ಲೆಯ ಜನರಿಗೆ ಕುಡಿಯುವ ನೀರು ಮತ್ತು ಕೃಷಿಗೆ ಆಧಾರವಾಗಿದೆ. ಇದೇ ಜಲಾಶಯ ನೀರನ್ನು ನಂಬಿ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಿನ ರೈತರು ಭತ್ತವನ್ನು ಬೆಳೆಯುತ್ತಾರೆ. ಪೆಬ್ರವರಿ ತಿಂಗಳಲ್ಲಿ ಕೂಡಾ ಹಲವಡೆ ಭತ್ತದ ನಾಟಿಯನ್ನು ರೈತರು ಮಾಡ್ತಿದ್ದಾರೆ. ಆದ್ರೆ ಇದೀಗ ನಾಟಿ ಮಾಡ್ತಿರೋ ರೈತರಿಗೆ ಬೋರ್ಡ್ ಬಿಗ್ ಶಾಕ್ ನೀಡಿದೆ.

ಕೊಪ್ಪಳ, (ಫೆಬ್ರವರಿ 05): ಬಳ್ಳಾರಿ, ವಿಜಯನಗರ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯ ರೈತರ ಪಾಲಿಗೆ ತುಂಗಭದ್ರಾ ಜಲಾಶಯ ಜೀವನಾಡಿಯಾಗಿದೆ. ಇದನ್ನೇ ನಂಬಿಕೊಂಡು ಅದೆಷ್ಟೋ ರೈತರು ಕೃಷಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಕೆಲವರು ಭತ್ತ ನಾಟಿ ಮಾಡಿದರೆ ಇನ್ನು ಕೆಲವರು ಕಡಲೆ, ಜೋಳ, ಹತ್ತಿ, ತೊಗರಿ ಸೇರಿದಂತೆ ನಾನಾ ಬೆಳೆಗಳನ್ನು ಬೆಳೆಯುತ್ತಾರೆ.ಇನ್ನು ಒಂದೊಂದು ಬಾರಿ ಎರಡು ಬೆಳೆಗೆ ನೀರು ಒದಗಿಸಿದ್ರೆ, ಇನ್ನೂ ಕೆಲವರು ಬಾರಿ ಒಂದೇ ಬೆಳೆಗೆ ಮಾತ್ರ ನೀರು ಒದಗಿಸಲಾಗುತ್ತೆ. ರೈತರು ಈಗಾಗಲೇ ಸುಗ್ಗಿ ಬೆಳೆಯನ್ನು ತೆಗೆದುಕೊಂಡಿದ್ದು, ಇದೀಗ ಬೇಸಿಗೆ ಬೆಳೆಗೆ ಭತ್ತ ನಾಟಿ ಮಾಡುತ್ತಿದ್ದಾರೆ. ಈಗಾಗಲೇ ಭತ್ತ ನಾಟಿ ಮಾಡಿದ್ದರೆ ಏನು ಸಮಸ್ಯೆ ಇಲ್ಲ. ಆದ್ರೆ, ಈಗ ಪ್ರಸ್ತುತ ಭತ್ತ ನಾಟಿ ಮಾಡುವವರಿಗೆ ನೀರಿನ ಕೊರತೆ ಎದುರಾಗುತ್ತದೆ. ಈ ಹಿನ್ನೆಲೆಯಲ್ಲಿ ರೈತರು ಈಗ ಭತ್ತ ನಾಟಿ ಮಾಡಬಾರದು ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಜಲಾಶಯದಿಂದ ಎರಡನೇ ಬೆಳೆಗೆ ಮಾರ್ಚ್ ಅಂತ್ಯದವರಗೆ ಮಾತ್ರ ನೀರು ಬಿಡುತ್ತೇವೆ. ಹೀಗಾಗಿ ಈಗ ಭತ್ತ ನಾಟಿ ಮಾಡಬೇಡಿ. ಮಾರ್ಚ್ ನಂತರ ರೈತರ ಬೆಳೆಗೆ ನೀರು ಬಿಡುವುದಿಲ್ಲ. ಬೆಳೆ ಒಣಗಿದರೆ ನಾವು ಹೊಣೆಯಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಇದನ್ನೂ ಓದಿ: ಕೊಪ್ಪಳ: ರೈತರಲ್ಲಿ ಆತಂಕ ಮೂಡಿಸಿದ ಏಕಾಏಕಿ ಒಣಗುತ್ತಿರುವ ಭತ್ತದ ಪೈರು, ಕಾರಣವೇನು? ಇಲ್ಲಿದೆ ಓದಿ
ಮಾರ್ಚ್ ಅಂತ್ಯದವರಗೆ ಮಾತ್ರ ನೀರು
ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿಯಿರೋ ತುಂಗಭದ್ರಾ ಜಲಾಶಯ, ಕೊಪ್ಪಳ,ರಾಯಚೂರು, ವಿಜಯನಗರ, ಬಳ್ಳಾರಿ ಜಿಲ್ಲೆಯ ಜನರ ಜೀವನಾಡಿಯಾಗಿದೆ. ನಾಲ್ಕು ಜಿಲ್ಲೆಯ ಅನೇಕ ಗ್ರಾಮ, ನಗರಗಳಿಗೆ ಇದೇ ಜಲಾಶಯದಿಂದ ನೀರನ್ನು ಪೂರೈಕೆ ಮಾಡಲಾಗುತ್ತದೆ. ತುಂಗಭದ್ರಾ ಜಲಾಶಯ ನಿರ್ಮಾಣವಾದ ನಂತರ, ಅಚ್ಚುಕಟ್ಟು ಪ್ರದೇಶದ ರೈತರ ಬದುಕು ಕೂಡಾ ಹಸನಾಗಿದೆ. ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಿನ ರೈತರು, ವರ್ಷದಲ್ಲಿ ಎರಡು ಬೆಳೆಯನ್ನು ಬೆಳೆಯುತ್ತಿದ್ದು, ಜಲಾಶಯ ನೀರಿನ ಸಂಗ್ರಹದ ಮೇಲೆ ಎರಡು ಬೆಳೆಗೆ ನೀರು ಹರಿಸುವ ಸಂಪ್ರದಾಯವನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಈಗಾಗಲೇ ಅನೇಕ ರೈತರು ಎರಡನೇ ಬೆಳೆಯಾಗಿ ಭತ್ತವನ್ನು ನಾಟಿ ಮಾಡಿದ್ದು, ಅವರ ಜಮೀನಿಗೆ ನೀರು ಹರಿಸಲಾಗುತ್ತಿದೆ. ಆದ್ರೆ ಇದೀಗ ಇನ್ನು ಕೆಲ ರೈತರು ಭತ್ತದ ನಾಟಿ ಮಾಡುತ್ತಿದ್ದು, ನೀರಾವರಿ ಇಲಾಖೆಯ ಅಧಿಕಾರಿಗಳಗಳ ತಲೆಬಿಸಿ ಹೆಚ್ಚಿಸಿದೆ.
ಭತ್ತ ನಾಟಿ ಮಾಡುತ್ತಿರುವವರಿಗೆ ಖಡಕ್ ಸೂಚನೆ
ಹೌದು… ಅಚ್ಚುಕಟ್ಟು ಪ್ರದೇಶವಾಗಿರೋ ಕೊಪ್ಪಳ ಜಿಲ್ಲೆಯ ಗಂಗಾವತಿ, ಕಾರಟಗಿ, ರಾಯಚೂರು, ವಿಜನಯಗರ, ಬಳ್ಳಾರಿಯ ಜಿಲ್ಲೆಯ ಹಲವಡೇ ಇಂದಿಗೂ ರೈತರು ಜಲಾಶಯ ನೀರನ್ನು ನಂಬಿ ಭತ್ತದ ನಾಟಿ ಮಾಡುತ್ತಿದ್ದಾರೆ. ಆದ್ರೆ ಜಲಾಶಯ ನೀರನ್ನು ನಂಬಿಕೊಂಡು, ಇನ್ನು ಮುಂದೆ ಭತ್ತ ನಾಟಿ ಮಾಡಿದ್ರೆ, ಅವರಿಗೆ ಜಲಾಶಯದ ನೀರು ಸಿಗದು ಅಂತ ಅಧಿಕಾರಿಗಳು ಖಡಕ್ ವಾರ್ನಿಂಗ್ ನ್ನು ರೈತರಿಗೆ ರವಾನಿಸಿದ್ದಾರೆ. ರೈತರ ಬೆಳೆಗೆ ಮಾರ್ಚ್ ಅಂತ್ಯದವರಗೆ ಮಾತ್ರ ನೀರು ಬಿಡ್ತೇವೆ. ಅನಂತರ ನೀರು ಬಿಡೋದಿಲ್ಲಾ ಅಂತ ಹೇಳ್ತಿದ್ದಾರೆ. ಇದಕ್ಕೆ ಕಾರಣ, ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಜಲಾಶಯದಲ್ಲಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳಬೇಕಾದ ಅನಿವಾರ್ಯತೆ ಇದೆ.
ಕಳೆದ ನವಂಬರ್ ತಿಂಗಳಲ್ಲಿ ನೀರಾವರಿ ಸಲಹಾ ಸಮಿತಿ ಸಭೆಯಾಗಿದ್ದು, ಸಭೆಯ ತೀರ್ಮಾನದಂತೆ ಜನವರಿ 1 ರಿಂದ ಮಾರ್ಚ 31 ರವರಗೆ ಎರಡನೇ ಬೆಳೆಗೆ ನೀರನ್ನು ಹಂಚಿಕೆ ಮಾಡಲಾಗಿದೆ. ಎಡದಂಡೆ ಕಾಲುವೆಗೆ ಪ್ರತಿ ದಿನ 3800 ಕ್ಯೂಸೆಕ್ ನೀರನ್ನು ಇದೀಗ ಪ್ರತಿದಿನ ಹರಿಸಲಾಗುತ್ತಿದೆ. ಎಪ್ರಿಲ್ 1 ರಿಂದ ಕೇವಲ ಕುಡಿಯುವ ನೀರಿಗಾಗಿ ಮಾತ್ರ ಜಲಾಶಯ ನೀರು ಮೀಸಲಾಗಿರುತ್ತದೆ.
ಸದ್ಯ ಜಲಾಶಯದಲ್ಲಿ 53 ಟಿಎಂಸಿ ನೀರು ಸಂಗ್ರಹವಿದ್ದು, ಜಲಾಶಯಕ್ಕೆ ಯಾವುದೇ ಒಳಹರಿವು ಇಲ್ಲ. ಇನ್ನು ಎಲ್ಲಾ ಕಾಲುವೆ, ಆಂಧ್ರದ ಕೋಟಾ ತಗೆದ್ರೆ, ಏಪ್ರಿಲ್ ನಂತರ ಜಲಾಶಯದಲ್ಲಿ ಹೆಚ್ಚುಕಡಿಮೆ ಎಂಟರಿಂದ ಹತ್ತು ಟಿಎಂಸಿ ನೀರು ಉಳಿಯೋ ಸಾಧ್ಯತೆಯಿದ್ದು,ಇದರಲ್ಲಿ ಡೆಡ್ ಸ್ಟೋರೇಜ್ ತಗೆದ್ರೆ ಆರೇಳು ಟಿಎಂಸಿ ನೀರು ಮಾತ್ರ ಉಳಿಯುತ್ತದೆ. ಅದನ್ನು ಕಡ್ಡಾಯವಾಗಿ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಕಾಯ್ದಿರಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ. ಹೀಗಾಗಿ ಎಪ್ರಿಲ್ 1 ರಿಂದ ರೈತರ ಬೆಳೆಗಳಿಗೆ ನೀರು ಬಿಡುವಿದಲ್ಲ. ಇದೀಗ ನಾಟಿ ಮಾಡಿದ್ರೆ, ಎಪ್ರಿಲ್ ಅಂತ್ಯದವರಗೆ ನೀರು ಬೇಕಾಗುತ್ತದೆ. ಅಲ್ಲಿವರಗೆ ನೀರು ಬಿಡಲು ಆಗುವುದಿಲ್ಲ. ಇದನ್ನು ರೈತರು ಅರ್ಥ ಮಾಡಿಕೊಂಡು, ಭತ್ತದ ಬದಲಾಗಿ, ಅಲ್ಪಾವಧಿ ಬೆಳೆಗಳನ್ನು ಬೇಕಾದ್ರೆ ಬೆಳೆಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ರೈತರಿಗೆ ನೀರಾವರಿ ಸಲಹಾ ಸಮಿತಿಯ ಮಾಹಿತಿಯನ್ನು ನೀಡಲಾಗಿದೆ. ಆದರೂ ರೈತರು ನಾಟಿ ಮಾಡಿದ್ರೆ, ಅವರ ಬೆಳೆಗೆ ಬೇಕಾದ ನೀರಿನ ಜವಾಬ್ದಾರಿ ನಮ್ಮದಲ್ಲಾ ಅಂತ ಟಿಬಿ ಡ್ಯಾಂನ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಸ್ಪಷ್ಟ ಸಂದೇಶ ನೀಡಿದ್ದಾರೆ. ಆದ್ರೆ ಅಧಿಕಾರಿಗಳ ಮಾತಿಗೆ ಡೋಂಟ್ ಕೇರ್ ಅಂತಿರೋ ಪೆಬ್ರವರಿ ತಿಂಗಳಲ್ಲಿ ಕೂಡಾ ನಾಟಿ ನಾಟಿ ಮಾಡುತ್ತಿದ್ದಾರೆ.
ಏಪ್ರಿಲ್ ಒಂದರಿಂದ ರೈತರ ಜಮೀನಿಗೆ ತುಂಗಭದ್ರಾ ಜಲಾಶಯ ನೀರು ಸಿಗೋದು ಡೌಟ್ ಆಗಿದೆ. ಹೀಗಾಗಿ ರೈತರು ಭತ್ತದ ನಾಟಿ ಬಿಟ್ಟು ಪರ್ಯಾಯ ಬೆಳೆಯನ್ನು ಬೆಳೆಯೋದು ಸೂಕ್ತವಾಗಿದೆ. ಇಲ್ಲವಾದ್ರೆ ಸಾವಿರಾರು ರೂಪಾಯಿ ಖರ್ಚು ಮಾಡಿ, ಭತ್ತದ ನಾಟಿ ಮಾಡಿದ್ರೆ ಕೊನೆಯ ಸಮಯದಲ್ಲಿ ನೀರಿನ ಕೊರತೆ ಉಂಟಾಗೋ ಸಾಧ್ಯತೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ರೈತರು ಚಿಂತಿಸಿ ಬೆಳೆ ಬೆಳೆಯಬೇಕಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:44 pm, Wed, 5 February 25