ಟಿವಿ9 ಕನ್ನಡ ವಾಹಿನಿಗೆ 14ರ ಸಂಭ್ರಮ; ಮತ್ತಷ್ಟು ಜನಪರ.. ಅದೇ ವಿಶ್ವಾಸಾರ್ಹತೆ
ಕರ್ನಾಟಕದ ಮೊದಲ 24x7 ಸುದ್ದಿ ವಾಹಿನಿ ಟಿವಿ9ಗೆ ಇಂದು 14ನೇ ಹುಟ್ಟು ಹಬ್ಬದ ಸಂಭ್ರಮ. ಪತ್ರಿಕೋದ್ಯಮದ ನೀತಿಗೆ ಬದ್ಧವಾಗಿದ್ದುಕೊಂಡು ಉತ್ತಮ ಸಮಾಜ ಕಟ್ಟುವ ಕೆಲಸದಲ್ಲಿ ನಿರತವಾಗಿರುವ ಸುದ್ದಿವಾಹಿನಿ ಇಂದು ಬರ್ತ್ ಡೇ ಆಚರಿಸಿತು. ಪ್ರತಿ ಬಾರಿಯಂತೆ ರಾಜ್ಯದಾದ್ಯಂತ ಟಿವಿ9ನ ಎಲ್ಲ ಉದ್ಯೋಗಿಗಳು ಕೇಕ್ ಕಟ್ ಮಾಡಿ ಸಂಭ್ರಮಿಸಿದರು. ಬೆಂಗಳೂರು ಕಚೇರಿಯಲ್ಲಿನ ಸಂಭ್ರಮ ಹೀಗಿತ್ತು.
ನಿತ್ಯವೂ ಸುದ್ದಿಯ ಸದ್ದಲ್ಲಿ ಮುಳುಗಿರುತ್ತಿದ್ದ ಟಿವಿ9 ಕಚೇರಿ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿ ಮಿಂದೆದ್ದಿತು. ಬರೋಬ್ಬರಿ 14 ವರ್ಷಗಳ ಸಾರ್ಥಕ ಪಯಣಕ್ಕೆ ಟಿವಿ9 ಬಳಗ ಸಂಭ್ರಮಾಚರಿಸಿತು. ಕಚೇರಿ ಪ್ರವೇಶಿಸುತ್ತಿದ್ದಂತೆ ರಂಗೋಲಿ, ಮಾವಿನ ತಳಿರು-ತೋರಣ ಉದ್ಯೋಗಿಗಳಲ್ಲಿ ಮನಸು, ಕೆಲಸದಲ್ಲಿ ಖುಷಿಯೋ ಖುಷಿ.. ಟಿವಿ9 ಬಳಗದ ಸದಸ್ಯರೆಲ್ಲ ಸೇರಿ ಕೇಕ್ ಕಟ್ ಮಾಡಿ ಖುಷಿ ಹಂಚಿಕೊಂಡಾಗ ಆ ಉತ್ತುಂಗದ ಖುಷಿಗೆ ಮೆರುಗು ಸಿಕ್ಕಿತು.
ನಿರಂತರ ಸವಾಲಿನೊಂದಿಗೆ ಸೆಣಸಾಡುವ ಪತ್ರಕರ್ತರಿಗೆ ಸುದ್ದಿಯೇ ಸಂಭ್ರಮ: ಆರ್. ಶ್ರೀಧರನ್ ಕೇಕ್ ಕಟ್ ಮಾಡಿ ಮಾತನಾಡಿದ ಟಿವಿ 9 ಕನ್ನಡ ಮುಖ್ಯಸ್ಥ, ಆರ್. ಶ್ರೀಧರನ್ ಅವರು ಸುದ್ದಿ ವಾಹಿನಿ ಎಂದರೆ ತಕ್ಷಣ ಕಣ್ ಮುಂದೆ ಬರೋದು ಕ್ಷಣಕ್ಷಣಕ್ಕೂ ತೆರೆಯ ಮೇಲೆ ಬರುವ ಸುದ್ದಿ, ಬ್ರೇಕಿಂಗ್ ನ್ಯೂಸ್‌ಗಳ ಧಾವಂತ, ಪುರುಸೊತ್ತಿಲ್ಲದ ಓಡಾಟ, ಸುತ್ತಾಟ, ಕ್ಷಣಕ್ಷಣಕ್ಕೂ ಹೋರಾಟ. ದಿನಕ್ಕೆ 24 ಗಂಟೆಗಳೂ ಸಾಲಲ್ಲ ಎಂಬಂತೆ ಬಿಡುವಿಲ್ಲದ ಕೆಲಸ.. ಅಬ್ಬಬ್ಬಾ! ನಿರಂತರ ಸವಾಲಿನೊಂದಿಗೆ ಸೆಣಸಾಡುವ ಪತ್ರಕರ್ತರಿಗೆ ಸುದ್ದಿಯೇ ಸಂಭ್ರಮ ಎಂದು ಟಿವಿ9 ಕುಟುಂಬದ ಸದಸ್ಯರ ಸಂಭ್ರಮೋಲ್ಲಾಸವನ್ನು ಇಮ್ಮಡಿಗೊಳಿಸಿದರು.
ಧನಾತ್ಮಕ ಪತ್ರಿಕೋದ್ಯಮದ ಟ್ರೆಂಡ್ ಸೃಷ್ಟಿಸೋಣ
‘ಕನ್ನಡದಲ್ಲಿ ನಾವೇ ನಂಬರ್ 1 ಆಗಿರುವ ಕಾರಣ ನಾವು ಮಾಡುವ ಒಳ್ಳೆಯ ಸುದ್ದಿಗಳು, ಸಾಮಾಜಿಕ ಕಾಳಜಿಯ ಕೆಲಸಗಳು ಟ್ರೆಂಡ್ ಅಗುತ್ತವೆ. ಅದು ನಮ್ಮನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತದೆ. ಹೀಗಾಗಿ, ಧನಾತ್ಮಕ ಪತ್ರಿಕೋದ್ಯಮದ ಮಾರುಕಟ್ಟೆ ಸೃಷ್ಟಿಸುವ ಅವಕಾಶವನ್ನು ನಾವು ಸದುಪಯೋಗಪಡಿಸಿಕೊಳ್ಳಬೇಕಿದೆ ಎಂದು ಆರ್. ಶ್ರೀಧರನ್ ಉದ್ಯೋಗಿಗಳಿಗೆ ಕರೆ ಕೊಟ್ಟರು.
ಈಗಾಗಲೇ ಟಿವಿ9 ಕರ್ನಾಟಕದ ವಿಶ್ವಾಸಾರ್ಹ ನಂಬರ್ 1 ಮಾಧ್ಯಮ ಸಂಸ್ಥೆಯಾಗಿದೆ. ಈ ಸ್ಥಾನದ ಜೊತೆಗೆ ಜನರ ನಂಬಿಕೆಯನ್ನು ಹೆಚ್ಚಿಸಿಕೊಳ್ಳುತ್ತಾ ಸಾಗುತ್ತಿದೆ. ಕೊರೊನಾ ಸೋಂಕಿನಿಂದ ಎದುರಾದ ಸಂಕಷ್ಟಕರ ಪರಿಸ್ಥಿತಿಯಲ್ಲೂ ಎದೆಗುಂದದೇ ಜನಪರವಾಗಿ ಕಾರ್ಯನಿರ್ವಹಿಸುತ್ತಿದೆ. ಅಲ್ಲದೇ, ದೇಶದ ಅತಿ ದೊಡ್ಡ ಮಾಧ್ಯಮ ಸಂಸ್ಥೆಯಾಗಿಯೂ ಬೆಳೆಯುತ್ತಿದೆ. ಕೇವಲ 9ರಿಂದ 5 ಎಂಬಂತೆ ಕೆಲಸ ಮಾಡದೇ, ದಿನದ 24 ಘಂಟೆಯೂ ವೃತ್ತಿಪರ ಪತ್ರಿಕೋದ್ಯಮ ಮಾಡುತ್ತೇವೆ. ಜನಸಾಮಾನ್ಯರು ತಮ್ಮ ಸಂಕಷ್ಟಗಳನ್ನು ಹೊತ್ತು ಪೊಲೀಸ್ ಠಾಣೆಗೆ ತೆರಳುವ ಮುನ್ನ ನಮ್ಮ ವಾಹಿನಿಯನ್ನು ಸಂಪರ್ಕಿಸುತ್ತಾರೆ. ಅಷ್ಟೊಂದು ಭರವಸೆ, ನಂಬಿಕೆ ಮತ್ತು ಪ್ರೀತಿಯನ್ನು ನಮ್ಮ ವಾಹಿನಿ ಗಳಿಸಿದೆ ಎಂಬುದು ಹೆಮ್ಮೆಯ ವಿಷಯ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಜನರ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿಕೊಳ್ಳುವಂತೆ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ. ಜನರ ನೋವು ನಲಿವಿಗೆ ಸದಾಕಾಲ ಧ್ವನಿಯಾಗಿ ಪತ್ರಿಕೋದ್ಯಮದ ನೈಜ ಸತ್ವವನ್ನು ಭವಿಷ್ಯದಲ್ಲೂ ಬಿತ್ತರಿಸುವ ಜವಾಬ್ದಾರಿ ಹೆಚ್ಚಿದೆ ಎಂದು ಅವರು ಸೂಚ್ಯವಾಗಿ ತಿಳಿಹೇಳಿದರು.
ಕನ್ನಡಿಗರ ಮನೆಮಾತಾಗಿರುವ ಟಿವಿ9 ಕನ್ನಡ ಸುದ್ದಿವಾಹಿನಿಗೆ 14 ವರ್ಷಗಳ ಸಾರ್ಥಕತೆ
Published On - 7:34 pm, Wed, 9 December 20