
Breaking News Today Live Updates in Kannada: ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ವಿಚಾರಣೆ ನಡೆಸಿದ ಹಿರಿಯ ಪತ್ರಕರ್ತರೊಬ್ಬರು ನೋಟಿಸ್ ಪಡೆದ ಬೆನ್ನಲ್ಲೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಮತ್ತೊಂದೆಡೆ, ಕರ್ನಾಟಕ ವಿಧಾನಪರಿಷತ್ತಿನ ಬೆಂಗಳೂರು, ಈಶಾನ್ಯ ಶಿಕ್ಷಕರ ಹಾಗೂ ಪಶ್ಚಿಮ, ಆಗ್ನೇಯ ಪದವೀಧರ ಕ್ಷೇತ್ರಗಳ ಒಟ್ಟು 4 ಸ್ಥಾನಗಳಿಗೆ ಇಂದು ಬೆಳಿಗ್ಗೆ 8 ರಿಂದ ಸಂಜೆ 4 ರವರೆಗೆ ಮತದಾನ ನಡೆಯುತ್ತಿದ್ದು, ಕಣದಲ್ಲಿರುವ 43 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.ಇನ್ನು ಬೆಂಗಳೂರಿನ ಕೆ.ಆರ್. ಮಾರ್ಕೆಟ್, ಗಿರಿನಗರ ಸೇರಿದಂತೆ ಹಲವೆಡೆ ಬೆಳ್ಳಂಬೆಳಗ್ಗೆ ಧಾರಾಕಾರ ಮಳೆಯಾಗಿದ್ದು, ಅಕ್ಟೋಬರ್ 24 ರವರೆಗೆ ರಾಜ್ಯಾದ್ಯಂತ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.
ಶಿವಮೊಗ್ಗ ಮುಕ್ತ ವಿಶ್ವವಿದ್ಯಾಲಯದಲ್ಲಿ ಪರೀಕ್ಷಾ ಅಕ್ರಮ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಾಧ್ಯಾಪಕರ ವಿರುದ್ಧ ಕರ್ನಾಟಕ ರಾಜ್ಯ ಮುಕ್ತ ವಿವಿ ಸೂಕ್ತ ಕ್ರಮಕೈಗೊಂಡಿದೆ. KSOU ಪ್ರಾದೇಶಿಕ ಕೇಂದ್ರ ಶಿವಮೊಗ್ಗದ ಹಂಗಾಮಿ ನಿರ್ದೇಶಕ ಸ್ವಾಮಿ ಬಿ.ಎಂ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಲಾಗಿದೆ. ಶಿವಮೊಗ್ಗ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಕುರಿತು ಟಿವಿ9 ವರದಿ ಪ್ರಸಾರ ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ಕರ್ನಾಟಕ ರಾಜ್ಯ ಮುಕ್ತ ವಿವಿಯ ಕುಲಸಚಿವರ ಆಡಳಿತ ವಿಭಾಗದಿಂದ ಈ ಆದೇಶ ಜಾರಿ ಮಾಡಲಾಗಿದೆ.
ಆರೋಗ್ಯ ಸಚಿವ ಯುಟಿ ಖಾದರ್ಗೆ ಹೃದಯಾಘಾತವಾಗಿದೆ ಎಂದು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯನ್ನು ಹರಡಿದ್ದಾರೆ. ಈ ಬಗ್ಗೆ ಇದಕ್ಕೆ ಸ್ವತಃ ಖಾದರ್ ಅವರೇ ಸ್ಪಷ್ಟನೆ ನೀಡಿದ್ದಾರೆ. ನಾನು ಕ್ಷೇಮವಾಗಿದ್ದೇನೆ ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ಸಭೆ ನಡೆಸುತ್ತಿದ್ದೇನೆ ಎಂದು ಟಿವಿ9ಗೆ ಸ್ಪಷ್ಟನೆ ನೀಡಿದ್ದಾರೆ.
ವಿಮಾನ ಹಾರಾಟ ರದ್ದಾಗಿರುವ ಹಿನ್ನೆಲೆಯಲ್ಲಿ ಮೆಕ್ಕಾ, ಮದೀನಾದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಸಿಎಂ ಡಿಕೆ ಶಿವಕುಮಾರ್ ಅವರು ವಿದೇಶಾಂಗ ಸಚಿವ ಎಸ್.ಜೈಶಂಕರ್ಗೆ ಅವರ ಮೊರೆ ಹೋಗಿದ್ದಾರೆ. ಈ ಸಂಬಂಧ ಸಿಎಂ ಡಿಕೆ ಶಿವಕುಮಾರ್, ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ಪತ್ರ ಬರೆದಿದ್ದು, ಮೆಕ್ಕಾ, ಮದೀನಾದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆ ಹಾಗೂ ಸುರಕ್ಷಿತವಾಗಿ ಮರಳಿ ಕರೆತರುವಂತೆ ಮನವಿ ಮಾಡಿದ್ದಾರೆ. ಎರಡ್ಮೂರು ವಾರಗಳಿಂದ ಸೌದಿ ಅರೇಬಿಯಾದ ಮದೀನಾ ಜೆದ್ದಾ ಮತ್ತು ಮಕ್ಕಾದಲ್ಲಿ 4 ಸಾವಿರ ಭಾರತೀಯರು ಸಿಲುಕಿದ್ದು, ಭಾರತಕ್ಕೆ ಬರಲಾಗದೇ ಪರದಾಡುತ್ತಿದ್ದಾರೆ. ಈ ಪೈಕಿ ಕರ್ನಾಟಕದ 600 ಯಾತ್ರಾರ್ಥಿಗಳೂ ಪರದಾಡುತ್ತಿದ್ದು, ಅವರನ್ನು ಸುರಕ್ಷಿತವಾಗಿ ಮರಳಿ ಕರೆತರುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸುಪ್ರೀಂಕೋರ್ಟ್ ಮರು ತನಿಖೆಗೆ ಆದೇಶಿಸಿರುವ ಹಿನ್ನೆಲೆಯಲ್ಲಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯನ್ನು ಎಸ್ಐಟಿ ಚುರುಕುಗೊಳಿಸಿದ್ದು, ಇಂದು ಅಕ್ಟೋಬರ್ 23 ಸೌಜನ್ಯ ತಾಯಿ ಕುಸುಮಾವತಿ ಅವರ ರಕ್ತದ ಮಾದರಿ ಸಂಗ್ರಹಿಸಿದೆ.ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಗಂಡಿ ಕೋರ್ಟ್ ಕೊಠಡಿಯಲ್ಲಿ ಜಡ್ಜ್ ಎದುರು ಸೌಜನ್ಯ ತಾಯಿ ಕುಸುಮಾವತಿ ಅವರ ರಕ್ತದ ಮಾದರಿ ಸಂಗ್ರಹ ಮಾಡಿದ್ದು, ಡಿಎನ್ಎ ಪರೀಕ್ಷೆಗಾಗಿ ಎಫ್ಎಸ್ಎಲ್ಗೆ ಕಳುಹಿಸಲಿದೆ.
2026ರ ಮುಂಗಾರು ಹಂಗಾಮಿನ ರಾಜ್ಯ ಸರ್ಕಾರದ ಪ್ರೀಮಿಯಂ ಪಾಲು ತಕ್ಷಣ ಬಿಡುಗಡೆ ಮಾಡುವಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸಿಎಂ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ಪ್ರಧಾನಮಂತ್ರಿ ಬೆಳೆ ವಿಮೆ ಯೋಜನೆಯಡಿ ಮುಂಗಾರು ಹಂಗಾಮಿನ ರಾಜ್ಯ ಸರ್ಕಾರದ ಪಾಲು ಬಿಡುಗಡೆ ಮಾಡುವಂತೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಇನ್ನೊಂದೆಡೆ ವಿಪಕ್ಷ ನಾಯಕರ ಆರ್ ಅಶೋಕ್ ಸಹ ಸಿಎಂ ಡಿಕೆ ಶಿವಕುಮಾರ್ ಗೆ ಪತ್ರ ಬರೆದಿದ್ದು, ಕಬ್ಬು ಬೆಳೆಗಾರರಿಗೆ ನ್ಯಾಯಯುತ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಮಕ್ಕಳಿದ್ದ ಶಾಲಾ ವಾಹನಕ್ಕೆ ಹಿಂದಿನಿಂದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಶಾಲಾ ವಾಹನ ಉರುಳಿ ಬಿದ್ದಿದೆ. ಮಂಗಳೂರಿನ ಪಡುಪಣಂಬೂರು ಬಳಿ ಈ ಘಟನೆ ನಡೆದಿದ್ದು, ಬಸ್ ನಲ್ಲಿದ್ದ ಹಲವು ಮಕ್ಕಳಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಸುರತ್ಕಲ್ ಸಂಚಾರಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ವಿಧಾನ ಪರಿಷತ್ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ನಡೆದ ಮತದಾನ ಪ್ರಕ್ರಿಯೆ ಅಂತ್ಯಗೊಂಡಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರ, ಈಶಾನ್ಯ ಶಿಕ್ಷಕರ ಕ್ಷೇತ್ರ, ಆಗ್ನೇಯ ಪದವೀಧರ ಕ್ಷೇತ್ರ ಮತ್ತು ಪಶ್ಚಿಮ ಪದವೀಧರ ಕ್ಷೇತ್ರಗಳಿಗೆ ಇಂದು (ಅಕ್ಟೋಬರ್ 23 ಬೆಳಗ್ಗೆ 8 ಗಂಟೆಯಿಂದ ಮತದಾನ ನಡೆದಿತ್ತು. ಇದೀಗ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದೆ.
ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣ ಸಂಬಂಧ ದೂರುದಾರ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದ, ಈ ಬಗ್ಗೆ ಪಾರದರ್ಶಕವಾಗಿ ತನಿಖೆ ಆಗಬೇಕು. ಸತ್ಯ ಹೊರ ಬರಬೇಕೆಂದು ನಾನೇ ಕಂಪ್ಲೆಂಟ್ ಕೊಟ್ಟಿದ್ದೇನೆ. ಹಾಗೆ ಹೆಚ್ಚು ಪ್ರಚಾರ ಆಗಬಾರದು ಎಂದು ಸ್ಟೇ ತೆಗೆದುಕೊಂಡಿದ್ದೇನೆ. ಇದರ ಹಿಂದೆ ಯಾರಿದ್ದಾರೆಂದು ತನಿಖೆಯಲ್ಲಿ ಗೊತ್ತಾಗಲಿದೆ. ಇದು ನಡೆದೇ ಇಲ್ಲ, ಯಾಕೆ ಬೇಸರಗೊಳ್ಳಬೇಕು ಎಂದು ಸ್ಪಷ್ಟಪಡಿಸಿದರು. (ಇನ್ನಷ್ಟು ಓದಿ)
ಅ.29ರಿಂದ ನವೆಂಬರ್ 11ರವರೆಗೆ ನಡೆಯಲಿರುವ ಹಾಸನಾಂಬೆ ದರ್ಶನೋತ್ಸವಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಹಾಸನ ಜಿಲ್ಲಾಡಳಿತ ಆಹ್ವಾನ ನೀಡಿದೆ. ಇಂದು (ಅಕ್ಟೋಬರ್ 23) ಬೆಂಗಳೂರಿನಲ್ಲಿ ಉಸ್ತುವಾರಿ ಸಚಿವ ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್, ಹಾಸನ ಡಿಸಿ ಲತಾಕುಮಾರಿ ಹಾಗೂ ಎಸ್ಪಿ ಶುಭನ್ವಿತಾ ಅವರು ಡಿಕೆ ಶಿವಕುಮಾರ್ ಗೆ ಆಹ್ವಾನ ನೀಡಿದರು.
ಸ್ವೀಡನ್ ರಾಯಭಾರಿ ಪೆಟ್ರಾ ಮೆನಾಂಡರ್ ನೇತೃತ್ವದ ನಿಯೋಗ ಇಂದು (ಅ,23) ವಿಧಾನಸೌಧದಲ್ಲಿ ಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದು, ದ್ವಿಪಕ್ಷೀಯ ಮಾತುಕತೆ ನಡೆಸಿದೆ. ಸಚಿವ ಪ್ರಿಯಾಂಕ್ ಖರ್ಗೆ, ಸ್ವೀಡನ್ ರಾಜಕೀಯ ವ್ಯವಹಾರಗಳ ಕಾರ್ಯದರ್ಶಿ ಎಂಎಸ್ ರೆಬೆಕ್ಕಾ ವಾನ್ ಶ್ರೋಬ್, ಜಾನಿ ಎರಿಕ್ಸನ್ ಸಿಎಂ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್ ಸೆಲ್ವಕುಮಾರ್, ಜಾಗತಿಕ ಹೂಡಿಕೆ ಹಾಗೂ ಸಾಗರೋತ್ತರ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಎಸ್ ಎಸ್ ನಕುಲ್, ಕರ್ನಾಟಕ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕ ಅವಿನಾಶ್ ಮೆನನ್, ಜಾಗತಿಕ ಹೂಡಿಕೆ ಮತ್ತು ಸಾಗರೋತ್ತರ ವ್ಯವಹಾರಗಳ ಇಲಾಖೆಯ ಉಪಕಾರ್ಯದರ್ಶಿ ಮಂಜುನಾಥ ಸ್ವಾಮಿ ಭಾಗಿ.
ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ನಾಗರಬಾವಿಯ ಮತಗಟ್ಟೆ ಬಳಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ. ಈ ಸಂಬಂಧ ಬಿಜೆಪಿ ಶಾಸಕ ಮುನಿರತ್ನ ಅವರು ದೂರವಾಣಿ ಮೂಲಕ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿಗೆ ಘಟನೆಯ ಮಾಹಿತಿ ನೀಡಿದ್ದಾರೆ. ಹಾಗೇ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಸಂಪರ್ಕಕ್ಕೂ ಪ್ರಯತ್ನಿಸಿದ್ದಾರೆ. ಆದ್ರೆ, ಬಿವೈವಿ ಹೊರ ರಾಜ್ಯದಲ್ಲಿರುವ ಕಾರಣ ಸಂಪರ್ಕ ಸಾಧ್ಯವಾಗುತ್ತಿಲ್ಲ. (ಇನ್ನಷ್ಟು ಓದಿ)
ವಿಮಾನಗಳ ಹಾರಾಟ ರದ್ದಾಗಿರುವ ಹಿನ್ನೆಲೆಯಲ್ಲಿ ಕನ್ನಡಿಗರು ಮೆಕ್ಕಾದಲ್ಲಿ ಸಿಲುಕಿಕೊಂಡು ಪರದಾಡುತ್ತಿದ್ದಾರೆ. 4 ಸಾವಿರ ಕನ್ನಡಿಗರು ಮೆಕ್ಕಾದಲ್ಲಿ ಇದ್ದು, ನೆರವಿಗೆ ಧಾವಿಸುವಂತೆ ಚಿಕ್ಕಮಂಗಳೂರಿನ ಅಫ್ಸರ್ ವಿಡಿಯೋ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ವಿಮಾನಗಳಿಲ್ಲದೆ ತವರಿಗೆ ಮರಳಲು ಸಾಧ್ಯವಾಗುತ್ತಿಲ್ಲ. ಸಂಕಷ್ಟದಲ್ಲಿರುವ ಕನ್ನಡಿಗರ ನೆರವಿಗೆ ಧಾವಿಸಬೇಕು. ವಿಶೇಷ ವಿಮಾನಗಳ ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇನ್ನು ಸಿಎಂ ಡಿ.ಕೆ.ಶಿವಕುಮಾರ್ ತಕ್ಷಣ ಮಧ್ಯ ಪ್ರವೇಶ ಮಾಡಬೇಕು. ಹಾಗೇ ವಿದೇಶಾಂಗ ಸಚಿವಾಲಯ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ದಿಢೀರ್ ಭೇಟಿ ನೀಡಿ, ಸುತ್ತೂರು ಶ್ರೀಗಳ ಜೊತೆ ಮಾತುಕತೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಅವರ ಪುತ್ರ, ಎಂಎಲ್ಸಿ ಡಾ. ಯತೀಂದ್ರ ಸಿದ್ದರಾಮಯ್ಯ ಕೂಡ ಮಠಕ್ಕೆ ಆಗಮಿಸಿ ಸ್ವಾಮೀಜಿಗಳ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.
ಬೆಂಗಳೂರು ಮತಗಟ್ಟೆ ಗಲಾಟೆ ಕುರಿತು ಮಾತನಾಡಿದ ಶಾಸಕ ಮುನಿರತ್ನ, ತಮ್ಮ ಮೇಲೆ ಹಲ್ಲೆಗೆ ಸಂಚು ನಡೆದಿತ್ತು ಎಂದಿದ್ದಾರೆ. ಮಾಜಿ ಸಂಸದ ಡಿ.ಕೆ. ಸುರೇಶ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕೊಲೆ ಬೆದರಿಕೆ, ಸುಳ್ಳು ಪ್ರಕರಣಗಳಿಗೆ ಹೆದರಿ ತಾವು ರಾಜೀನಾಮೆ ನೀಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಬ್ಲ್ಯಾಕ್ಮೇಲ್ಗೆಂದೇ ಸ್ಟಿಂಗ್ ಆಪರೇಷನ್, ಕಾಂಗ್ರೆಸ್ನವರೂ ಶಾಮೀಲಾಗಿದ್ದಾರೆ ಎಂದು ಸಚಿವ ಯತೀಂದ್ರ ಗಂಭೀರ ಆರೋಪ ಮಾಡಿದ್ದಾರೆ. ಮತ್ತಷ್ಟು ಓದಿ
ಮಂಡ್ಯದ ಗಣಂಗೂರು ಟೋಲ್ ಬಳಿ ಮೈಸೂರು-ಬೆಂಗಳೂರು ಹೆದ್ದಾರಿಯನ್ನು ಬಂದ್ ಮಾಡಿ ರೈತಸಂಘದಿಂದ ತೀವ್ರ ಪ್ರತಿಭಟನೆ ನಡೆಯುತ್ತಿದೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ರೈತರು ರಸ್ತೆ ತಡೆ ನಡೆಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪ್ರತಿಭಟನಾಕಾರರನ್ನು ಮನವೊಲಿಸಲು ಮಂಡ್ಯ ಎಸ್ಪಿ ಡಾ. ಶೋಭಾರಾಣಿ ಹಾಗೂ ಮೈಸೂರು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಹರಸಾಹಸ ಪಡುತ್ತಿದ್ದು, ರೈತರು ಮಾತ್ರ ಹೆದ್ದಾರಿ ತೆರವುಗೊಳಿಸಲು ಪಟ್ಟು ಹಿಡಿದಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಸಿದ್ದರಾಮಯ್ಯ ಅಂತಹ ವ್ಯಕ್ತಿಯಲ್ಲ, ಅವರ ಹೆಸರು ಕೆಡಿಸಲು ಈ ರೀತಿ ಮಾಡಲಾಗಿದೆ ಎಂದಿದ್ದಾರೆ. ಎಐ ತಂತ್ರಜ್ಞಾನ ಬಳಸಿ ಹೀಗೆ ಮಾಡಿರಬಹುದು ಎಂದಿರುವ ಅವರು, ಪ್ರಕರಣವನ್ನು ಸಿಬಿಐಗೆ ವಹಿಸಿ ತಪ್ಪಿತಸ್ಥರನ್ನು ಜೈಲಿಗಟ್ಟಬೇಕೆಂದು ಆಗ್ರಹಿಸಿದ್ದಾರೆ.
ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ನಾಗರಬಾವಿಯ ಡಾ. ಅಂಬೇಡ್ಕರ್ ಕಾಲೇಜು ಮತಗಟ್ಟೆ ಬಳಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಎನ್ಡಿಎ ಅಭ್ಯರ್ಥಿ ಎ.ಪಿ. ರಂಗನಾಥ್ ಪರ ಬೆಂಬಲ ಸೂಚಿಸಲು ಆಗಮಿಸಿದ್ದ ಬಿಜೆಪಿ ಶಾಸಕ ಮುನಿರತ್ನ ಅವರ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ.
ಶಿವಮೊಗ್ಗದ ಕೆಎಸ್ಒಯು ಪ್ರಾದೇಶಿಕ ಕಚೇರಿಯಲ್ಲಿ ಮಾಸ್ ಕಾಪಿ ಮತ್ತು ಹಣ ವಸೂಲಿ ಆರೋಪವನ್ನು ನಿರ್ದೇಶಕ ಬಿ.ಎಂ. ಸ್ವಾಮಿ ಟಿವಿ9ಗೆ ನೀಡಿದ ಹೇಳಿಕೆಯಲ್ಲಿ ತಳ್ಳಿಹಾಕಿದ್ದಾರೆ. ತಮ್ಮ ಕಚೇರಿಯಲ್ಲಿ ಯಾವುದೇ ನಕಲು ನಡೆಯುತ್ತಿಲ್ಲವೆಂದಿರುವ ಅವರು, ಈ ಕುರಿತು ತಮಗೆ ಮಾಹಿತಿ ಇಲ್ಲ ಎಂದಿದ್ದಾರೆ.
ದೆಹಲಿಯ ಭಾರತ್ ಮಂಟಪಂನಲ್ಲಿ ನಡೆದ ‘ಚಿನ್ಮಯ ಅಮೃತ ಮಹೋತ್ಸವ’ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಚಿನ್ಮಯ ಮಿಷನ್ ಸಂಸ್ಥೆಯ ಸಾಂಸ್ಕೃತಿಕ, ಸಾಮಾಜಿಕ ಸೇವೆಯನ್ನು ಶ್ಲಾಘಿಸಿ, ದೇಶದ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿಹಿಡಿಯುವಲ್ಲಿ ಅದರ ಪಾತ್ರ ಹಿರಿದು ಎಂದರು.
ಉತ್ತರ ಕರ್ನಾಟಕದಲ್ಲಿ ತೀವ್ರ ಬರ ಪರಿಸ್ಥಿತಿಯಿಂದಾಗಿ ಮಾಲ್ದಂಡಿ ಜೋಳದ ಬೆಲೆ ಕ್ವಿಂಟಾಲ್ಗೆ ₹5,500 ರಿಂದ ₹9,200 ರವರೆಗೆ ದ್ವಿಗುಣಗೊಂಡಿದೆ. ಇದರ ಬೆನ್ನಲ್ಲೇ ರಾಜ್ಯಾದ್ಯಂತ ದಿನನಿತ್ಯದ ಆಹಾರವಾದ ಜೋಳದ ರೊಟ್ಟಿ ದರವೂ ಹೆಚ್ಚಾಗುವ ಆತಂಕ ಸಾರ್ವಜನಿಕರಲ್ಲಿ ಎದುರಾಗಿದೆ. ಮತ್ತಷ್ಟು ಓದಿ
ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಅವರ ಪತ್ನಿ ಜ್ಯೋತಿ ಜೋಶಿ ಅವರು ಕೇಶ್ವಾಪುರ ಬಳಿಯ ಫಾತಿಮಾ ಶಾಲೆಯ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.
ಜೆ.ಪಿ. ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸ್ಟಿಂಗ್ ಆಪರೇಷನ್ ಪ್ರಕರಣ ಹಾಗೂ ವಿಕ್ಕಿ ಎಂಬ ವ್ಯಕ್ತಿಯ ಅಸಹಜ ಸಾವಿನ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಆಗ್ರಹಿಸಿರುವ ಅವರು, ಸರ್ಕಾರ ಮತ್ತು ಸಿಎಂ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಅರುಣಾಚಲ ಪ್ರದೇಶ ಗಡಿಯಲ್ಲಿ ಭಾರತ-ಚೀನಾ ಸೈನಿಕರ ನಡುವೆ ಸಂಘರ್ಷ ನಡೆದಿದೆ ಎಂದು ಐಟಿಬಿಪಿ ಮಹಾನಿರ್ದೇಶಕರು ದೃಢಪಡಿಸಿದ್ದಾರೆ. ಚೀನಾ ಸೇನೆ ಎಲ್ಎಸಿ ಬಳಿ ಪ್ರಚೋದನೆ ನೀಡಿದ್ದು, ಐಟಿಬಿಪಿ ಶೌರ್ಯ ಕಮಾಂಡೋಗಳು ತಕ್ಕ ತಿರುಗೇಟು ನೀಡಿವೆ. ಗಡಿಯಲ್ಲಿ ಜಂಟಿ ಎಚ್ಚರಿಕೆ ವಹಿಸಲಾಗಿದೆ. ಮತ್ತಷ್ಟು ಓದಿ
ಶಿವಮೊಗ್ಗದ ಆಲ್ಕೋಳ ವೃತ್ತದ KSOU ಪ್ರಾದೇಶಿಕ ಕಚೇರಿಯಲ್ಲಿ ನಡೆಯುತ್ತಿರುವ ಪರೀಕ್ಷೆಗಳಲ್ಲಿ ಸಾಮೂಹಿಕ ನಕಲು (ಮಾಸ್ ಕಾಪಿ) ನಡೆದಿದೆ. ಪ್ರಾದೇಶಿಕ ನಿರ್ದೇಶಕ ಬಿ.ಎಂ.ಸ್ವಾಮಿ ಕುಮ್ಮಕ್ಕಿನಿಂದ ಹಣ ಪಡೆದು ವಿದ್ಯಾರ್ಥಿಗಳಿಗೆ ಕಾಪಿ ಹೊಡೆಯಲು ಅವಕಾಶ ನೀಡಲಾಗಿದೆ ಎಂದು ಗಂಭೀರ ಆರೋಪ ಕೇಳಿಬಂದಿದೆ. ಮತ್ತಷ್ಟು ಓದಿ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯ ನಾಗರಬಾವಿ ಅಂಬೇಡ್ಕರ್ ಕಾಲೇಜು ಮತಗಟ್ಟೆ ಬಳಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ. ಮಾಜಿ ಕಾರ್ಪೊರೇಟರ್ ಮೋಹನ್ ಕುಮಾರ್ ನಿಂದನೆ ಆರೋಪ ಕೇಳಿಬಂದಿದ್ದು, ಪೊಲೀಸರು ಮಧ್ಯಪ್ರವೇಶಿಸಿ ಬ್ಯಾರಿಕೇಡ್ ಹಾಕಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಕನ್ನಡದ ಹೆಮ್ಮೆಯ ‘ಪ್ರೇಮದ ಊರಲಿ’ ಸಿನಿಮಾ ಬಾಕ್ಸಾಫೀಸ್ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಬಿಡುಗಡೆಯಾಗಿ ನಾಲ್ಕು ವಾರಗಳು ಕಳೆದರೂ ಪ್ರೇಕ್ಷಕರ ಸಾಗರವೇ ಹರಿದುಬರುತ್ತಿದ್ದು, ಜಾಗತಿಕ ಮಟ್ಟದಲ್ಲಿ 111 ಕೋಟಿ ರೂಪಾಯಿಗಳಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದೆ.
ಟಿಬೆಟ್ನಲ್ಲಿ ಸಂಭವಿಸಿದ 7.0 ತೀವ್ರತೆಯ ಪ್ರಬಲ ಭೂಕಂಪಕ್ಕೆ 18 ಜನರು ಮೃತಪಟ್ಟು, 46 ಮಂದಿ ಗಾಯಗೊಂಡಿದ್ದಾರೆ. 300ಕ್ಕೂ ಹೆಚ್ಚು ಮನೆಗಳು ಕುಸಿದಿದ್ದು, ಅವಶೇಷಗಳಡಿ ಸಿಲುಕಿದವರ ರಕ್ಷಣೆಗೆ ಸಿಬ್ಬಂದಿ ನಿಯೋಜಿಸಲಾಗಿದೆ. ಭಾರತದ ಗಡಿ ಭಾಗದಲ್ಲೂ ಇದರ ಕಂಪನದ ಅನುಭವವಾಗಿದೆ. ಮತ್ತಷ್ಟು ಓದಿ
ಜನಪ್ರಿಯ ವೆಬ್ ಸೀರಿಸ್ ‘ಅಯ್ಯನ ಮನೆ 2’ ಇಂದಿನಿಂದ ಜೀ5 ಒಟಿಟಿಯಲ್ಲಿ ಪ್ರಸಾರ ಆರಂಭಿಸಿದೆ. ಖುಷಿ ರವಿ ಅವರ ಅದ್ಭುತ ನಟನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಒಟ್ಟು ಆರು ಎಪಿಸೋಡ್ಗಳನ್ನು ಹೊಂದಿರುವ ಈ ರೋಚಕ ಸೀರಿಸ್ ಪ್ರೇಕ್ಷಕರನ್ನು ಸಂಪೂರ್ಣವಾಗಿ ರಂಜಿಸುತ್ತಿದೆ.
ಸ್ವಂತ ಸೈನಿಕರ ಶವಗಳನ್ನೇ ತಿರಸ್ಕರಿಸಿದ ದೇಶ ಪಾಕಿಸ್ತಾನ ಎಂದು ವಿಶ್ವಸಂಸ್ಥೆಯಲ್ಲಿ ಭಾರತ ಕಟುವಾಗಿ ಟೀಕಿಸಿದೆ. ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಹಾಗೂ ಅಲ್ಪಸಂಖ್ಯಾತರನ್ನು ದಮನ ಮಾಡುವ ಪಾಕಿಸ್ತಾನಕ್ಕೆ ಮಾನವ ಹಕ್ಕುಗಳ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. ಮತ್ತಷ್ಟು ಓದಿ
ಸಿಜೆಪಿ ಸಂಘಟನೆಯನ್ನು ಎಂದಿಗೂ ಬೆಂಬಲಿಸುವುದಿಲ್ಲ, ಅವರ ಅಜೆಂಡಾ ಬೇರೆಯಾಗಿದೆ ಎಂದು ತೀವ್ರ ವಿವಾದದ ಬೆನ್ನಲ್ಲೇ ಬಿಜೆಪಿ ನಾಯಕ ಕೆ. ಅಣ್ಣಾಮಲೈ ಸ್ಪಷ್ಟಪಡಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವ ಹಕ್ಕನ್ನು ಸಮರ್ಥಿಸಿದ ಅವರು, ಆಡಳಿತದ ತಪ್ಪುಗಳನ್ನು ಪ್ರಶ್ನಿಸುವ ಹಕ್ಕು ನಮಗಿದೆ ಎಂದರು. ಮತ್ತಷ್ಟು ಓದಿ
ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಇಂದು ಬೆಳಿಗ್ಗೆಯಿಂದಲೇ ಮತದಾನ ಪ್ರಕ್ರಿಯೆ ಬಿರುಸಿನಿಂದ ಸಾಗಿದೆ. ಮತಗಟ್ಟೆಗಳತ್ತ ಆಗಮಿಸುತ್ತಿರುವ ಶಿಕ್ಷಕರು ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸುತ್ತಿದ್ದು, ದೊಡ್ಡಬಳ್ಳಾಪುರ ತಾಲ್ಲೂಕಿನ ಮತಗಟ್ಟೆಯಲ್ಲಿ ಮತದಾನ ಮಾಡಿ ಹೊರ ಬರುತ್ತಿರುವ ಮತದಾರರು ಸರತಿ ಸಾಲಿನಲ್ಲಿ ನಿಂತಿರುವುದು ಕಂಡುಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 2,863 ಶಿಕ್ಷಕ ಮತದಾರರಿದ್ದು, ಇದರಲ್ಲಿ 1,411 ಪುರುಷರು ಮತ್ತು 1,452 ಮಹಿಳಾ ಮತದಾರರು ಸೇರಿದ್ದಾರೆ. ಸುಗಮ ಮತದಾನಕ್ಕಾಗಿ ಜಿಲ್ಲೆಯಲ್ಲಿ ಒಟ್ಟು 6 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಇಂದು ಬೆಳಿಗ್ಗೆ 8 ಗಂಟೆಯಿಂದ ಮತದಾನ ಆರಂಭವಾಗಿದ್ದು, ರಾಯಚೂರಿನಲ್ಲಿ ಒಟ್ಟು 16 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಸಹಾಯಕ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಪೂವಿತಾ ಎಸ್. ಅವರು ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Published On - 9:32 am, Fri, 23 October 26