
Breaking News Today Live Updates in Kannada: ಇಂದು ದೇಶಾದ್ಯಂತ ಗುರು ಪೂರ್ಣಿಮೆಯ ಪವಿತ್ರ ಆಚರಣೆ ಜೋರಾಗಿದ್ದು, ಜ್ಞಾನದ ಬೆಳಕು ತೋರಿದ ಗುರುಗಳಿಗೆ ಗೌರವ ಸಲ್ಲಿಸಲಾಗುತ್ತಿದೆ. ಇನ್ನೊಂದೆಡೆ, ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಆದೇಶಿಸಿರುವುದನ್ನು ವಿರೋಧಿಸಿ ಮಂಡ್ಯದಲ್ಲಿ ಭೂಮಿ ತಾಯಿ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು ಪಂಜಿನ ಮೆರವಣಿಗೆ ನಡೆಸಿ, ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಈ ನಡುವೆ, ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮುಂಗಾರು ಅಬ್ಬರಿಸುತ್ತಿದ್ದು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

ಅತ್ತ ದೆಹಲಿಯಲ್ಲಿ ಸಂಪುಟ ವಿಸ್ತರಣೆಯ ಕಸರತ್ತು ನಡೆದಿದೆ. ಕೆಸಿ ವೇಣುಗೋಪಾಲ್ ಜೊತೆ ಮಾತುಕತೆ ಆಗಿದ್ದು, ರಾಹುಲ್ ಗಾಂಧಿ ಜೊತೆ ಸಭೆಯೊಂದೇ ಬಾಕಿ ಇದೆ. ಆದ್ರೆ, ಇತ್ತ ಬೆಂಗಳೂರಿನ ಲೋಕಭವನದಲ್ಲಿ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮದ ಸಿದ್ಧತೆಗಳು ಭರದಿಂದ ಸಾಗಿವೆ. ಹೌದು…ರಾಹುಲ್ ಗಾಂಧಿ ಅಂತಿಮ ಪಟ್ಟಿಗೆ ಗ್ರೀನ್ ಸಿಗ್ನಲ್ ನೀಡಿಲ್ಲ. ಆಗಲೇ ಇತ್ತ ಪ್ರಮಾಣವಚನ ಸಮಾರಂಭಕ್ಕೆ ಪೆಂಡಾಲ್, ಚೇರ್ ಹಾಕಲಾಗುತ್ತಿದೆ.
ಯಾದಗಿರಿ ಡಿಹೆಚ್ಒ ಕಚೇರಿ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಆಡಳಿತ & ಕಾರ್ಯಕ್ರಮ ಸಹಾಯಕ ಅಧಿಕಾರಿ ಶ್ರೀಕಾಂತ್, ಡಿಹೆಚ್ಒ ಕಚೇರಿಯಲ್ಲೇ 20 ಸಾವಿರ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದಾರೆ. ಜಿಲ್ಲಾ ಗುಣಮಟ್ಟ ಭರವಸೆ ಘಟಕದ ಅನುದಾನ ಬಿಡುಗಡೆಗೆ 1.3 ಲಕ್ಷ ರೂ. ಅನುದಾನ ಬಿಡುಗಡೆಗೆ 20 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಈ ಬಗ್ಗೆ ಪರಶುರಾಮ ಆಳಂದ ಎಂಬಾತನಿಂದ ಲೋಕಾಯುಕ್ತಗೆ ದೂರು ನೀಡಿದ್ದರು.
ಸಚಿವ ಸ್ಥಾನ ಸಂಬಂಧ ಹೈಕಮಾಂಡ್ ಬುಲಾವ್ ಮೇರೆಗೆ ದೆಹಲಿಗೆ ತೆರಳಿದ್ದ ಜಮಿರ್ ಅಹಮ್ಮದ್ ಖಾನ್ ಇದೀಗ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಇಂದು (ಜುಲೈ 29) ಸಂಜೆ ದೆಹಲಿಯಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಫೋನ್ ನಲ್ಲಿ ಮಾತನಾಡುತ್ತ ಟೆನ್ಷನ್ ನಲ್ಲೇ ಏರ್ಪೋಟ್ ನಿಂದ ತೆರಳಿದ್ದಾರೆ.
ನೇಪಾಳ ಮೂಲದ ವ್ಯೆಕ್ತಿ ಗ್ರಾಮದಲ್ಲಿ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ಹಿನ್ನಲೆ. ವ್ಯೆಕ್ತಿಯನ್ನು ಹಿಡಿದು ಕಂಬಕ್ಕೆ ಕಟ್ಟಿಯಾಗಿ ಥಳಿತ. ಕಳ್ಳನೆಂದು ಭಾವಿಸಿ ಕಂಬಕ್ಕೆ ಕಟ್ಟಿಯಾಗಿ ಥಳಿತ. ಚಿಕ್ಕಬಳ್ಳಾಪುರ ತಾಲೂಕಿನ ಗಿಡ್ನಹಳ್ಳಿ ಗ್ರಾಮದಲ್ಲಿ ಘಟನೆ. ಸ್ಥಳಕ್ಕೆ ಪೊಲೀಸರನ್ನು ಕರೆಸಿ ಪೊಲೀಸರ ವಶಕ್ಕೆ ನೀಡಿದ ಗ್ರಾಮಸ್ಥರು. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರ ವಶಕ್ಕೆ. ಸಂಬಂದಿಕರನ್ನು ಹುಡುಕಿಕೊಂಡು ಗಿಡ್ನಹಳ್ಳಿ ಗ್ರಾಮಕ್ಕೆ ಬಂದಿದ್ದ ನೇಪಾಳ ಮೂಲದ ವ್ಯೆಕ್ತಿ. ಕಳ್ಳನೆಂದು ಭಾವಿಸಿ ಕಟ್ಟಿಯಾಕಿ ಥಳಿತ ಹಿನ್ನಲೆ ದೂರು ದಾಖಲು.
ರಾಜ್ಯದಲ್ಲಿ ಶೇ. 76.99ರಷ್ಟು ಎನ್ಯೂಮರೇಷನ್ ಫಾರ್ಮ್ ಡಿಜಿಟಲೀಕರಣ ಮಾಡಲಾಗಿದೆ..ರಾಜ್ಯದಲ್ಲಿ ವಿತರಿಸಲಾದ ಒಟ್ಟು 5,54,32,314 ಎನ್ಯೂಮರೇಷನ್ ಫಾರ್ಮ್‌ಗಳ ಪೈಕಿ ಈವರೆಗೆ 4,26,75,861 ಫಾರ್ಮ್‌ಗಳು ಡಿಜಿಟಲೀಕರಣಗೊಂಡಿದ್ದು, ಕೇವಲ GBA ವ್ಯಾಪ್ತಿಯಲ್ಲೇ ಒಟ್ಟು 1,03,88,363 ಮತದಾರರಿದ್ದು, 16,57,582 ಫಾರ್ಮ್‌ಗಳು ಡಿಜಿಟಲೀಕರಣಕ್ಕೆ ಬಾಕಿ ಇವೆ; ಇನ್ನು ರಾಜ್ಯಾದ್ಯಂತ ಆಬ್ಸೆಂಟ್, ಶಿಫ್ಟೆಡ್, ಡೆತ್, ಡೂಪ್ಲಿಕೇಟ್ ಹಾಗೂ ಇತರೆ (ASDDO) ವರ್ಗದಡಿ ಒಟ್ಟು 84,31,612 ಮತದಾರರು ಪತ್ತೆಯಾಗಿದ್ದು, ಇದರಲ್ಲಿ 11,61,231 ಮತದಾರರು ನಾಪತ್ತೆ, 51,74,968 ಜನರು ಶಾಶ್ವತ ಸ್ಥಳಾಂತರ, 14,99,799 ಮೃತಪಟ್ಟವರು, 5,62,572 ಜನರು ಎರಡು ಕಡೆ ವೋಟ್ ಹೊಂದಿದವರು ಹಾಗೂ 33,042 ಇತರೆ ಮತದಾರರಿದ್ದಾರೆ. ASDDO ಸಂಖ್ಯೆ ಹೆಚ್ಚಿರುವ ಕಡೆಗಳಲ್ಲಿ ಸಂಬಂಧಪಟ್ಟ ರಾಜಕೀಯ ಪಕ್ಷಗಳಿಗೆ ಮಾಹಿತಿ ನೀಡಲು ಸೂಚಿಸಲಾಗಿದ್ದು, ಮೃತಪಟ್ಟವರಿಗೆ ಡೆತ್ ಸರ್ಟಿಫಿಕೇಟ್ ಅಪ್‌ಲೋಡ್ ಮಾಡಿ, ಸ್ಥಳ ಮಹಜರು ನಡೆಸಲಾಗುವುದು. ಪ್ರಸ್ತುತ ಇನ್ನೂ 43,24,847 ಫಾರ್ಮ್‌ಗಳು ವಾಪಸ್ ಬರಬೇಕಿದ್ದು, ಆಗಸ್ಟ್ 8 ಫಾರ್ಮ್ ನೀಡಲು ಕೊನೆಯ ದಿನವಾಗಿದೆ; ಮತದಾರರು ಇಲ್ಲದಿದ್ದರೂ ಕುಟುಂಬದವರು ಸಹಿ ಮಾಡಬಹುದು ಹಾಗೂ 2002ರ ಮಾಹಿತಿ ಇಲ್ಲದಿದ್ದರೂ ಫಾರ್ಮ್ ಇಟ್ಟುಕೊಳ್ಳದೆ ಕೂಡಲೇ ಬಿಎಲ್‌ಒ (BLO)ಗಳಿಗೆ ಹಿಂದಿರುಗಿಸಿದರೆ ಮಾತ್ರ ಡ್ರಾಫ್ಟ್ ರೋಲ್‌ನಲ್ಲಿ ಹೆಸರು ಉಳಿಯಲಿದೆ. ಇನ್ನು ಬೇರೆಲ್ಲೂ ಹೆಸರು ನೋಂದಾಯಿಸದವರು ಹಾಗೂ 1-10-2026ಕ್ಕೆ 18 ವರ್ಷ ತುಂಬುವವರು ಫಾರ್ಮ್ 6 ಮೂಲಕ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ದೆಹಲಿಯಲ್ಲಿ ಕರ್ನಾಟಕ ಸಚಿವ ಸಂಪುಟ ಕಸರತ್ತು ಜೋರಾಗಿ ನಡೆದಿದೆ. ನಿನ್ನೆ (ಜುಲೈ 28) ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ನಾಯಕರ ಜತೆ ಸಭೆ ನಡೆಸಿದ್ದು, ಸಭೆಯಲ್ಲಿ ನೂತನ ಸಚಿವ ಮಾನದಂಡಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ್ದಾರೆ. ಆದ್ರೆ, ರಾಹುಲ್ ಗಾಂಧಿ ಅಂತಿಮ ಮುದ್ರೆಯೊಂದೇ ಬಾಕಿ ಇದ್ದು, ಇಂದು (ಜುಲೈ 29) ರಾಹುಲ್ ಗಾಂಧಿ ಜೊತೆ ಸಭೆ ಸಹ ಫಿಕ್ಸ್ ಆಗಿತ್ತು. ಆದರೆ, ಇದೀಗ ಸಭೆ ರದ್ದಾಗಿದೆ. ಲೋಕಸಭೆ ಕಾರ್ಯಕಲಾಪ ಹಿನ್ನಲೆ ರಾಹುಲ್ ಜೊತೆಗಿನ ಸಭೆ ರದ್ದು, ಸಭೆಯನ್ನು ನಾಳೆಗೆ (ಜುಲೈ 30) ಮುಂದೂಡಲಾಗಿದೆ. ಆದ್ರೆ, ಸಭೆಯ ಸಮಯ ಮಾತ್ರ ಫಿಕ್ಸ್ ಆಗಿಲ್ಲ.
ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಇಂದು (ಜುಲೈ 29) ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಸಂಜೆ 6 ಗಂಟೆಗೆ ದೆಹಲಿಯಲ್ಲಿ ರಾಹುಲ್ ಗಾಂಧಿ ಸುದ್ದಿಗೋಷ್ಠಿ ಮಾಡಲಿದ್ದು, ಹಲವು ವಿಚಾರಗಳನ್ನು ಪ್ರಸ್ತಾಪಿಸಲಿದ್ದಾರೆ.
ಲೋಕಸಭೆಯಲ್ಲಿಂದು ಸಾರ್ವಜನಿಕ ಪರೀಕ್ಷೆ(ಅಕ್ರಮ ಮಾರ್ಗಗಳ ತಡೆ) ತಿದ್ದುಪಡಿ ಮಸೂದೆ-2026 ಅಂಗೀಕಾರವಾಗಿದೆ. ಧ್ವನಿಮತದ ಮೂಲಕ ಪರೀಕ್ಷಾ ಅಕ್ರಮ ತಡೆ ತಿದ್ದುಪಡಿ ಮಸೂದೆ ಅಂಗೀಕಾರಗೊಂಡಿದೆ. ವಿಪಕ್ಷಗಳ ಗದ್ದಲ ನಡುವೆಯೂ ಪರೀಕ್ಷಾ ಅಕ್ರಮ ತಡೆ ತಿದ್ದುಪಡಿ ಬಿಲ್ ಪಾಸ್ ಆಗಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆ, ಅಕ್ರಮಗಳಲ್ಲಿ ಭಾಗಿಯಾದವರಿಗೆ 10 ವರ್ಷ ಜೈಲು ಹಾಗೂ 10 ಕೋಟಿ ರೂ. ದಂಡ ವಿಧಿಸಲಾಗುತ್ತದೆ. ಮತ್ತಷ್ಟು ಓದಿ
ತಮಿಳುನಾಡಿಗೆ ಕಾವೇರಿ ನೀರು ಹರಿಸುವ CWRC ಆದೇಶದ ವಿರುದ್ಧ ಸುಪ್ರೀಂಕೋರ್ಟ್ ಹಾಗೂ CWMAಗೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ದೆಹಲಿಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ರಾಜ್ಯದಲ್ಲಿ ಮಳೆಯಿಲ್ಲದೆ ಸಂಕಷ್ಟವಿದ್ದು, ತಮಿಳುನಾಡು ಸಿಎಂ ರಾಜ್ಯಕ್ಕೆ ಭೇಟಿ ನೀಡಿದರೆ ಪರಿಸ್ಥಿತಿ ವೀಕ್ಷಣೆಗೆ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ.
ವಿಶೇಷ ಸಮಗ್ರ ಮತದಾರರ ಪರಿಷ್ಕರಣೆ (SIR-2026) ಪ್ರಗತಿ ಕುರಿತು ಮುಖ್ಯಚುನಾವಣಾಧಿಕಾರಿ ವಿ. ಅನ್ಬು ಕುಮಾರ್ ಇಂದು ಮಧ್ಯಾಹ್ನ 3 ಗಂಟೆಗೆ ಕೆ.ಆರ್. ವೃತ್ತದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಬಿಎಲ್‌ಒಗಳ ಕಾರ್ಯ, ಅರ್ಜಿ ವಿತರಣೆ ಮತ್ತು ಮುಂದಿನ ಕಾರ್ಯಯೋಜನೆಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.
ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್, ಸಚಿವ ಸಂಪುಟ ವಿಸ್ತರಣೆ ಕುರಿತು ವರಿಷ್ಠರ ಜೊತೆ ಚರ್ಚಿಸಲಾಗಿದೆ ಎಂದಿದ್ದಾರೆ. ಇಂದು ಮತ್ತೆ ಸಭೆ ಕರೆಯುವುದಾಗಿ ನಾಯಕರು ತಿಳಿಸಿದ್ದು, ಹೈಕಮಾಂಡ್ ನಾಯಕರ ಭೇಟಿಗಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕೋಚಿಂಗ್ ವಿಭಾಗದಲ್ಲಿ ಪ್ರಮುಖ ಬದಲಾವಣೆ ಮಾಡಿದೆ. ಹಾಲಿ ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಅವರ ಒಪ್ಪಂದ ನವೀಕರಿಸದ ಬಿಸಿಸಿಐ, ಅವರ ಸ್ಥಾನಕ್ಕೆ ಸುಭದೀಪ್ ಘೋಷ್ ಅವರನ್ನು ಟೀಮ್ ಇಂಡಿಯಾದ ನೂತನ ಫೀಲ್ಡಿಂಗ್ ಕೋಚ್ ಆಗಿ ನೇಮಕಗೊಳಿಸಿದೆ. ಮತ್ತಷ್ಟು ಓದಿ
ಸ್ಯಾಂಡಿಯಾಗೋ ಕಾಮಿಕ್-ಕಾನ್‌ನಲ್ಲಿ ಪ್ರದರ್ಶನಗೊಂಡಿದ್ದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ಟ್ರೈಲರ್ ಸೋರಿಕೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಟ್ರೈಲರ್‌ನಲ್ಲಿ ‘ರಾವಣ’ನ ಪಾತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಅಬ್ಬರದ ಲುಕ್ ಮತ್ತು ಅದ್ಧೂರಿತನ ಪ್ರೇಕ್ಷಕರನ್ನು ಬೆರಗುಗೊಳಿಸುತ್ತಿದೆ. ಮತ್ತಷ್ಟು ಓದಿ
ಮಾಜಿ ಪ್ರಧಾನಿ ದೇವೇಗೌಡರ ಧರ್ಮಪತ್ನಿ ಚನ್ನಮ್ಮ ಅವರ 11ನೇ ದಿನದ ಉತ್ತರಕ್ರಿಯಾ ಕಾರ್ಯಕ್ಕೆ ಮಾವಿನಕೆರೆ ಸಮಾಧಿ ಸ್ಥಳದಲ್ಲಿ ಸಕಲ ಸಿದ್ಧತೆ ಮಾಡಲಾಗಿದೆ. ಲಕ್ಷಾಂತರ ಜನರಿಗೆ ಪ್ರಸಾದ ವಿತರಣೆಗೆ 16 ಕೌಂಟರ್ ಹಾಗೂ 2,000ಕ್ಕೂ ಹೆಚ್ಚು ಬಾಣಸಿಗರಿಂದ ಅಡುಗೆ ವ್ಯವಸ್ಥೆ ಮಾಡಲಾಗಿದ್ದು, ಎಚ್‌ಡಿಕೆ ಹಾಗೂ ರೇವಣ್ಣ ಸಿದ್ಧತೆ ಪರಿಶೀಲಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ವೈಬ್ರೇಟ್ ಕಾಲೇಜಿನ ಹಾಸ್ಟೆಲ್ ಶೌಚಾಲಯದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿ, ಮೈಸೂರು ಮೂಲದ ಜೀವಿತ್ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಘಟನಾ ಸ್ಥಳಕ್ಕೆ ಮೂಡಬಿದ್ರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಕನಕಪುರ ತಾಲೂಕಿನ ಉಯ್ಯಂಬಳ್ಳಿ ಗ್ರಾಮದಲ್ಲಿ ‘ಗ್ರೋಸರಿ 4ಯು’ ಕಂಪನಿಗೆ ಕಟ್ಟಿದ್ದ ₹15 ಲಕ್ಷ ಹಣ ವಾಪಸ್ ಬರದಿದ್ದಕ್ಕೆ ಮನನೊಂದ ಗೃಹಿಣಿ ನಾಗಮಣಿ (38) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದೂವರೆ ವರ್ಷದ ಹಿಂದೆ ಹಣ ಹೂಡಿಕೆ ಮಾಡಿದ್ದ ನಾಗಮಣಿ, ಸಾಲ ತೀರಿಸಲಾಗದೆ ಈ ಹಂತಕ್ಕೆ ತಲುಪಿದ್ದಾರೆ. ಸಾತನೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಕ್ಷೇತ್ರ ದೇವನಹಳ್ಳಿಯಲ್ಲಿ ಗ್ರಾಮ ಪಂಚಾಯಿತಿ ನೌಕರರ BPL ಕಾರ್ಡ್‌ಗಳನ್ನು APLಗೆ ಬಡ್ತಿ ನೀಡಿ ರದ್ದುಗೊಳಿಸಿದ್ದಕ್ಕೆ ನೌಕರರು ತಾಲೂಕು ಪಂಚಾಯಿತಿ ಎದುರು ಪ್ರತಿಭಟಿಸಿದರು. ತಿಂಗಳೊಳಗೆ ಕಾರ್ಡ್ ನೀಡದಿದ್ದರೆ ಕೆಲಸ ಬಿಟ್ಟು DC ಕಚೇರಿ ಮುಂದೆ ಧರಣಿ ಕೂರುವುದಾಗಿ ಎಚ್ಚರಿಸಿದ್ದಾರೆ.
ಸುಪ್ರೀಂಕೋರ್ಟ್ ಕಲಾಪದ ಲೈವ್ ಸ್ಟ್ರೀಮಿಂಗ್‌ನಲ್ಲಿ ಹೊಸ ಮತ್ತು ತುರ್ತು ಅರ್ಜಿಗಳನ್ನು ಪ್ರಸ್ತಾಪಿಸುವಾಗ ಆಡಿಯೋ ಮ್ಯೂಟ್ ಮಾಡಲು ಸಿಜೆಐ ನಿರ್ದೇಶಿಸಿದ್ದಾರೆ. ವಕೀಲರ ಮೌಖಿಕ ಮನವಿಗಳ ದುರ್ಬಳಕೆ ತಡೆಯಲು ಹಾಗೂ ಆಡಳಿತಾತ್ಮಕ ಪ್ರಕ್ರಿಯೆಯ ವರದಿಗಾರಿಕೆಗೆ ಬ್ರೇಕ್ ಹಾಕಲು ಈ ಕ್ರಮ ಕೈಗೊಳ್ಳಲಾಗಿದ್ದು, ಇನ್ಮುಂದೆ ಕೇವಲ ವಿಡಿಯೋ ಫೀಡ್ ಮಾತ್ರ ಲಭ್ಯವಿರಲಿದೆ.
ತಮಿಳುನಾಡಿಗೆ ನೀರು ಹರಿಸುವಂತೆ CWRC ನೀಡಿದ ಆದೇಶ ಖಂಡಿಸಿ, ಬೆಂಗಳೂರಿನ ಮಲ್ಲೇಶ್ವರಂ ಕುವೆಂಪು ಪ್ರತಿಮೆ ಬಳಿ ಶಿವರಾಮೇಗೌಡ ಬಣದ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸಾ.ರಾ.ಗೋವಿಂದು ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿದ್ದ ಕರವೇ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
2023ರ ಕರ್ನಾಟಕ ಚುನಾವಣೆ ವೇಳೆ ಬಜರಂಗದಳವನ್ನು ಪಿಎಫ್‌ಐಗೆ ಹೋಲಿಸಿ, ನಿಷೇಧಿಸುವುದಾಗಿ ಹೇಳಿಕೆ ನೀಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಪಂಜಾಬ್‌ನ ಸಂಗ್ರೂರ್ ಕೋರ್ಟ್ ಜಾಮೀನು ಸಹಿತ ವಾರಂಟ್ ಜಾರಿ ಮಾಡಿದ್ದು, ಸೆಪ್ಟೆಂಬರ್ 19ಕ್ಕೆ ವಿಚಾರಣೆಗೆ ಹಾಜರಾಗಲು ಸೂಚಿಸಿದೆ.
ಬಿಜೆಪಿ ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ ಹಾಗೂ ವಿದ್ಯಾರ್ಥಿಗಳ ವಿರುದ್ಧ ನಿಂದನಕಾರಿ ಹಾಗೂ ದ್ವೇಷಪೂರಿತ ಭಾಷಣ ಮಾಡಿದ ಆರೋಪದಡಿ ಉಡುಪಿ ಶಾಸಕ ಯಶಪಾಲ್ ಸುವರ್ಣ ವಿರುದ್ಧ ಪ್ರಕರಣ ದಾಖಲಾಗಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ನೀಡಿದ ದೂರಿನನ್ವಯ ಉಡುಪಿ ನಗರ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ.
ಮಂಗಳೂರಿನ ಬಂಟ್ವಾಳದ ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಲಾವಣ್ಯ ಹತ್ಯೆಗೈದ ಆರೋಪಿ ಚೇತನ್‌ಗೆ ಕೋರ್ಟ್ 4 ದಿನಗಳ ಪೊಲೀಸ್ ಕಸ್ಟಡಿ ನೀಡಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬೆನ್ನಲ್ಲೇ ವಶಕ್ಕೆ ಪಡೆದ ಪೊಲೀಸರು, ಹತ್ಯೆ ನಡೆದ ಸ್ಥಳ ಮಹಜರು ನಡೆಸಿದರು.
ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದ್ದು, ಶಿವಸಾಗರ್ ಜಿಲ್ಲೆಯ ನಜೀರಾ ವಲಯದಲ್ಲಿ ಮತ್ತೆ 7 ಜನರು ಸಾವನ್ನಪ್ಪುವುದರೊಂದಿಗೆ ಒಟ್ಟು ಮೃತರ ಸಂಖ್ಯೆ 75ಕ್ಕೆ ಏರಿಕೆಯಾಗಿದೆ. ಪ್ರವಾಹದಿಂದ 3.32 ಲಕ್ಷ ಜನರು ಸಂಕಷ್ಟಕ್ಕೆ ಈಡಾಗಿದ್ದು, ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ತಂಡಗಳಿಂದ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ದೆಹಲಿಯಲ್ಲಿ ರೈತ ನಾಯಕ ರಾಕೇಶ್ ಟಿಕಾಯತ್ ಅವರೊಂದಿಗೆ ಸಿಜೆಪಿ (CJP) ರಾಷ್ಟ್ರೀಯ ವಕ್ತಾರ ಅಶುತೋಷ್ ರಾಂಕಾ ಹಾಗೂ ಹಲವು ಮುಖಂಡರು ಸಭೆ ನಡೆಸಿದ್ದಾರೆ. ವಿದ್ಯಾರ್ಥಿಗಳು, ಯುವಕರು ಮತ್ತು ರೈತರ ಜಂಟಿ ವೇದಿಕೆ ರಚನೆ ಹಾಗೂ ಮುಂದಿನ ಹೋರಾಟದ ರಣನೀತಿ ಕುರಿತು ನಾಯಕರು ಸುದೀರ್ಘ ಚರ್ಚೆ ನಡೆಸಿದರು.
ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಬುಲಾವ್ ನೀಡಿದ್ದು, ಮಾಜಿ ಸಚಿವ ಜಮೀರ್ ಅಹಮದ್ ಬೆಳಿಗ್ಗೆ 7 ಗಂಟೆಗೆ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂಡಿಗೋ ವಿಮಾನದ ಮೂಲಕ ದೆಹಲಿಗೆ ತೆರಳಿದ್ದಾರೆ. ಸಚಿವ ಸ್ಥಾನದ ಕುರಿತು ಹೈಕಮಾಂಡ್ ನಾಯಕರ ಜೊತೆ ಮಹತ್ವದ ಚರ್ಚೆ ನಡೆಸಲಿದ್ದಾರೆ.
ತಮಿಳುನಾಡಿಗೆ ನೀರು ಹರಿಸುವಂತೆ ಸಿಡಬ್ಲ್ಯೂಆರ್‌ಸಿ (CWRC) ನೀಡಿದ ಆದೇಶದ ಹಿನ್ನೆಲೆಯಲ್ಲಿ, ಸಿಎಂ ಡಿ.ಕೆ. ಶಿವಕುಮಾರ್ ಇಂದು ದೆಹಲಿಯಲ್ಲಿ ರಾಜ್ಯದ ಕಾನೂನು ತಂಡದೊಂದಿಗೆ ಸಭೆ ನಡೆಸಲಿದ್ದಾರೆ. ಬೆಳಗ್ಗೆ 11.30ಕ್ಕೆ ಹಿರಿಯ ವಕೀಲ ಮೋಹನ್ ಕಾತರಕಿ ಹಾಗೂ ನ್ಯಾಯತಜ್ಞರ ಜತೆ ಚರ್ಚಿಸಿ, ಮುಂದೆ ಕೈಗೊಳ್ಳಬೇಕಾದ ಕಾನೂನು ಕ್ರಮಗಳ ಕುರಿತು ಮಹತ್ವದ ಆಲೋಚನೆ ನಡೆಸಲಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸಾಸ್ವಿಹಳ್ಳಿಯಲ್ಲಿ ಖಾಸಗಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ 11 ತಿಂಗಳ ಮಗು ಪೂರ್ವಿಕ ಸಾವನ್ನಪ್ಪಿದ್ದಾಳೆ. ವೈದ್ಯರು ನೀಡಿದ ಅವಧಿ ಮುಗಿದ (ಎಕ್ಸ್‌ಪೈರಿ) ಔಷಧ ಹಾಕಿದ ತಕ್ಷಣ ಮಗುವಿನ ಆರೋಗ್ಯ ಹಾಲಾಟು ಮೃತಪಟ್ಟಿದೆ ಎಂದು ಪೋಷಕರಾದ ವಸುಂಧರ ಹಾಗೂ ಲೋಕೇಶ್ ಆರೋಪಿಸಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದಿಂದ ಇಂದು ಮಧ್ಯಾಹ್ನ 12.30ಕ್ಕೆ ಮೈಸೂರಿನ ಕುವೆಂಪು ಪಾರ್ಕ್ ಬಳಿ ರಸ್ತೆ ತಡೆ ಪ್ರತಿಭಟನೆ ನಡೆಯಲಿದೆ. ರಾಜ್ಯದ ರೈತರಿಗೆ ನೀರಿನ ಆದ್ಯತೆ ನೀಡಲು ಹಾಗೂ ಸರ್ಕಾರ ದೃಢ ನಿಲುವು ತಾಳಲು ಒತ್ತಾಯಿಸಲಾಗುವುದು.
Published On - 8:35 am, Wed, 29 July 26