Tv9 Kannada News Live: ಭಟ್ಕಳದಲ್ಲಿ ನಿಷೇಧಾಜ್ಞೆ ಜಾರಿ, ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಪಟ್ಟಿ ಪರಿಷ್ಕರಣೆ! ಇಲ್ಲಿವೆ ಈ ಹೊತ್ತಿನ ಟಾಪ್ ಸುದ್ದಿಗಳು

ಭಟ್ಕಳದಲ್ಲಿ ಮುರಿನಕಟ್ಟೆ ಧ್ವಂಸದ ಬೆನ್ನಲ್ಲೇ ಎರಡು ದಿನ ನಿಷೇಧಾಜ್ಞೆ ಜಾರಿಯಾಗಿದೆ. ಇತ್ತ ರಾಜ್ಯ ಸರಕಾರವು ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗಳ ಫಲಾನುಭವಿಗಳ ಪಟ್ಟಿ ಪರಿಷ್ಕರಣೆಗೆ ಮುಂದಾಗಿದೆ. ಮತ್ತೊಂದೆಡೆ ಮಹಾರಾಷ್ಟ್ರದ ರಾಯಗಢದಲ್ಲಿ ಕಾರು ಕಂದಕಕ್ಕೆ ಉರುಳಿ 8 ಪ್ರವಾಸಿಗರು ಮೃತಪಟ್ಟಿದ್ದಾರೆ ಹಾಗೂ ನಟ ಯಶ್ ತಮ್ಮ 'ಟಾಕ್ಸಿಕ್' ಸಿನಿಮಾ ಟೀಸರ್ ಟೀಕೆಗಳಿಗೆ ಖಡಕ್ ಉತ್ತರ ನೀಡಿದ್ದಾರೆ. ಇಂದಿನ ಪ್ರಮುಖ ಸುದ್ದಿಗಳ ವಿವರ ಇಲ್ಲಿದೆ.

Tv9 Kannada News Live: ಭಟ್ಕಳದಲ್ಲಿ ನಿಷೇಧಾಜ್ಞೆ ಜಾರಿ, ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಪಟ್ಟಿ ಪರಿಷ್ಕರಣೆ! ಇಲ್ಲಿವೆ ಈ ಹೊತ್ತಿನ ಟಾಪ್ ಸುದ್ದಿಗಳು
ಇಲ್ಲಿವೆ ಈ ಹೊತ್ತಿನ ಟಾಪ್ ಸುದ್ದಿಗಳು

Updated on: May 25, 2026 | 11:00 AM

ಬೆಂಗಳೂರು, ಮೇ 25: ಭಟ್ಕಳದಲ್ಲಿ ಮುರಿನಕಟ್ಟೆ ಧ್ವಂಸದ (Murinakatte Issue) ಬೆನ್ನಲ್ಲೇ ತೀವ್ರ ಉದ್ವಿಗ್ನತೆ ಉಂಟಾಗಿದ್ದು, ಎರಡು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇತ್ತ ಕರ್ನಾಟಕ ಸರಕಾರವು ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆಗಳ ಫಲಾನುಭವಿಗಳ ಪಟ್ಟಿ ಪರಿಷ್ಕರಣೆಗೆ ಮುಂದಾಗಿದ್ದು ಅರ್ಹತೆ ಪರಿಶೀಲಿಸಲಿದೆ. ಮತ್ತೊಂದೆಡೆ ಮಹಾರಾಷ್ಟ್ರದ ರಾಯಗಢದಲ್ಲಿ ಕಾರು ಕಂದಕಕ್ಕೆ ಉರುಳಿ 8 ಪ್ರವಾಸಿಗರು ದುರ್ಮರಣಕ್ಕೀಡಾಗಿದ್ದಾರೆ ಹಾಗೂ ನಟ ಯಶ್ ತಮ್ಮ ‘ಟಾಕ್ಸಿಕ್’ ಸಿನಿಮಾ ಕುರಿತು ಖಡಕ್ ಉತ್ತರ ನೀಡಿದ್ದಾರೆ.

ಭಟ್ಕಳದಲ್ಲಿ ಮುರಿನಕಟ್ಟೆ ವಿವಾದ: ಉದ್ವಿಗ್ನತೆ ಹಿನ್ನೆಲೆ ನಿಷೇಧಾಜ್ಞೆ ಜಾರಿ!

ಕರಾವಳಿಯ ಸೂಕ್ಷ್ಮ ಪ್ರದೇಶ ಭಟ್ಕಳದ ವೆಂಕಟಾಪುರದ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿ ಪುನರ್ ನಿರ್ಮಾಣ ಮಾಡಲಾಗಿದ್ದ ಮುರಿನಕಟ್ಟೆಯನ್ನು ಭಾನುವಾರ ರಾತ್ರಿ ಅನ್ಯಕೋಮಿನ ಸಾವಿರಾರು ಯುವಕರು ಧ್ವಂಸಗೊಳಿಸಿದ್ದಾರೆ. ಈ ಘಟನೆಯಿಂದಾಗಿ ಇಡೀ ಭಟ್ಕಳ ಪಟ್ಟಣ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ತೀವ್ರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಭಟ್ಕಳ ಪಟ್ಟಣ ಹಾಗೂ ಜಾಲಿ ಪಂಚಾಯತ್ ವ್ಯಾಪ್ತಿಯಲ್ಲಿ ಮೇ 25ರಿಂದ ಮೇ 27ರ ವರೆಗೆ ಎರಡು ದಿನಗಳ ಕಾಲ ನಿಷೇಧಾಜ್ಞೆ (ಸೆಕ್ಷನ್ 144) ಜಾರಿಗೊಳಿಸಲಾಗಿದೆ. ಐದಕ್ಕಿಂತ ಹೆಚ್ಚು ಜನರು ಗುಂಪುಗೂಡಬಾರದು ಎಂದು ಭಟ್ಕಳ ಎಸಿ ಮಹೇಶ್ ಆದೇಶ ಹೊರಡಿಸಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ಇದನ್ನೂ ಓದಿ ಭಟ್ಕಳದಲ್ಲಿ ಮುರಿನಕಟ್ಟೆ ಧ್ವಂಸ ಬೆನ್ನಲ್ಲೇ ಹೈ ಅಲರ್ಟ್​: ಇಂದಿನಿಂದ 3 ದಿನ ಇಡೀ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ!

ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಪಟ್ಟಿ ಪರಿಷ್ಕರಣೆಗೆ ಸರಕಾರದ ಮಹತ್ವದ ನಿರ್ಧಾರ

ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಾದ ‘ಗೃಹಲಕ್ಷ್ಮಿ’ ಮತ್ತು ‘ಗೃಹಜ್ಯೋತಿ’ ಫಲಾನುಭವಿಗಳ ಪಟ್ಟಿಯನ್ನು ಪರಿಷ್ಕರಿಸಲು ರಾಜ್ಯ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ನಿನ್ನೆ ನಡೆದ ಎಸ್‌ಐಆರ್ ಸಭೆಯಲ್ಲಿ ಈ ಕುರಿತು ವಿಸ್ತೃತ ಚರ್ಚೆ ನಡೆದಿದ್ದು, ಯೋಜನೆಗಳಲ್ಲಿ ಸಂಪೂರ್ಣ ಪಾರದರ್ಶಕತೆ ತರಲು ಮತ್ತು ಕೇವಲ ಅರ್ಹ ಫಲಾನುಭವಿಗಳಿಗೆ ಮಾತ್ರ ಈ ಉಚಿತ ಸೌಲಭ್ಯಗಳು ತಲುಪುವಂತೆ ಮಾಡಲು ಸರಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸದ್ಯ ಚಾಲ್ತಿಯಲ್ಲಿರುವ ಫಲಾನುಭವಿಗಳ ಅರ್ಹತೆಯನ್ನು ಸಮಗ್ರವಾಗಿ ಮರುಪರಿಶೀಲಿಸಲಾಗುತ್ತಿದ್ದು, ನಕಲಿ ಅಥವಾ ಅನರ್ಹ ಕಾರ್ಡ್‌ದಾರರಿಗೆ ಗ್ಯಾರಂಟಿ ಹಣ ಹಾಗೂ ಉಚಿತ ವಿದ್ಯುತ್ ಕಟ್ ಆಗುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ ಗೃಹಲಕ್ಷ್ಮಿ, ಗೃಹಜ್ಯೋತಿ ಫಲಾನುಭವಿಗಳ ಪರಿಷ್ಕರಣೆಗೆ ನಿರ್ಧರಿಸಿದ ರಾಜ್ಯ ಸರ್ಕಾರ

ಮಹಾರಾಷ್ಟ್ರದ ರಾಯಗಢದಲ್ಲಿ ಭೀಕರ ಕಾರು ಅಪಘಾತ

ಮಹಾರಾಷ್ಟ್ರದ ರಾಯಗಢದ ಮಹಾಬಲೇಶ್ವರ-ಪೋಲಾದ್​ಪುರ ರಸ್ತೆಯ ಅಂಬೆನಾಲಿ ಘಾಟ್ ಬಳಿ ಭಾನುವಾರ ತಡರಾತ್ರಿ ಭೀಕರ ಅಪಘಾತವೊಂದು ಸಂಭವಿಸಿದೆ. ಪ್ರವಾಸಿಗರು ಪ್ರಯಾಣಿಸುತ್ತಿದ್ದ ಸ್ಕಾರ್ಪಿಯೋ ಕಾರು ಚಾಲಕನ ನಿಯಂತ್ರಣ ತಪ್ಪಿ ಸುಮಾರು 1,000 ಅಡಿ ಆಳದ ಭೀಕರ ಕಂದಕಕ್ಕೆ ಉರುಳಿ ಬಿದ್ದಿದೆ. ಈ ಘಟನೆಯಲ್ಲಿ ಕಾರಿನಲ್ಲಿದ್ದ ಎಂಟು ಮಂದಿ ಪ್ರವಾಸಿಗರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ರಾತ್ರಿಯ ಕತ್ತಲಿನಲ್ಲಿ ಕಾರು ವೇಗವಾಗಿ ಚಲಿಸುತ್ತಿದ್ದ ಹಿನ್ನೆಲೆಯಲ್ಲಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಸದ್ಯಕ್ಕೆ ಕಂದಕದಿಂದ ಕೇವಲ ಎರಡು ಮೃತದೇಹಗಳನ್ನು ಮಾತ್ರ ಹೊರತೆಗೆಯಲು ಸಾಧ್ಯವಾಗಿದೆ. ಬಾಕಿ ಉಳಿದಿರುವ ಆರು ಮಂದಿ ಪ್ರವಾಸಿಗರ ಶವಗಳಿಗಾಗಿ ಕಂದಕದ ತಳಭಾಗದಲ್ಲಿ ಸ್ಥಳೀಯರ ನೆರವಿನೊಂದಿಗೆ ತೀವ್ರ ಹುಡುಕಾಟ ನಡೆಸಲಾಗುತ್ತಿದೆ.

ಇದನ್ನೂ ಓದಿ ಮಹಾರಾಷ್ಟ್ರದ ರಾಯಗಢದಲ್ಲಿ ಕಂದಕಕ್ಕೆ ಉರುಳಿದ ಕಾರು, ಎಂಟು ಮಂದಿ ಸಾವು

ರಾಕಿಂಗ್ ಸ್ಟಾರ್ ಯಶ್ ಅವರ ‘ಟಾಕ್ಸಿಕ್’ ಚಿತ್ರದ ಅಪ್ಡೇಟ್

ಕೆಜಿಎಫ್ ಸರಣಿಯ ಅಭೂತಪೂರ್ವ ಯಶಸ್ಸಿನ ನಂತರ ಗೀತು ಮೋಹನ್‌ದಾಸ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಟಾಕ್ಸಿಕ್’ ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ಸದ್ಯ ದೊಡ್ಡ ಮಟ್ಟದ ಹೈಪ್ ಸೃಷ್ಟಿಸಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಚಿತ್ರದ ಟೀಸರ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದ್ದ ಕೆಲವು ನೆಗೆಟಿವ್ ಕಮೆಂಟ್‌ಗಳು ಮತ್ತು ಟೀಕೆಗಳಿಗೆ ನಟ ಯಶ್ ಖಡಕ್ ಆಗಿ ಉತ್ತರಿಸಿದ್ದಾರೆ. ಮಾಧ್ಯಮಗಳ ಪ್ರಶ್ನೆಗಳಿಗೆ ನೇರವಾಗಿಯೇ ಉತ್ತರಿಸಿರುವ ಅವರು, ಸಿನಿಮಾ ಮೇಕಿಂಗ್ ಗುಣಮಟ್ಟದ ಕುರಿತು ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

ಇದನ್ನೂ ಓದಿ ಮಗ ಯಶ್ ಪರ ನಿಂತ ಯಶ್ ತಾಯಿ ಪುಷ್ಪಾ: ‘ಟಾಕ್ಸಿಕ್’ ಬಗ್ಗೆ ಹೇಳಿದ್ದೇನು?

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Bhavana Hegde

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
Follow Us