ಟಿವಿ9 ಕನ್ನಡ ಡಿಜಿಟಲ್ ಲೈವ್ ಬ್ಲಾಗ್ | 01-01-2021
ನಮ್ಮ ಓದುಗರಿಗೆ ಹೊಸ ವರ್ಷದ ಶುಭ ಹಾರೈಕೆಗಳು. ನಿಮ್ಮ ಓದು ನಮ್ಮ ಹುಮ್ಮಸ್ಸು. ಹೊಸ ಯೋಚನೆಗೆ ತಿದಿಯೊತ್ತುವ ಈ ಸಮಯದಲ್ಲಿ ನಾವು Live Blog ಪ್ರಾರಂಭಿಸುತ್ತಿದ್ದೇವೆ. ಸುತ್ತಲಿನ ಗದ್ದಲದಿಂದ ದೂರ ಕುಳಿತು ಕ್ಷಣ ಕ್ಷಣದ ಸುದ್ದಿ ಓದುವ, ನೋಡುವ ಅವಕಾಶ ನಿಮಗೆ. ಹಳ್ಳಿಯಿಂದ ದಿಲ್ಲಿಯೇನು ಇಡೀ ಪ್ರಪಂಚದ ಸುದ್ದಿ ಈ Live Blog ನಲ್ಲಿ ಪ್ರತಿ ದಿನ ಹರಿದು ಬರಲಿದೆ. ಬನ್ನಿ ಇಂದಿನ ಸುದ್ದಿಯ ಹರಿವನ್ನು ಆನಂದಿಸೋಣ.
LIVE NEWS & UPDATES
-
ಭಾರತದಲ್ಲಿ 30 ಕೋಟಿ ಜನರಿಗೆ ಕೊರೊನಾ ಲಸಿಕೆ
09:40 pm ಮೊದಲ ಹಂತದಲ್ಲಿ 30 ಕೋಟಿ ಜನರಿಗೆ ಕೊರೊನಾ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಅಗತ್ಯ ಸೇವೆ ನೀಡುವವರಿಗೆ ಮುಂದಿನ 6-8 ತಿಂಗಳಲ್ಲಿ ಕೊರೊನಾ ಲಸಿಕೆ ಸಿಗಲಿದೆ ಎಂದು ಸರ್ಕಾರ ಹೇಳಿದೆ.
-
ಜ.8ರಿಂದ ಭಾರತಕ್ಕೆ ಬ್ರಿಟನ್ನಿಂದ 15 ವಿಮಾನಗಳು
09:36 pm ಜ.8ರಿಂದ ಭಾರತಕ್ಕೆ ಬ್ರಿಟನ್ನಿಂದ 15 ವಿಮಾನಗಳು ಬರಲಿವೆ. ದೆಹಲಿ, ಬೆಂಗಳೂರು, ಹೈದರಾಬಾದ್, ಮುಂಬೈಗೆ ಈ ವಿಮಾನಗಳು ಲ್ಯಾಂಡ್ ಆಗಲಿವೆ. ಜನವರಿ 23ರವರೆಗೆ ವಿಮಾನಗಳು ಆಗಮಿಸಲಿವೆ. ಇಂಗ್ಲೆಂಡ್ನಲ್ಲಿ ಕೊರೊನಾ ರೂಪಾಂತರಗೊಂಡಿದೆ. ಹೀಗಾಗಿ, ವಿಮಾನ ಸಂಚಾರ ಸ್ಥಗಿತ ಮಾಡಲಾಗಿದೆ.
-
ಗಡಿಯಲ್ಲಿ ಪಾಕ್ ಸೈನಿಕರಿಂದ ಗುಂಡಿನ ದಾಳಿ: ಭಾರತ ಸೈನಿಕ ಹುತಾತ್ಮ
9:23 pm ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಹಾದು ಹೋದ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೈನಿಕರು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಭಾರತದ ಓರ್ವ ಸೈನಿಕ ಹುತಾತ್ಮರಾಗಿದ್ದಾರೆ. ಭಾರತೀಯ ಸೇನೆ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿದೆ.
ಜನವರಿ 5ರಿಂದ ಕೇರಳದಲ್ಲಿ ಥಿಯೇಟರ್ ರೀ-ಓಪನ್
08:56 pm ಕೇರಳದಲ್ಲಿ ಜನವರಿ 5ರಿಂದ ಥಿಯೇಟರ್ಗಳು ಮತ್ತೆ ರಿ-ಓಪನ್ ಆಗಲಿದೆ. ಕೊರೊನಾ ವೈರಸ್ ಹೆಚ್ಚಿದ ಕಾರಣ ಕೇರಳ ಸರ್ಕಾರ ಚಿತ್ರಮಂದಿರಗಳನ್ನು ತೆರೆಯಲು ಹಿಂದೇಟು ಹಾಕಿತ್ತು. ಈಗ ಶೇ.50 ಪ್ರೇಕ್ಷಕರೊಂದಿಗೆ ಚಿತ್ರಮಂದಿರ ರಿ-ಓಪನ್ ಆಗುತ್ತಿದೆ.
ವ್ಯಾಕ್ಸಿನ್ ಸಾಗಾಟ, ಸಂಗ್ರಹಣೆಗಿದ್ದ ಮಿತಿ ತೆರವು ಮಾಡಿದ ಕೇಂದ್ರ
8:42 pm ವ್ಯಾಕ್ಸಿನ್ ಸಾಗಾಟ, ಸಂಗ್ರಹಣೆಗಿದ್ದ ಮಿತಿಯನ್ನು ಕೇಂದ್ರ ಸರ್ಕಾರ ತೆರವು ಮಾಡಿದೆ. ಈ ಮೂಲಕ ಕೊರೊನಾ ಲಸಿಕೆ ಆಮದು, ರಫ್ತು ಮಾಡಲು ಮುಕ್ತ ಅವಕಾಶ ನೀಡಿದೆ. ಯಾವುದೇ ಮಿತಿ ಮೌಲ್ಯವಿಲ್ಲದೆ ಲಸಿಕೆ ಆಮದು, ರಫ್ತು ಮಾಡಬಹುದು ಎಂದು ಸೆಂಟ್ರಲ್ ಬೋರ್ಡ್ ಆಫ್ ಇನ್‌ಡೈರೆಕ್ಟ್ ಟ್ಯಾಕ್ಸಸ್ & ಕಸ್ಟಮ್ಸ್ ಹೇಳಿದೆ. ಈ ಮೂಲಕ ಆಮದು, ರಫ್ತು ನಿಯಮಗಳಿಗೆ ತಿದ್ದುಪಡಿ ತಂದಿದೆ.
ಕೃಷಿ ಮಾರುಕಟ್ಟೆ ತಿದ್ದುಪಡಿ ಕಾಯ್ದೆಗೆ ರಾಜ್ಯಪಾಲರ ಅಂಕಿತ
08:10 pm ಕೃಷಿ ಮಾರುಕಟ್ಟೆ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರೆ, ಇತ್ತ ರಾಜ್ಯಪಾಲರು ಈ ಕಾಯ್ದೆಗೆ ಅಂಕಿತ ಹಾಕಿದ್ದಾರೆ. ರಾಜ್ಯಪಾಲರು ಡಿಸೆಂಬರ್ 30ರಂದು ಕಾಯ್ದೆಗೆ ಒಪ್ಪಿಗೆ ಸೂಚಿಸಿದ್ದಾರೆ. ಕಳೆದು ಒಂದು ತಿಂಗಳಿಂದ ರೈತರು ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಈ ವಿಚಾರವಾಗಿ ಸರ್ಕಾರ ಮಾತುಕತೆ ಕೂಡ ನಡೆಸುತ್ತಿದೆ.
ರಾಜ್ಯದಲ್ಲಿಂದು ಹೊಸದಾಗಿ 877 ಜನರಿಗೆ ಕೊರೊನಾ ದೃಢ
08:06 pm ರಾಜ್ಯದಲ್ಲಿಂದು ಹೊಸದಾಗಿ 877 ಜನರಿಗೆ ಕೊರೊನಾ ದೃಢವಾಗಿದೆ. ಈ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ 9,20,373ಕ್ಕೆ ಏರಿಕೆ ಆಗಿದೆ. ಇಂದು ಕೊರೊನಾ ಸೋಂಕಿನಿಂದ 6 ಜನರ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಇದುವರೆಗೆ ಕೊರೊನಾದಿಂದ 12,096 ಜನರು ಮೃತಪಟ್ಟಿದ್ದಾರೆ.
ವೈಎಸ್ಆರ್ ಕಾಂಗ್ರೆಸ್ ಎಂಎಲ್ಸಿ ಚಲ್ಲಾ ರಾಮಕೃಷ್ಣ ಕೊರೊನಾಗೆ ನಿಧನ
07:38 pm ಆಂಧ್ರಪ್ರದೇಶದ ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಎಂಎಲ್ಸಿ ಚಲ್ಲಾ ರಾಮಕೃಷ್ಣ (72) ಅವರು ಕೊರೊನಾದಿಂದ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಇವರಿಗೆ ಕೆಲ ದಿನಗಳ ಹಿಂದೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಬೆಂಗಳೂರಲ್ಲಿ ಇಂದು ನಾಲ್ಕು ರೂಪಾಂತರ ಕೊರೊನಾ ಕೇಸ್ ಪತ್ತೆ
7:18 pm ಇಂದು ನಾಲ್ಕು ರೂಪಾಂತರ ಕೊರೊನಾ ಕೇಸ್ ಭಾರತದಲ್ಲಿ ಪತ್ತೆ ಆಗಿದೆ. ಈ ಮೂಲಕ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ 29ಕ್ಕೆ ಏರಿಕೆ ಆಗಿದೆ. ಮೂರು ಕೇಸ್ ಬೆಂಗಳೂರಲ್ಲಿ, 1 ಕೇಸ್ ಹೈದರಾಬಾದ್ನಲ್ಲಿ ಪತ್ತೆ ಆಗಿದೆ. ಸದ್ಯ, ಈ ನಾಲ್ವರನ್ನು ವಿಶೇಷ ನಿಗಾದಲ್ಲಿ ಇಡಲಾಗಿದೆ.
ಮನೆಯಲ್ಲಿ 85 ಲೀಟರ್ ಮದ್ಯ ಹೊಂದಿದ್ದ ಬೆಂಗಳೂರು ವ್ಯಕ್ತಿ ಅರೆಸ್ಟ್
6:36 pm ಬೆಂಗಳೂರಿನ ಮನೆಯಲ್ಲಿ 85 ಲೀಟರ್ ಮದ್ಯ ಸಂಗ್ರಹಿಸಿಟ್ಟ ವ್ಯಕ್ತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅನುಮತಿಸಿದ ಮಿತಿಗಿಂತ 20 ಪಟ್ಟು ಹೆಚ್ಚು ಮದ್ಯ ಸಂಗ್ರಹವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ರಾಜಾಜಿನಗರದ ಬಳಿ ಹಾದು ಹೋದ ಪಶ್ಚಿಮ ಕಾರ್ಡ್ರೋಡ್ ಬಳಿ ಇದ್ದ ಮನೆಯಲ್ಲಿ ವ್ಯಕ್ತಿ ಅರೆಸ್ಟ್ ಆಗಿದ್ದಾನೆ.
ಹದಿನೈದು ವರ್ಷಗಳ ಹಿಂದೆ ರೈಲಿನಲ್ಲಿ ಕಳೆದು ಹೋದ ಚಿನ್ನದ ಬಿಲ್ಲೆ ಹೊಸ ವರ್ಷದಂದು ಕೈ ಸೇರಿತು
06:10 pm ಸುಮಾರು 15 ವರ್ಷಗಳ ಹಿಂದೆ ರೈಲಿನಲ್ಲಿ ಕಳೆದು ಹೋಗಿದ್ದ ಪುಟಾಣಿ ಚಿನ್ನದ ಬಿಲ್ಲೆಯನ್ನು ರೈಲ್ವೇ ಪೊಲೀಸರು ವಾರಸುದಾರರಿಗೆ ಹುಡುಕಿಕೊಟ್ಟಿದ್ದಾರೆ. ಗಣೇಶನ ಚಿತ್ರವಿದ್ದ ಚಿನ್ನದ ಬಿಲ್ಲೆಯನ್ನು ಥಾಣೆಯ ಮಹಿಳೆ 2005ನೇ ಇಸವಿಯಲ್ಲಿ ಸಬ್ಅರ್ಬನ್ ರೈಲಿನಲ್ಲಿ ಪಯಣಿಸುವಾಗ ಕಳೆದುಕೊಂಡಿದ್ದರು. ಅಂದು ಅದು ಕೇವಲ ₹400 ಬೆಲೆ ಬಾಳುತ್ತಿತ್ತು ಎಂದು ಅಂದಾಜಿಸಲಾಗಿದೆ. ಆದರೆ. ಇಂದಿನ ಮಾರುಕಟ್ಟೆಯಲ್ಲಿ ಅದರ ಮೌಲ್ಯ ₹25ಸಾವಿರದಷ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಾರಸುದಾರರನ್ನು ಸಂಪರ್ಕಿಸಲು ಅನೇಕ ದಿನಗಳಿಂದ ಪ್ರಯತ್ನಿಸಿ ಕೊನೆಗೆ ಹೊಸ ವರ್ಷದ ದಿನವೇ ಅವರ ವಸ್ತುವನ್ನು ಹಿಂದಿರುಗಿಸಿರುವುದು ಖುಷಿ ಕೊಟ್ಟಿದೆ ಎಂದು ಹೇಳಿದ್ದಾರೆ.
ಮಂಗಳೂರು ನೂತನ ಪೊಲೀಸ್ ಕಮಿಷನರ್ ಆಗಿ ಶಶಿಕುಮಾರ್ ಅಧಿಕಾರ ಸ್ವೀಕಾರ
05:56 pm ಮಂಗಳೂರು ನೂತನ ಪೊಲೀಸ್ ಕಮಿಷನರ್ ಆಗಿ ಶಶಿಕುಮಾರ್ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಿರ್ಗಮಿತ ಪೊಲೀಸ್ ಕಮಿಷನರ್ ವಿಕಾಶ್ ಕುಮಾರ್ ಅವರು ಶಶಿಕುಮಾರ್ ಅವರಿಗೆ ಅಧಿಕಾರ ಹಸ್ತಾಂತರಿಸಿದ್ದಾರೆ.
ಶುಭ ಶುಕ್ರವಾರದಂದೇ ಶಾಲಾ, ಕಾಲೇಜು ಆರಂಭವಾಗಿದೆ.. ಎಲ್ಲವೂ ಒಳ್ಳೆಯದಾಗುತ್ತೆ.
05:35 pm ಮಕ್ಕಳು ಯೂನಿಫಾರ್ಮ್ ಹಾಕಿದ್ದು, ಸಂತೋಷದಿಂದ ಇದ್ದಿದ್ದು ಮರೆತೇ ಹೋಗಿತ್ತು. ಇವತ್ತು ಎಲ್ಲಾ ಕಣ್ಮುಂದೆ ಬಂದು ಸಂತೋಷ ಆಯ್ತು. ಕೊರೊನಾ ಓಡಿಸೋಣ ನಮ್ಮ ಮಕ್ಕಳನ್ನು ಓದಿಸೋಣ ಎಂಬ ಧೈಯ ವಾಕ್ಯದಿಂದ ಶಾಲಾ, ಕಾಲೇಜು ಆರಂಭಿಸಿದ್ದೇವೆ. ವೀರೇಂದ್ರ ಹೆಗ್ಗಡೆ, ನಿರ್ಮಲಾನಾಂದ ಸ್ವಾಮೀಜಿ, ಸುತ್ತೂರು ಶ್ರೀ, ಸಿದ್ದಗಂಗಾ ಶ್ರೀಗಳು ಹಾರೈಸಿ ಮಕ್ಕಳಿಗೆ ಆರ್ಶೀವಾದ ಮಾಡಿದ್ದಾರೆ. ಹೊಸ ವರ್ಷದ ಮೊದಲ ದಿನವಾದ ಶುಕ್ರವಾರದಂದೇ ಅತ್ಯಂತ ಸುರಕ್ಷಿತವಾಗಿ ಇಂದು ಶಾಲೆ ಆರಂಭವಾಗಿರುವುದು ಸಂತಸ ತಂದಿದೆ. ಈ ವರ್ಷ ಎಲ್ಲರಿಗೂ ಒಳಿತಾಗಲಿ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಆಶಯಿಸಿದ್ದಾರೆ.
ಕೊವಿಶೀಲ್ಡ್ ಲಸಿಕೆ ತುರ್ತು ಬಳಕೆಗೆ ಭಾರತದಲ್ಲಿ ಅನುಮತಿ
05:03 pm ಕೊವಿಶೀಲ್ಡ್ ಲಸಿಕೆ ತುರ್ತು ಬಳಕೆಗೆ ಮೊದಲ ಹಂತದಲ್ಲಿ ಅನುಮತಿ ಸಿಕ್ಕಿದೆ. ವಿಷಯ ತಜ್ಞರ ಸಮಿತಿಯ ಸಭೆಯಲ್ಲಿ ಒಪ್ಪಿಗೆ ಲಭಿಸಿದ್ದು, DCGIಗೆ ಶಿಫಾರಸು ಮಾಡಲು ಸಮಿತಿಯಲ್ಲಿ ನಿರ್ಧರಿಸಲಾಗಿದೆ. ಆಕ್ಸ್‌ಫರ್ಡ್-ಆಸ್ಟ್ರಾಜೆನಿಕಾ ಕಂಪನಿ ಅಭಿವೃದ್ಧಿಪಡಿಸಿರುವ ಕೊವಿಶೀಲ್ಡ್ ಲಸಿಕೆಯ ತುರ್ತು ಬಳಕೆಗೆ ಈ ಮೂಲಕ ಭಾರತದಲ್ಲಿ ಅನುಮತಿ ದೊರೆತಿದೆ.
ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿಯಾಗಿ ಡಿ.ರೂಪಾ ಅಧಿಕಾರ ಸ್ವೀಕಾರ
04:45 pm ವ್ಯವಸ್ಥಾಪಕ ನಿರ್ದೇಶಕಿಯಾಗಿ ಡಿ.ರೂಪಾ ಅಧಿಕಾರ ಸ್ವೀಕರಿಸಿದ್ದಾರೆ. ಗೃಹ ಕಾರ್ಯದರ್ಶಿ ಹುದ್ದೆಯಿಂದ ವರ್ಗಾವಣೆಯಾಗಿದ್ದ ಡಿ.ರೂಪಾ ಅವರನ್ನು ಕೈಮಗ್ಗ ಅಭಿವೃದ್ಧಿ ನಿಗಮದ ಎಂಡಿ ಹುದ್ದೆಗೆ ನೇಮಕ ಮಾಡಲಾಗಿತ್ತು.
ರಾಜೀನಾಮೆ ಹಿಂದಿನ ಸತ್ಯ ಬಾಯ್ಬಿಟ್ಟ ಮಾಜಿ IPS ಅಧಿಕಾರಿ ಅಣ್ಣಾಮಲೈ
04:40 pm ಕರ್ನಾಟಕದ ಸಿಂಗಂ ಎಂದೇ ಹೆಸರು ಮಾಡಿದ್ದ ಮಾಜಿ IPS ಅಧಿಕಾರಿ ಅಣ್ಣಾಮಲೈ ತಮ್ಮ ರಾಜೀನಾಮೆ ಹಿಂದಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ರಾಜೀನಾಮೆ ಕುರಿತು ಸಿದ್ಧಾರ್ಥ ಅಣ್ಣನ ಜೊತೆ ಚರ್ಚಿಸಿದ್ದೆ. ರಾಜೀನಾಮೆ ದಿನವನ್ನು ಇಬ್ಬರು ಕುಳಿತು ನಿಗದಿಪಡಿಸಿದ್ವಿ ಎಂದು ಕೆಫೆ ಕಾಫಿ ಡೇ ಮಾಲೀಕ ವಿ.ಜಿ.ಸಿದ್ಧಾರ್ಥ್ ಅವರನ್ನು ನೆನಪಿಸಿಕೊಂಡಿದ್ದಾರೆ. ಸಿದ್ಧಾರ್ಥ ಅಣ್ಣ ರಾಜೀನಾಮೆ ಕೊಡಲು ಸಲಹೆ ನೀಡಿದ್ದರು. ಧೈರ್ಯವಾಗಿ ರಾಜೀನಾಮೆ ಕೊಡು ನಾನಿದ್ದೇನೆ ಎಂದರು. ರಾಜೀನಾಮೆ ಬಳಿಕ ಜನ ನಿಮ್ಮನ್ನ ಮೂರ್ಖರು ಅನ್ನಬಹುದು. ಆದ್ರೆ ನಿಮ್ಮ ಉದ್ದೇಶ ನನಗೆ ಗೊತ್ತು ಮುಂದುವರೆಯಿರಿ ಎಂದು ಧೈರ್ಯ ತುಂಬಿದ್ದರಿಂದ ನಾನು ರಾಜೀನಾಮೆ ನೀಡಿದೆ ಎಂದು ಹೇಳಿದ್ದಾರೆ.
ಇನ್ನುಮುಂದೆ ಯಾವ ಚುನಾವಣೆ ಆದರೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ: ಡಿಸಿಎಂ ಅಶ್ವಥನಾರಾಯಣ
04:25 pm ಮುಂದಿನ ದಿನಗಳಲ್ಲಿ ಯಾವುದೇ ಚುನಾವಣೆ ಬಂದರೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಹೇಳಿಕೆ ನೀಡಿದ್ದಾರೆ. ಗ್ರಾ.ಪಂ ಚುನಾವಣೆಯಲ್ಲಿ ಬಿಜೆಪಿಗಿಂತ ಕೈ ಬೆಂಬಲಿತ ಅಭ್ಯರ್ಥಿಗಳೇ ಗೆದ್ದಿದ್ದಾರೆಂದು ಕಾಂಗ್ರೆಸ್ ನಾಯಕರು ಸುಳ್ಳು ಹೇಳುತ್ತಿದ್ದಾರೆ. ವಾಸ್ತವವಾಗಿ ಶೇ. 60ಕ್ಕಿಂತಲೂ ಹೆಚ್ಚು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದಾರೆ. ಇದು ಇಡೀ ಲೋಕಕ್ಕೆ ಗೊತ್ತಿರುವ ವಿಚಾರ. ಆದರೆ, ಕಾಂಗ್ರೆಸ್ಗೆ ಸತ್ಯ ಒಪ್ಪಿಕೊಳ್ಳಲಾಗುತ್ತಿಲ್ಲ. ಅಲ್ಲದೇ, ಕೇಂದ್ರ-ರಾಜ್ಯ ಎರಡೂ ಕಡೆ ಕಾಂಗ್ರೆಸ್ ಪಕ್ಷದಲ್ಲಿ ಒಳಜಗಳವಿದ್ದು ಅವರು ಇನ್ನುಮುಂದೆ ಅಧಿಕಾರಕ್ಕೆ ಬರುವುದು ಅಸಾಧ್ಯ ಎನ್ನುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಡಿಸಿಎಂ ಅಶ್ವಥನಾರಾಯಣ ಟಾಂಗ್ ನೀಡಿದ್ದಾರೆ.
ಈ ಬಾರಿ ಹೊಸ ವರ್ಷದ ಮಧ್ಯರಾತ್ರಿಗೆ ‘ಮದ್ಯ’ ಏರಲಿಲ್ಲ!
04:18 pm ಕೊರೊನಾ ಕಾರಣದಿಂದ ಹೊಸ ವರ್ಷದ ಸಂಭ್ರಮಾಚರಣೆಗೆ ಕಡಿವಾಣ ಬಿದ್ದ ಕಾರಣ ಮದ್ಯ ಮಾರಾಟ ಕುಸಿತ ಕಂಡಿದೆ. ಕಳೆದಬಾರಿ ಹೊಸವರ್ಷಕ್ಕೆ ₹119.97 ಕೋಟಿ ಮೌಲ್ಯದ ಮದ್ಯ ಮಾರಾಟ ಆಗಿತ್ತು. ಈ ಬಾರಿ ₹67.52 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದೆ. ಆದರೆ, ಡಿಸೆಂಬರ್ ತಿಂಗಳಾಂತ್ಯದಲ್ಲಿ ಹೆಚ್ಚು ಮದ್ಯ ಮಾರಾಟವಾಗಿದ್ದು, ಕಳೆದ ವರ್ಷಕ್ಕಿಂತ ಸುಮಾರು ₹19.20 ಕೋಟಿ ಮೌಲ್ಯದಷ್ಟು ಅಧಿಕ ಆದಾಯ ಸಿಕ್ಕಿದೆ.
ಕರ್ನಾಟಕ ಚಿತ್ರಕಲಾ ಪರಿಷತ್ತಿಗೆ ಅರವತ್ತರ ಸಂಭ್ರಮ
04:17 pm ಕರ್ನಾಟಕ ಚಿತ್ರಕಲಾ ಪರಿಷತ್ತು 60 ವರ್ಷ ಪೂರೈಸಲಿದ್ದು, ವಜ್ರಮಹೋತ್ಸವ ಆಚರಣೆ ಅಂಗವಾಗಿ ಕಲೆಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಕೊರೊನಾ ನಿಮಿತ್ತ ನಿರ್ಬಂಧಗಳಿರುವುದರಿಂದ ಆನ್‌ಲೈನ್ ಮೂಲಕ ಜನವರಿ 3ನೇ ತಾರೀಖು ಭಾನುವಾರದಂದು ಚಿತ್ರಸಂತೆ-18 ಕಾರ್ಯಕ್ರಮ ಉದ್ಘಾಟನೆಯಾಗಲಿದೆ.
ಚಿತ್ರಸಂತೆ -18 ರ ಉದ್ಘಾಟನೆ ಸಮಾರಂಭದ ನಂತರ ನಡೆಯುವ ಕಾರ್ಯಕ್ರಮಗಳನ್ನು ಫೇಸ್‌ಬುಕ್, ಇನ್ಸ್ಟಾಗ್ರಾಂ, ಯೂಟ್ಯೂಬ್ ಮತ್ತು ChitraSanthe.org ಜಾಲತಾಣಗಳಲ್ಲಿ ವೀಕ್ಷಿಸಬಹುದು.
ಲೈಂಗಿಕ ತಜ್ಞೆ ಪದ್ಮಿನಿ ಪ್ರಸಾದ್ ಹೆಸರಲ್ಲಿ ನಕಲಿ ಫೇಸ್‌ಬುಕ್ ಅಕೌಂಟ್
03:57 pm ಲೈಂಗಿಕ ತಜ್ಞೆ ಪದ್ಮಿನಿ ಪ್ರಸಾದ್ ಹೆಸರಿನಲ್ಲಿ ಕಿಡಿಗೇಡಿಗಳು ನಕಲಿ ಫೇಸ್‌ಬುಕ್ ಅಕೌಂಟ್ ತೆರೆದು ದುರುಪಯೋಗಪಡಿಸಿಕೊಂಡ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯರನ್ನೇ ಟಾರ್ಗೆಟ್ ಮಾಡಿರುವ ಕಿರಾತಕರು ಖಾಸಗಿ ವಿಚಾರಗಳ ಕುರಿತು ಮಹಿಳೆಯರ ಜೊತೆ ಚಾಟಿಂಗ್ ಮಾಡಿದ್ದಲ್ಲದೇ ಖಾಸಗಿ ವಿಡಿಯೋ ಮಾಡಿ ಕಳಿಸುವಂತೆ ಒತ್ತಾಯ ಮಾಡಿದ್ದಾರೆ. ಅನುಮಾನಗೊಂಡ ಕೆಲವರು ಬೇಡ ಕ್ಲಿನಿಕ್ಗೆ ಬಂದು ಮಾತಾಡ್ತೀವಿ ಅಂದಾಗ ಕೊರೊನಾ ಇದೆ ಬರಬೇಡಿ ಎಂದಿದ್ದಾರೆ. ಕೊನೆಗೆ ಪದ್ಮಿನಿ ಪ್ರಸಾದ್ ಅವರನ್ನೇ ನೇರವಾಗಿ ಕೇಳಿದಾಗ ಕಿಡಿಗೇಡಿಗಳ ದುಷ್ಕೃತ್ಯ ಬಯಲಾಗಿದೆ. ಸದ್ಯ ಪದ್ಮಿನಿ ಪ್ರಸಾದ್ ಸೈಬರ್ ಕ್ರೈಮ್ಗೆ ದೂರು ಕೊಡಲು ಮುಂದಾಗಿದ್ದಾರೆ.
ಮತ್ತೆ ನಾಲ್ವರಲ್ಲಿ ರೂಪಾಂತರಿ ಕೊರೊನಾ ಧೃಡ
03:43pm ದೇಶದಲ್ಲಿ ಮತ್ತೆ ನಾಲ್ವರಿಗೆ ಹೊಸ ಪ್ರಭೇದದ ಕೊರೊನಾ ಸೋಂಕು ಧೃಡ. ಪರೀಕ್ಷೆ ವೇಳೆ ರೂಪಾಂತರಗೊಂಡ ಕೊರೊನಾ ಸೋಂಕು ದೇಹದಲ್ಲಿರುವುದು ಪತ್ತೆ. ಆ ಮೂಲಕ ಹೊಸ ಪ್ರಭೇದದ ಕೊರೊನಾ ಸೋಂಕಿಗೆ ತುತ್ತಾದವರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಹೊಸ ವರ್ಷದ ಮೊದಲ ದಿನ ಭಾರತದಲ್ಲಿ 60 ಸಾವಿರ ಮಕ್ಕಳ ಜನನ
03:32 pm ಹೊಸ ವರ್ಷದ ಮೊದಲ ದಿನ ಭಾರತದಲ್ಲಿ 60ಸಾವಿರ ಶಿಶುಗಳ ಜನನ ಆಗಿದೆ ಎಂದು ಯುನಿಸೆಫ್ ಅಂದಾಜು ಮಾಡಿದೆ. ಯುನಿಸೆಫ್ ಬಿಡುಗಡೆಗೊಳಿಸಿರುವ ಅಂದಾಜು ಅಂಕಿ-ಅಂಶಗಳು ಈ ಮಾಹಿತಿಯನ್ನು ನೀಡಿವೆ. ಇಂದು ಭಾರತದಲ್ಲಿ 60 ಸಾವಿರ, ಚೀನಾದಲ್ಲಿ 35,615 ಸೇರಿದಂತೆ ವಿಶ್ವದಾದ್ಯಂತ ಒಟ್ಟು 3,71,504 ಶಿಶುಗಳು ಜನಿಸಿವೆ ಎಂದು ಯುನಿಸೆಫ್ ಅಂದಾಜು ಮಾಡಿದೆ.
ಆಟವಾಡುತ್ತಿದ್ದ ಬಾಲಕನ ಮೇಲೆ ಚಿರತೆ ದಾಳಿ.. ತುಮಕೂರಿನಲ್ಲಿ ಘಟನೆ
03:24 pm ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಸಿಂಗೋನಹಳ್ಳಿಯಲ್ಲಿ 7 ವರ್ಷದ ಬಾಲಕನ ಮೇಲೆ ಚಿರತೆ ದಾಳಿ ನಡೆಸಿದೆ. ಕೆರೆಯ ಏರಿಯ ಮೇಲೆ ಬಾಲಕ ಆಟವಾಡುವಾಗ ಚಿರತೆ ದಾಳಿ ಮಾಡಿದೆ. ತಕ್ಷಣ ಎಚ್ಚೆತ್ತ ಸ್ಥಳೀಯರು ಕೂಗಾಡಿದ್ದರಿಂದ ಚಿರತೆ ಓಡಿ ಹೋಗಿದೆ. ಬಾಲಕನಿಗೆ ಗಾಯಗಳಾಗಿದ್ದು ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.
ಶಿವಗಂಗೆ ಬೆಟ್ಟದಲ್ಲಿ ಜನಸಾಗರ.. ಮಾಸ್ಕ್, ಸಾಮಾಜಿಕ ಅಂತರದ ಬಗ್ಗೆ ಕೇಳಲೇಬೇಡಿ
03:19 pm ಹೊಸ ವರ್ಷಾಚರಣೆ ಪ್ರಯುಕ್ತ ನೆಲಮಂಗಲ ತಾಲ್ಲೂಕಿನ ಶಿವಗಂಗೆ ಬೆಟ್ಟದಲ್ಲಿ ಜನ ಸಾಗರವೇ ಕಾಣಿಸುತ್ತಿದೆ. ಹೊಸ ವರ್ಷ ಆಚರಣೆಗೆ ಶಿವಗಂಗೆ ಕ್ಷೇತ್ರಕ್ಕೆ ಪ್ರವಾಸಿಗರ ದಂಡು ಹರಿದುಬರುತ್ತಿದೆ. ಚಾರಣಿಗರು ಕೊವಿಡ್ ನಿಯಮಗಳನ್ನು ಮುರಿದಿದ್ದು ಮಾಸ್ಕ್ ಧರಿಸದೇ, ಸಾಮಾಜಿಕ ಅಂತರವಿಲ್ಲದೇ ಗುಂಪುಗಟ್ಟಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ಪೊನ್ನಂಪೇಟೆ ತಾಲೂಕಿನ ಕೊಟ್ಟಗೇರಿ ಗ್ರಾಮದಲ್ಲಿ ಹಾಡಹಗಲೇ ಹುಲಿ ದಾಳಿ
03:15 pm ಮಡಿಕೇರಿ ಜಿಲ್ಲೆಯಲ್ಲಿ ಹುಲಿ ಹಾವಳಿ ಜಾಸ್ತಿ ಆಗಿದೆ. ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ಕೊಟ್ಟಗೇರಿ ಗ್ರಾಮದಲ್ಲಿ ಮಧ್ಯಾಹ್ನ 1.30ರ ಸುಮಾರಿಗೆ ದಾಳಿ ನಡೆಸಿರುವ ಹುಲಿ ಮೇಯಲು ಬಿಟ್ಟಿದ್ದ ದನವನ್ನು ಕೊಂದು ಹಾಕಿದೆ. ಹತ್ತು ದಿನದ ಹಿಂದೆಯಷ್ಟೇ ಒಂದು ಹುಲಿ ಉರುಳಿಗೆ ಬಿದ್ದು ಸೆರೆಯಾಗಿತ್ತು. ಆದರೀಗ ಮತ್ತೊಂದು ಹುಲಿ ದಾಳಿಯಿಂದ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ.
ಖಾಸಗಿ ಹೋಟೆಲ್ಲಿನಲ್ಲಿ ಬೆಂಗಳೂರು ಅಭಿವೃದ್ಧಿಯ ಪಾಲುದಾರರ ಜೊತೆ ಗುಪ್ತ ಸಭೆ ನಡೆಸಿದ ಸಿಎಂ ಬಿಎಸ್ವೈ
03:10 pm ಕಳೆದ ತಿಂಗಳು ಬೆಂಗಳೂರು ಅಜೆಂಡಾ-2020 ನ್ನು ಬಿಡುಗಡೆ ಮಾಡಿರುವ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಬೆಂಗಳೂರು ಅಭಿವೃದ್ಧಿಯ ಪಾಲುದಾರರ ಸಭೆಯನ್ನು ಖಾಸಗಿ ಹೋಟೆಲ್ಲಿನಲ್ಲಿ ನಡೆಸಿದರು. ಸಾರ್ವಜನಿಕರಿಗೆ ಮತ್ತು ಪತ್ರಕರ್ತರಿಗೆ ಈ ಸಭೆಯಲ್ಲಿ ಪಾಲ್ಗೊಳ್ಳಲು ಅವಕಾಶ ಇರಲಿಲ್ಲ. ಸರಕಾರದ ಮೂಲಗಳ ಪ್ರಕಾರ, ಯಡಿಯೂರಪ್ಪ ಅವರು ಪಾಲುದಾರರ ವಿಚಾರ ಆಲಿಸಿದರು. ಈಗಾಗಲೇ ರೂಪಿಸಿರುವ ಕಾರ್ಯಕ್ರಮ ಮತ್ತು ಅವುಗಳ ಜಾರಿ ಕುರಿತು ವಿವರವಾಗಿ ಚರ್ಚಿಸಿದರು.
ಕೆಲ ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಗು ಮುಚ್ಚಿಕೊಳ್ಳುವ ಪರಿಸ್ಥಿತಿ ಇದೆ: ಡಾ.ಕೆ.ಸುಧಾಕರ್
03:07 pm ಕೆಲವೆಡೆ ಸರ್ಕಾರಿ ಆಸ್ಪತ್ರೆಗಳಲ್ಲಿ ಶುಚಿತ್ವ ಕಾಪಾಡಿಕೊಂಡಿಲ್ಲ. ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದೆ. ಈ ವಿಚಾರ ನಮ್ಮ ಗಮನಕ್ಕೆ ಬಂದಿದೆ. ಕೆಲವು ಆಸ್ಪತ್ರೆಗಳು ಮಾತ್ರ ಸ್ವಚ್ಛತೆಗೆ ಗಮನ ನೀಡುತ್ತಿವೆ. ಗುಣಮಟ್ಟ ಕಾಪಾಡಿಕೊಳ್ಳುವ ಕುರಿತು ಎಲ್ಲರೂ ಗಮನ ಹರಿಸಬೇಕು. ನಾವು ಸದ್ಯದಲ್ಲೇ ಈ ಪರಿಸ್ಥಿತಿಯನ್ನು ಸುಧಾರಿಸುತ್ತೇವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ನಾಳೆ ಶಿವಮೊಗ್ಗದಲ್ಲಿ BJP ಕೋರ್ ಕಮೀಟಿ ಸಭೆ
03:02 pm ನಾಳೆ ಶನಿವಾರ ಶಿವಮೊಗ್ಗದಲ್ಲಿ ಭಾರತೀಯ ಜನತಾ ಪಕ್ಷದ ಕೋರ್ ಕಮೀಟಿ ಸಭೆ ನಡೆಯಲಿದೆ. ಅದಾದ ನಂತರ, ನಾಡಿದ್ದು ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಹಿಂದಿನ ತಿಂಗಳು ಈ ಸಭೆ ಬೆಳಗಾವಿಯಲ್ಲಿ ನಡೆದಿತ್ತು. ಮತ್ತು ಆಗ ಗೋ ಹತ್ಯೆ ನಿಷೇಧದ ಬಗ್ಗೆ ಚರ್ಚೆ ಆಗಿತ್ತು. ಬಿಜೆಪಿ ಮೂಲಗಳ ಪ್ರಕಾರ, ಪಕ್ಷ ಇನ್ನು ಮುಂದೆ ಪ್ರತಿ ತಿಂಗಳು ಇಂತಹ ಸಭೆ ನಡೆಸಬೇಕು ಎಂದು ತೀರ್ಮಾನಿಸಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಹಿಂದಿನ ತಿಂಗಳು ಮೊದಲ ಬಾರಿಗೆ ಬಂದಿದ್ದರು. ಇಂದು ರಾತ್ರಿ ಬರಲಿರುವ ಸಿಂಗ್ ನಾಳೆ ಮತ್ತು ನಾಡಿದ್ದು ಶಿವಮೊಗ್ಗ ಪ್ರವಾಸ ಮಾಡುತ್ತಾರೆ ಮತ್ತು ಪಕ್ಷದ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ
ಪಾಕಿಸ್ತಾನ್ ಜಿಂದಾಬಾದ್ ಎನ್ನುವವರನ್ನು ಗಡಿಪಾರು ಮಾಡಬೇಕು.
02:58 pm ಪಾಕಿಸ್ತಾನ್ ಜಿಂದಾಬಾದ್ ಎನ್ನುವವರನ್ನು ಗಡಿಪಾರು ಮಾಡಬೇಕು. ಇಂತಹವರ ಬಗ್ಗೆ ನಮ್ಮ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತದೆ ಎಂದು ದಾವಣಗೆರೆಯಲ್ಲಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ. ಈ ಮಣ್ಣಿನಲ್ಲಿ ಹುಟ್ಟಿ, ಈ ನೀರು ಕುಡಿದು ಪಾಕಿಸ್ತಾನ ಜಿಂದಾಬಾದ್ ಎನ್ನುವುದು ಎಷ್ಟು ಸರಿ? ಇಂತಹ ವಿಚಾರಗಳ ಬಗ್ಗೆ ಪ್ರತಿಪಕ್ಷಗಳು ಮೌನವಾಗಿವೆ. ಅವರಿಗೆ ನಾಚಿಕೆ ಅಗಬೇಕು. ಬರೀ ಟಿಪ್ಪು ಜಯಂತಿ ಬಗ್ಗೆ ಮಾತನಾಡಿದರೆ ಸಾಲದು. ಇಂತಹ ವಿಚಾರಗಳ ಬಗ್ಗೆಯೂ ಮಾತನಾಡಬೇಕು ಎಂದು ಕಿಡಿಕಾರಿದ್ದಾರೆ.
ಕೊವಿಡ್ನಿಂದ ಚೇತರಿಸಿಕೊಂಡು ಡಿಸ್ಚಾರ್ಜ್ ಆದ ಜೆ.ಪಿ.ನಡ್ಡಾ
02:54 pm ಕೊರೊನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆ ಸೇರಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ ಸಂಪೂರ್ಣ ಗುಣಮುಖರಾಗಿದ್ದಾರೆ. ಏಮ್ಸ್ ಆಸ್ಪತ್ರೆಯಿಂದ ನಡ್ಡ ಡಿಸ್ಚಾರ್ಜ್ಗೊಂಡಿದ್ದು, ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ, ಏಮ್ಸ್ ನಿರ್ದೇಶಕ ಗುಲೇರಿಯಾಗೆ ಮತ್ತು ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.
ಆರೋಗ್ಯ ಕರ್ನಾಟಕ ನಿರ್ಮಾಣಕ್ಕೆ ವಿಷನ್ ಗ್ರೂಪ್ ರಚನೆ
02:49 pm ರಾಜ್ಯದ ಜನತೆಗೆ ಆರೋಗ್ಯ ಸೇವೆಗಳನ್ನು ಸಮರ್ಪಕವಾಗಿ ಒದಗಿಸುವ ಆರೋಗ್ಯ ಕರ್ನಾಟಕ ನಿರ್ಮಾಣಕ್ಕೆ ವಿಷನ್ ಗ್ರೂಪ್ ರಚನೆ ಮಾಡಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಡಾ.ಗುರುರಾಜ್ ಅವರನ್ನು ಈ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಗಿದ್ದು, ಇಂದು ಮೊದಲ ಸಭೆ ನಡೆಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಲಾರಿ – ಬೈಕ್ ಡಿಕ್ಕಿ.. ಹೊಸವರ್ಷದಂದೇ ದಾರುಣ ಅಂತ್ಯ ಕಂಡ ದಂಪತಿ
02:46 pm ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಹಣಗವಾಡಿಯ ತುಂಗಭದ್ರಾ ಸೇತುವೆ ಬಳಿ ಬೈಕ್ಗೆ ಲಾರಿ ಡಿಕ್ಕಿ ಹೊಡೆದು ದಂಪತಿ ಸಾವಿಗೀಡಾಗಿದ್ದಾರೆ. ಹೊಸ ವರ್ಷದಂದೇ ನಡೆದ ರಸ್ತೆ ಅಪಘಾತದಲ್ಲಿ ಸಿದ್ದಮ್ಮ (45) ಹಾಲೇಶಪ್ಪ (52) ದಾರುಣವಾಗಿ ಕೊನೆಯುಸಿರೆಳೆದಿದ್ದಾರೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಮೇಲೆದ್ದ ಸಿದ್ದಮ್ಮ ಸೇತುವೆ ಕೆಳಗೆ ಬಿದ್ದು ಮೃತಪಟ್ಟರೆ, ತೀವ್ರ ಗಾಯಗೊಂಡ ಪತಿ ಹಾಲೇಶಪ್ಪ ಆಸ್ಪತ್ರೆಗೆ ಸಾಗಿಸುವಾಗ ಅಸುನೀಗಿದ್ದಾರೆ. ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
ಉಮೇಶ್ ಯಾದವ್ ಬದಲಿಗೆ ಟಿ.ನಟರಾಜನ್
02:36 pm ಇಂಡಿಯಾ-ಆಸ್ಟ್ರೇಲಿಯಾ 3ನೇ ಟೆಸ್ಟ್ಗೆ ವೇಗಿ ನಟರಾಜನ್ ಆಯ್ಕೆಯಾಗಿದ್ದಾರೆ. ಸಿಡ್ನಿಯಲ್ಲಿ ನಡೆಯಲಿರುವ ಪಂದ್ಯಗಳಲ್ಲಿ ಉಮೇಶ್ ಯಾದವ್ ಬದಲು ಟಿ.ನಟರಾಜನ್ ಆಡಲಿದ್ದಾರೆ. 2ನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯವಿದ್ದ ಶಮಿ ಈ ಬಾರಿಯೂ ಹೊರಗುಳಿದಿದ್ದು ಅವರ ಬದಲು ಶಾರ್ದೂಲ್ ಠಾಕೂರ್ ಆಡಲಿದ್ದಾರೆ.
ಕಳೆದು ಹೋಗಿದ್ದ ಚಿನ್ನಾಭರಣ, ನಗದು ಹೊಸ ವರ್ಷದಂದು ಮನೆ ಬಾಗಿಲಿಗೆ ಬಂತು.. ಮೈಸೂರು ಪೊಲೀಸರಿಂದ ವಿನೂತನ ಗಿಫ್ಟ್
02:32 pm ಕಳುವಾದ ಮಾಲುಗಳನ್ನು ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಮೈಸೂರು ಪೊಲೀಸರು ವಿಭಿನ್ನವಾಗಿ ಹೊಸ ವರ್ಷ ಆಚರಣೆ ಮಾಡಿದ್ದಾರೆ. ಕಳ್ಳರಿಂದ ವಶಪಡಿಸಿಕೊಂಡ ಚಿನ್ನಾಭರಣಗಳನ್ನು ವಾರಸುದಾರರ ಮನೆ ಬಾಗಿಲಿಗೆ ಖುದ್ದು ತಲುಪಿಸಿದ ಡಿಸಿಪಿ ಗೀತಾ ಪ್ರಸನ್ನ ಮೈಸೂರಿಗರ ಮನ ಗೆದ್ದಿದ್ದಾರೆ. ಪೊಲೀಸರ ಕಾರ್ಯ ವೈಖರಿ ಕಂಡು ಭಾವುಕರಾದ ಮಾಲೀಕರು ಡಿಸಿಪಿ ಗೀತಾ ಪ್ರಸನ್ನ ಅವರಿಗೆ ಅರಿಶಿನ ಕುಂಕುಮ ನೀಡಿ ಕೃತಜ್ಞತೆ ಸಲ್ಲಿಸಿದ್ದಾರೆ.
ಮೂಡಿಗೆರೆಯಲ್ಲಿ ಕಾಫಿ ಕಿಂಗ್ ಸಿದ್ದಾರ್ಥ್ ಹೆಗಡೆ ಪುತ್ಥಳಿ ಅನಾವರಣ
02:23 pm ಕೆಫೆ ಕಾಫಿ ಡೇ ಸಂಸ್ಥಾಪಕ, ಉದ್ಯಮಿ ದಿ.ಸಿದ್ದಾರ್ಥ್ ಹೆಗಡೆ ಅವರ ಪುತ್ಥಳಿಯನ್ನು ಇಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಅನಾವರಣ ಮಾಡಲಾಯಿತು. ಡಾ. ನಿರ್ಮಲಾನಂದನಾಥ ಸ್ವಾಮಿಗಳು ಪುತ್ಥಳಿಯನ್ನು ಲೋಕಾರ್ಪಣೆಗೊಳಿಸಿದರು. ಜೊತೆಗೆ, ಸಿದ್ದಾರ್ಥವನ ಹೆಸರಿನ ಉದ್ಯಾನವನದಲ್ಲಿ ಬುದ್ಧ ಪ್ರತಿಮೆಯ ಉದ್ಘಾಟನೆಯನ್ನೂ ಮಾಡಲಾಯಿತು. ಡಿಸಿಎಂ ಅಶ್ವತ್ಥನಾರಾಯಣ್, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಸಿಂಹದ ಮರಿಯನ್ನು ದತ್ತು ಪಡೆದ ವಸಿಷ್ಠ ಸಿಂಹ
02:12 pm ಹೊಸ ವರ್ಷದ ದಿನ ಸ್ಯಾಂಡಲ್ವುಡ್ ನಟ ವಸಿಷ್ಠ ಸಿಂಹ ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಸಿಂಹದ ಮರಿಯನ್ನು ದತ್ತು ಪಡೆದಿದ್ದಾರೆ. ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಟಗರು, ಕಾಲಚಕ್ರ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ವಸಿಷ್ಠ ಸಿಂಹ ಇಂದು ತಾವು ದತ್ತು ಪಡೆದ ಸಿಂಹದ ಮರಿಯ ಜೊತೆ ಕೆಲ ಕಾಲ ಕಳೆದಿದ್ದಾರೆ.
ಹೊಸ ವರ್ಷಕ್ಕೆ ಜಾರಿಗೊಂಡಿವೆ 18 ಹೊಸ ನಿಯಮಗಳು.. ಏನು ಮಾಡಬೇಕು? ಹೇಗೆ ಪಾಲಿಸಬೇಕು?
02:00 pm ಹೊಸ ವರ್ಷಕ್ಕೆ ಸರ್ಕಾರ ಕೆಲವೊಂದಷ್ಟು ಹೊಸ ನಿಯಮಗಳನ್ನು ಜಾರಿ ಮಾಡಿದೆ. ಚೆಕ್ ವಂಚನೆಗೆ ಕಡಿವಾಣ ಹಾಕಲು ಚೆಕ್ ಗಳಿಗೆ ಪಾಸಿಟಿವ್ ಪೇ ಸಿಸ್ಟಂ, ನಾಲ್ಕು ಚಕ್ರದ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ, ಎಲ್ ಪಿಜಿ ಬೆಲೆ ಪರಿಷ್ಕರಣೆ ಸೇರಿದಂತೆ ಒಟ್ಟು 18 ನಿಯಮಗಳು ಜಾರಿಯಾಗಲಿವೆ. ಈ ನಿಯಮಗಳಿಂದ ಏನೇನು ಬದಲಾವಣೆ ಆಗಲಿದೆ? ನಿಮ್ಮ ಮೇಲೆ ಇವು ಯಾವ ರೀತಿ ಪ್ರಭಾವ ಬೀರಲಿದೆ ಎಂಬುದನ್ನು ತಿಳಿದುಕೊಳ್ಳಲೇಕು.
ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ
ಇಂದಿನಿಂದ ಜಾರಿಗೆ ಬರಲಿವೆ ಕೆಲ ಹೊಸ ನಿಯಮಗಳು? ಮಹತ್ವದ ಆ ಬದಲಾವಣೆಗಳು ಏನು? ವಿವರ ಇಲ್ಲಿದೆ..
ಜಿಲ್ಲಾಧಿಕಾರಿ ಕಚೇರಿ ಎದುರು ಫೋಟೋ ಸೆಷನ್.. ನಿಯಮ ಗಾಳಿಗೆ ತೂರಿದ ಅಧಿಕಾರಿಗಳು
01:34 pm ಚಿತ್ರದುರ್ಗದಲ್ಲಿ ಜನಸಾಮಾನ್ಯರಿಗೊಂದು ನಿಯಮ.. ಅಧಿಕಾರಿಗಳಿಗೊಂದು ನಿಯಮವೇ? ಎಂಬ ಅನುಮಾನ ಕಾಡುತ್ತಿದೆ. ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಫೋಟೋ ಸೆಷನ್ ನಡೆಸಿದ ಅಧಿಕಾರಿಗಳು ಕೊರೊನಾ ನಿಯಂತ್ರಣಕ್ಕೆ ಹೇರಿದ್ದ ನಿಯಮಗಳನ್ನು ಸ್ವತಃ ಗಾಳಿಗೆ ತೂರಿದ್ದಾರೆ. ಹೊಸ ವರ್ಷದ ಶುಭಾಶಯ ವಿನಿಮಯ ವೇಳೆ ಅಧಿಕಾರಿಗಳು ಯಡವಟ್ಟು ಮಾಡಿದ್ದು, ಡಿಸಿ ಕವಿತಾ, ಎಡಿಸಿ ಸಂಗಪ್ಪ ಮತ್ತು ಸಿಬ್ಬಂದಿ ಸಾಮಾಜಿಕ ಅಂತರ ಮರೆತು, ಮಾಸ್ಕ್ ಸಹ ಧರಿಸದೆ ಫೋಟೋ ಸೆಷನ್ನಲ್ಲಿ ಭಾಗಿಯಾಗಿದ್ದಾರೆ.
ಆತಂಕ ಬೇಡ ವಿದ್ಯಾರ್ಥಿಗಳೇ.. ಹಳೆಯ ಬಸ್ ಪಾಸ್ ಇದ್ದರೂ ಉಚಿತವಾಗಿ ಪ್ರಯಾಣಿಸಬಹುದು
01:25 pm ಶಾಲೆಗೆ ಬರುವ ವಿದ್ಯಾರ್ಥಿಗಳು ಹಳೆಯ ಪಾಸ್ ತೋರಿಸಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ವಿದ್ಯಾರ್ಥಿಗಳಿಗೆ ಹಳೆಯ ಬಸ್ ಪಾಸ್ ಮೂಲಕವೇ ಸೇವೆ ಮುಂದುವರೆಸಲಾಗುತ್ತದೆ. ಈ ಬಗ್ಗೆ BMTC ಮತ್ತು KSRTCಗೆ ಸೂಚನೆ ನೀಡಲಾಗಿದೆ ಎಂದು ಖುದ್ದು ಶಿಕ್ಷಣ ಸಚಿವರೇ ಸ್ಪಷ್ಟಪಡಿಸಿದ್ದಾರೆ.
ಶಾಲೆಗೆ ಬರುವ ವಿದ್ಯಾರ್ಥಿಗಳು ಹಳೆಯ ಪಾಸ್ ತೋರಿಸಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಬಹುದು
ಉನ್ನತ ಮಟ್ಟದ ಚಿಕಿತ್ಸೆಗಾಗಿ ಅಮೆರಿಕಾಕ್ಕೆ ಹೊರಟ ರಜನಿಕಾಂತ್
01:19 pm ಸೂಪರ್ ಸ್ಟಾರ್ ರಜಿನಿಕಾಂತ್ ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಾಕ್ಕೆ ತೆರಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ರಕ್ತದೊತ್ತಡದಲ್ಲಿ ಏರುಪೇರಾದ ಹಿನ್ನೆಲೆ ರಜನಿ ಇತ್ತೀಚೆಗಷ್ಟೇ ಹೈದರಾಬಾದ್ನಲ್ಲಿ 2 ದಿನಗಳ ಕಾಲ ಚಿಕಿತ್ಸೆ ಪಡೆದು ಚೆನ್ನೈಗೆ ಹಿಂತಿರುಗಿದ್ದರು. ಇದೀಗ ರಜನಿ ಹೆಚ್ಚಿನ ಚಿಕಿತ್ಸೆಗೆ ಅಮೆರಿಕಾಕ್ಕೆ ತೆರಳಲಿದ್ದಾರೆ. ಇನ್ನೊಂದೆಡೆ, ರಜಿನಿ ನಟನೆಯ ಅನ್ನಾಥೆ ಸಿನಿಮಾ ಚಿತ್ರೀಕರಣ ಶೇ.75ರಷ್ಟು ಮುಗಿದಿದೆ. ಉಳಿದ ಭಾಗವನ್ನು ಚೆನ್ನೈನಲ್ಲಿ ಚಿತ್ರೀಕರಿಸಲು ಸಜ್ಜಾಗಿದ್ದ ಚಿತ್ರತಂಡ ಇದೀಗ ರಜಿನಿಕಾಂತ್ ಆರೋಗ್ಯ ಚೇತರಿಕೆಗಾಗಿ ಕಾಯುತ್ತಿದೆ.
ಇನ್ನೂ 2 ವಿಶ್ವಕಪ್ನಲ್ಲಿ ಭಾಗಿಯಾಗುತ್ತೇನೆ.. ನಿವೃತ್ತಿ ಯೋಚನೆ ಇಲ್ಲ: ಕ್ರಿಸ್ ಗೇಲ್
01:09 pm ವೆಸ್ಟ್ ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್ ಸದ್ಯಕ್ಕೆ ಕ್ರಿಕೆಟ್ನಿಂದ ನಿವೃತ್ತಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಿವೃತ್ತಿ ಹೊಂದುವ ಕುರಿತು ಮಾತನಾಡಿದ ಅವರು, ಇನ್ನೂ 2 ವಿಶ್ವಕಪ್ನಲ್ಲಿ ಭಾಗಿಯಾಗುತ್ತೇನೆ. ನಿವೃತ್ತಿ ಯೋಚನೆಯನ್ನು ಮಾಡಿಲ್ಲ ಎಂದು ತಿಳಿಸಿದ್ದಾರೆ.
ಹೊಸ ವರ್ಷಕ್ಕೆ ಟ್ವಿಟರ್ನಲ್ಲಿ ಶುಭ ಕೋರಿದ ರಾಹುಲ್ ಗಾಂಧಿ
01:03 pm ಹೊಸ ವರ್ಷದ ಪ್ರಯುಕ್ತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟರ್ನಲ್ಲಿ ಶುಭ ಕೋರಿದ್ದಾರೆ. ಹೊಸ ವರ್ಷ ಆರಂಭವಾಗುತ್ತಿರುವ ಹೊತ್ತಿನಲ್ಲಿ ನಮ್ಮಿಂದ ದೂರಾದವರನ್ನು ಮತ್ತು ನಮ್ಮ ರಕ್ಷಣೆಗಾಗಿ ಜೀವ ಪಣಕ್ಕಿಟ್ಟು ನಿಂತಿರುವವರನ್ನು ಸ್ಮರಿಸಿಕೊಳ್ಳೋಣ. ನನ್ನ ಮನಸ್ಸು ಅನ್ಯಾಯದ ವಿರುದ್ಧ ಹೋರಾಡುತ್ತಿರುವ ರೈತರು ಮತ್ತು ಕಾರ್ಮಿಕರ ಜೊತೆ ಸದಾ ಇರುತ್ತದೆ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.
As the new year begins, we remember those who we lost and thank all those who protect and sacrifice for us.
My heart is with the farmers and labourers fighting unjust forces with dignity and honour.
Happy new year to all. pic.twitter.com/L0esBsMeqW
— Rahul Gandhi (@RahulGandhi) December 31, 2020
ಚಿಕ್ಕ ಮನೆಗಳ ನಿರ್ಮಾಣ ಯೋಜನೆಗೆ ಶಿಲಾನ್ಯಾಸ ನೆರವೇರಿಸಿದ ಪ್ರಧಾನ ಮಂತ್ರಿ
12:59 pm ಭಾರತದ 6 ರಾಜ್ಯಗಳಲ್ಲಿ 1,000ಕ್ಕೂ ಹೆಚ್ಚು ಚಿಕ್ಕ ಮನೆಗಳನ್ನು ನಿರ್ಮಿಸುವ ಯೋಜನೆಯ ಶಿಲಾನ್ಯಾಸ ಕಾರ್ಯಕ್ರಮವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೆರವೇರಿಸಿದ್ದಾರೆ. ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಮಾರಂಭದಲ್ಲಿ ಮಾತನಾಡಿದ ಮೋದಿ ಈ ಮನೆಗಳ ನಿರ್ಮಾಣ ಕಾರ್ಯ ಅತ್ಯಂತ ಸುಲಭವಾಗಿದೆ. ಕಡಿಮೆ ಸಮಯದಲ್ಲಿ ಹೆಚ್ಚು ಮನೆಗಳನ್ನು ನಿರ್ಮಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ. ತ್ರಿಪುರಾ, ಜಾರ್ಖಂಡ್, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಗುಜರಾತ್, ತಮಿಳುನಾಡುಗಳಲ್ಲಿ ಈ ಯೋಜನೆ ಜಾರಿಯಾಗಲಿದೆ.
ಸ್ವಚ್ಛಗೊಳ್ಳದ ಕಾಲೇಜು ಕೊಠಡಿಗಳು.. ಹೊರಗೆ ಕುಳಿತು ಪಾಠ ಕೇಳುತ್ತಿರುವ ವಿದ್ಯಾರ್ಥಿಗಳು
12:59 pm ಒಂಬತ್ತು ತಿಂಗಳ ನಂತರ ಕಾಲೇಜಿಗೆ ಬಂದ ವಿದ್ಯಾರ್ಥಿಗಳನ್ನು ಕಾಲೇಜು ಆವರಣದಲ್ಲೇ ಕೂರಿಸಿ ಪಾಠ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದಿದೆ. ಗ್ರಾ ಪಂ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಗಾಗಿ ಬಳಕೆಯಾಗಿದ್ದ ಪಟ್ಟಣದ ಪದವಿ ಪೂರ್ವ ಕಾಲೇಜಿನ ಕೊಠಡಿಗಳು ಇನ್ನೂ ಸ್ವಚ್ಛಗೊಂಡಿಲ್ಲ. ಆ ಕಾರಣ ಇಂದು ಕಾಲೇಜಿಗೆ ಬಂದಿರುವ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಗತಿಯ ಹೊರಗೆ ಕುಳಿತು ಪಾಠ ಕೇಳುವಂತಾಗಿದೆ.
ಹೊಸ ವರ್ಷಕ್ಕೆ ಅಸ್ಸಾಂನ ಕಾಮಾಕ್ಯ ದೇಗುಲದಲ್ಲಿ ಪೂಜೆ ಸಲ್ಲಿಸಿದ ಸಚಿವ ರಮೇಶ್ ಜಾರಕಿಹೊಳಿ
12:58 pm ಹೊಸ ವರ್ಷದ ಹಿನ್ನೆಲೆ ಕರ್ನಾಟಕ ರಾಜ್ಯದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅಸ್ಸಾಂನ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಅಸ್ಸಾಂನ ಗುವಾಹಟಿ ನಗರದಿಂದ ಪಶ್ಚಿಮ ಭಾಗದಲ್ಲಿರುವ ನೀಲಾಚಲ ಬೆಟ್ಟದ ಮೇಲೆ ನೆಲಸಿರುವ ಶಕ್ತಿಪೀಠ ಶ್ರೀ ಕಾಮಾಕ್ಯ ದೇವಾಲಯದಲ್ಲಿ ರಮೇಶ್ ಜಾರಕಿಹೊಳಿ ವಿಶೇಷ ಪೂಜೆ ನೆರವೇರಿಸಿದ್ದಾರೆ. ಕೊರೊನಾ ಸೋಂಕು ಬೇಗ ನಾಶವಾಗಲಿ, ಸಮಾಜ ಸೋಂಕು ಮುಕ್ತವಾಗಲಿ ಎಂದು ಬೇಡಿಕೊಂಡಿದ್ದಾಗಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರಕ್ಕೆ ಕಾಮನ್ ಸೆನ್ಸ್ ಇಲ್ಲ: ಡಿ.ಕೆ.ಶಿವಕುಮಾರ್ ಕಿಡಿ
12:57 pm ರಾಜ್ಯದಲ್ಲಿ ಹೊಸ ಪ್ರಭೇದದ ಕೊರೊನಾ ಪತ್ತೆಗೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ. ರಾಜ್ಯ ಸರ್ಕಾರಕ್ಕೆ ಬೇಸಿಕ್ ಕಾಮನ್‌ಸೆನ್ಸ್ ಇರಬೇಕಿತ್ತು. ಆಡಳಿತ ವಿಚಾರದಲ್ಲಿ ಅವರು ಫೇಲ್ಯೂರ್ ಆಗಿದ್ದಾರೆ. ಜನರ ಆತಂಕಕ್ಕೆ ಸರ್ಕಾರವೇ ಕಾರಣ. ಮುಂಜಾಗ್ರತಾ ಕ್ರಮವಾಗಿ ಏರ್‌ಪೋರ್ಟ್‌ನಲ್ಲೇ ಕೊವಿಡ್ ಟೆಸ್ಟ್ ಮಾಡಿಸುವುದಕ್ಕೆ ಏನಾಗಿತ್ತು? ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಬ್ರಿಟನ್ನಿಂದ ಬಂದವರನ್ನು ಇಂದು ಸಂಜೆಯೊಳಗೆ ಪತ್ತೆ ಹಚ್ಚಲಾಗುವುದು
11:57 am ನವೆಂಬರ್ 25 ರಿಂದ ನಿನ್ನೆ ತನಕ ಒಟ್ಟು 5,068 ಜನ ಬ್ರಿಟನ್ನಿಂದ ಕರ್ನಾಟಕ್ಕೆ ಬಂದಿದ್ದಾರೆ. ಆ ಪೈಕಿ ಬಿಬಿಎಂಪಿ ವ್ಯಾಪ್ತಿಯ 70 ಮತ್ತು ಬೇರೆಡೆಯ 5 ಜನ ಸೇರಿ ಒಟ್ಟು 75 ಜನರು ಪತ್ತೆಯಾಗಿಲ್ಲ. ಅವರಿಗಾಗಿ ಹುಡುಕಾಟ ನಡೆಯುತ್ತಿದೆ. ಸಂಜೆಯೊಳಗೆ ಅವರನ್ನೆಲ್ಲಾ ಪತ್ತೆ ಮಾಡುವುದಾಗಿ ಗೃಹ ಇಲಾಖೆ ಆಶ್ವಾಸನೆ ನೀಡಿದೆ. ಸದ್ಯಕ್ಕೆ 7 ಜನರಲ್ಲಿ ರೂಪಾಂತರಗೊಂಡ ಕೊರೊನಾ ವೈರಾಣು ಧೃಡವಾಗಿದ್ದು ನಿಗಾ ವಹಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ನಾಳೆ ರಾಜ್ಯದ 5 ಜಿಲ್ಲೆಗಳಲ್ಲಿ ಕೊರೊನಾ ಲಸಿಕೆ ವಿತರಣೆಯ ಅಣಕು ಅಭಿಯಾನ
11:46 am ಕೊರೊನಾ ಲಸಿಕೆ ವಿತರಣೆಗೆ ರಾಜ್ಯ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದೆ. ನಾಳೆ ಶಿವಮೊಗ್ಗ, ಮೈಸೂರು, ಕಲಬುರ್ಗಿ, ಬೆಳಗಾವಿ ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ ಕೊರೊನಾ ಲಸಿಕೆ ವಿತರಣೆಯ ಅಣಕು ಅಭಿಯಾನ ನಡೆಯಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ ನೀಡಿದ್ದಾರೆ.
ಏಕತೆಯನ್ನು ಬಿಂಬಿಸುವ ಸಲುವಾಗಿ ರಾಷ್ಟ್ರಗೀತೆಯಲ್ಲಿ ಒಂದು ಪದಕ್ಕೆ ಬದಲಾವಣೆ ಹಾಡಿದ ಆಸ್ಟ್ರೇಲಿಯಾ
11:30 am ಹೊಸ ವರ್ಷದಂದು ಆಸ್ಟ್ರೇಲಿಯಾ ದೇಶದ ರಾಷ್ಟ್ರಗೀತೆಯಲ್ಲಿ ಒಂದು ಪದ ಬದಲಾಯಿಸಲಾಗಿದೆ. ‘‘For we are young and free’’ ಎಂಬ ಸಾಲಿನಲ್ಲಿ young ಬದಲಿಗೆ one ಎಂದು ಬಳಸಲು ನಿರ್ಧರಿಸಲಾಗಿದೆ. ‘‘For we are young and free’’ ಎನ್ನುವ ಮೂಲಕ ದೇಶದ ಒಗ್ಗಟ್ಟು ಮತ್ತು ಏಕತೆಯನ್ನು ಸಾರಲಾಗುತ್ತಿದೆ ಎಂದು ಆಸ್ಟ್ರೇಲಿಯಾ ಸರ್ಕಾರ ಪ್ರಕಟಣೆ ಹೊರಡಿಸಿದೆ.
ಹೊಸ ವರ್ಷದ ಶುಭ ಕೋರಲು ಮುಖ್ಯಮಂತ್ರಿ ನಿವಾಸಕ್ಕೆ ತೆರಳಿದ ಹಿರಿಯ ಅಧಿಕಾರಿಗಳು
11:21 am ಹೊಸ ವರ್ಷದ ಹಿನ್ನೆಲೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಶುಭ ಕೋರಿದ ಹಿರಿಯ ಅಧಿಕಾರಿಗಳು. ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಅವರನ್ನು ಭೇಟಿ ಮಾಡಿದ ಡಿಜಿಪಿ ಪ್ರವೀಣ್ ಸೂದ್, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್. ಇನ್ನಿತರ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳಿಂದಲೂ ಮುಖ್ಯಮಂತ್ರಿಗಳ ಭೇಟಿ.
ಭಾರತದಲ್ಲಿ ನಿನ್ನೆ 20,035 ಕೊವಿಡ್ ಪ್ರಕರಣ ಪತ್ತೆ. ಒಟ್ಟು ಪ್ರಕರಣಗಳ ಸಂಖ್ಯೆ 1,02,86,709ಕ್ಕೆ ಏರಿಕೆ.
11:17 am ಭಾರತದಲ್ಲಿ ನಿನ್ನೆ 20,035 ಹೊಸಾ ಕೊವಿಡ್ ಪ್ರಕರಣ ಪತ್ತೆ. ಈ ಮೂಲಕ ನಿರಂತರ 19ನೇ ದಿನವೂ 30 ಸಾವಿರಕ್ಕಿಂತ ಕಡಿಮೆ ಕೊರೊನಾ ಪಾಸಿಟಿವ್ ದಾಖಲು. ಆರಂಭದಿಂದ ಇದುವರೆಗೆ ದಾಖಲಾದ ಒಟ್ಟು ಪ್ರಕರಣಗಳ ಸಂಖ್ಯೆ 1,02,86,709ಕ್ಕೆ ಏರಿಕೆ. ನಿನ್ನೆ 256 ಜನ ಸೋಂಕಿತರು ಮೃತಪಟ್ಟಿದ್ದು, ಕೊರೊನಾದಿಂದ ಸಾವಿಗೀಡಾದವರ ಸಂಖ್ಯೆ 1,48,994ಕ್ಕೆ ತಲುಪಿದೆ. ಸದ್ಯ ದೇಶಾದ್ಯಂತ ಒಟ್ಟು 2,54,254 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಸಲಾಕೆ, ಗುದ್ದಲಿ, ಬುಟ್ಟಿ ಸಮೇತ ಗ್ರಾಮ ಪಂಚಾಯತಿ ಕಚೇರಿಗೆ ಮುತ್ತಿಗೆ
11:11 am ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಕ್ಕೆ ಒತ್ತಾಯಿಸಿ ಗ್ರಾಮ ಪಂಚಾಯತಿ ಕಚೇರಿಗೆ ಮುತ್ತಿಗೆ. ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಶಾಂತಗಿರಿಯಲ್ಲಿ ಘಟನೆ. ಸಲಾಕೆ, ಗುದ್ದಲಿ, ಬುಟ್ಟಿ ಸಮೇತ ಮುತ್ತಿಗೆ ಹಾಕಿದ ನೂರಾರು ಜನರು. ಗ್ರಾ.ಪಂ. ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ.
ಬೆಳಗಾವಿಯಲ್ಲಿ ಪ್ರತ್ಯೇಕ ರಾಜ್ಯದ ಧ್ವಜ ಹಾರಿಸಿದ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ
11:08 am ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಯಲ್ಲಿ ಮತ್ತೆ ಪ್ರತ್ಯೇಕ ರಾಜ್ಯ ಧ್ವಜಾರೋಹಣ. ಹಿರೇಬಾಗೇವಾಡಿ ಬಸ್ ನಿಲ್ದಾಣದಲ್ಲಿ ಘಟನೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯಿಂದ ಕೃತ್ಯ. ಅಭಿವೃದ್ಧಿ ವಿಚಾರದಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಜಿಲ್ಲಾಧ್ಯಕ್ಷ ಅಡಿವೇಶ್ ಇಟಗಿ ನೇತೃತ್ವದಲ್ಲಿ ಧ್ವಜಾರೋಹಣ. ಸ್ಥಳಕ್ಕೆ ಆಗಮಿಸಿ ಪ್ರತ್ಯೇಕ ರಾಜ್ಯದ ಧ್ವಜ ವಶಕ್ಕೆ ಪಡೆದ ಪೊಲೀಸರು.
ಕೊರೊನಾ ಪಾಸಿಟಿವ್ ಹಿನ್ನೆಲೆ.. ಉಡುಪಿ ಜಿಲ್ಲೆಯ 2 ಶಾಲೆಗಳನ್ನು ಆರಂಭಿಸದಿರಲು ಸೂಚನೆ
11:04 am ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಯಲ್ಲಿ ಕೊರೊನಾ ಪಾಸಿಟಿವ್. ಉಡುಪಿ ಜಿಲ್ಲೆಯ ಎರಡು ಶಾಲೆಗಳನ್ನು ತೆರೆಯದಂತೆ ಸೂಚನೆ. ಬ್ರಹ್ಮಾವರದ ಶಾಲೆಯೊಂದರ ಶಿಕ್ಷಕಿಗೆ ಮತ್ತು ಮುನಿಯಾಲಿನ ಶಾಲೆಯೊಂದರ ಶಿಕ್ಷಕೇತರ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಾಲೆ ಆರಂಭಿಸದಿರಲು ನಿರ್ಧಾರ. ಶಾಲಾ ಆರಂಭಕ್ಕೂ ಮುನ್ನ ನಡೆಸಿದ ಕೊವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಪತ್ತೆ.
ವಿಜಯಪುರದಲ್ಲಿ ಹಳೇ ವೈಷಮ್ಯದ ಕಾರಣ ಯುವಕನ ಮೇಲೆ ಹಲ್ಲೆ
10:57 am ಹೊಸ ವರ್ಷದ ಸಂದರ್ಭದಲ್ಲಿ ಹಳೇ ವೈಷಮ್ಯವನ್ನು ಇಟ್ಟುಕೊಂಡು ಯುವಕನೊಬ್ಬನ ಮೇಲೆ ತಲವಾರ್ನಿಂದ ಹಲ್ಲೆ ಮಾಡಿದ ಘಟನೆ ವಿಜಯಪುರದಲ್ಲಿ ನಡೆದಿದೆ. ನಗರದ ಆಸರ್ ಮಹಲ್ ಹಿಂಬಾಗದಲ್ಲಿ ಫಯಾಜ್ ಎಂಬ ಯುವಕನ ಮೇಲೆ ಇಸ್ಮಾಯಿಲ್ ಎಂಬಾತ ಹಲ್ಲೆ ನಡೆಸಿದ್ದಾನೆ. ಫಯಾಜ್ನ ಕೈ, ಕಾಲಿಗೆ ಗಾಯ ಆಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗೋಲಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಮೂರ್ನಾಲ್ಕು ದಿನಗಳಲ್ಲಿ ಪಠ್ಯ ಕಡಿತ ಮತ್ತು ಪರೀಕ್ಷೆ ದಿನಾಂಕ ಪ್ರಕಟಣೆ
10:55 am ಮಕ್ಕಳ ಕಲಿಕೆಗೆ ಅನುವಾಗುವಂತೆ ಪಠ್ಯ ಕಡಿತ ಮಾಡಲಾಗಿದ್ದು, ಪಠ್ಯ ಕಡಿತದ ಫೈಲ್ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಬಳಿ ಬಂದಿದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಪಠ್ಯ ಕಡಿತ, ಪರೀಕ್ಷೆ ದಿನಾಂಕ ಪ್ರಕಟಿಸುತ್ತೇವೆ ಎಂದು ಹೇಳಿದ ಶಿಕ್ಷಣ ಖಾತೆ ಸಚಿವ ಸುರೇಶ್ ಕುಮಾರ್. ಪಠ್ಯ ಕಡಿತ ಅಂದರೆ ಪರೀಕ್ಷೆಗೆ ಮುಖ್ಯವಾಗಿದ್ದನ್ನು ಮಾತ್ರ ಭೋದಿಸಲಾಗುತ್ತದೆ ಎಂದು ಸ್ಪಷ್ಟನೆ ನೀಡಿದ ಶಿಕ್ಷಣ ಸಚಿವರು.
ಕೊರೊನಾ ಲಸಿಕೆಗೆ ಸಂಬಂಧಿಸಿದ ಮಹತ್ವದ ಸಭೆ ಆರಂಭ
10:50 am ಭಾರತದಲ್ಲಿ ಕೊರೊನಾ ಲಸಿಕೆ ಬಳಕೆಗೆ ಅನುಮತಿ ನೀಡುವ ಕುರಿತು ಆಯೋಜಿಸಿರುವ ಮಹತ್ವದ ಸಭೆ ಆರಂಭ. SEC (ಸಬ್ಜೆಕ್ಟ್ ಎಕ್ಸ್ಪರ್ಟ್ ಕಮಿಟಿ ಆನ್ ವ್ಯಾಕ್ಸಿನ್) ಶಿಫಾರಸು ಆಧರಿಸಿ DCGI ಅಂತಿಮ ನಿರ್ಧಾರ.
ಸಂಬಲ್ಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ನಾಳೆ ನಡೆಯಲಿದೆ
10:45 am ಒರಿಸ್ಸಾದ ಸಂಬಲ್ಪುರದಲ್ಲಿ ಸ್ಥಾಪಿಸಲಾಗುತ್ತಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (IIM) ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ನಾಳೆ (ಜ.2) ಬೆಳಗ್ಗೆ 11 ಗಂಟೆಗೆ ನೆರವೇರಿಸಲಿದ್ದಾರೆ. ವೀಡಿಯೋ ಕಾನ್ಪರೆನ್ಸ್ ಮೂಲಕ ಕಾರ್ಯಕ್ರಮ ನಡೆಯಲಿದೆ. ಒರಿಸ್ಸಾದ ರಾಜ್ಯಪಾಲ, ಮುಖ್ಯಮಂತ್ರಿ ಮತ್ತು ವಿವಿಧ ಇಲಾಖೆಗಳ ಕೇಂದ್ರ ಸಚಿವರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಹತ್ತು ಗಂಟೆಯಾದ್ರೂ ಶಾಲೆಗೆ ಬಾರದ ಮುಖ್ಯೋಪಾಧ್ಯಾರಿಗೆ ಶೋಕಾಸ್ ನೋಟೀಸ್.
10:40 am ಹತ್ತು ಗಂಟೆಯಾದ್ರೂ ಶಾಲೆಗೆ ಬಾರದ ಮುಖ್ಯೋಪಾಧ್ಯಾರಿಗೆ ಶೋಕಾಸ್ ನೋಟೀಸ್. ಹಾಸನದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ವಿರುದ್ದ ಸಿಇಓ ಗರಂ. ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಮುಖ್ಯೋಪಾಧ್ಯಾಯರ ಬೇಜವಾಬ್ದಾರಿತನ ಕಂಡು ಸಿಟ್ಟಾದ ಜಿಪಂ ಸಿಇಓ ಭಾರತಿ. ಶೋಕಾಸ್ ನೋಟೀಸ್ ನೀಡಲು ಬಿಇಓ ಗೆ ಸೂಚನೆ.
ಕೊರೆಯುವ ಚಳಿ ನಡುವೆ 37ನೇ ದಿನಕ್ಕೆ ಕಾಲಿಟ್ಟ ರೈತ ಹೋರಾಟ
10:30 am ಪಂಜಾಬ್ ರೈತರ ದೆಹಲಿ ಚಲೋ ಚಳುವಳಿ 37ನೇ ದಿನ ಪ್ರವೇಶಿಸಿದೆ. ರಾಷ್ಟ್ರ ರಾಜಧಾನಿಯಲ್ಲಿ ಕೊರೆಯುವ ಚಳಿಯ ನಡುವೆಯೂ ರೈತರು ಚಳುವಳಿ ಮುಂದುವರೆಸಿದ್ದಾರೆ. ಜನವರಿ 4ರಂದು ಕೇಂದ್ರ ಸರ್ಕಾರದ ಜತೆ ರೈತರ ಮುಂದಿನ ಸಭೆ ನಡೆಯಲಿದೆ.
ಹಳಿ ತಪ್ಪಿದ ಬೆಂಗಳೂರು – ತಾಳಗುಪ್ಪ ಇಂಟರ್ ಸಿಟಿ ರೈಲು
10:00 am ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಬಸವಾಪುರ (ಸೂಡೂರು/ಅರಸಾಳು ಮಧ್ಯೆ) ಬೆಂಗಳೂರು – ತಾಳಗುಪ್ಪ ಇಂಟರ್ ಸಿಟಿ ರೈಲು ಹಳಿ ತಪ್ಪಿದೆ. ನಿನ್ನೆ ರಾತ್ರಿ ಘಟನೆ ಸಂಭವಿಸಿದ್ದು ಅದೃಷ್ವಶಾತ್ ಯಾವುದೇ ಅವಘಡ ಸಂಭವಿಸಿಲ್ಲ. ರೈಲಿನಲ್ಲಿದ್ದ ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದು, ತಾವೇ ಪರ್ಯಾಯ ವ್ಯವಸ್ಥೆ ಮಾಡಿಕೊಂಡು ತಮ್ಮ ತಮ್ಮ ಊರುಗಳಿಗೆ ತೆರಳಿದ್ದಾರೆ.
ಕೊವಿಶೀಲ್ಡ್ ಲಸಿಕೆಯ ತುರ್ತು ಬಳಕೆಗೆ ಭಾರತದಲ್ಲಿ ಇಂದು ಅನುಮತಿ ಸಾಧ್ಯತೆ.
9:41 am ಆಕ್ಸ್‌ಫರ್ಡ್-ಆಸ್ಟ್ರಾಜೆನಿಕಾ ಅಭಿವೃದ್ಧಿಪಡಿಸಿರುವ ಕೊವಿಶೀಲ್ಡ್ ಲಸಿಕೆಯ ತುರ್ತು ಬಳಕೆಗೆ ಭಾರತದಲ್ಲಿ ಇಂದು ಅನುಮತಿ ಸಾಧ್ಯತೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು SEC (ಸಬ್ಜೆಕ್ಟ್ ಎಕ್ಸ್‌ಫರ್ಟ್ ಕಮಿಟಿ ಆನ್ ವ್ಯಾಕ್ಸಿನ್) ಸಭೆ. ಈಗಾಗಲೇ 2 ಬಾರಿ ಸಭೆ ನಡೆಸಿರುವ ಎಸ್‌ಇಸಿ. ಸದ್ಯ ಕೊವಿಶೀಲ್ಡ್ ಬಗ್ಗೆ ದತ್ತಾಂಶ ಕಲೆಹಾಕಿರುವ ಸಮಿತಿ. ಇಂದು ಕೊವಿಶೀಲ್ಡ್ ಪರಿಣಾಮ, ಸುರಕ್ಷತೆ ಬಗ್ಗೆ ಚರ್ಚಿಸಿ ನಂತರ ಡಿಜಿಸಿಎಗೆ ಶಿಫಾರಸು ಮಾಡಲಿರುವ ಎಸ್‌ಇಸಿ.
ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸುರೇಶ್ ಕುಮಾರ್
9:30 am: ಶಾಲಾ-ಕಾಲೇಜು ಪುನರಾರಂಭ ಹಿನ್ನೆಲೆ ನಗರದ ವಿವಿಧ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್.
Published On - Jan 01,2021 9:44 PM