ಬೈಂದೂರು ಬಿಜೆಪಿ ಟಿಕೆಟ್ ಭರ್ತಿಗೆ ಏಳು ಕೋಟಿ ಡೀಲ್! ಸಿನಿಮೀಯ ಶೈಲಿಯಲ್ಲಿ ಬೆಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ; ಇಲ್ಲಿದೆ ಸಂಪೂರ್ಣ ವಿವರ
ಬೈಂದೂರು ಬಿಜೆಪಿ ಟಿಕೆಟ್ ಭರ್ತಿಗೆ ಏಳು ಕೋಟಿ ಡೀಲ್ ಮಾಡಿದ ಪ್ರಕರಣದಲ್ಲಿ ಸಿನಿಮೀಯ ಶೈಲಿಯಲ್ಲಿ ಬೆಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ ನಡೆಸಿದ್ದಾರೆ. ಬಳಿಕ ಭಾಷಣಕಾರ್ತಿ, ಹಿಂದೂ ಕಾರ್ಯಕರ್ತೆ ಚೈತ್ರಳನ್ನು ಬಂಧಿಸಿದ್ದು, ರಾಜ್ಯದಲ್ಲೇ ಸಂಚಲನ ಮೂಡಿಸಿದೆ. ಈ ಕುರಿತು ಮಾಹಿತಿ ಇಲ್ಲಿದೆ
ಉಡುಪಿ, ಸೆ.13: ಕರ್ನಾಟಕ ವಿಧಾನಸಭೆಯ 2023ರ ಚುನಾವಣೆ ಮುಗಿದಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನೂರು ದಿನ ಪೂರೈಸಿದೆ. ಈ ನಡುವೆ ರಾಜ್ಯದಲ್ಲೇ ಸಂಚಲನ ಮೂಡಿಸುವ ಪೊಲಿಟಿಕಲ್ ಪ್ರಕರಣ ಬೆಳಕಿಗೆ ಬಂದಿದೆ. ಹೌದು, ಉಡುಪಿ (Udupi) ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರ (Byndoor Constituency) ದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಐದುವರೆ ಕೋಟಿ ಚೈತ್ರಾ ಕುಂದಾಪುರ ಪಡೆದಿದ್ದಳು. ಇನ್ನೊಂದುವರೆ ಕೋಟಿಗೆ ಹೊಂಚು ಹಾಕಿದ್ದ ಸ್ವಯಂ ಘೋಷಿತ ಹಿಂದೂ ಹೆಣ್ಣು ಹುಲಿ ಖ್ಯಾತಿಯ ಚೈತ್ರಾ ಕುಂದಾಪುರ ಇದೀಗ ಅರೆಸ್ಟ್ ಆಗಿದ್ದಾಳೆ.
ಉದ್ಯಮಿಯನ್ನು ಖೆಡ್ಡಾಕ್ಕೆ ಕೆಡವಿದ ಚೈತ್ರಾ ಕುಂದಾಪುರ
ಹೌದು, ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರು ಬಡತನದಲ್ಲಿ ಬೆಳೆದು, ಹೋಟೆಲ್ನಲ್ಲಿ ಕೆಲಸ ಮಾಡಿ, ಇದೀಗ ಸ್ವಂತ ಹೋಟೆಲ್ ಸ್ಥಾಪಿಸಿ. ಶಿಫ್ ಟಾಪ್ ಎಂಬ ಕಿಚನ್ ನಡೆಸುತ್ತಿದ್ದಾರೆ. ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡು ಈ ಬಾರಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಸಮಾಜಸೇವೆ, ಧಾರ್ಮಿಕ, ಶೈಕ್ಷಣಿಕ ಸಹಕಾರವನ್ನು ಮಾಡುತ್ತಾ ಬೈಂದೂರಿನಲ್ಲಿ ಓಡಾಡಿಕೊಂಡಿದ್ದರು. ಇದೇ ಸಮಯದಲ್ಲಿ ರಾಷ್ಟ್ರೀಯತೆ ದೇಶ, ಧರ್ಮ, ಜಾತಿ, ನೀತಿ ಎಂದು ರಾಜ್ಯಾದ್ಯಂತ ಭಾಷಣ ಮಾಡಿಕೊಂಡಿದ್ದ ಚೈತ್ರಾ ಬೈಂದೂರಿನ ಟಿಕೆಟ್ ಡೀಲ್ಗೆ ಇಳಿದಿದ್ದಳು. ತಾನೊಂದು ಟೀಮ್ ಕಟ್ಟಿಕೊಂಡು ಗೋವಿಂದಬಾಬು ಪೂಜಾರಿ ಅವರನ್ನು ಸಂಪರ್ಕ ಮಾಡಿ ಬಿಜೆಪಿ, ಆರ್.ಎಸ್. ಎಸ್ ಸಂಘ, ರಾಷ್ಟ್ರದ ನಾಯಕರು ಪರಿಚಯ ಎಂದು ಕನಸಿನ ಗೋಪುರ ಕಟ್ಟಿಸಿದ್ದಾಳೆ. ಎಲ್ಲವನ್ನೂ ನಂಬಿದ ಗೋವಿಂದ ಬಾಬು ಪೂಜಾರಿ ಹಂತ ಹಂತವಾಗಿ ಐದೂವರೆ ಕೋಟಿ ರೂಪಾಯಿ ನೀಡಿದ್ದಾರೆ.
ಇದನ್ನೂ ಓದಿ:ಚೈತ್ರಾ ಕುಂದಾಪುರ ವಂಚನೆ: 10 ತಿಂಗಳ ಹಿಂದೆಯೇ ಕೋಟಿ ದೋಚುವ ಪ್ಲ್ಯಾನ್! ಸಲೂನ್ ಮಾಲೀಕನಿಂದ ಸ್ಪೋಟಕ ಮಾಹಿತಿ
ಟಿಕೆಟ್ ಡೀಲ್ಗೆ ನಡೆದಿತ್ತು ಬಹುದೊಡ್ಡ ನಾಟಕ!10 ತಿಂಗಳ ಹಿಂದೆ ಸ್ಕೆಚ್ ಹಾಕಿದ್ದ ಚೈತ್ರ
ಹತ್ತು ತಿಂಗಳ ಹಿಂದೆಯ ಪ್ಲಾನ್ ಮಾಡಿಕೊಂಡಿದ್ದ ಚೈತ್ರ ಮತ್ತು ಗ್ಯಾಂಗ್ ಮೊದಲಿಗೆ ಪರಿಚಯ ಮಾಡಿದ್ದು ಚಿಕ್ಕಮಗಳೂರಿನ ಗಗನ್ ಕಡೂರ್ ಅವರನ್ನು. ಗಗನ್ ಅವರಿಗೆ ಪ್ರಧಾನಿ ಮತ್ತು ಗೃಹ ಕಛೇರಿಯ ನಿಕಟ ಸಂಪಕರ್ದಲ್ಲಿರುವವನು ಎಂದು ಚಿಕ್ಕಮಗಳೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಬಾಬು ಪೂಜಾರಿಗೆ ಗಗನನ್ನು ಚೈತ್ರ ಪರಿಚಯ ಮಾಡಿಸಿದ್ದಳು. ಅಲ್ಲಿಂದಲೇ ಕೋಟಿ ಕೋಟಿ ಲೂಟಿ ಮಾಡಲು ಪ್ಲಾನ್ ಮಾಡಿದ್ದ ಚೈತ್ರ. ಮತ್ತೆ ಒಬ್ಬ ಒಬ್ಬರನ್ನು ಕಥೆಗೆ ತಕ್ಕಂತೆ ಸೀನ್ ಕ್ರಿಯೆಟ್ ಮಾಡಿದ್ದರು.
ವಿಶ್ವನಾಥ್ ಆರ್ಎಸ್ಎಸ್ ಮುಖ್ಯಸ್ಥ ಎಂಬ ಪಾತ್ರಧಾರಿ ಒಬ್ಬನನ್ನು ಸೃಷ್ಟಿಸಿದ ಚೈತ್ರಾ!
ಇನ್ನು ಈಕೆ ಕಥಗೆ ಎಂಟ್ರಿ ಕೊಟ್ಟಿದ್ದು ವಿಶ್ವನಾಥ್ ಜಿ. ವಿಶ್ವನಾಥ್ ಆರ್ ಎಸ್ ಎಸ್ ಕಾರ್ಯಕರ್ತರಾಗಿದ್ದು, ಟಿಕೆಟ್ ಫೈನಲ್ ಆಗ ಬೇಕಾದ್ರೆ ಸಂಘದವರು ಪ್ರಮುಖರಾಗಿರುತ್ತಾರೆ ಎಂದು ವಿಶ್ವನಾಥ್ ಜಿ ಸೀನ್ ಕ್ರಿಯೆಟ್ ಮಾಡಿದ್ದ ಚೈತ್ರ. ಬಳಿಕ ವಿಶ್ವನಾಥ್ ಜಿ ಯನ್ನು ಬಾಬು ಪೂಜಾರಿಯವರಿಗೆ ಪರಿಚಯ ಮಾಡಿ, ಮೊದಲಿಗೆ 50 ಸಾವಿರ ಕೊಡಿ ಟಿಕೆಟ್ ಘೋಷಣೆಯ ಸಮಯದಲ್ಲಿ 3 ಕೋಟಿ ವಿಶ್ವನಾತ್ ಜಿ ಗೆ ಕೊಡಿ ಎಂದು ಹೇಳಿದ್ದಳು.
ಇದನ್ನೂ ಓದಿ:ಚೈತ್ರಾ ಕುಂದಾಪುರಗೆ ಪೊಲೀಸ್ ಬಂಧನ ಹೊಸದಲ್ಲ, ಹಿಂದೆಯೂ ಆಕೆಗೆ ಆತಿಥ್ಯ ಲಭ್ಯವಾಗಿತ್ತು!
ಕೋಟಿ ಕಳೆದುಕೊಂಡ ಗೋವಿಂದ ಪೂಜಾರಿಗೆ ಶಾಕ್ ಮೇಲೆ ಶಾಕ್! ಕೊನೆಗೂ ದೂರು ದಾಖಲಿಸದ ಪೂಜಾರಿ
ಐದುವರೆ ಕೋಟಿ ರೂಪಾಯಿ ಕಳೆದುಕೊಂಡ ಗೋವಿಂದ ಬಾಬು ಪೂಜಾರಿ ಶಾಕ್ಗೆ ಒಳಗಾಗಿದ್ದರು. ಇದೆಲ್ಲವೂ ಸಹಜವಾಗಿ ನಡೆಯುತ್ತಿಲ್ಲವಲ್ಲ ಎಂಬ ಗುಮಾನಿ ಅವರಿಗೆ ಬಂದಿತ್ತು. ತನ್ನ ದೆಹಲಿಯ ಗೆಳೆಯನ ಮೂಲಕ ತನಿಖೆ ಮಾಡಿಸಿದಾಗ ವಿಶ್ವನಾಥ್ ಎಂಬ ವ್ಯಕ್ತಿಯೇ ಇಲ್ಲ ಎಂದು ಗೊತ್ತಾಗಿಬಿಟ್ಟಿದೆ. ಕೂಡಲೇ ಹಣವನ್ನು ವಾಪಸ್ ಕೇಳಿದಾಗ ತಾನು ಮೋಸ ಹೋಗಿರುವುದು ತಿಳಿದುಬಿಟ್ಟಿದೆ. ಅಷ್ಟರಲ್ಲಿ ಚುನಾವಣೆ ಬಂದಿದೆ. ಗುರುರಾಜ್ ಗಂಟೆ ಹೊಳಿಗೆ ಟಿಕೆಟ್ ಸಿಕ್ಕಿ, ಅವರ ಗೆಲುವು ಆಗಿದೆ. ತಿಂಗಳಿಂದ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಆಗುತ್ತಿದ್ದರೂ, ಗೋವಿಂದ ಬಾಬು ಪೂಜಾರಿ ದೂರು ನೀಡಿರಲಿಲ್ಲ. ಈ ನಡುವೆ ವಾಟ್ಸಾಪ್ ಫೇಸ್ ಬುಕ್ ನಲ್ಲಿ ಅನಾಮಿಕ ಪತ್ರ ಒಂದು ಹರಿದಾಡಲು ಶುರು ಆಯ್ತು. ಕೋಟಿ ಕೋಟಿ ನುಂಗಿದ್ದು ಹೇಗೆ ಎಂಬ ಸವಿವರವಾದ ಕಥೆ ಎಲ್ಲೆಡೆ ಓಡಾಡಿತು. ಎಲ್ಲಾ ದಾಖಲೆಗಳನ್ನು ಸಂಗ್ರಹ ಮಾಡುತ್ತಿದ್ದ ಗೋವಿಂದ ಬಾಬು ಪೂಜಾರಿ ಬೆಂಗಳೂರಿನಲ್ಲಿ ಪ್ರಕರಣ ದಾಖಲಿಸಿಯೇ ಬಿಟ್ಟರು.
ತಲೆಮರೆಸಿಕೊಂಡ ಗ್ಯಾಂಗ್
ಪ್ರಕರಣ ದಾಖಲಾಗುತ್ತಿದ್ದಂತೆ ಚೈತ್ರ ಅವರ ಇಡೀ ಗ್ಯಾಂಗ್ ರಾಜ್ಯದ ಅಲ್ಲಲ್ಲಿ ತಲೆಮರಿಸಿಕೊಂಡಿದೆ. ಸ್ವಿಚ್ ಆಫ್ ಮಾಡಿಕೊಂಡು ಓಡಾಡುತ್ತಿದ್ದ ಚೈತ್ರ ಉಡುಪಿ ಮಂಗಳೂರು, ಚಿಕ್ಕಮಗಳೂರು, ಬೆಂಗಳೂರು ಉತ್ತರ ಕರ್ನಾಟಕ ಎಂದು ಓಡಾಡಿದ್ದಾರೆ. ಯಾವ್ಯಾವುದೋ ನಂಬರ್ ಇಂದ ತನ್ನ ಗೆಳೆಯರನ್ನು ಸಂಪರ್ಕ ಮಾಡುತ್ತಿದ್ದಳು. ಚೈತ್ರ ಕುಂದಾಪುರಾಳ ಪಟಾಲಾಂನ ಮೇಲೆ ಕಣ್ಣಿಟ್ಟ ಸಿಸಿಬಿ ಪೊಲೀಸರು ಆಪ್ತ ನೊಬ್ಬನನ್ನು ವಶಕ್ಕೆ ಪಡೆದಿದ್ದರು. ಆ ಸಂದರ್ಭದಲ್ಲಿ ಚೈತ್ರ ಕುಂದಾಪುರ ಫೋನ್ ಬಂದಿದ್ದು ಉಡುಪಿಯ ಡಯಾನ ಸಮೀಪ ಅಪಾರ್ಟ್ಮೆಂಟ್ ಒಂದರಲ್ಲಿ ಅವಿತು ಕುಳಿತಿರುವ ವಿಚಾರ ಪೊಲೀಸರಿಗೆ ಗೊತ್ತಾಗಿದೆ. ಉಡುಪಿ ಕೃಷ್ಣಮಠಕ್ಕೆ ಕರೆಸಿದ ಪೊಲೀಸರು ಸ್ವಯಂಘೋಷಿತ ಹಿಂದೂ ನಾಯಕಿಯ ಹೆಡೆಮುರಿ ಕಟ್ಟಿದರು.
ಇದನ್ನೂ ಓದಿ:ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಆಶ್ರಯ ಪಡೆದಿದ್ದು ಕೆಪಿಸಿಸಿ ಮಾಧ್ಯಮ ವಕ್ತಾರೆ ಅಂಜುಂ ಮನೆಯಲ್ಲಿ
ಪ್ರಕರಣದ ಎಫ್ಐಆರ್ನಲ್ಲಿ ಎಂಟು ಮಂದಿಯ ಹೆಸರು ದಾಖಲಾಗಿದೆ. ಆರು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರಾಜಕೀಯದ ಆಸೆಗೆ ಬಲಿಯಾಗಿ ಎಷ್ಟು ಜನ ಕಾಸು ಕಳೆದುಕೊಂಡಿದ್ದಾರೋ ಗೊತ್ತಿಲ್ಲ. ಈ ಪ್ರಕರಣ ಬೆಳಕಿಗೆ ಬಂದ ನಂತರ ಮತ್ತಷ್ಟು ಟಿಕೆಟ್ ಡೀಲ್ಗಳು ಹೊರಬರುವ ಸಾಧ್ಯತೆ ಇದೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ