ಅಯೋಧ್ಯೆ ರಾಮ ಮಂದಿರದಲ್ಲಿ ಪೇಜಾವರ ಶ್ರೀಗಳ ಮುಂದಾಳತ್ವ: 48 ದಿನಗಳ ಕಾಲ ನೂರಾರು ಮಂದಿ ಪ್ರತ್ಯೇಕ ವೈದಿಕರಿಂದ ಯಜ್ಞಯಾಗ
ಅಯೋಧ್ಯೆಯಲ್ಲಿ ನಡೆಯುವ ಧಾರ್ಮಿಕ ವಿಧಿಗಳಲ್ಲಿ ಪ್ರತಿದಿನ ಪ್ರತ್ಯೇಕವಾಗಿ ಒಟ್ಟು 400 ವೈದಿಕರು ಯಜ್ಞ ಯಾಗದಲ್ಲಿ ಭಾಗಿಯಾಗುತ್ತಾರೆ. ಇಂದು ಅನುಷ್ಠಾನದಲ್ಲಿ ಭಾಗಿಯಾದವರು ನಾಳೆ ಇರುವುದಿಲ್ಲ. ಪ್ರತಿ ದಿನ ಪ್ರತ್ಯೇಕ ವಿದ್ವಾಂಸರಿಂದ ಧಾರ್ಮಿಕ ಕಾರ್ಯ ನಡೆಯುತ್ತದೆ.
ಅಯೋಧ್ಯೆಯಲ್ಲಿ ಶ್ರೀರಾಮ ವಿರಾಜಮಾನವಾಗಿದ್ದಾನೆ. ಮೊನ್ನೆ ಸೋಮವಾರ ತನ್ನ ಜನ್ಮಸ್ಥಳದಲ್ಲಿ ಬಾಲರಾಮನ ಪ್ರತಿಷ್ಠಾಪನೆಯಾದ ನಂತರ 48 ದಿನಗಳ ಕಾಲ ನಡೆಯುವ ಧಾರ್ಮಿಕ ವಿಧಿವಿಧಾನಗಳನ್ನು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಆರಂಭಿಸಿದ್ದಾರೆ.
ಪೇಜಾವರ ಮಠಕ್ಕೂ ಅಯೋಧ್ಯೆಗೆ ಏನು ನಂಟು…?
ಉಡುಪಿಯ ಪೇಜಾವರ ಮಠಕ್ಕೂ ಅಯೋಧ್ಯೆ ರಾಮಮಂದಿರಕ್ಕೂ ಹತ್ತಿರದ ನಂಟು ಇದೆ. ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರ ನಿರ್ಮಾಣಕ್ಕಾಗಿ ನಡೆದ ಹೋರಾಟದಲ್ಲಿ ಹಿರಿಯ ಪೇಜಾವರ ಶ್ರೀಗಳಾದ ವಿಶ್ವೇಶ ತೀರ್ಥ ಶ್ರೀಪಾದರು ಮುಂಚೂಣಿಯಲ್ಲಿದ್ದರು. ವಿಶ್ವ ಹಿಂದೂ ಪರಿಷತ್ ನಿಂದ ಮೂರು ಧರ್ಮ ಸಂಸತ್ ಗಳು ಉಡುಪಿಯಲ್ಲಿ ನಡೆದಾಗಲೂ ಪೇಜಾವರ ಮಠದ ಹಿರಿಯ ಶ್ರೀ ಪಾದರು ಅದರ ನೇತೃತ್ವ ವಹಿಸಿದ್ದರು.
ಅಯೋಧ್ಯೆಯ ಶ್ರೀ ರಾಮನ ಜನ್ಮಸ್ಥಳದಲ್ಲಿದ್ದ ವಿವಾದಿತ ಕಟ್ಟಡ ನೆಲಸಮಕ್ಕಾಗಿ ನಡೆದ ಆಂದೋಲನದಲ್ಲೂ ಪೇಜಾವರ ಹಿರಿಯ ಶ್ರೀಗಳು ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದರು. ವಿವಾದಿತ ಕಟ್ಟಡ ನೆಲಸಮ ಮಾಡಿ ಮರುಕ್ಷಣವೇ ಶ್ರೀ ರಾಮಲಲ್ಲಾನ ವಿಗ್ರಹವನ್ನು ಸ್ಥಾಪಿಸಿದ್ದೂ ಪೇಜಾವರ ಹಿರಿಯ ಶ್ರೀಗಳು.
ಹೀಗಾಗಿ ಅಯೋಧ್ಯೆ ಮತ್ತು ಉಡುಪಿಯ ಪೇಜಾವರ ಮಠಕ್ಕೆ ಆಧ್ಯಾತ್ಮಿಕ ನಂಟು ಇದೆ. ಅಯೋಧ್ಯೆ ಮತ್ತು ಪೇಜಾವರ ಮಠದ ನಂಟು ಈಗಲೂ ಮುಂದುವರಿದಿದ್ದು ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾನ ಮೂರ್ತಿಯ ಪ್ರತಿಷ್ಠಾಪನೆ ಬಳಿಕ ನಡೆದಿರುವ ಧಾರ್ಮಿಕ ವಿಧಿವಿಧಾನಗಳು ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಮುಂದಾಳತ್ವದಲ್ಲಿ ನಡೆದಿದೆ.
ಅಯೋಧ್ಯೆಯಲ್ಲಿ ನಡೆಯುವ 48 ದಿನಗಳ ಮಂಡಲೋತ್ಸವ್ಕಕೆ ಚಾಲನೆ..
ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯಾದ ಬಳಿಕದ 48 ದಿನಗಳ ಮಂಡಲೋತ್ಸವ ಜರಗುತ್ತಿದ್ದು ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀ ಪಾದರ ಮುಂದಾಳತ್ವದಲ್ಲಿ ಅಯೋಧ್ಯಾ ಕ್ಷೇತ್ರದಲ್ಲಿ ಮಂಡಲೋತ್ಸವ ಆರಂಭವಾಗಿದೆ. ಅಯೋಧ್ಯೆಯ ನೂತನ ಮಂದಿರದಲ್ಲಿ ಶ್ರೀರಾಮನ ವಿಧ್ಯುಕ್ತ ಪ್ರತಿಷ್ಠಾಪನೆಯ ನಂತರ 48 ದಿನಗಳ ಕಾಲ ಪೇಜಾವರ ಶ್ರೀಗಳ ನೇತೃತ್ವದಲ್ಲಿ ನಡೆಯಲಿರುವ ಮಂಡಲೋತ್ಸವ ಆರಂಭಗೊಂಡಿದೆ.
ಪೇಜಾವರ ಶ್ರೀಗಳು ಮಂಗಳವಾರ ವಿವಿಧ ಮಂತ್ರಗಳಿಂದ ಪ್ರತಿಮೆಗೆ ತತ್ತ್ವನ್ಯಾಸಾದಿಗಳನ್ನು ನೆರವೇರಿಸಿ ಕಲಶಪೂಜೆ ಮಾಡಿದರು. ಚಾಮರಸೇವೆ ಮಂಗಳಾರತಿಗಳನ್ನು ನೆರವೇರಿಸಿ ಪೂಜೆ ಸಲ್ಲಿಸಿದರು. ಇದಕ್ಕೂ ಮೊದಲು ಪಿಲೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಚಾರ್ಯ ವಿದ್ವಾನ್ ಸತ್ಯನಾರಾಯಣಾಚಾರ್ಯ, ವಿಷ್ಣುಮೂರ್ತಿ ಆಚಾರ್ಯ, ಶಶಾಂಖ ಭಟ್ ಲಕ್ಷ್ಮೀನಾರಾಯಣ ಭಟ್ ಮೊದಲಾದವರ ನೇತೃತ್ವದಲ್ಲಿ ವಿವಿಧ ಹೋಮ ಹವನಾದಿಗಳು ಕಲಶಾರಾಧನೆ ಇತ್ಯಾದಿಗಳು ನೆರವೇರಿವೆ.
48 ದಿನ ಅಯೋಧ್ಯೆಯಲ್ಲಿ ಏನೆಲ್ಲ ಧಾರ್ಮಿಕ ವಿಧಿವಿಧಾನ ನಡೆಯಲಿದೆ….?
(ನಿನ್ನೆಯಿಂದ) ಜನವರಿ 23 ರಿಂದ 48 ದಿನಗಳ ಒಂದು ಮಂಡಲ ಪರ್ಯಂತ, ನಿತ್ಯ ಶ್ರೀ ರಾಮಲಲ್ಲಾನ ಪ್ರತಿಮೆಯಲ್ಲಿ ಸನ್ನಿಧಾನ ತುಂಬುವ ಕೆಲಸ ಮಾಡಲಾಗುತ್ತದೆ. ವೇದೋಕ್ತ ಮಹಾಮಂತ್ರದ ಮೂಲಕ ಆರಾಧನೆ ಮಾಡಿ ಸನ್ನಿಧಾನ ತುಂಬಲಾಗುತ್ತದೆ. ಪ್ರತಿನಿತ್ಯ ಎರಡು ಮಂತ್ರಗಳನ್ನು ಇಟ್ಟುಕೊಂಡು ಆರಾಧನೆ ಜಪ ಹೋಮ ತರ್ಪಣ, ಶ್ರೀ ರಾಮನ ಪ್ರತಿಮೆಗೆ ಕಲಶಾಭಿಷೇಕ ನಡೆಯುತ್ತದೆ.
48 ದಿನ ಬೆಳಿಗ್ಗೆ ಮಂದಿರದಲ್ಲಿ ಯಜ್ಞ, ಯಾಗ, ಕಲಶಾಭಿಷೇಕ ನಡೆಯುತ್ತದೆ. ಪ್ರತಿದಿನ ಮುಸ್ಸಂಜೆ ಬಳಿಕ ವೇದ ಪಾರಾಯಣ, ಅಷ್ಟಾದಶ ಪುರಾಣ ಪಾರಾಯಣ, ರಾಮಾಯಣ ಮಹಾಭಾರತ ಪಾರಾಯಣ ನಡೆಯುತ್ತದೆ. ಮುಸ್ಸಂಜೆ ನಿತ್ಯ ಶ್ರೀ ರಾಮನ ಪಲ್ಲಕ್ಕಿ ಉತ್ಸವ ನೃತ್ಯ ,ವಾದ್ಯ ಸಹಿತ ಶೋಡಸೋಪಚಾರ ಪೂಜೆ ಜರುಗಲಿದೆ. ಮೊದಲ 44 ದಿನಗಳ ಕಾಲ ಪ್ರತಿದಿನ ಎರಡು ಮಂತ್ರ ಇಟ್ಟುಕೊಂಡು ಆರಾಧನೆ ನಡೆಯುತ್ತದೆ. ಕೊನೆಯ ನಾಲ್ಕೈದು ದಿನ ಸಹಸ್ರ ಕಲಶಾಭಿಷೇಕ ನಡೆಯುತ್ತದೆ. ಕರಾವಳಿ ಭಾಗದಲ್ಲಿ ನಡೆಯುವ ಬ್ರಹ್ಮಕಲಶಾಭಿಷೇಕವನ್ನು ಉತ್ತರ ಭಾರತದಲ್ಲಿ ಕುಂಭಾಭಿಷೇಕ ಎನ್ನುತ್ತಾರೆ.
ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವವರು ಯಾರು?
ಪ್ರಾಣ ಪ್ರತಿಷ್ಠೆಯಿಂದ 48 ದಿನಗಳ ಒಟ್ಟು ಆಚರಣೆ ಶಾಸ್ತ್ರೋಕ್ತವಾಗಿ, ವೇದೋಕ್ತಕರ್ಮದಿಂದ ನಡೆಯುತ್ತದೆ. 48 ದಿನಗಳ ಮಂಡಲ ಪೂಜೆಯ ಜವಾಬ್ದಾರಿಯನ್ನು ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನ ಶ್ರೀ ಪಾದರಿಗೆ ನೀಡಲಾಗಿದೆ. ಪೇಜಾವರ ಹಿರಿಯ ಶ್ರೀ ವಿಶ್ವೇಶ ತೀರ್ಥರು ಬೆಂಗಳೂರಿನಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠ ಸ್ಥಾಪಿಸಿ 65 ವರ್ಷಗಳಿಂದ ಅಲ್ಲಿ ಅನೇಕ ವಿದ್ವಾಂಸರು ತಯಾರಾಗಿದ್ದಾರೆ. ಪೂರ್ಣಪ್ರಜ್ಞ ವಿದ್ಯಾಪೀಠದಿಂದಲೂ ವಿದ್ಯಾರ್ಥಿ ವಿದ್ವಾಂಸರು ತಯಾರಾಗಿದ್ದಾರೆ. ರಾಜ್ಯದ ನಾನಾ ಮೂಲೆಯಲ್ಲಿರುವ, ದೇಶದ ಅನೇಕ ಕಡೆಗಳಲ್ಲಿರುವ ಇಂತಹ ವಿದ್ವಾಂಸರು ಅಯೋಧ್ಯೆಯಲ್ಲಿ ಧಾರ್ಮಿಕ ಕಾರ್ಯ ನಡೆಸುತ್ತಾರೆ. ಧಾರ್ಮಿಕ ವಿಧಿವಿಧಾನದಲ್ಲಿ ಭಾಗವಹಿಸುವ ಹೆಚ್ಚು ವಿದ್ವಾಂಸರು ವೈದಿಕರು ಭಾಗವಹಿಸಲು ಅನುಕೂಲವಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ.
ಅಯೋಧ್ಯೆಯಲ್ಲಿ ನಡೆಯುವ ಧಾರ್ಮಿಕ ವಿಧಿ ವಿಧಾನದಲ್ಲಿ ಪ್ರತಿದಿನ ಪ್ರತ್ಯೇಕ ಪ್ರತ್ಯೇಕವಾಗಿ ಒಟ್ಟು 400 ವೈದಿಕರು ಯಜ್ಞ ಯಾಗದಲ್ಲಿ ಭಾಗಿಯಾಗುತ್ತಾರೆ. ಇಂದು ಅನುಷ್ಠಾನದಲ್ಲಿ ಭಾಗಿಯಾದವರು ನಾಳೆ ಇರುವುದಿಲ್ಲ. ಪ್ರತಿ ದಿನ ಪ್ರತ್ಯೇಕ ವಿದ್ವಾಂಸರಿಂದ ಧಾರ್ಮಿಕ ಕಾರ್ಯಕ್ರಮ ನಡೆಯುತ್ತದೆ.
ಪ್ರತಿದಿನ 10 ರಿಂದ 15 ವಿದ್ವಾಂಸರಿಂದ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತವೆ. ಕೊನೆಯ ನಾಲ್ಕು ದಿನ ಕುಂಭಾಭಿಷೇಕ ನಡೆಯುವುದರಿಂದ ಕೊನೆಯ ನಾಲ್ಕು ದಿನ ಪ್ರತ್ಯೇಕ ನೂರು ಮಂದಿ ವಿದ್ವಾಂಸರಿಂದ ಅಯೋಧ್ಯೆಯಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಲಿದೆ. ಅಷ್ಟು ದಿನಗಳ ಕಾಲ ನಾನು ಅಯೋಧ್ಯೆಯಲ್ಲಿ ಇರುತ್ತೇನೆ ಎಂದು ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀ ಪಾದರು ಟಿವಿ 9 ಗೆ ತಿಳಿಸಿದ್ದಾರೆ.