AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಚ್ಚಿನ್ ಶಿಪ್ ಯಾರ್ಡ್​ನಿಂದ ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ಸೋರಿಕೆ: ಉಡುಪಿಯಲ್ಲಿ ಮತ್ತೊಬ್ಬ ಆರೋಪಿಯ ಬಂಧನ

ಉಡುಪಿಯ ಮಲ್ಪೆ ಪೊಲೀಸರು ಭಾರತೀಯ ನೌಕಾಪಡೆಗೆ ಸಂಬಂಧಿಸಿದ ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನಿಸಿದ ಪ್ರಕರಣದಲ್ಲಿ ಮೂರನೇ ಆರೋಪಿಯನ್ನು ಬಂಧಿಸಿದ್ದಾರೆ. ಕೊಚ್ಚಿನ್ ಶಿಪ್‌ಯಾರ್ಡ್ ಗುತ್ತಿಗೆ ನೌಕರರಾದ ರೋಹಿತ್ ಮತ್ತು ಸಂತ್ರಿ ಎಂಬವರು ಹಿರೇಂದ್ರ ಒದಗಿಸಿದ ಸಿಮ್‌ಗಳಿಂದ ಪಾಕಿಸ್ತಾನದವರಿಗೆ ಹಡಗುಗಳ ಚಲನವಲನಗಳ ಮಾಹಿತಿ ನೀಡುತ್ತಿದ್ದರು.

ಕೊಚ್ಚಿನ್ ಶಿಪ್ ಯಾರ್ಡ್​ನಿಂದ ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ಸೋರಿಕೆ: ಉಡುಪಿಯಲ್ಲಿ ಮತ್ತೊಬ್ಬ ಆರೋಪಿಯ ಬಂಧನ
ಬಂಧಿತ ಆರೋಪಿ ಹಿರೇಂದ್ರ ಹಾಗೂ ಕೊಚ್ಚಿನ್ ಶಿಪ್ ಯಾರ್ಡ್ ಘಟಕದ ಆವರಣ
ಪ್ರಜ್ವಲ್ ಅಮೀನ್​, ಉಡುಪಿ
| Edited By: |

Updated on: Dec 22, 2025 | 10:12 AM

Share

ಉಡುಪಿ, ಡಿಸೆಂಬರ್ 22: ಭಾರತೀಯ ನೌಕಾಪಡೆಗೆ ಸಂಬಂಧಿಸಿದ ರಹಸ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸಿದ್ದ ಗಂಭೀರ ಪ್ರಕರಣದಲ್ಲಿ ಉಡುಪಿ (Udupi) ಜಿಲ್ಲೆಯ ಮಲ್ಪೆ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಬಂಧಿತನನ್ನು ಗುಜರಾತ್​​ನ ಆನಂದ ತಾಲೂಕಿನ ಕೈಲಾಸ್‌ನಗರಿಯ ನಿವಾಸಿ ಹಿರೇಂದ್ರ (34) ಎಂದು ಗುರುತಿಸಲಾಗಿದೆ. ಈ ಹಿಂದೆ ಇದೇ ಪ್ರಕರಣದಲ್ಲಿ ಉತ್ತರ ಪ್ರದೇಶ ಮೂಲದ ರೋಹಿತ್ ಮತ್ತು ಸಂತ್ರಿ ಎಂಬ ಇಬ್ಬರನ್ನು ಮಲ್ಪೆ ಪೊಲೀಸರು ಬಂಧಿಸಿದ್ದರು. ಇವರಿಬ್ಬರೂ ಮಲ್ಪೆಯಲ್ಲಿರುವ ಕೊಚ್ಚಿನ್ ಶಿಪ್ ಯಾರ್ಡ್ (Cochin Shipyard) ಘಟಕದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು.

ಪೊಲೀಸ್ ತನಿಖೆಯ ಪ್ರಕಾರ, ಹಿರೇಂದ್ರ ಹಣ ಪಡೆದು ರೋಹಿತ್ ಹಾಗೂ ಸಂತ್ರಿಗೆ ಮೊಬೈಲ್ ಸಿಮ್ ಕಾರ್ಡ್‌ಗಳನ್ನು ಒದಗಿಸಿದ್ದ. ಆ ಸಿಮ್‌ಗಳ ಮೂಲಕ ಇಬ್ಬರೂ ಪಾಕಿಸ್ತಾನದಲ್ಲಿರುವ ವ್ಯಕ್ತಿಗಳಿಗೆ ಭಾರತೀಯ ನೌಕಾಪಡೆಗೆ ಸಂಬಂಧಿಸಿದ ಗೌಪ್ಯ ಮಾಹಿತಿಗಳನ್ನು ರವಾನಿಸುತ್ತಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹಡಗುಗಳ ಸಂಖ್ಯೆ, ಚಲನವಲನ ಹಾಗೂ ಇತರೆ ರಹಸ್ಯ ವಿವರಗಳನ್ನು ವಾಟ್ಸ್‌ಆ್ಯಪ್ ಮೂಲಕ ಕಳುಹಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.

ಬಂಧಿತರಿಂದ ಸಿಕ್ತು ಸ್ಫೋಟಕ ಮಾಹಿತಿ

ಕೊಚ್ಚಿನ್ ಶಿಪ್ ಯಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದ ರೋಹಿತ್ ಮತ್ತು ಸಂತ್ರಿ ಅವರ ಚಟುವಟಿಕೆಗಳು ಸಂಶಯಾಸ್ಪದವಾಗಿದ್ದ ಹಿನ್ನೆಲೆ, ಶಿಪ್ ಯಾರ್ಡ್ ಅಧಿಕಾರಿಗಳು ಮಲ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧರಿಸಿ ಪೊಲೀಸರು ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಆಗ ಅನೇಕ ಸ್ಫೋಟಕ ಸಂಗತಿಗಳು ಬಯಲಾಗಿವೆ. ಹಿರೇಂದ್ರ ಪಾತ್ರದ ಬಗ್ಗೆ ಮಹತ್ವದ ಮಾಹಿತಿ ಲಭ್ಯವಾಗಿದೆ.

ಬಂಧಿತ ಆರೋಪಿಗಳಾದ ರೋಹಿತ್ ಮತ್ತು ಸಂತ್ರಿ ‘ಸುಷ್ಮಾ ಮೆರಿನ್ ಪ್ರೈವೇಟ್ ಲಿಮಿಟೆಡ್’ ಮೂಲಕ ಗುತ್ತಿಗೆ ಆಧಾರದಲ್ಲಿ ಕೊಚ್ಚಿನ್ ಶಿಪ್ ಯಾರ್ಡ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಈ ಆರೋಪಿಗಳು ಸುಮಾರು ಒಂದೂವರೆ ವರ್ಷಗಳಿಂದ ಹಡಗುಗಳಿಗೆ ಸಂಬಂಧಿಸಿದ ಗೋಪ್ಯ ಮಾಹಿತಿ, ರಹಸ್ಯ ತಾಂತ್ರಿಕ ಮಾಹಿತಿಗಳನ್ನು ವಾಟ್ಸ್​ಆ್ಯಪ್ ಮೂಲಕ ಪಾಕಿಸ್ತಾನದಲ್ಲಿ ಸಂಪರ್ಕದಲ್ಲಿದ್ದವರಿಗೆ ಕಳುಹಿಸುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಉಡುಪಿ: ಕೊಚ್ಚಿನ್ ಶಿಪ್ ಯಾರ್ಡ್​ನಿಂದ ಪಾಕಿಸ್ತಾನ ಪರ ಬೇಹುಗಾರಿಕೆ ಮಾಡುತ್ತಿದ್ದ ಉತ್ತರ ಪ್ರದೇಶದ ಇಬ್ಬರ ಬಂಧನ

ಪ್ರಮುಖ ಇಬ್ಬರು ಆರೋಪಿಗಳಾದ ರೋಹಿತ್ ಮತ್ತು ಸಂತ್ರಿ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದು, ಹಿರೇಂದ್ರನನ್ನು ವಶಕ್ಕೆ ಪಡೆದು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಜಾಲ ರಾಜ್ಯಾದ್ಯಂತ ಹಾಗೂ ವಿದೇಶ ಸಂಪರ್ಕ ಹೊಂದಿರುವುದರಿಂದ, ಮುಂದಿನ ದಿನಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಗಳು ತನಿಖೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

ದೇಶದ ಭದ್ರತೆಗೆ ಗಂಭೀರ ಆತಂಕ ಉಂಟುಮಾಡಿರುವ ಈ ಪ್ರಕರಣದಲ್ಲಿ ಇನ್ನಷ್ಟು ಆರೋಪಿಗಳು ಶಾಮೀಗಿರುವ ಶಂಕೆ ವ್ಯಕ್ತವಾಗಿದ್ದು, ಮಲ್ಪೆ ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ