ವೇಷ ಹಾಕಿ ಬಂದ ಹಣದಲ್ಲಿ ಅನಾರೋಗ್ಯ ಪೀಡಿತರಿಗೆ ನೆರವು; ಕೃಷ್ಣ ಜನ್ಮಾಷ್ಟಮಿ ಹಬ್ಬಕ್ಕೆ ಡಾರ್ಕ್ ಅಲೈಟ್ ವೇಷದಲ್ಲಿ ರವಿ ಓಡಾಟ
ಮೇಸ್ತ್ರಿ ಕೆಲಸ ಮಾಡುವ ರವಿ ಕಟಪಾಡಿ ಪ್ರತಿವರ್ಷ ಶ್ರೀಕೃಷ್ಣ ಜನ್ಮಾಷ್ಟಮಿಗೆ ವೇಷ ಧರಿಸಿ ಅನಾರೋಗ್ಯ ಪೀಡಿತ ಮಕ್ಕಳಿಗೆ ಸಹಾಯ ಮಾಡುತ್ತಾರೆ. 6 ವರ್ಷದಲ್ಲಿ ಬರೋಬ್ಬರಿ 72 ಲಕ್ಷ ರೂಪಾಯಿಯನ್ನು, ಸುಮಾರು 33 ಮಕ್ಕಳಿಗೆ ನೀಡಿದ್ದಾರೆ.
ಉಡುಪಿ: ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಲಕ್ಷಾಂತರ ರೂಪಾಯಿ ಹಣ ಇರಲೇಬೇಕು ಎಂದೇನು ಇಲ್ಲ. ಒಳ್ಳೆಯ ಮನಸಿದ್ದರೆ ಸಾಕು ಎನ್ನುವುದನ್ನು ಉಡುಪಿಯ ರವಿ ಕಟಪಾಡಿ ಮಾಡಿ ತೋರಿಸಿದ್ದಾರೆ. ಅಷ್ಟಮಿ ದಿನ ವೇಷ ಹಾಕಿ ಕಳೆದ ಆರು ವರ್ಷದಲ್ಲಿ 72 ಲಕ್ಷ ರೂಪಾಯಿ ಹಣವನ್ನು ದಾನ ಮಾಡಿದ್ದಾರೆ. ಅದರಂತೆ ಈ ಬಾರಿಯೂ ವೇಷ ಹಾಕಲಿದ್ದು, ಹಾಲಿವುಡ್ ಸಿನಿಮಾದ ಡಾರ್ಕ್ ಅಲೈಟ್ ವೇಷದಲ್ಲಿ ಪ್ರತ್ಯಕ್ಷ ಆಗಲಿದ್ದಾರೆ.
ಸಾಂಕ್ರಾಮಿಕ ಕೊರೊನಾ ನಡುವೆಯೇ ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬ ಬಂದಿರುವುದರಿಂದ ಅದ್ದೂರಿ ಅಷ್ಟಮಿ ಆಚರಣೆಗೆ ಉಡುಪಿ ಜಿಲ್ಲಾಡಳಿತ ಅವಕಾಶ ನೀಡಿಲ್ಲ. ಆದರೆ ಈ ಅಷ್ಟಮಿ ದಿನ ಸಾವಿರಾರು ಜನ ವೇಷ ಧರಿಸುತ್ತಾರೆ. ಹೋದ ವರ್ಷವೂ ನಿರ್ಬಂಧ ಹೇರಲಾಗಿತ್ತು. ಅಂತೆಯೇ ಈ ಬಾರಿಯೂ ಇದಕ್ಕೆ ನಿರ್ಬಂಧಿಸಲಾಗಿದೆ. ಆದರೆ ಸಮಾಜ ಸೇವಕ ಉಡುಪಿಯ ರವಿ ಕಟಪಾಡಿ ಅವರಿಗೆ ಮಾತ್ರ ವಿಶೇಷ ಅವಕಾಶ ಕೊಡಲಾಗಿದೆ. ಹೀಗಾಗಿ ಹಾಲಿವುಡ್ ಸಿನಿಮಾದ ಫ್ಯಾಂಟಸಿ ವೇಷ ಡಾರ್ಕ್ ಅಲೈಟ್ ಮೂಲಕ ಎರಡು ದಿನ ರವಿ ಓಡಾಡಲಿದ್ದಾರೆ.
ಅನಾರೋಗ್ಯ ಪೀಡಿತ ಮಕ್ಕಳಿಗೆ ನೆರವು ಮೇಸ್ತ್ರಿ ಕೆಲಸ ಮಾಡುವ ರವಿ ಕಟಪಾಡಿ ಪ್ರತಿವರ್ಷ ಶ್ರೀಕೃಷ್ಣ ಜನ್ಮಾಷ್ಟಮಿಗೆ ವೇಷ ಧರಿಸಿ ಅನಾರೋಗ್ಯ ಪೀಡಿತ ಮಕ್ಕಳಿಗೆ ಸಹಾಯ ಮಾಡುತ್ತಾರೆ. 6 ವರ್ಷದಲ್ಲಿ ಬರೋಬ್ಬರಿ 72 ಲಕ್ಷ ರೂಪಾಯಿಯನ್ನು, ಸುಮಾರು 33 ಮಕ್ಕಳಿಗೆ ನೀಡಿದ್ದಾರೆ. ಕರೋಡ್ ಪತಿಯಲ್ಲಿ ಬಂದ ಎಂಟು ಲಕ್ಷ ರೂಪಾಯಿಯನ್ನು ಪೂರ್ತಿಯಾಗಿ ಕಷ್ಟದಲ್ಲಿರುವವರಿಗೆ ಕೊಟ್ಟಿದ್ದಾರೆ. ಅಂತರರಾಷ್ಟ್ರೀಯ ಮಟ್ಟದ ವೆಬ್ಸೈಟ್ಗಳಲ್ಲಿ ಬಂದ ಹಣದಲ್ಲಿ ಒಂದು ರೂಪಾಯಿಯನ್ನು ರವಿ ಇಟ್ಟುಕೊಂಡಿಲ್ಲ. ಅಲ್ಲದೆ ಕಳೆದ ಬಾರಿ ಕೊರೊನಾ ಸಾಂಕ್ರಾಮಿಕತೆ ವಿಪರೀತ ಇದ್ದ ಕಾರಣ ರವಿ ಜನಜಾಗೃತಿಗಾಗಿ ವೇಷ ಹಾಕಿದ್ದರು. ಆದರೆ ಧನ ಸಂಗ್ರಹ ಮಾಡಿರಲಿಲ್ಲ. ಈ ಬಾರಿ ಜಿಲ್ಲಾಡಳಿತ ರವಿ ಕಟಪಾಡಿ ಅವರಿಗೆ ವಿಶೇಷ ಅವಕಾಶ ನೀಡಿದ್ದು, ಇದರಿಂದ ಬಂದ ಹಣದಲ್ಲಿ ಆರು ಮಕ್ಕಳಿಗೆ ಸಹಾಯ ಮಾಡುವ ನಿರ್ಧಾರ ಮಾಡಿದ್ದಾರೆ.
ರವಿ ಫ್ರೆಂಡ್ಸ್ ತಂಡದ ಎಲ್ಲರಿಗೂ ಈಗಾಗಲೇ ಕೊರೊನಾ ಪರೀಕ್ಷೆ ಮಾಡಲಾಗಿದೆ. ಜತೆಗೆ ಲಸಿಕೆ ಪಡೆದವರಿಗೆ ಮಾತ್ರ ಅವಕಾಶವನ್ನು ಕೊಡಲಾಗಿದೆ. ಆಗಸ್ಟ್ 30 ಮತ್ತು 31 ರಂದು ಉಡುಪಿ, ಕಾಪು, ಮಲ್ಪೆ ವ್ಯಾಪ್ತಿಯಲ್ಲಿ ವೇಷ ಧರಿಸಿ ಓಡಾಡಿ ಹಣ ಸಂಗ್ರಹ ಮಾಡಲಿದ್ದಾರೆ. ರವಿ ಇಲ್ಲಿ ಪಡೆಯುವ ಒಂದೊಂದು ರೂಪಾಯಿ ಕಷ್ಟದಲ್ಲಿರುವ ಕುಟುಂಬಗಳ ಪಾಲಾಗಲಿದೆ. ತಾನೂ ಕಷ್ಟದಲ್ಲಿ ಇದ್ದರೂ ಮತ್ತೊಬ್ಬರ ನೋವಿಗೆ ಸ್ಪಂದಿಸುವ ರವಿ ಕಟಪಾಡಿ ನಿಜಕ್ಕೂ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಇದನ್ನೂ ಓದಿ: ಕೊಪ್ಪಳ: ಜಾನಪದ ಶ್ರೀ ಪುರಸ್ಕೃತ ಶತಾಯುಷಿ ಅಜ್ಜಿಯೂ ಸೇರಿ ತೊಗಲುಗೊಂಬೆಯಾಟ ಪ್ರದರ್ಶಿಸುವ ಒಂದೇ ಕುಟುಂಬದ 6 ಸದಸ್ಯರು
ಕೊರೊನಾ ಸಂಕಷ್ಟಕ್ಕೆ ನಲುಗಿದ ಗಣಪತಿ ಮೂರ್ತಿ ತಯಾರಕರ ಬದುಕು; ಅತಂತ್ರ ಸ್ಥಿತಿಯಲ್ಲಿ ಕಲೆಗಾರರು