ನಟ ‘ಆ ದಿನಗಳು’ ಚೇತನ್ (Actor Chetan) ಅವರು ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದ್ದಾರೆ. ಅದು ಸಿನಿಮಾ ವಿಚಾರಕ್ಕೆ ಅಲ್ಲ. ಬದಲಿಗೆ ವಿವಾದದ ಮೂಲಕ. ‘ವಿಕ್ರಾಂತ್ ರೋಣ’ ಸಿನಿಮಾ ರಿಲೀಸ್ ಆದಾಗ ಕೆಲವು ವಿಚಾರಕ್ಕೆ ಅವರು ಅಪಸ್ವರ ತೆಗೆದಿದ್ದರು. ಈಗ ‘ಕಾಂತಾರ’ ಸಿನಿಮಾದ ಕೆಲವು ವಿಚಾರಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು. ‘ಕಾಂತಾರ’ ಚಿತ್ರದಲ್ಲಿ ತೋರಿಸಿದ ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುವುದಿಲ್ಲ. ಇದಕ್ಕೆ ಸಂಬಂಧಪಟ್ಟಂತೆ ರಿಷಬ್ ಶೆಟ್ಟಿ ಅವರು ಹೇಳಿರುವುದು ನಿಜವಲ್ಲ ಎಂದು ಚೇತನ್ ಅಭಿಪ್ರಾಯಪಟ್ಟಿದ್ದರು. ಈ ಸಂಬಂಧ ಹಿಂದೂ ಜಾಗರಣಾ ವೇದಿಕೆಯವರು ಕಾರ್ಕಳ ಪೊಲೀಸರ ಬಳಿ ದೂರು ದಾಖಲು ಮಾಡಿದ್ದಾರೆ.
ಮೊದಲು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದ ಚೇತನ್ ಅವರು, ‘ನಮ್ಮ ಕನ್ನಡದ ಚಲನಚಿತ್ರ ‘ಕಾಂತಾರ’ವು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿಯ ಸಂಗತಿ. ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿಯವರು ಹೇಳಿದ್ದಾರೆ. ಇದು ನಿಜವಲ್ಲ. ನಮ್ಮ ಪಂಬದ/ನಲಿಕೆ/ಪರವರ ಬಹುಜನ ಸಂಪ್ರದಾಯಗಳು, ವೈದಿಕ-ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತ ಹಿಂದಿನಿಂದ ಇರುವವು. ಮೂಲನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲೆಯಾಗಲಿ, ಅದರಾಚೆಯಾಗಲಿ, ಸತ್ಯ ಸಂಗತಿಗಳೊಂದಿಗೆ ತೋರಿಸಬೇಕೆಂದು ನಾವು ಕೇಳುತ್ತೇವೆ’ ಎಂದು ಚೇತನ್ ಪೋಸ್ಟ್ ಮಾಡಿದ್ದರು.
ಈ ಹೇಳಿಕೆ ಬಗ್ಗೆ ಕೆಲವರಿಂದ ವಿರೋಧ ವ್ಯಕ್ತವಾಗಿತ್ತು. ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಚೇತನ್ ಹೇಳಿಕೆಯನ್ನು ಖಂಡಿಸಿದರು. ಆ ಬಳಿಕ ಚೇತನ್ ಅವರು ಸುದ್ದಿಗೋಷ್ಠಿ ಕರೆದು ಸ್ಪಷ್ಟನೆ ನೀಡಿದರು. ಈಗ ಹಿಂದೂ ಜಾಗರಣಾ ವೇದಿಕೆಯವರು ಚೇತನ್ ವಿರುದ್ಧ ದೂರು ದಾಖಲು ಮಾಡಿದ್ದಾರೆ.
ಇದನ್ನೂ ಓದಿ: ‘ಅದು ತುಂಬಾ ನಂಬಿಕೆ ಇರೋ ಜಾಗ, ಆ ಬಗ್ಗೆ ಮಾತನಾಡಬಾರದು’; ದೈವಗಳ ಬಗ್ಗೆ ಉಪೇಂದ್ರ ಮಾತು
ಪರೋಕ್ಷವಾಗಿ ತಿರುಗೇಟು ನೀಡಿದ ರಿಷಬ್
‘ನಾನು ಈ ಸಿನಿಮಾ ಮಾಡಬೇಕಾದ್ರೆ ಮೂಲ ನಿವಾಸಿಗಳು ನನ್ನ ಜೊತೆಯಲ್ಲಿದ್ದರು. ಚಿಕ್ಕಂದಿನಿಂದಲೇ ನಾವು ದೈವ ನಂಬಿದ್ದೇವೆ. ಇಂಥದ್ದೊಂದು ಕತೆ ಹೇಳೋಕೆ ಹೋಗ್ತಿದ್ದೀನಿ ಎಂದಾಗ ಇಲ್ಲಿನ ಮೂಲ ಜನರಿಗೆ ನೋವಾಗಬಾರದು ಎಂದು ನಾನು ಬಯಸಿದ್ದೆ. ಎಲ್ಲೂ ದೈವ ದೇವಾದಿಗಳಿಗೆ, ಇದನ್ನು ಆರಾಧಿಸುವ ಜನರಿಗೆ ನೋವಾಗಬಾರದು, ಎಲ್ಲೂ ಕೂಡ ತಪ್ಪಾಗಬಾರದು ಎಂಬುದು ನನ್ನ ಉದ್ದೇಶ ಆಗಿತ್ತು. ಇದಕ್ಕೆ ಬೇಕಾದ ಎಲ್ಲಾ ಮುಂಜಾಗ್ರತೆಗಳನ್ನು ನಾನು ತೆಗೆದುಕೊಂಡಿದ್ದೆ. ನನ್ನ ಜೊತೆಯಲ್ಲೇ ಅವರನ್ನು ಇರಿಸಿಕೊಂಡು ಪ್ರತಿಯೊಂದು ಶಾಟ್ ತೆಗೆದಿದ್ದೇವೆ. ದೈವಾರಾಧನೆಗೆ ಸಂಬಂಧಿಸಿದ ಪ್ರತಿ ದೃಶ್ಯಗಳನ್ನು ಅಲ್ಲಿನ ಜನರಿಗೆ ತೋರಿಸುತ್ತಿದ್ದೆವು. ಈ ವಿಚಾರದಲ್ಲಿ ನಾನು ಯಾರಿಗೂ ಉತ್ತರ ಕೊಡಬೇಕಾಗಿಲ್ಲ. ಆ ಬಗ್ಗೆ ನೋ ಕಾಮೆಂಟ್ಸ್. ಅದಕ್ಕೆ ಸಂಬಂಧ ಪಟ್ಟವರು ಮಾತನಾಡುತ್ತಾರೆ. ಅದಕ್ಕೆಲ್ಲಾ ನಾವೇಕೆ ತಲೆ ಕೆಡಿಸಿಕೊಳ್ಳಬೇಕು’ ಎಂದಿದ್ದರು ರಿಷಬ್.
Published On - 1:19 pm, Thu, 20 October 22