
ಉಡುಪಿ, ಸೆಪ್ಟೆಂಬರ್ 30: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಗೋಳಿಹೊಳೆಯ ಸೌಪರ್ಣಿಕ ನದಿ ಸಮೀಪದ ನಿರ್ಜನ ಪ್ರದೇಶದಲ್ಲಿ ನೇಣು ಬಿಗಿದ ರೀತಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಜೋಡಿ ಮೃತದೇಹ ಪತ್ತೆ ಆಗಿರುವ ಘಟನೆ ನಡೆದಿದೆ. ಸದ್ಯ ಮೃತರನ್ನು ಗೋಳಿಹೊಳೆಯ ಚಾರ್ತಾಲಿ ಗ್ರಾಮದ ನಿವಾಸಿಗಳಾದ ವಿಠಲ ನಾಯ್ಕ್(35) ಮತ್ತು ಭವ್ಯ(33) ಎಂದು ಗುರುತಿಸಲಾಗಿದೆ. ಸದ್ಯ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಆಟೋ ಚಾಲಕನಾಗಿದ್ದ ವಿಠಲ ನಾಯ್ಕ್, ಪ್ರೇಯಸಿ ಭವ್ಯ ಟೈಲರ್ ವೃತ್ತಿ ಮಾಡಿಕೊಂಡಿದ್ದರು. ಸುಮಾರು 20 ದಿನಗಳ ಹಿಂದೆ ವಿಠಲ ನಾಯ್ಕ್ ತನ್ನ ಪ್ರೇಯಸಿ ಭವ್ಯಳನ್ನು ನರ್ಸ್ ಎಂದು ಗರ್ಭಿಣಿ ಪತ್ನಿಗೆ ಪರಿಚಯಿಸಿದ್ದ. ಬಳಿಕ ಪತ್ನಿಗೆ ವಿಷದ ಇಂಜೆಕ್ಷನ್ ಕೊಡಿಸಿ, ಪ್ರೇಯಸಿಯೊಂದಿಗೆ ಊರು ಬಿಟ್ಟು ಪರಾರಿಯಾಗಿದ್ದ.
ವಿಷ ಪ್ರಾಶನದಿಂದ ತೀವ್ರ ಅಸ್ವಸ್ಥಗೊಂಡಿದ್ದ ಪತ್ನಿಯನ್ನು ಸ್ಥಳೀಯರು ತಕ್ಷಣವೇ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 11ರಂದು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪತ್ನಿ ಪ್ರಾಣಾಪಾಯದಿಂದ ಪಾರಾಗಿ ಗುಣಮುಖರಾಗುತ್ತಿದ್ದಂತೆಯೇ, ಇತ್ತ ಗೋಳಿಹೊಳೆಯ ನಿರ್ಜನ ಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕೊಳೆತ ಸ್ಥಿತಿಯಲ್ಲಿ ವಿಠಲ ನಾಯ್ಕ್ ಹಾಗೂ ಭವ್ಯ ಶವಗಳು ಪತ್ತೆಯಾಗಿವೆ. ಪತ್ನಿ ಬದುಕುಳಿದಿರುವ ವಿಷಯ ತಿಳಿದು, ಇಬ್ಬರೂ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ.
ಇದನ್ನು ಓದಿ: ರೇಷನ್ ಕಾರ್ಡ್ ವಿಚಾರಕ್ಕೆ ತಮ್ಮನಿಗೆ ಅಣ್ಣನೇ ಚಾಕು ಹಾಕಿದ್ನಾ? ಒಡವಟ್ಟಿದವರ ದ್ವೇಷದ ಹಿಂದಿರುವ ಕಥೆ ಇಲ್ಲಿದೆ
ಇನ್ನು ಸ್ಥಳಕ್ಕೆ ಭೇಟಿ ನೀಡಿರುವ ಬೈಂದೂರು ಠಾಣಾ ಪೊಲೀಸರು ಮೃತದೇಹಗಳನ್ನು ಪರಿಶೀಲನೆಗೆ ಒಳಪಡಿಸಿದ್ದು, ಪ್ರಕರಣದ ಮುಂದಿನ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.