ಇಸ್ರೇಲ್-ಹಮಾಸ್​​ ಯುದ್ಧ: ಕದನದ ಭೀಕರ ದೃಶ್ಯಗಳನ್ನು ಹಂಚಿಕೊಂಡ ಉಡುಪಿ ನರ್ಸ್​​

ಅಕ್ಟೋಬರ್ 7 ರಂದು ರಾತ್ರಿ 8.30 ರ ಸುಮಾರಿಗೆ ನಾನು (ನರ್ಸ್ ಪ್ರಮೀಳಾ ಪ್ರಭು) ಊಟ ಮುಗಿಸಿದೆ. ತಕ್ಷಣ ತುರ್ತು ಸೈರನ್ ಶಬ್ದ ಮೊಳಗಿತು. ಕೂಡಲೆ ನಾನು ಅಪಾರ್ಟ್​​​ಮೆಂಟ್​ನ ಗ್ರೌಂಡ್​​ಫ್ಲೋರ್​​ನಲ್ಲಿರುವ ಬಂಕರ್​​ನಲ್ಲಿ ಹೋಗಿ ಕುಳಿತೆ. ಶನಿವಾರ ಹಮಾಸ್ ಮತ್ತು ಇಸ್ರೇಲ್ ನಡುವೆ ಹಿಂಸಾತ್ಮಕ ಸಂಘರ್ಷ ಭುಗಿಲೆದ್ದ ನಂತರ, ಇದೇ ರೀತಿ ಮೂರು ಬಾರಿ ಮಾಡಿದ್ದೇನೆ ಎಂದರು.

ಇಸ್ರೇಲ್-ಹಮಾಸ್​​ ಯುದ್ಧ: ಕದನದ ಭೀಕರ ದೃಶ್ಯಗಳನ್ನು ಹಂಚಿಕೊಂಡ ಉಡುಪಿ ನರ್ಸ್​​
ನರ್ಸ್ ಪ್ರಮೀಳಾ ಪ್ರಭು
Follow us
TV9 Web
| Updated By: ವಿವೇಕ ಬಿರಾದಾರ

Updated on:Oct 10, 2023 | 11:48 AM

ಉಡುಪಿ ಅ.10: ಇಸ್ರೇಲ್​​-ಪ್ಯಾಲೆಸ್ತೀನ್​​ನ ಹಮಾಸ್​ (Israel-Hamas war) ಉಗ್ರರ ನಡುವಿನ ಕದನ ಭೀಕರ ಸ್ವರೂಪ ಪಡೆದುಕೊಂಡಿದ್ದು, ಎರಡೂ ಕಡೆ ದಾಳಿ-ಪ್ರತಿದಾಳಿಗಳು ತೀರ್ವಗೊಂಡಿವೆ. ಈ ವರೆಗೂ 1000 ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಇಸ್ರೇಲ್​​ನಲ್ಲಿ ನೂರಾರು ಜನ ಕನ್ನಡಿಗರು ಕೂಡ ವಾಸವಾಗಿದ್ದಾರೆ. ಉಡುಪಿ ಜಿಲ್ಲೆಯ ಪ್ರಮೀಳಾ ಪ್ರಭು (41) ಟೆಲ್ ಅವಿವ್-ಯಾಫೊ ಎಂಬಲ್ಲಿ ವಾಸವಾಗಿದ್ದು, ಅಲ್ಲಿನ ಭೀಕರ ಯುದ್ಧ ಪರಿಸ್ಥಿತಿಯನ್ನು ಸವಿವರವಾಗಿ ಬಿಚ್ಚಿಟ್ಟಿದ್ದಾರೆ.

ಅಕ್ಟೋಬರ್ 7 ರಂದು ರಾತ್ರಿ 8.30 ರ ಸುಮಾರಿಗೆ ನಾನು (ನರ್ಸ್ ಪ್ರಮೀಳಾ ಪ್ರಭು) ಊಟ ಮುಗಿಸಿದೆ. ತಕ್ಷಣ ತುರ್ತು ಸೈರನ್ ಶಬ್ದ ಮೊಳಗಿತು. ಕೂಡಲೆ ನಾನು ಅಪಾರ್ಟ್​​​ಮೆಂಟ್​ನ ಗ್ರೌಂಡ್​​ಫ್ಲೋರ್​​ನಲ್ಲಿರುವ ಬಂಕರ್​​ನಲ್ಲಿ ಹೋಗಿ ಕುಳಿತೆ. ಶನಿವಾರ ಹಮಾಸ್ ಮತ್ತು ಇಸ್ರೇಲ್ ನಡುವೆ ಹಿಂಸಾತ್ಮಕ ಸಂಘರ್ಷ ಭುಗಿಲೆದ್ದ ನಂತರ, ಇದೇ ರೀತಿ ಮೂರು ಬಾರಿ ಮಾಡಿದ್ದೇನೆ ಎಂದರು.

ಕಳೆದ ಆರು ವರ್ಷಗಳಿಂದ ನಾನು ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಿದ್ದು, ಹಿಂಸಾಚಾರ ಇಷ್ಟೊಂದು ಉಲ್ಬಣಗೊಳ್ಳುವುದನ್ನು ನಾನು ಹಿಂದೆಂದೂ ನೋಡಿಲ್ಲ. ನಾನು ವಾಸಿಸುವ ಟೆಲ್ ಅವಿವ್-ಯಾಫೊದಿಂದ ಒಂದು ಕಿಮೀ ದೂರದಲ್ಲಿ ಬಾಂಬ್ ಸ್ಫೋಟಗಳ್ಳುತ್ತಿದ್ದ ಶಬ್ಧ ಕೇಳಿದೆ. ಇಲ್ಲಿ ಪ್ರತಿ ಮನೆ, ವಾಣಿಜ್ಯ ಮತ್ತು ಸರ್ಕಾರಿ ಸಂಸ್ಥೆಗಳು ಬಂಕರ್‌ಗಳನ್ನು ಹೊಂದಿವೆ ಮತ್ತು ನೀವು ಅದನ್ನು ಸಾರ್ವಜನಿಕ ಸ್ಥಳಗಳಲ್ಲಿಯೂ ಕಾಣಬಹುದು. ಸೈರನ್ ಶಬ್ದ ಮೊಳಗಿದ 15-20 ಸೆಕೆಂಡುಗಳಲ್ಲಿ ಬಾಂಬ್ ಸ್ಫೋಟಗೊಳ್ಳುತ್ತವೆ. ನಾವು ಬಂಕರ್‌ಗಳಿಗೆ ಹೋಗಬೇಕಾಗುತ್ತದೆ ಎಂದು ಅಲ್ಲಿನ ಭೀಕರ ಸನ್ನಿವೇಶಗಳನ್ನು ತಿಳಿಸಿದರು.

ಇದನ್ನೂ ಓದಿ: ಇಸ್ರೇಲ್‌-ಪ್ಯಾಲೆಸ್ತೇನ್‌ ಸಂಘರ್ಷ; ಉದ್ಯೋಗಕ್ಕಾಗಿ ಇಸ್ರೇಲ್​ನಲ್ಲಿ ಸಿಲುಕಿದ ಕರಾವಳಿಯ ಸಾವಿರಾರು ಜನ

ಹಮಾಸ್ ಉಗ್ರಗಾಮಿ ಗುಂಪು ಯಹೂದಿಗಳ ಭೂಮಿಯ ಮೇಲೆ ದಶಕಗಳಿಂದ ದಾಳಿ ಮಾಡುತ್ತಾ ಬಂದಿದೆ. ಇಸ್ರೇಲ್ ಮತ್ತು ಗಾಜಾ ಪಟ್ಟಿಯು ನಿರಂತರ ದಾಳಿಗೆ ತತ್ತರಿಸಿದೆ. ಎರಡೂ ಕಡೆಗಳಲ್ಲಿ ಈಗಾಗಲೇ 1,100 ಜನರು ಸಾವಿಗೀಡಾಗಿದ್ದಾರೆ. ಟೆಲ್ ಅವಿವ್-ಯಾಫೊದಲ್ಲಿನ ಅಂಗಡಿಗಳು ಮುಚ್ಚಿವೆ. ಕೆಲವೇ ಜನರು ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಯುದ್ಧ ಪರಿಸ್ಥಿತಿಯಿಂದಾಗಿ ನಾಗರಿಕರು ದಿನಸಿ ಸಾಮಾನುಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದು ಪ್ರಮೀಳಾ ಹೇಳಿದರು.

ಸುಮಾರು 25-30 ಜನರೊಂದಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದೇನೆ. ನಾನು ಆಹಾರ, ನೀರು, ಟಾರ್ಚ್ ಮತ್ತು ಇತರ ವಸ್ತುಗಳನ್ನು ಒಳಗೊಂಡಂತೆ ಎಲ್ಲಾ ತುರ್ತು ವಸ್ತುಗಳನ್ನು ಸಂಗ್ರಹಿಸಿದ್ದೇನೆ. ನೆಲಮಾಳಿಗೆಯ ಬಾಗಿಲು ಯಾವಾಗಲೂ ತೆರೆದಿರುತ್ತದೆ. ನಾನು ಸೈರನ್ ಕೇಳಿದ ತಕ್ಷಣ ನನ್ನ ಮೊಬೈಲ್ ಫೋನ್ ತೆಗೆದುಕೊಂಡು ನೆಲಮಾಳಿಗೆಗೆ ಓಡುತ್ತೇನೆ. ಸೈರನ್ ನಿಂತ ನಂತರ ನಾವು ಹಿಂತಿರುಗುತ್ತೇವೆ. ಇದು ಯಾವುದೇ ದಾಳಿಗಳಿಲ್ಲ ಎಂದು ಸೂಚಿಸುತ್ತದೆ. ಪ್ರತಿ ಬಾರಿ ನಾವು ಬಂಕರ್‌ನೊಳಗೆ ಸುಮಾರು 20-30 ನಿಮಿಷಗಳನ್ನು ಕಳೆಯುತ್ತೇವೆ ಎಂದರು. ಉಡುಪಿಯ ಹೆರ್ಗ ಗ್ರಾಮದಲ್ಲಿ ಹುಟ್ಟಿ ಬೆಳೆದ ಪ್ರಮೀಳಾ, ಮೈಸೂರಿನಲ್ಲಿ ಓದಿ ಉಡುಪಿ ಮತ್ತು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದರು. 35ನೇ ವಯಸ್ಸಿನಲ್ಲಿ, 3 ಮತ್ತು 7 ವರ್ಷದ ಮಕ್ಕಳೊಂದಿಗೆ ನರ್ಸ್​​ ಕೆಲಸ ಮಾಡಲು ಇಸ್ರೇಲ್​​ಗೆ ತೆರಳಿದರು.

ಪ್ಯಾಲೆಸ್ತೀನ್‌ನಿಂದ ಹಿಂಸಾಚಾರ ಮತ್ತು ದಾಳಿಗಳು ಇಸ್ರೇಲ್‌ನಲ್ಲಿ ಹೊಸದಲ್ಲ ಆದರೆ ಈ ಬಾರಿ ನಡೆದದ್ದು ಕಲ್ಪನೆಗೂ ಮೀರಿದೆ. ಆರಂಭದಲ್ಲಿ, ಇಸ್ರೇಲ್‌ನ ದಕ್ಷಿಣ ಭಾಗದಲ್ಲಿ ನಡೆದ ಸಂಗೀತೋತ್ಸವದ ಮೇಲೆ ದಾಳಿ ಆಯ್ತು. ಅಂದಿನಿಂದ ನಾವು ದುಃಖಕರ ಸುದ್ದಿಗಳನ್ನು ಕೇಳಲು ಪ್ರಾರಂಭಿಸಿದ್ದೇವೆ. ಈ ದೇಶವು ಯಾವಾಗಲೂ ಯುದ್ಧಕ್ಕೆ ಸಿದ್ಧವಾಗಿದೆ ಮತ್ತು ಸುರಕ್ಷತಾ ಕ್ರಮಗಳನ್ನು ತಕ್ಷಣವೇ ತೆಗೆದುಕೊಳ್ಳಲಾಗಿದೆ, ಎಂದು ಮಾಹಿತಿ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:45 am, Tue, 10 October 23