
ಉಡುಪಿ, ಸೆಪ್ಟೆಂಬರ್ 10: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ಸೃಷ್ಟಿಸಿ ಭಕ್ತರಿಂದ ಹಣ ಪಡೆದು ವಂಚಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ದೇವಸ್ಥಾನ ಹಾಗೂ ಜಗದಾಂಬಿಕಾ ಅತಿಥಿಗೃಹದ ಹೆಸರನ್ನು ದುರ್ಬಳಕೆ ಮಾಡಿಕೊಂಡು ಕಿಡಿಗೇಡಿಗಳು ವಂಚಿಸಿದ್ದಾರೆ. ಸದ್ಯ ಈ ಕುರಿತಾಗಿ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೇವಸ್ಥಾನಕ್ಕೆ ಬರುವ ಭಕ್ತರಿಗೆ ಕೊಠಡಿಗಳನ್ನು ಕಾಯ್ದಿರಿಸುವುದಾಗಿ ನಂಬಿಸಲು ಖದೀಮರು ಜಗದಾಂಬಿಕಾ ಅತಿಥಿಗೃಹದ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ರೂಪಿಸಿದ್ದಾರೆ. ಕೊಠಡಿ ಬುಕಿಂಗ್ ಹೆಸರಿನಲ್ಲಿ ಭಕ್ತರನ್ನು ವಾಟ್ಸಾಪ್ ಮೂಲಕ ಸಂಪರ್ಕಿಸಿ, ಫೋನ್ ಪೇ ಕ್ಯೂಆರ್ ಕೋಡ್ ಕಳುಹಿಸಿ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದರು. ಹಣ ಪಾವತಿಯಾದ ಬಳಿಕ ನಕಲಿ ರಶೀದಿ ನೀಡಿ ಹಲವು ಭಕ್ತರಿಗೆ ವಂಚಿಸಿದ್ದಾರೆ.
ಈ ವಂಚನೆ ಜಾಲದ ಕುರಿತು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ಅವರು ಕೊಲ್ಲೂರು ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದಾರೆ. ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಈ ಹಿಂದೆ ಕೂಡ ಇದೇ ರೀತಿ ನಕಲಿ ವೆಬ್‌ಸೈಟ್ ಸೃಷ್ಟಿಸಿ ಭಕ್ತರಿಗೆ ವಂಚನೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದರು. ಇದೀಗ ಮತ್ತೆ ಅದೇ ರೀತಿಯ ಪ್ರಕರಣ ನಡೆದಿರುವುದು ಭಕ್ತರಲ್ಲಿ ತೀವ್ರ ಆತಂಕವನ್ನುಂಟು ಮಾಡಿದೆ.
ಇದನ್ನೂ ಓದಿ: ‘ಆನ್ಲೈನ್ನಲ್ಲಿಯೇ ಕಥೆ-ಕಾದಂಬರಿ ಓದಿ ಹಣ ಸಂಪಾದಿಸಿ’: ಬಣ್ಣದ ಮಾತು ನಂಬಿ ಹಣ ಕಳೆದುಕೊಂಡ ಸಾವಿರಾರು ಮಂದಿ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.