Mangalore to Ayodhya train: ರೈಲು ಮೂಲಕ ಕೃಷ್ಣನೂರು ರಾಮನೂರಿನ ಜತೆ ಬೆಸೆಯಬೇಕು – ಏನಿದು ಕರಾವಳಿ ಜನರ ಭಾವನಾತ್ಮಕ ಬೇಡಿಕೆ?
ಇಡೀ ಕರಾವಳಿಯಿಂದ ಅಯೋಧ್ಯೆಗೆ ನೇರ ರೈಲು ಸಿಗುವುದು ಭಾವನಾತ್ಮಕವಾಗಿ ಕೂಡ ಕರಾವಳಿಗರಿಗೆ ಮುಖ್ಯ. ಅಲ್ಲದೇ ಶ್ರೀ ರಾಮ ಜನ್ಮಭೂಮಿ ಟ್ರಸ್ಟ್ ಸದಸ್ಯರೂ ಆದ ಪೇಜಾವರ ವಿಶ್ವಪ್ರಸನ್ನ ಶ್ರೀಗಳ ಮೂಲಕ ಕೃಷ್ಣನೂರು ರಾಮನೂರಿನ ಜತೆ ಬೆಸೆಯಬೇಕು ಎನ್ನುವುದು ಕರಾವಳಿಗರ ಬೇಡಿಕೆ. ಪ್ರಸ್ತುತ ಕರಾವಳಿ ಭಾಗದಿಂದ ಯಾವುದೇ ನೇರ ರೈಲು ಇಲ್ಲ.
ಅಯೋಧ್ಯೆ ಶ್ರೀರಾಮ ಮಂದಿರ ಪ್ರತಿಷ್ಠಾಪನೆ ಲೋಕಾರ್ಪಣೆಗೆ ದಿನ ನಿಗದಿಯಾಗಿದೆ. ದೇಶದ ಮೂಲೆ ಮೂಲೆಗಳಿಂದ ರಾಮಭಕ್ತರು ಅಯೋಧ್ಯೆಗೆ ಭೇಟಿ ನೀಡುವ ಉತ್ಸಾಹದಲ್ಲಿದ್ದಾರೆ. ಆದರೆ ಕರಾವಳಿ ಭಾಗದವರು ಅಯೋಧ್ಯೆಗೆ ತೆರಳಲು ಸುತ್ತಿ ಬಳಸಿ ಹೋಗಬೇಕು. ಅಯೋಧ್ಯೆಗೆ ನೇರ ರೈಲ್ವೆ ಸೇವೆ ಒದಗಿಸಬೇಕು ಎನ್ನುವ ಬೇಡಿಕೆ ಕರಾವಳಿಯಲ್ಲಿ ಪ್ರಾರಂಭವಾಗಿದೆ.
ಹೌದು, ಶ್ರೀರಾಮ ಜನ್ಮಭೂಮಿ ಹೋರಾಟದಲ್ಲಿ ಕರಾವಳಿಯ ಪಾತ್ರ ಮಹತ್ವದ್ದು. ಹೋರಾಟದ ಪ್ರಮುಖ ಘಟ್ಟ ಆರಂಭವಾಗಿರುವುದು ಕರಾವಳಿಯಿಂದ ಎಂದರೆ ತಪ್ಪಾಗಲಾರದು. ರಾಮ ಮಂದಿರದ ಉದ್ಘಾಟನೆ ಆದ ಬಳಿಕ ಕರಾವಳಿ ಭಾಗದಿಂದ ಅಲ್ಲಿಗೆ ತೆರಳುವ ಭಕ್ತರು ಹಾಗೂ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ. ಹೀಗಾಗಿ ರೈಲ್ವೇ ಇಲಾಖೆ ನೇರ ಎಕ್ಸ್‌ಪ್ರೆಸ್ ರೈಲು ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕೆಂಬುದು ಕರಾವಳಿಗರ ಆಗ್ರಹ.
ಇಡೀ ಕರಾವಳಿಯಿಂದ ಅಯೋಧ್ಯೆಗೆ ನೇರ ರೈಲು ಸಿಗುವುದು ಭಾವನಾತ್ಮಕವಾಗಿ ಕೂಡ ಕರಾವಳಿಗರಿಗೆ ಮುಖ್ಯ. ಅಲ್ಲದೇ ಶ್ರೀ ರಾಮ ಜನ್ಮಭೂಮಿ ಟ್ರಸ್ಟ್ ಸದಸ್ಯರೂ ಆದ ಪೇಜಾವರ ವಿಶ್ವಪ್ರಸನ್ನ ಶ್ರೀಗಳ ಮೂಲಕ ಕೃಷ್ಣನೂರು ರಾಮನೂರಿನ ಜತೆ ಬೆಸೆಯಬೇಕು ಎನ್ನುವುದು ಕರಾವಳಿಗರ ಬೇಡಿಕೆ. ಪ್ರಸ್ತುತ ಕರಾವಳಿ ಭಾಗದಿಂದ ಯಾವುದೇ ನೇರ ರೈಲುಗಳು ಇಲ್ಲದಿರುವುದೇ ದೊಡ್ಡ ಅಡಚಣೆಯಾಗಿದೆ. ಕೇಂದ್ರ ಸರಕಾರವು ಈಗಾಗಲೇ ಮೈಸೂರು, ಹುಬ್ಬಳ್ಳಿ, ಬೆಂಗಳೂರು ಮೂಲಕ ಅಯೋಧ್ಯೆಗೆ ರೈಲು ಸಂಪರ್ಕ ಮಾಡಲು ಉದ್ದೇಶಿಸಿದೆ. ಅದೇ ರೀತಿ ಕರಾವಳಿಯನ್ನೂ ಅಯೋಧ್ಯೆ ಜತೆಗೆ ಸಂಪರ್ಕ ಮಾಡಬೇಕು ಎನ್ನುವುದು ಕರಾವಳಿಗರ ಬೇಡಿಕೆಯಾಗಿದೆ.
Also Read: ನಾಗರ ಶೈಲಿ, 44 ಬಾಗಿಲುಗಳು, ಸೀತಾ ಕೂಪ: ಹೇಗಿರಲಿದೆ ಅಯೋಧ್ಯೆಯ ರಾಮಮಂದಿರ?
ಈಗಾಗಲೇ ಬೆಂಗಳೂರಿನಿಂದ ಅಯೋಧ್ಯೆಗೆ ಕಾಶಿ-ತಮಿಳ್ ಸಂಗಮ ಎಕ್ಸ್‌ಪ್ರೆಸ್ ಆರಂಭವಾಗಿದೆ. ವಿಶಾಖಪಟ್ಟಣ- ಗೋರಖಪುರ ಎಕ್ಸ್‌ಪ್ರೆಸ್, ನಾಗರಕೋಯಿಲ್ (ತಮಿಳುನಾಡು)-ಅಯೋಧ್ಯೆ ಎಕ್ಸ್‌ಪ್ರೆಸ್ ಆರಂಭ ಪ್ರಕ್ರಿಯೆಯೂ ಅಂತಿಮ ಹಂತದಲ್ಲಿದೆ. ಆದರೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಂದ ಅಯೋಧ್ಯೆ ಯಾತ್ರೆ ಕೈಗೊಳ್ಳುವ ಭಕ್ತರಿಗೆ ನೇರ ಸಂಪರ್ಕ ವ್ಯವಸ್ಥೆ ಇಲ್ಲ. ಕರಾವಳಿ ಭಾಗದವರು ಮುಂಬಯಿಗೆ ತೆರಳಿ ಅಲ್ಲಿಂದ ಅಯೋಧ್ಯೆಗೆ ತೆರಳಬೇಕು.
ಇಲ್ಲವೇ ಬೆಂಗಳೂರಿಗೆ ತೆರಳಿ ರೈಲುಗಳನ್ನು ಬಳಸಬೇಕು. ಇದರಿಂದ ಸಮಯ ವ್ಯರ್ಥದ ಜತೆಗೆ ವೆಚ್ಚವೂ ಹೆಚ್ಚಳವಾಗಲಿದೆ. ನಾಗರಕೋಯಿಲ್ (ತಮಿಳುನಾಡು) -ಅಯೋಧ್ಯೆ ಎಕ್ಸ್‌ಪ್ರೆಸ್ ಮಂಗಳೂರು ಜಂಕ್ಷನ್ ನಿಲ್ದಾಣದ ಮೂಲಕ ಹಾದುಹೋಗಲಿದ್ದರೂ ಇದರಿಂದ ಕರಾವಳಿಯ ಪ್ರಯಾಣಿಕರಿಗೆ ಪ್ರಯೋಜನವಿಲ್ಲ. ಈ ರೈಲು ಕೇರಳ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಹೆಚ್ಚಿನ ಸೀಟುಗಳನ್ನು ಅಲ್ಲಿನವರೇ ಕಾಯ್ದಿರಿಸುವುದರಿಂದ ಕರಾವಳಿಗರಿಗೆ ಸೀಟು ಸಿಗುವುದೇ ಅತ್ಯಲ್ಪ. ಕನಿಷ್ಠ ವಾರದಲ್ಲಿ ಒಂದು ದಿನವಾದರೂ ಕರಾವಳಿ ಭಾಗದಿಂದ ಉಡುಪಿ ಮಾರ್ಗವಾಗಿ ಅಯೋಧ್ಯೆಗೆ ನೇರ ರೈಲು ಸಂಪರ್ಕ ಒದಗಿಸಬೇಕು ಎಂಬುದು ಕರಾವಳಿಗರ ಆಗ್ರಹ.
ಒಟ್ಟಾರೆಯಾಗಿ, ಕರಾವಳಿ ಭಾಗದಲ್ಲಿ ಅಧಿಕ ಸಂಖ್ಯೆಯಲ್ಲಿ ಉತ್ತರ ಭಾರತದ ಕಾರ್ಮಿಕರಿದ್ದಾರೆ. ಕರಾವಳಿಯಿಂದ ಅಯೋಧ್ಯೆಗೆ ನೇರ ರೈಲು ಸೇವೆ ಆರಂಭಿಸಿದರೆ ಕರಾವಳಿಗರ ಜೊತೆಗೆ ಉತ್ತರ ಭಾರತದ ಕಾರ್ಮಿಕರಿಗೂ ಅನುಕೂಲವಾಗಲಿದೆ. ಅಯೋಧ್ಯೆಯ ಹೆಸರಿನಲ್ಲಿ ಈ ಸೇವೆ ಕರಾವಳಿಯ ಜನತೆಗೆ ಸಿಗುವಂತಾಗಲಿ ಎಂಬುವುದು ಜನರ ಆಶಯ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ