ವಿದ್ಯಾರ್ಥಿನಿಯನ್ನ ಅಪಹರಿಸಿ ಮದ್ವೆಯಾಗಲು ಯತ್ನ: ಉಡುಪಿಯಲ್ಲಿ ಹೀಗೊಂದು ಲವ್ ಜಿಹಾದ್ ಆರೋಪ
ನನ್ನ ಮಗಳನ್ನು ಓರ್ವ ಮುಸ್ಲಿಂ ಯುವಕ ಅಪಹರಿಸಿ, ವಿವಾಹವಾಗಲು ಮುಂದಾಗಿದ್ದಾನೆ ಎಂದು ಯುವತಿ ತಂದೆ ಆರೋಪಿಸಿದ್ದಾರೆ. ಯುವತಿಯ ತಂದೆ ಗಾಡ್ವಿನ್ ದೇವದಾಸ್ ಅವರು ಇದು ಲವ್ ಜಿಹಾದ್ ಷಡ್ಯಂತ್ರ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ಮೊಹಮ್ಮದ್ ಅಕ್ರಮ್ ಈ ಹಿಂದೆ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪವೂ ಇದೆ. ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಉಡುಪಿ, ಮಾರ್ಚ್ 28: ಓರ್ವ ಮುಸ್ಲಿಂ (Muslim) ಯುವಕ ನನ್ನ ಮಗಳನ್ನು ಅಪಹರಿಸಿದ್ದಾನೆ. ಇದು ಲವ್ ಜಿಹಾದ್ (Love Jihad) ಷಡ್ಯಂತ್ರವಾಗಿದೆ ಎಂದು ಅಪಹರಣಕ್ಕೆ ಒಳಗಾದ ಯುವತಿಯ ತಂದೆ ಗಾಡ್ವಿನ್ ದೇವದಾಸ್ ಆರೋಪಿಸಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ (Udupi Police Station) ಗಾಡ್ವಿನ್ ದೇವದಾಸ್ ದೂರು ದಾಖಲಿಸಿದ್ದಾರೆ. ಉಡುಪಿಯ ಕರಂಬಳ್ಳಿ ನಿವಾಸಿ ಮೊಹಮ್ಮದ್ ಅಕ್ರಮ್ ಎಂಬವನು ನನ್ನ ಮಗಳನ್ನು ಅಪಹರಿಸಿದ್ದಾನೆ ಎಂದು ಗಾಡ್ವಿನ್ ದೇವದಾಸ್ ದೂರು ನೀಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದಂತೆ ಮೊಹಮ್ಮದ್ ಅಕ್ರಮ್ ಉಡುಪಿ (Udupi) ಉಪ ನೊಂದಾವಣಿ ಕಚೇರಿಯಲ್ಲಿ ವಿಶೇಷ ವಿವಾಹದಡಿ ಅರ್ಜಿ ಸಲ್ಲಿಸಿದ್ದಾರೆ.
ಯುವತಿ ಕ್ರೈಸ್ತ ಧರ್ಮಕ್ಕೆ ಸೇರಿದವರಾಗಿದ್ದು, ಕಾಲೇಜಿನಿಂದ ವಾಪಸು ಮನೆಗೆ ತೆರಳುವಾಗ ಅಪಹರಿಸಲಾಗಿದೆ ಎನ್ನಲಾಗಿದೆ. ಗಾಡ್ವಿನ್ ದೇವದಾಸ್ ಈ ಹಿಂದೆ ಅಕ್ರಮ್ ಮೊಹಮ್ಮದ್ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡಿದ್ದರು. ಈ ಸೇಡು ತೀರಿಸಿಕೊಳ್ಳಲು ಅಕ್ರಮ್ ಮೊಹಮ್ಮದ್ ನನ್ನ ಮಗಳನ್ನು ಅಪಹರಿಸಿ, ಬೆದರಿಸಿ ವಿವಾಹ ನೊಂದಣಿಗೆ ಸಹಿ ಹಾಕಿಸಿದ್ದಾನೆ ಎಂದು ದಾಖಲಿಸಿದ್ದಾರೆ.
ಅಪ್ರಾಪ್ತೆಯಾಗಿದ್ದಾಗಲೇ ಮಗಳಿಗೆ ಅಕ್ರಂ ಕಿರುಕುಳ ನೀಡಿದ್ದ: ಪೋಷಕರು
“ನಮ್ಮ ಮಗಳು ಜೀನಾಳನ್ನು ಅಕ್ರಮ್ ಅಪಹರಿಸಿದ್ದಾನೆ. ಅಪ್ರಾಪ್ತೆಯಾಗಿದ್ದಾಗಲೇ ನಮ್ಮ ಮಗಳಿಗೆ ಅಕ್ರಂ ಕಿರುಕುಳ ನೀಡಿದ್ದನು. ಐದು ವರ್ಷದ ಹಿಂದೆ ಪೋಕ್ಸೋ ಕೇಸು ದಾಖಲು ಮಾಡಿದ್ದೇವು. ಲೈಂಗಿಕ ಕಿರುಕುಳ ನೀಡಿಲ್ಲ ಎಂಬ ಕಾರಣಕ್ಕೆ ಕೇಸು ವಜಾಗೊಂಡಿತ್ತು. ಇದೀಗ, ಸೇಡು ತೀರಿಸಲು ಅಪಹರಿಸಿದ್ದಾನೆ” ಎಂದು ಪೋಷಕರಾದ ಮೇರುಸ್ ಪುಷ್ಪಲತಾ ಮತ್ತು ಗಾಡ್ವಿನ್ ದೇವದಾಸ್ ಆರೋಪಿಸಿದ್ದಾರೆ.
“ನಮ್ಮ ಮಗಳಿಗೆ ಅಕ್ರಮ್ ಮೊಹಮ್ಮದ್ ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿ, ಕಳೆದ ಐದು ವರ್ಷಗಳಿಂದ ನಿರಂತರ ಸಂಪರ್ಕದಲ್ಲಿದ್ದಾರೆ. ನಮ್ಮ ಮಗಳನ್ನು ಪುಸಲಾಯಿಸಿ ಅಶ್ಲೀಲ ಫೋಟೋ ವಿಡಿಯೋ ತೆಗೆದಿದ್ದಾನೆ. ಅಶ್ಲೀಲ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ನಮಗೆ ಧಮ್ಕಿ ಹಾಕಿದ್ದಾನೆ” ಎಂದರು.
“ಒಮ್ಮೆ ನಮ್ಮ ಮಗಳನ್ನು ತಂದು ನಮ್ಮ ಮುಂದೆ ನಿಲ್ಲಿಸಿ. ಆರೋಪಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾನೆ. ಆತನನ್ನು ಕೊಡಲೇ ಬಂಧಿಸಿ. ಮೊಹಮ್ಮದ್ ಅಕ್ರಂ ಗರುಡ ಗ್ಯಾಂಗ್ನ ಸದಸ್ಯ ಎಂಬ ಮಾಹಿತಿ ಇದೆ. ಪೊಲೀಸರ ಬಳಿ ಹೋದರೆ, ಇಬ್ಬರೂ ವಯಸ್ಕರು, ಕ್ರಮ ಕೈಗೊಳ್ಳು ಸಾಧ್ಯವಿಲ್ಲ ಎನ್ನುತ್ತಾರೆ. ಇಬ್ಬರು ಜೊತೆಗೆ ಸುರಕ್ಷಿತವಾಗಿದ್ದಾರೆ ಎಂದು ವಿಡಿಯೋ ತೋರಿಸಿ ಪೊಲೀಸರು ನಮ್ಮನ್ನು ವಾಪಸ್ ಕಳುಹಿಸಿದ್ದಾರೆ. ಉಡುಪಿ ಎಸ್‌ಪಿ ಡಾ. ಅರುಣ್ ಕುಮಾರ್ ಯಾವ ಕ್ರಮ ತೆಗೆದುಕೊಂಡಿಲ್ಲ” ಎಂದು ಹೇಳಿದರು.
ಇದನ್ನೂ ಓದಿ: ಜಸ್ಟ್ ಪಾಸಾದ್ರೆ ಸಾಕು, ಇದಕ್ಕಿಂತ ಕಮ್ಮಿ ಅಂಕ ಬೇಡ; ದೈವಕ್ಕೆ ಚೀಟಿ ಮುಖಾಂತರ ಮನವಿಯಿಟ್ಟ ವಿದ್ಯಾರ್ಥಿ
“ಅಕ್ರಂ ಡ್ರಗ್ಸ್ ವ್ಯಸನಿ ಆತನಿಗೆ ಯಾವುದೇ ಉದ್ಯೋಗವಿಲ್ಲ ನಾವು ಮಗಳನ್ನು ಕಳುಹಿಸುವುದಿಲ್ಲ. ಮುಸ್ಲಿಮರು ಎಲ್ಲರೂ ಕೆಟ್ಟವರೆಂದು ಹೇಳುವುದಿಲ್ಲ. ಹಬ್ಬದ ಸಂದರ್ಭದಲ್ಲಿ ಹೀಗೆ ಮಾಡಬಹುದಾ? ಸಭ್ಯ ಹುಡುಗನಾಗಿದ್ದರೆ ನಮ್ಮದು ಯಾವುದೇ ತಕರಾರು ಇರಲಿಲ್ಲ. ಕಳೆದ ಐದು ವರ್ಷಗಳಿಂದ ಮಗಳಿಗೆ ನಿರಂತರವಾಗಿ ಕಿರುಕುಳ ನೀಡಿದ್ದಾನೆ. ಗೆಳೆಯರ ಜೊತೆ ಬೆರೆಯದಂತೆ ಮೊಹಮ್ಮದ್ ಅಕ್ರಂ ಒತ್ತಡ ಹೇರುತ್ತಿದ್ದನು” ಎಂದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:43 pm, Fri, 28 March 25