ಹೀಗೆ ಕಲುಷಿತಗೊಂಡರೆ ಸೌಪರ್ಣಿಕಾ ನದಿ ಉಳಿಯುತ್ತಾ? ಸಮಗ್ರ ವರದಿ ಸಲ್ಲಿಸುವಂತೆ ಹಸಿರು ನ್ಯಾಯಮಂಡಳಿ ಆದೇಶ
ಕೊಲ್ಲೂರು ಸೌಪರ್ಣಿಕಾ ನದಿ ಮಾಲಿನ್ಯ ಕುರಿತು NGT ಮಹತ್ವದ ಆದೇಶ ನೀಡಿದೆ. ದೇವಸ್ಥಾನದ ಸುತ್ತಲಿನ ವಾಣಿಜ್ಯ ಕಟ್ಟಡಗಳಿಂದ ಹರಿಯುವ ಕಲುಷಿತ ನೀರು ನದಿಯನ್ನು ಹಾಳುಮಾಡುತ್ತಿದೆ. NGT ಉಡುಪಿ ಜಿಲ್ಲಾಧಿಕಾರಿ ಮತ್ತು KUWSDBಗೆ ಸಮಗ್ರ ವರದಿ ಸಲ್ಲಿಸಲು ಸೂಚಿಸಿದೆ. ಭೂಗತ ಒಳಚರಂಡಿ ಯೋಜನೆ ಇದ್ದರೂ ಮಾಲಿನ್ಯ ಮುಂದುವರಿದಿರುವುದಕ್ಕೆ ನ್ಯಾಯಮಂಡಳಿ ಆಕ್ಷೇಪ ವ್ಯಕ್ತಪಡಿಸಿದೆ, ಭಕ್ತರಿಗೆ ಸಮಸ್ಯೆ ಉಂಟಾಗಿದೆ.

ಉಡುಪಿ, ಜನವರಿ 20: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದ (Kolluru Mukambika Temple) ಸುತ್ತಮುತ್ತಲ ಪ್ರದೇಶದಲ್ಲಿ ವಾಣಿಜ್ಯ ಕಟ್ಟಡಗಳಿಂದ ಹರಿಯುತ್ತಿರುವ ಮಲಿನ ನೀರಿನಿಂದ ಸೌಪರ್ಣಿಕಾ ನದಿ ತೀವ್ರವಾಗಿ ಮಾಲಿನ್ಯಗೊಳ್ಳುತ್ತಿರುವ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಮಹತ್ವದ ಆದೇಶ ನೀಡಿದೆ. ಫೆಬ್ರವರಿ 9, 2026ಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಿರುವ ನ್ಯಾಯಮಂಡಳಿ, ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (KUWSDB) ಅಧ್ಯಕ್ಷರಿಗೆ ಸಮಗ್ರ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದೆ.
ಕೊಳಚೆ ನೀರಿನಿಂದ ಅಶುದ್ಧವಾಗಿರುವ ಸೌಪರ್ಣಿಕಾ
ನ್ಯಾಯಾಂಗ ಸದಸ್ಯರಾದ ನ್ಯಾಯಮೂರ್ತಿ ಪುಷ್ಪಾ ಸತ್ಯನಾರಾಯಣ ಮತ್ತು ತಜ್ಞ ಸದಸ್ಯ ಡಾ. NGT ಪ್ರಶಾಂತ್ ಗರ್ಗವ ಅವರು ಸಾಮಾಜಿಕ ಕಾರ್ಯಕರ್ತ ಹರೀಶ್ ತೋಳಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಈ ಆದೇಶ ಹೊರಡಿಸಿದ್ದಾರೆ. ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನ ಮತ್ತು ಸುತ್ತಮುತ್ತಲಿನ ವಾಣಿಜ್ಯ ಸಂಸ್ಥೆಗಳು- ಲಾಡ್ಜ್‌ಗಳು ಮತ್ತು ಹೋಟೆಲ್‌ಗಳಿಂದ ಕೊಳಚೆನೀರು ಮತ್ತು ಕಲ್ಮಶಯುಕ್ತ ನೀರನ್ನು ಹೊರಹಾಕಲಾಗುತ್ತಿದೆ ಹೀಗಾಗಿ ನದಿ ಹಲವು ವರ್ಷಗಳಿಂದ ಕಲುಷಿತವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.
ಕೊಲ್ಲೂರಿನಲ್ಲಿ 2015 ರಲ್ಲಿ 19.97 ಕೋಟಿ ರೂ.ಗಳಿಗೆ ಭೂಗತ ಒಳಚರಂಡಿ ಯೋಜನೆ (UGSS) ಕಾಮಗಾರಿಯನ್ನು ಪ್ರಾರಂಭಿಸಲಾಯಿತು ಮತ್ತು 2020ರಲ್ಲಿ ಪೂರ್ಣಗೊಂಡಿದ್ದರೂ, ನೀರಿನ ಮಾಲಿನ್ಯ ನಿಂತಿಲ್ಲ. ಎರಡು ವರ್ಷಗಳ ಸೂಚನೆಯ ನಂತರ, ನವೆಂಬರ್ 25, 2025 ರಂದು ಉಡುಪಿ ಜಿಲ್ಲಾಧಿಕಾರಿಯವರ ವರದಿಯನ್ನು ಸಲ್ಲಿಸಲಾಗಿದ್ದರೂ, ಅದು ಸಮಗ್ರವಾಗಿಲ್ಲ ಎಂದು NGTಗೆ ತಿಳಿದುಬಂದಿದೆ.
ಪ್ರತ್ಯೇಕ ವರದಿ ಸಲ್ಲಿಸುವಂತೆ ಡಿಸಿಗೆ ಆದೇಶ
ಜಿಲ್ಲಾಧಿಕಾರಿ ಸಲ್ಲಿಸಿದ ವರದಿಯಲ್ಲಿ ಉತ್ಪಾದಿಸುವ ತ್ಯಾಜ್ಯದ ಪ್ರಮಾಣ, ಅಸ್ತಿತ್ವದಲ್ಲಿರುವ UGSS ನ ಸಾಗಿಸುವ ಸಾಮರ್ಥ್ಯ, ಸಾಮರ್ಥ್ಯವನ್ನು ಎಷ್ಟರ ಮಟ್ಟಿಗೆ ಹೆಚ್ಚಿಸಬೇಕು, ಅಂದಾಜು ವೆಚ್ಚದ ಕುರಿತು ಸ್ಪಷ್ಟ ವಿವರಗಳಿಲ್ಲವೆಂದು ನ್ಯಾಯಮಂಡಳಿ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿಯಮ ಉಲ್ಲಂಘನೆ ಮಾಡಿದವರ ವಿವರ ಹಾಗೂ ಕೈಗೊಂಡ ಕ್ರಮಗಳ ಕುರಿತು ಪ್ರತ್ಯೇಕ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಸಾಮಾಜಿಕ ಕಾರ್ಯಕರ್ತ ಹರೀಶ್ ತೋಳಾರ್ ಮಾತನಾಡಿ, ಸೌಪರ್ಣಿಕಾ ನದಿಗೆ ಕೊಳಚೆ ನೀರನ್ನು ಬಿಡುವುದರಿಂದ ನೀರು ಕಲುಷಿತವಾಗಿದೆ ಮತ್ತು ಭಕ್ತರು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.ಕೊಲ್ಲೂರಿನಲ್ಲಿ ಯುಜಿಎಸ್ಎಸ್ ಜಾರಿಗೆ ಬಂದಿದ್ದರೂ, ವಾಣಿಜ್ಯ ಸಂಸ್ಥೆಗಳು ನದಿಯನ್ನು ಕಲುಷಿತಗೊಳಿಸುತ್ತಲೇ ಇವೆ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
