Narendra Modi Udupi Visit: ಕೃಷ್ಣನೂರು ಉಡುಪಿಗೆ ಇಂದು ಮೋದಿ: ಎಲ್ಲೆಡೆ ಅಲರ್ಟ್, ಎಷ್ಟೊತ್ತಿಗೆ ಏನು ಕಾರ್ಯಕ್ರಮ? ಇಲ್ಲಿದೆ ವಿವರ

PM Modi in Udui: ರಸ್ತೆಯುದ್ದಕ್ಕೂ ಕೇಸರಿ ಧ್ವಜಗಳ ಹಾರಾಟ. ಒಂದೆಡೆ ಪೊಲೀಸರು ಭದ್ರತೆ ಪರಿಶೀಲಿಸುತ್ತಿದ್ದರೆ, ಮತ್ತೊಂದೆಡೆ ಬೆಂಗಾವಲು ಪಡೆಯಿಂದ ತಾಲೀಮು. ಪ್ರಧಾನಿ ಮೋದಿಯನ್ನು ಸ್ವಾಗತಿಸಲು ಕೃಷ್ಣನೂರು ಉಡುಪಿ ಸಜ್ಜಾಗಿ ನಿಂತಿದೆ. ಇಂದು ಮೋದಿ ಅವರದ್ದು ಎಷ್ಟೊತ್ತಿಗೆ ಏನು ಕಾರ್ಯಕ್ರಮ ಎಂಬ ವಿವರ ಇಲ್ಲಿದೆ.

Narendra Modi Udupi Visit: ಕೃಷ್ಣನೂರು ಉಡುಪಿಗೆ ಇಂದು ಮೋದಿ: ಎಲ್ಲೆಡೆ ಅಲರ್ಟ್, ಎಷ್ಟೊತ್ತಿಗೆ ಏನು ಕಾರ್ಯಕ್ರಮ? ಇಲ್ಲಿದೆ ವಿವರ
ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಮಾರ್ಗದುದ್ದಕ್ಕೂ ಪೊಲೀಸರಿಂದ ನಿರಂತರ ತಪಾಸಣೆ
Updated By: Ganapathi Sharma

Updated on: Nov 28, 2025 | 9:59 AM

ಉಡುಪಿ, ನವೆಂಬರ್ 28: ಎರಡು ದಿನ ಹಿಂದಷ್ಟೇ ಅಯೋಧ್ಯೆಯ ರಾಮ ಮಂದಿರದಲ್ಲಿ ಧರ್ಮ ಧ್ವಜ ಸ್ಥಾಪಿಸಿದ್ದ ಪ್ರಧಾನಿ ಮೋದಿ (Narendra Modi) ಇವತ್ತು ಕೃಷ್ಣನೂರು ಉಡುಪಿಗೆ (Udupi) ಬರುತ್ತಿದ್ದಾರೆ. ಕೃಷ್ಣಮಠದ ವಿಶ್ವಪರ್ಯಾಯ ನಡೆಯುತ್ತಿದ್ದು, ಇದರ ಭಾಗವಾಗಿ ಲಕ್ಷ ಕಂಠ ಗೀತಾ ಪರಾಯಣ ಹಮ್ಮಿಕೊಳ್ಳಲಾಗಿದೆ. ಅಂದರೆ ಒಂದು ಲಕ್ಷಕ್ಕೂ ಹೆಚ್ಚು ಜನ ಭಕ್ತರು ಇಂದು ಕೃಷ್ಣಮಠದ ಕಾರ್ಯಕ್ರಮದಲ್ಲಿ ಭಗವದ್ಗೀತೆ ಪಠಿಸಲಿದ್ದಾರೆ. ಇದೇ ಐತಿಹಾಸಿಕ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಸಾಕ್ಷಿ ಆಗಲಿದ್ದಾರೆ. ಸ್ವತಃ ಮೋದಿಯೇ ಭಗವದ್ಗೀತೆಯ 15 ನೇ ಅಧ್ಯಾಯದ ಶ್ಲೋಕಗಳನ್ನು ಪಠಿಸಲಿದ್ದಾರೆ. ಗೀತೆಯಲ್ಲಿ ಹೆಚ್ಚಿನ ಮಹತ್ವ ಹೊಂದಿರುವ 15 ನೇ ಅಧ್ಯಾಯದ ಕೊನೆಯ 10 ಶ್ಲೋಕಗಳನ್ನು ಪಠಿಸಲಿದ್ದಾರೆ..

ಪ್ರಧಾನಿ ಮೋದಿ ಕಾರ್ಯಕ್ರಮದ ವೇಳಾಪಟ್ಟಿ

  • ಬೆಳಗ್ಗೆ 11:05ಕ್ಕೆ ಪ್ರಧಾನಿ ಮೋದಿ ಮಂಗಳೂರಿ​ಗೆ ಆಗಮನ
  • ಬೆಳಗ್ಗೆ 11:15ಕ್ಕೆ ಹೆಲಿಕಾಪ್ಟರ್ ಮೂಲಕ ಉಡುಪಿಗೆ ಪ್ರಯಾಣ
  • ಬೆಳಗ್ಗೆ 11:30ಕ್ಕೆ ಉಡುಪಿಯ ಹೆಲಿಪ್ಯಾಡ್​ಗೆ ಪ್ರಧಾನಿ ಆಗಮನ
  • ಬೆಳಗ್ಗೆ 11:40ರಿಂದ ಮಧ್ಯಾಹ್ನ 12 ಗಂಟೆಯವರೆಗೆ ರೋಡ್​ ಶೋ (ಬನ್ನಂಜೆ ವೃತ್ತದಿಂದ ಕಲ್ಸಂಕ ಜಂಕ್ಷನ್​ ವರೆಗೆ)
  • ಮಧ್ಯಾಹ್ನ 12:00 ಗಂಟೆಗೆ ಶ್ರೀ ಕೃಷ್ಣ ಮಠಕ್ಕೆ ಭೇಟಿ , ಸ್ವರ್ಣ ಲೇಪಿತ ತೀರ್ಥ ಮಂಟಪ ಮೋದಿಯಿಂದ ಉದ್ಘಾಟನೆ
  • ಮಧ್ಯಾಹ್ನ 1ಗಂಟೆಗೆ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮ
  • ಸಾರ್ವಜನಿಕ ಸಭೆಯನ್ನುದ್ದೇಶಿಸಿ ಪ್ರಧಾನಿ ಮೋದಿಯಿಂದ ಭಾಷಣ

ಸ್ವರ್ಣ ಲೇಪಿತ ತೀರ್ಥ ಮಂಟಪವನ್ನು ಮೋದಿ ಉದ್ಘಾಟಿಸಲಿದ್ದಾರೆ. ಪುತ್ತಿಗೆ ಸ್ವಾಮೀಜಿಯವರ ಸನ್ಯಾಸ ಜೀವನದ 50ನೇ ವರ್ಷ ಪೂರ್ಣಗೊಂಡ ಹಿನ್ನೆಲೆ 2 ಕೋಟಿ ರೂ. ವೆಚ್ಚದಲ್ಲಿ ತೀರ್ಥ ಮಂಟಪಕ್ಕೆ ಸ್ವರ್ಣ ಲೇಪನ ಮಾಡಲಾಗಿದ್ದು, ಇದು ಇವತ್ತು ಉದ್ಘಾಟನೆಯಾಗಲಿದೆ. ನಂತರ ಕನಕ ನವಗ್ರಹ ಕಿಂಡಿಯ ಮೂಲಕ ಕೃಷ್ಣ ದರ್ಶನ ಮಾಡಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ.

ಪ್ರಧಾನಿ ಮೋದಿಯನ್ನ ಸ್ವಾಗತಿಸಲು ಉಡುಪಿ ಸಜ್ಜಾಗಿ ನಿಂತಿದ್ದು, ಪ್ರಧಾನಿ ಮೋದಿ ಕೂಡ ಈ ಬಗ್ಗೆ ಕನ್ನಡದಲ್ಲೇ ಎಕ್ಸ್​ ಸಂದೇಶ ಪ್ರಕಟಿಸಿ​ ಮಾಡಿ ಸಂತಸ ಹಂಚಿಕೊಂಡಿದ್ದಾರೆ.

ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ದೊರೆತಿರುವುದು ನನಗೆ ಗೌರವದ ವಿಷಯ. ಗೀತಾ ಪಠಣಕ್ಕಾಗಿ ಸಮಾಜದ ವಿವಿಧ ವರ್ಗಗಳ ಜನರನ್ನು ಒಂದೆಡೆ ಸೇರಿಸುವ ವಿಶೇಷ ಕಾರ್ಯಕ್ರಮ ಇದಾಗಿದೆ. ಈ ಮಠವು ನಮ್ಮ ಸಾಂಸ್ಕೃತಿಕ ಜೀವನದಲ್ಲಿ ಅತ್ಯಂತ ವಿಶೇಷ ಮಹತ್ವವನ್ನು ಹೊಂದಿದೆ. ಶ್ರೀ ಮಧ್ವಾಚಾರ್ಯರಿಂದ ಪ್ರೇರಿತವಾದ ಈ ಮಠವು, ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದೆ ಎಂದು ನರೇಂದ್ರ ಮೋದಿ ಉಲ್ಲೇಖಿಸಿದ್ದಾರೆ.

ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಉಡುಪಿ ನಗರದಾದ್ಯಂತ ಬಿಗಿ ಭದ್ರತೆ ಏರ್ಪಡಿಸಲಾಗಿದ್ದು, ಡ್ರೋನ್ ಹಾರಾಟ ನಿಷೇಧಿಸಲಾಗಿದೆ. ಮಠದ ಆಸುಪಾಸಿನ ಪ್ರದೇಶಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

ಬಂದೋಬಸ್ತ್​​ಗೆ 3000ಕ್ಕೂ ಹೆಚ್ಚು ಪೊಲೀಸರ ನಿಯೋಜನೆ

ಬಂದೋಬಸ್ತ್​​ಗೆ 3000ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. 10 ಮಂದಿ ಎಸ್​ಪಿ, 27 DySPಗಳು, 49 ಇನ್ಸ್​​ಪೆಕ್ಟರ್​ಗಳು, 127 PSI, 232 ASI, 1608 ಪಿಸಿಗಳು​, 39 ಮಹಿಳಾ ಸಿಬ್ಬಂದಿ, 6 KSRP ತುಕಡಿ, 6 ಕ್ಯೂಆರ್‌ಟಿ ತಂಡಗಳನ್ನ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಮಾರ್ಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ರೋಡ್ ಶೋ ಮಾರ್ಗದುದ್ದಕ್ಕೂ ಪೊಲೀಸರಿಂದ ನಿರಂತರ ತಪಾಸಣೆ ನಡೆಸಲಾಗಿದೆ. ಜತೆಗೆ ನಗರದ ಎಲ್ಲಾ ಕಡೆ ಬಾಂಬ್ ಸ್ಕ್ವಾಡ್​​ಗಳಿಂದ ತಪಾಸಣೆ ನಡೆಸಲಾಗ್ತಿದೆ.

ಇದನ್ನೂ ಓದಿ: ಉಡುಪಿಗೆ ಪ್ರಧಾನಿ ಮೋದಿ ಭೇಟಿ: ಏನೆಲ್ಲಾ ಕಾರ್ಯಕ್ರಮ ಇದೆ ಗೊತ್ತಾ?

ಇದಿಷ್ಟೇ ಅಲ್ಲದೆ, ಬೆಳಗ್ಗೆ 8 ರಿಂದ ಮಧ್ಯಾಹ್ನ 3 ರವರೆಗೆ ಶ್ರೀ ಕೃಷ್ಣ ಮಠಕ್ಕೆ ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:46 am, Fri, 28 November 25