
ಉಡುಪಿ, ಸೆಪ್ಟೆಂಬರ್ 23: ಶಾರ್ಜಾದಲ್ಲಿ ಹತ್ಯೆಗೀಡಾದ ಉಡುಪಿ ಮೂಲದ ಅಲ್ವಿನ್ ಪ್ರಕಾಶ್ ಕುಂದರ್ ಕೊಲೆ ಅದೆಷ್ಟು ಭಯಾನಕವಾಗಿತ್ತು ಎನ್ನುವುದು ಪೋಸ್ಟ್‌ಮಾರ್ಟಮ್ ವರದಿಯಲ್ಲಿ ಬೆಳಕಿಗೆ ಬಂದಿದೆ. ಅವರ ದೇಹವನ್ನು ಒಂಬತ್ತು ಭಾಗಗಳಾಗಿ ತುಂಡರಿಸಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇನ್ನೊಂದೆಡೆ ಸಿಸಿ ಕ್ಯಾಮೆರಾದಲ್ಲಿ ಓರ್ವ ಮಹಿಳೆ ಹಾಗೂ ಇಬ್ಬರು ಪುರುಷರು ಎರಡು ಚೀಲಗಳಲ್ಲಿ ಶವವನ್ನು ಸಾಗಿಸುತ್ತಿರುವಂತೆ ಕಂಡುಬಂದಿರುವ ದೃಶ್ಯ ಶಾರ್ಜಾ ಪೊಲೀಸರಿಗೆ ಲಭ್ಯವಾಗಿದೆ. ಮತ್ತೊಂದೆಡೆ ಪ್ರಕಾಶ್ ಅವರ ಶವವನ್ನು ಆದಷ್ಟು ಬೇಗ ಊರಿಗೆ ಕಳುಹಿಸುವಂತೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ಅಂಶಗಳು ಬೆಳಕಿಗೆ ಬರುತ್ತಿವೆ. ಸಿಸಿ ಕ್ಯಾಮೆರಾದಲ್ಲಿ ಓರ್ವ ಮಹಿಳೆ ಹಾಗೂ ಇಬ್ಬರು ಪುರುಷರು ಶವವನ್ನು ಸಾಗಿಸುತ್ತಿರುವಂತೆ ಕಂಡುಬಂದಿರುವ ದೃಶ್ಯ ಶಾರ್ಜಾ ಪೊಲೀಸರಿಗೆ ಲಭ್ಯವಾಗಿದೆ. ಇನ್ನೊಂದೆಡೆ ಘಟನೆ ನಂತರ ಪತ್ನಿ ಹಾಗೂ ಪುತ್ರ ಭಾರತಕ್ಕೆ ಬಂದಿರುವುದು ದೆಹಲಿ ವಿಮಾನ ನಿಲ್ದಾಣದಿಂದ ಗೊತ್ತಾಗಿದೆ. ಆ ನಂತರದ ಅವರ ಚಲನವಲನದ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.
ಇದನ್ನೂ ಓದಿ: ಶಾರ್ಜಾದಲ್ಲಿ ಕುಂದಾಪುರ ಮೂಲದ ಪ್ರಕಾಶ್ ಭೀಕರ ಕೊಲೆ: 9 ತುಂಡು ಮಾಡಿದ ದುಷ್ಕರ್ಮಿಗಳು
ಕಾಣೆಯಾಗಿರುವ ಇವರಿಬ್ಬರನ್ನು ಪತ್ತೆ ಮಾಡಿ, ಕೊಲೆಯಲ್ಲಿ ಅವರು ಭಾಗಿಯಾಗಿದ್ದಾರಾ ಇಲ್ಲಾ ಎನ್ನುವುದನ್ನು ಪತ್ತೆ ಹಚ್ಚುವಂತೆ ಕುಟುಂಬ ಒತ್ತಾಯಿಸಿದೆ. ಪತ್ನಿ ಟೀನಾ ಈ ಕೃತ್ಯ ನಡೆಸಿರಬಹುದು ಎಂಬ ಸಂಶಯ ದಟ್ಟವಾಗಿದೆ. ಏಕೆಂದರೆ ಊರಿಗೂ ಬರದೆ ನಾಪತ್ತೆಯಾಗಿರುವುದು ಸಂಶಯಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.
ಇನ್ನು ಕೊಲೆ ಎಷ್ಟು ಭೀಕರವಾಗಿತ್ತು ಎನ್ನುವುದಕ್ಕೆ ಪೋಸ್ಟ್‌ಮಾರ್ಟಮ್ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮೃತ ದೇಹದ ಎಡ ಎದೆ ಭಾಗದಲ್ಲಿ ಎರಡು ಚುಚ್ಚಿದ ಗಾಯಗಳಿವೆ. ಏಳನೇ ಮತ್ತು ಎಂಟನೇ ಪಕ್ಕೆಲುಬುಗಳ ನಡುವಿನಿಂದ ಚುಚ್ಚಲಾಗಿದೆ. ಹಸಿರು ಮತ್ತು ನೀಲಿ ಚೀಲಗಳಲ್ಲಿ ತಲೆ, ಕೈಕಾಲುಗಳು ಹಾಗೂ ಇತರೆ ದೇಹದ ಅಂಗಾಂಗಗಳನ್ನು ಪ್ರತ್ಯೇಕಿಸಲಾಗಿತ್ತು. ಎಲುಬುಗಳನ್ನು ಹರಿತವಾದ ಮಾರಕಾಸ್ತ್ರದಿಂದ ಕತ್ತರಿಸಲಾಗಿತ್ತು. ಮೃದು ಅಂಗಾಂಶಗಳನ್ನು ಕತ್ತರಿಸಿ ಎಲುಬುಗಳನ್ನು ಬೇರ್ಪಡಿಸಿರುವುದು ಗೊತ್ತಾಗಿದೆ. ಇಷ್ಟೊಂದು ಅಮಾನವೀಯವಾಗಿ ಕೊಲೆ ಮಾಡಲು ಸಾಧ್ಯವೇ ಎನ್ನುವುದು ಆತಂಕ ಹುಟ್ಟಿಸಿದೆ.
ಪ್ರಕಾಶ್ ಕುಂದರ್ ಅವರ ಶವವನ್ನು ಆದಷ್ಟು ಶೀಘ್ರವಾಗಿ ಊರಿಗೆ ಕಳುಹಿಸುವಂತೆ ಕುಟುಂಬ ಸದಸ್ಯರು ಒತ್ತಾಯಿಸಿದ್ದಾರೆ. ಈ ಸಂಬಂಧ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಮತ್ತು ಸಂಸದ ಕೋಟ ಶ್ರೀನಿವಾಸ ಪೂಜಾರಿಗೆ ಒತ್ತಾಯಿಸಿದ್ದಾರೆ. ಪತ್ನಿ ಹಾಗೂ ಪುತ್ರನನ್ನು ಪತ್ತೆ ಮಾಡಲು ಭಾರತದ ಕಡೆಯಿಂದ ಶಾರ್ಜಾ ಪೊಲೀಸರಿಗೆ ಒತ್ತಡ ತರಬೇಕಾಗಿದೆ. ಒಂದು ವೇಳೆ ಪತ್ನಿಯೇ ಕೃತ್ಯವೆಸಗಿದ್ದರೆ ಇದಕ್ಕಿಂತ ಅಮಾನವೀಯ ಘಟನೆ ಬೇರೊಂದಿಲ್ಲ ಎಂದೇ ಹೇಳಬೇಕು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.