ಕೊಲ್ಲೂರಿಗೆ ವಿಜಯ್ ಬರ್ತಿರೋದ್ರ ಹಿಂದಿದೆ ವಿಶಿಷ್ಟ ಕಾರಣ: ತಮಿಳುನಾಡಿನ ಗಣ್ಯರಿಗೂ ಮೂಕಾಂಬಿಕೆಗೂ ಇದೆ ಅವಿನಾಭಾವ ನಂಟು!

ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಸಿಎಂ ಆದ ಬಳಿಕ ಮೊದಲ ಕರ್ನಾಟಕ ಭೇಟಿಯಲ್ಲಿ ಕೊಲ್ಲೂರು ಮೂಕಾಂಬಿಕೆ ದೇಗುಲಕ್ಕೆ ಆಗಮಿಸುತ್ತಿದ್ದಾರೆ. ಸಿಎಂ ಆದ ಬಳಿಕ ಹಲವು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದ್ದ ವಿಜಯ್, ಈಗ ಪ್ರಸಿದ್ಧ ಮೂಕಾಂಬಿಕೆ ದೇವಿಯ ದರ್ಶನ ಪಡೆಯುತ್ತಿದ್ದಾರೆ. ಕೊಲ್ಲೂರಿಗೂ ತಮಿಳುನಾಡಿನ ಗಣ್ಯರಿಗೂ ಇರುವ ಅವಿನಾಭಾವ ನಂಟಿನ ಕುರಿತಾದ ಆಸಕ್ತಿದಾಯಕ ಮಾಹಿತಿ ಇಲ್ಲಿದೆ.

ಕೊಲ್ಲೂರಿಗೆ ವಿಜಯ್ ಬರ್ತಿರೋದ್ರ ಹಿಂದಿದೆ ವಿಶಿಷ್ಟ ಕಾರಣ: ತಮಿಳುನಾಡಿನ ಗಣ್ಯರಿಗೂ ಮೂಕಾಂಬಿಕೆಗೂ ಇದೆ ಅವಿನಾಭಾವ ನಂಟು!
ಕೊಲ್ಲೂರಿಗೆ ವಿಜಯ್ ಬರ್ತಿರೋದ್ರ ಹಿಂದಿದೆ ವಿಶಿಷ್ಟ ಕಾರಣ
Image Credit source: tv9
Edited By:

Updated on: Jun 12, 2026 | 8:11 AM

ಉಡುಪಿ, ಜೂನ್ 12: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ (Joseph Vijay) ಸಿಎಂ ಆದ ನಂತರ ಇದೇ ಮೊದಲ ಬಾರಿಗೆ ಕರ್ನಾಟಕಕ್ಕೆ ಭೇಟಿ ನೀಡಿದ್ದು, ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕೆ ದೇಗುಲಕ್ಕೆ (Kollur Sri Mookambika Devi Temple) ಆಗಮಿಸುತ್ತಿದ್ದಾರೆ. ಅವರ ಈ ಭೇಟಿಯು ಹಲವು ಕುತೂಹಲಗಳನ್ನು ಕೆರಳಿಸಿದ್ದು, ರಾಜಕೀಯ ಮತ್ತು ಭಕ್ತಿ ಪರಂಪರೆಯ ಸಂಕೇತವಾಗಿ ಕಂಡುಬರುತ್ತಿದೆ. ಸಿಎಂ ವಿಜಯ್ ವೇಳಾಪಟ್ಟಿಯ ಪ್ರಕಾರ, ಅವರು ಮಧ್ಯಾಹ್ನ 12:30ಕ್ಕೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ರಸ್ತೆ ಮಾರ್ಗವಾಗಿ ಕೊಲ್ಲೂರು ಶ್ರೀ ಮೂಕಾಂಬಿಕೆ ದೇಗುಲಕ್ಕೆ ಮಧ್ಯಾಹ್ನ 3 ಗಂಟೆಗೆ ತಲುಪಲಿದ್ದಾರೆ. ದೇವಳದಲ್ಲಿ ವಿಶೇಷ ಪೂಜೆ ಸಲ್ಲಿಸಿ, ದೇವಿಯ ದರ್ಶನ ಪಡೆದು, ಸುಮಾರು 5 ಗಂಟೆಗೆ ದೇಗುಲದಿಂದ ನಿರ್ಗಮಿಸಲಿದ್ದಾರೆ. ನಂತರ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಚೆನ್ನೈಗೆ ವಾಪಸಾಗಲಿದ್ದಾರೆ. ಅವರ ಭೇಟಿಯ ಹಿನ್ನೆಲೆಯಲ್ಲಿ ಭಕ್ತರ ದಟ್ಟಣೆಯನ್ನು ನಿರೀಕ್ಷಿಸಿ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

ಸಾರ್ವಜನಿಕವಾಗಿ ‘ಸರ್ವ ಧರ್ಮ ಸಮಾನತೆಯ’ ಸಂದೇಶ ಸಾರುತ್ತಿರುವ ಸಿಎಂ ಜೋಸೆಫ್ ವಿಜಯ್, ಮುಖ್ಯಮಂತ್ರಿಯಾದ ನಂತರ ಚೆನ್ನೈನಲ್ಲಿ ಚರ್ಚ್‌ಗಳಿಗೆ, ಮಸೀದಿಗಳಿಗೆ ಭೇಟಿ ನೀಡಿದ್ದರು. ಇದೀಗ ಪ್ರಸಿದ್ಧ ಶಕ್ತಿಪೀಠವಾದ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವುದು ಗಮನಾರ್ಹ. ದಕ್ಷಿಣ ಭಾರತದ ಪ್ರಮುಖ ಶಕ್ತಿಪೀಠಗಳಲ್ಲಿ ಒಂದಾದ ಕೊಲ್ಲೂರು ಮೂಕಾಂಬಿಕೆ ದೇಗುಲವು ಶತಶತಮಾನಗಳಿಂದ ರಾಜರು, ರಾಜಕೀಯ ನಾಯಕರು, ಸಂಗೀತ ಮತ್ತು ಸಿನಿಮಾ ಕ್ಷೇತ್ರದ ಗಣ್ಯರು ಸೇರಿದಂತೆ ಅನೇಕ ಭಕ್ತರನ್ನು ಆಕರ್ಷಿಸಿದೆ.

ವಿಜಯ್ ಭೇಟಿ ಹಿಂದೆ ಸುದೀರ್ಘ ಪರಂಪರೆ

ವಿಜಯ್ ಕೊಲ್ಲೂರು ಭೇಟಿಯ ಹಿಂದೆ ಒಂದು ಸುದೀರ್ಘ ಪರಂಪರೆ ಅಡಗಿದೆ. ತಮಿಳುನಾಡಿನ ಗಣ್ಯರಿಗೂ ಕೊಳ್ಳೂರಿಗೂ ಅವಿನಾಭಾವ ನಂಟಿದೆ. ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ (ಎಂಜಿಆರ್) ಅವರು ಮೂಕಾಂಬಿಕೆ ದೇವಿಯ ಪರಮ ಭಕ್ತರಾಗಿದ್ದರು. ಎಂಜಿಆರ್ ಸಿಎಂ ಆಗಿದ್ದಾಗ ಹಲವು ಬಾರಿ ಕೊಲ್ಲೂರಿಗೆ ಭೇಟಿ ನೀಡಿ, ದೇವಿಗೆ ಚಿನ್ನದ ಖಡ್ಗವನ್ನು ಭಕ್ತಿಯ ಕಾಣಿಕೆಯಾಗಿ ಸಮರ್ಪಿಸಿದ್ದರು. ಎಂಜಿಆರ್ ಪತ್ನಿ ಜಾನಕಿ ರಾಮಚಂದ್ರನ್ ಮತ್ತು ನಂತರ ಸಿಎಂ ಆದ ಜಯಲಲಿತಾ ಕೂಡ ಮೂಕಾಂಬಿಕೆ ದೇವಿಯ ದರ್ಶನ ಪಡೆದಿದ್ದರು. ಜಯಲಲಿತಾ ಅವರು 2004ರಲ್ಲಿ ಅನ್ನಸಂತರ್ಪಣೆಗಾಗಿ ದೇಣಿಗೆ ನೀಡಿದ್ದರು ಮತ್ತು ತಮ್ಮ ರಾಜಕೀಯ ಗುರು ಎಂಜಿಆರ್ ಸಮರ್ಪಿಸಿದ ಚಿನ್ನದ ಖಡ್ಗಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದರು.

ಸಂಗೀತ ನಿರ್ದೇಶಕ ಇಳಯರಾಜಗೂ ಕೊಲ್ಲೂರು ಮೂಕಾಂಬಿಕೆ ಆರಾಧ್ಯ ದೈವ

ಸಂಗೀತ ನಿರ್ದೇಶಕ ಇಳಯರಾಜ ಅವರಿಗಂತೂ ಕೊಲ್ಲೂರು ಮೂಕಾಂಬಿಕೆ ಆರಾಧ್ಯ ದೈವ. ಅವರು ಇದುವರೆಗೆ ಕೋಟ್ಯಂತರ ರೂಪಾಯಿ ಮೌಲ್ಯದ ಕಾಣಿಕೆಗಳನ್ನು ಸಮರ್ಪಿಸಿದ್ದಾರೆ. ಕಳೆದ ವರ್ಷವಷ್ಟೇ ನಾಲ್ಕು ಕೋಟಿ ರೂಪಾಯಿ ಮೌಲ್ಯದ ವಜ್ರಖಚಿತ ಕಿರೀಟ, ಚಿನ್ನಾಭರಣಗಳು ಮತ್ತು ಚಿನ್ನದ ಖಡ್ಗವನ್ನು ಸಮರ್ಪಿಸಿದ್ದರು. ಅಲ್ಲದೆ, ಶ್ರೀ ವೀರಭದ್ರ ದೇವರಿಗೂ ವಜ್ರಖಚಿತ ಬೆಳ್ಳಿಯ ಕಿರೀಟ ಮತ್ತು ಬೆಳ್ಳಿಯ ಖಡ್ಗವನ್ನು ನೀಡಿದ್ದರು. ಸೂಪರ್‌ಸ್ಟಾರ್ ರಜನಿಕಾಂತ್, ಮೋಹನ್‌ಲಾಲ್ ಸೇರಿದಂತೆ ಹಲವು ತಮಿಳು ಮತ್ತು ಮಲಯಾಳಂ ಸ್ಟಾರ್‌ಗಳು ಕೂಡ ಮೂಕಾಂಬಿಕೆಯ ಭಕ್ತರಾಗಿದ್ದಾರೆ.

ಕರ್ನಾಟಕದ ಮಾಜಿ ಸಿಎಂ ಗುಂಡೂರಾವ್ ಮತ್ತು ಶ್ರೀಲಂಕಾದ ಮಾಜಿ ಪ್ರಧಾನಿ ರನಿಲ್ ವಿಕ್ರಮಸಿಂಘೆ ಕೂಡ ಕೊಲ್ಲೂರಿಗೆ ಭೇಟಿ ನೀಡಿದ ಗಣ್ಯರ ಪಟ್ಟಿಯಲ್ಲಿ ಸೇರಿದ್ದಾರೆ. ಗಣ್ಯರ ಭೇಟಿಯ ಈ ಇತಿಹಾಸವು ವಿಜಯನಗರದ ಕೃಷ್ಣದೇವರಾಯರ ಕಾಲದವರೆಗೂ ವಿಸ್ತರಿಸಿದೆ. ಎಂ.ಜಿ. ರಾಮಚಂದ್ರನ್ ನೀಡಿದ ಚಿನ್ನದ ಖಡ್ಗವು ಇಂದಿಗೂ ವಿಶೇಷ ಪೂಜೆ ಮತ್ತು ಉತ್ಸವಗಳ ಸಂದರ್ಭದಲ್ಲಿ ಬಳಕೆಯಾಗುತ್ತಿದೆ.

ಇದನ್ನೂ ಓದಿ: ಭಕ್ತರೇ ಗಮನಿಸಿ, ಪೊಲೀಸ್ ಇಲಾಖೆಯಿಂದ ಮಹತ್ವದ ಸೂಚನೆ: ನಾಳೆ ಈ ಸಮಯದಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಿ ದರ್ಶನ ಇರುವುದಿಲ್ಲ

ಸಿಎಂ ಜೋಸೆಫ್ ವಿಜಯ್ ಅವರು ಎಂಜಿಆರ್ ಅವರನ್ನು ತಮ್ಮ ಆದರ್ಶ ಎಂದು ಸ್ವೀಕರಿಸಿದ್ದು, ಅವರ ಹಾದಿಯಲ್ಲೇ ಈಗ ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಇದು ತಮಿಳುನಾಡಿನ ರಾಜಕೀಯ ಮತ್ತು ಭಕ್ತಿ ಸಂಪ್ರದಾಯದ ಮುಂದುವರಿಕೆಯಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಜ್ವಲ್ ಅಮೀನ್​, ಉಡುಪಿ

ಪ್ರಜ್ವಲ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪಡೆದಿರುತ್ತಾರೆ. ಉಡುಪಿ ಜಿಲ್ಲೆಯ ಸ್ಥಳೀಯ ಖಾಸಗಿ ಸುದ್ದಿವಾಹಿನಿಯ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ ಇವರು ಬಳಿಕ ಪ್ರಜಾವಾಣಿಯ ವರದಿಗಾರನಾಗಿ ಕೆಲಸ ಮಾಡಿರುತ್ತಾರೆ. ನಂತರ 6 ವರ್ಷ ಟಿ.ವಿ 5ನ ದಕ್ಷಿಣ ಕನ್ನಡ ಜಿಲ್ಲಾ ವರದಿಗಾರನಾಗಿ ನಂತರ ದಿಗ್ವಿಜಯ ನ್ಯೂಸ್ ನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವರದಿಗಾರನಾಗಿ ಕಾರ್ಯನಿರ್ವಾಹಸಿದ್ದಾರೆ. ಕಳೆದ ಹನ್ನೊಂದು ತಿಂಗಳಿನಿಂದ ಟಿ.ವಿ 9 ಸಂಸ್ಥೆಯಲ್ಲಿ ಉಡುಪಿ ಜಿಲ್ಲಾ ವರದಿಗಾರನಾಗಿ ಕಾರ್ಯನಿರ್ವಾಹಿಸುತ್ತಿದ್ದಾರೆ.

Read More
Follow Us