ಒಂದೇ ಕುಟುಂಬದ 4 ಹತ್ಯೆ ಕೇಸ್: ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಆರೋಪಿ ಪ್ರವೀಣ್ ಚೌಗುಲೆ
ಉಡುಪಿ ತಾಲೂಕಿನ ನೇಜಾರಿನ ತೃಪ್ತಿನಗರದ ಮನೆಯಲ್ಲಿ ನವೆಂಬರ್ 12 ರಂದು ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದ ಆರೋಪಿ ಪ್ರವೀಣ್ ಅರುಣ್ ಚೌಗಲೆ ಜಾಮೀನು ಕೋರಿ ಉಡುಪಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆರೋಪಿ ಪರ ಕೆಎಸ್ಎನ್ ರಾಜೇಶ್ ಎಂಬುವವರಿಂದ ಅರ್ಜಿ ಸಲ್ಲಿಸಲಾಗಿದೆ.
ಉಡುಪಿ, ಡಿಸೆಂಬರ್ 16: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರವೀಣ್ ಚೌಗುಲೆ (Praveen Chowgule) ಯಿಂದ ಉಡುಪಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸಲಾಗಿದೆ. ಆರೋಪಿ ಪರ ವಕೀಲ ಕೆಎಸ್ಎನ್ ರಾಜೇಶ್ ಎಂಬುವವರಿಂದ ಅರ್ಜಿ ಸಲ್ಲಿಸಲಾಗಿದೆ. ಡಿಸೆಂಬರ್ 20ರಂದು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಡಿಸೆಂಬರ್ 18ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿರುವ ಕೋರ್ಟ್, ಸದ್ಯ ಆರೋಪಿ ಪ್ರವೀಣ್ ಚೌಗುಲೆ ಪರಪ್ಪನ ಅಗ್ರಹಾರದಲ್ಲಿದ್ದಾರೆ.
ಉಡುಪಿ ತಾಲೂಕಿನ ನೇಜಾರು ಸಮೀಪದ ತೃಪ್ತಿನಗರದಲ್ಲಿ ಇದೇ ನವೆಂಬರ್ 12 ರಂದು ಒಂದೇ ಕುಟುಂಬದ ನಾಲ್ವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವಂತಹ ದಾರುಣ ಘಟನೆ ನಡೆದಿತ್ತು. ಆರೋಪಿ ಪ್ರವೀಣ್ ಚೌಗುಲೆ ಹತ್ಯೆ ಮಾಡಿ ಪರಾರಿಯಾಗಿದ್ದ. ಬಳಿಕ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿಯಲ್ಲಿ ಉಡುಪಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
ಇದನ್ನೂ ಓದಿ: ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ; ಎಸ್.ಪಿ ಬಿಚ್ಚಿಟ್ಟ ರೋಚಕ ಸಂಗತಿ?
ಆರೋಪಿ ಪ್ರವೀಣ್ ಅರುಣ್ ಚೌಗಲೆ ಮತ್ತು ಅಯ್ನಾಝ್ ಕಳೆದ 8 ತಿಂಗಳಿನಿಂದ ಪರಿಚಯಸ್ಥರಾಗಿದ್ದು, ಏರ್ ಇಂಡಿಯಾ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. 8-10 ಬಾರಿ ವಿದೇಶಕ್ಕೆ ತೆರಳುವ ವಿಮಾನದಲ್ಲಿ ಒಟ್ಟಿಗೆ ಕರ್ತವ್ಯ ನಿರ್ವಹಿಸುವ ಅವಕಾಶವು ದೊರಕಿತ್ತು. ಹೀಗೆ ಅವರಿಬ್ಬರ ನಡುವೆ ಗೆಳೆತನವು ಬೆಳೆದಿತ್ತು.
ಇದನ್ನೂ ಓದಿ: ಉಡುಪಿಯ ಒಂದೇ ಕುಟುಂಬದ ನಾಲ್ವರ ಕೊಲೆ ಕೇಸ್: ಒಬ್ಬಳ ಮೇಲಿನ ದ್ವೇಷ ನಾಲ್ವರನ್ನ ಹತ್ಯೆಗೈದಿದ್ದ ಹಂತಕ ಮಾಜಿ ಪೊಲೀಸ್
ಆಕೆಗೆ ಓಡಾಟ ನಡೆಸಲು ಸಹಾಯವಾಗಲೆಂದು ಆರೋಪಿ ತನ್ನ ದ್ವಿಚಕ್ರ ವಾಹನವನ್ನು ಆಕೆಯ ಬಳಕೆಗೆ ನೀಡಿದ್ದನು. ಇತ್ತೀಚೆಗೆ ತಿಂಗಳ ಹಿಂದೆ, ಅಯ್ನಝ್ ಆರೋಪಿಯ ಜೊತೆಗಿನ ಒಡನಾಟದಿಂದ ದೂರ ಸರಿದು, ಮಾತನಾಡುತ್ತಿರಲಿಲ್ಲ. ಇದರಿಂದ ಪ್ರವೀಣ್ ತೀವ್ರ ವಿಚಲಿತನಾಗಿ ಸಿಟ್ಟಿಗೆದ್ದಿದ್ದನು.
ತನ್ನ ಜೊತೆಗಿನ ಒಡನಾಟದಿಂದ ದೂರ ಸರಿದ ಅಯ್ನಾಝ್ಳನ್ನು ಕೊಲೆ ಮಾಡುವ ಉದ್ದೇಶದಿಂದ ಆಕೆಯ ಮನೆಗೆ ಆ್ಯಪ್ನ ಸಹಾಯದಿಂದ ಆಗಮಿಸಿದ ಆರೋಪಿ, ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ. ಅದೇ ವೇಳೆ ತಡೆಯಲು ಬಂದ ಆಕೆಯ ತಾಯಿ ಹಸೀನಾ, ಸಹೋದರಿ ಅಫ್ನಾನ್, ಮನೆಯ ಹೊರಗೆ ಆಟವಾಡುತ್ತಿದ್ದ ಅಸೀಮ್ ಮನೆಯ ಒಳಗೆ ಬರುತ್ತಿದ್ದ ವೇಳೆ ಆತನಿಗೂ ಚೂರಿ ಇರಿದಿದ್ದ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.